ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಇನ್ನೂ ನಿರ್ಮೂಲನೆ ಆಗದ ಭಿಕ್ಷಾಟನೆ

Last Updated 29 ಮಾರ್ಚ್ 2021, 4:33 IST
ಅಕ್ಷರ ಗಾತ್ರ

ಚಿತ್ರದುರ್ಗ: ಮಹಿಳೆಯೊಬ್ಬರು ಹೆಗಲಿಗೆ ಹಾಕಿಕೊಂಡ ಬಟ್ಟೆಯ ಜೋಳಿಗೆಯಲ್ಲಿ ಹಾಲುಗಲ್ಲದ ಮಗು ನೇತಾಡುತ್ತಿದೆ. ಸೂರ್ಯನ ಬಿಸಿಲಿನ ಪ್ರಖರತೆ ಹೆಚ್ಚಾಗುತ್ತಿದೆ. ಸಿಮೆಂಟ್‌ ರಸ್ತೆಗಳು ಬರಿಗಾಲನ್ನು ಸುಡುತ್ತಿವೆ. ಅಸಹಾಯಕತೆಯಿಂದ ಚಾಚಿದ ಕೈಗೆ ಜನರು ಚಿಲ್ಲರೆ ಹಣವಿಟ್ಟು ಮುಂದೆ ಸಾಗುತ್ತಿದ್ದಾರೆ.

ಚಿತ್ರದುರ್ಗ ಸೇರಿ ಜಿಲ್ಲೆಯ ಬಹುತೇಕ ನಗರ ಪ್ರದೇಶದಲ್ಲಿ ಕಾಣುವ ಸಾಮಾನ್ಯ ದೃಶ್ಯವಿದು. ಜನನಿಬಿಡ ಪ್ರದೇಶ ಆಯ್ಕೆ ಮಾಡಿಕೊಂಡು ಭಿಕ್ಷಾಟನೆಯಲ್ಲಿ ತೊಡಗಿದವರ ಸಂಖ್ಯೆಗೇನೂ ಕಡಿಮೆ ಇಲ್ಲ. ಪ್ರಮುಖ ವೃತ್ತ, ಬಸ್‌ ನಿಲ್ದಾಣ, ರೈಲು ನಿಲ್ದಾಣ, ಕಾಲೇಜು, ಹೆಚ್ಚು ಜನ ಸೇರುವ ತಾಲ್ಲೂಕು ಹಾಗೂ ಜಿಲ್ಲಾಧಿಕಾರಿ ಕಚೇರಿ... ಹೀಗೆ ಹಲವೆಡೆ ಭಿಕ್ಷುಕರು ಕಣ್ಣಿಗೆ ಬೀಳುತ್ತಾರೆ.

ಕರ್ನಾಟಕ ಭಿಕ್ಷಾಟನೆ ನಿಷೇಧ ಕಾಯ್ದೆ–1973 ಅನುಷ್ಠಾನಗೊಂಡು ಐದು ದಶಕ ಸಮೀಪಿಸುತ್ತಿದೆ. ಕಾಯ್ದೆಯ ಪ್ರಕಾರ ಭಿಕ್ಷಾಟನೆಯಲ್ಲಿ ತೊಡಗುವಂತಿಲ್ಲ. ಹೀಗೆ ಭಿಕ್ಷಾಟನೆ ಮಾಡುವವರನ್ನು ಪತ್ತೆ ಮಾಡಿ ಅವರಿಗೆ ಊಟ, ವಸತಿ, ಔಷಧ ನೀಡಿ ಮುಖ್ಯವಾಹಿನಿಗೆ ತರುವ ಹೊಣೆ ಸರ್ಕಾರದ ಮೇಲಿದೆ. ನಿರಾಶ್ರಿತರ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಿ ಭಿಕ್ಷಾಟನೆ ನಿರ್ಮೂಲನೆ ಮಾಡುವಂತೆ ಸೂಚಿಸಲಾಗಿದೆ. ಆದರೂ, ಈ ಪದ್ಧತಿಯನ್ನು ನಿರ್ಮೂಲನೆ ಮಾಡಲು ಸಾಧ್ಯವಾಗುತ್ತಿಲ್ಲ.

‘ಅಗಸನಕಲ್ಲು ಬಡಾವಣೆಯಲ್ಲಿ ಮನೆ ಇದೆ. ರಟ್ಟೆಯಲ್ಲಿ ಶಕ್ತಿ ಇರುವವರೆಗೂ ಶ್ರಮಪಟ್ಟು ದುಡಿದೆ. ವಯಸ್ಸಾದ ಮೇಲೆ ಮಕ್ಕಳು ಸರಿಯಾಗಿ ಪೋಷಣೆ ಮಾಡಲಿಲ್ಲ. ಕೌಟುಂಬಿಕ ಕಾರಣಕ್ಕೆ ಮನೆಯಿಂದ ಹೊರ ಬಿದ್ದಿದ್ದೇನೆ. ಅಲ್ಲಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದೇನೆ’ ಎಂಬುದು ತಿಮ್ಮಣ್ಣ ಎಂಬುವವರ ವ್ಯಥೆ.

ನಿರಾಶ್ರಿತರು ಮಾತ್ರ ಭಿಕ್ಷಾಟನೆಯಲ್ಲಿ ತೊಡಗುತ್ತಾರೆ ಎಂಬುದು ತಪ್ಪು ಕಲ್ಪನೆ. ವಾಸ್ತವ ಸ್ಥಿತಿ ಮಾನವೀಯತೆಯನ್ನು ಅಣಕಿಸುವಂತೆ ಇದೆ. ಕುಟುಂಬದಿಂದ ನಿರ್ಲಕ್ಷ್ಯಕ್ಕೆ ಒಳಗಾದ ವೃದ್ಧರು, ಕುಟುಂಬ ಸಾಗಿಸಲು ಸುಲಭ ಮಾರ್ಗ ಕಂಡುಕೊಂಡ ಮಹಿಳೆ, ಮದ್ಯ ಸೇವನೆಗೆ ಕಾಸು ಹೊಂದಿಸುವ ವ್ಯಕ್ತಿ... ಹೀಗೆ ಅನೇಕ ಬಗೆಯ ಜನರು ಬೇರೆ ಬೇರೆ ಉದ್ದೇಶಕ್ಕೆ ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ. ಮನೆಯಿಂದ ಹೊರಬಿದ್ದ ಕೆಲವರು ಅನಿವಾರ್ಯವಾಗಿ ಇಂತಹ ಕಾರ್ಯಕ್ಕೆ ಇಳಿದಿದ್ದಾರೆ.

‘ಅದೊಂದು ದಿನ ದೂರವಾಣಿ ಕರೆ ಬಂದಿತು. ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಅಸಹಾಯಕ ಮಹಿಳೆಯೊಬ್ಬರು ಬೀದಿಯಲ್ಲಿ ಬಿದ್ದಿದ್ದರು. ನಿರಾಶ್ರಿತರ ಕೇಂದ್ರಕ್ಕೆ ಕರೆತಂದು ಉಪಚರಿಸಲಾಯಿತು. ಮಾನಸಿಕ ಅಘಾತಕ್ಕೆ ಒಳಗಾದ ಅವರು ಸಹಜ ಸ್ಥಿತಿಗೆ ಬರಲು ಕೆಲ ದಿನಗಳೇ ಹಿಡಿದವು. ಸಂಬಂಧಿಕರ ಊರಿಗೆ ಹೋಗುವುದಾಗಿ ನಂಬಿಸಿ ಮನೆಯಿಂದ ಕರೆತಂದ ಪುತ್ರ, ಹೆತ್ತ ತಾಯಿಯನ್ನು ಬಿಟ್ಟು ಹೋಗಿದ್ದ. ಬೆಂಗಳೂರಿನಲ್ಲಿರುವ ಅವರ ವಿಳಾಸವನ್ನು ಪತ್ತೆ ಮಾಡಿ ಪುತ್ರನಿಗೆ ಎಚ್ಚರಿಕೆ ನೀಡಿದೆವು’ ಎನ್ನುತ್ತಾರೆ ಗೋನೂರು ಗ್ರಾಮದಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರದ ಅಧೀಕ್ಷಕ ಎಂ. ಮಹದೇವಯ್ಯ.

ಸೆಸ್‌ ಪಾವತಿಸದ ಸ್ಥಳೀಯ ಸಂಸ್ಥೆಗಳು: ಭಿಕ್ಷುಕರಿಗೆ ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ ಸಂಗ್ರಹಿಸುವ ಭಿಕ್ಷುಕರ ಕರವನ್ನು ಸ್ಥಳೀಯ ಸಂಸ್ಥೆಗಳು ಬಾಕಿ ಉಳಿಸಿಕೊಳ್ಳುತ್ತಿವೆ. ಇದರಿಂದ ಭಿಕ್ಷಾಟನೆಯನ್ನು ಪರಿಣಾಮಕಾರಿಯಾಗಿ ನಿರ್ಮೂಲನೆ ಮಾಡಲು ತೊಡಕುಂಟಾಗಿದೆ.

ಭಿಕ್ಷಾಟನೆ ನಿಷೇಧ ಕಾಯ್ದೆಯ ಪ್ರಕಾರ ಆಸ್ತಿ ತೆರಿಗೆಯಲ್ಲಿ ಶೇ 3ರಷ್ಟನ್ನು ಭಿಕ್ಷುಕರ ಕರವಾಗಿ ಸಂಗ್ರಹಿಸಬೇಕು. ಕಟ್ಟಡ, ಮನೆ, ಜಮೀನು ಹಾಗೂ ನಿವೇಶನಗಳಿಂದ ಸಂಗ್ರಹಿಸಿದ ಕಂದಾಯದಲ್ಲಿ ಈ ಕರವೂ ಸೇರಿರುತ್ತದೆ. ಈ ಕರವನ್ನು ಪ್ರತಿ ಮೂರು ತಿಂಗಳಿಗೊಮ್ಮ ಪರಿಹಾರ ನಿಧಿಗೆ ನೀಡಬೇಕು. ಆದರೆ, ಇದು ಪಾಲನೆಯಾಗುತ್ತಿಲ್ಲ.

ಚಿತ್ರದುರ್ಗ ನಗರಸಭೆ ಮಾತ್ರ ನಿಯಮಿತವಾಗಿ ಕರ ಪಾವತಿಸುತ್ತಿದೆ. ಹಿರಿಯೂರು, ಹೊಳಲ್ಕೆರೆ ಹಾಗೂ ಹೊಸದುರ್ಗ ನಗರ ಸ್ಥಳೀಯ ಸಂಸ್ಥೆಗಳು ಆಗಾಗ ಕರ ಪಾವತಿಸುತ್ತಿವೆ. ಇತರ ನಗರ ಸ್ಥಳೀಯ ಸಂಸ್ಥೆಗಳು ನಿಯಮಿತವಾಗಿ ಸೆಸ್‌ ಪಾವತಿಸುತ್ತಿಲ್ಲ. ಗ್ರಾಮ ಪಂಚಾಯಿತಿಯಿಂದಲೂ ಪುನರ್ವಸತಿ ಕೇಂದ್ರಕ್ಕೆ ಸೆಸ್‌ ಪಾವತಿ ಆಗುತ್ತಿಲ್ಲ. ಇದು ಪುನರ್ವಸತಿ ಕೇಂದ್ರದ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಿದೆ.

ಜಿಲ್ಲೆಯ ಅಲ್ಲಲ್ಲಿ ಭಿಕ್ಷಾಟನೆಯಲ್ಲಿ ತೊಡಗಿದವರನ್ನು ವಶಕ್ಕೆ ಪಡೆದು ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗುತ್ತದೆ. ಗರಿಷ್ಠ ಮೂರು ವರ್ಷಗಳವರೆಗೆ ಕೇಂದ್ರದಲ್ಲಿ ಆರೈಕೆ ಮಾಡಲು ಅವಕಾಶವಿದೆ. ಊಟ, ವಸತಿ, ಬಟ್ಟೆ ಸೇರಿ ಇತರ ಸೌಲಭ್ಯಕ್ಕೆ ಕರದ ಹಣವನ್ನೇ ಬಳಸಿಕೊಳ್ಳಲಾಗುತ್ತದೆ.

ಭಿಕ್ಷುಕರನ್ನು ವ್ಯಸನ ಮುಕ್ತಗೊಳಿಸಿ, ಕಾಯಿಲೆಗೆ ಚಿಕಿತ್ಸೆ ಕೊಡಿಸಿ ಸಮಾಜದ ಮುಖ್ಯವಾಹಿನಿಗೆ ತರುವುದು ಕೇಂದ್ರಗಳ ಜವಾಬ್ದಾರಿ. ಮನೆಯ ವಿಳಾಸವನ್ನು ಪತ್ತೆ ಮಾಡಿ ಕುಟುಂಬದ ಸದಸ್ಯರಿಗೆ ಹಸ್ತಾಂತರಿಸುವ ಕಾರ್ಯವನ್ನು ನಿರಾಶ್ರಿತರ ಕೇಂದ್ರ ಮಾಡುತ್ತಿದೆ.

ಚಿತ್ರದುರ್ಗ ತಾಲ್ಲೂಕಿನ ಗೋನೂರು ಸಮೀಪ ಇರುವ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ 270 ಜನರು ಆಶ್ರಯ ಪಡೆದಿದ್ದಾರೆ. ಇದರಲ್ಲಿ 59 ಮಹಿಳೆಯರೂ ಇದ್ದಾರೆ. ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಸೇರಿ ದೇಶದ ವಿವಿಧೆಡೆಯ ನಿರಾಶ್ರಿತರು ಇಲ್ಲಿದ್ದಾರೆ. 21 ಜನರ ವಿಳಾಸವನ್ನು ಪತ್ತೆ ಮಾಡಿ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಮತ್ತೊಮ್ಮೆ ಭಿಕ್ಷಾಟನೆಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಕೋವಿಡ್‌ ಕಾರಣಕ್ಕೆ ಕುಟುಂಬದವರಿಗೆ ಹಸ್ತಾಂತರಿಸುವ ಪ್ರಕ್ರಿಯೆ ಕೂಡ ನಿಧಾನವಾಗಿ ನಡೆಯುತ್ತಿದೆ.

‘ಭಿಕ್ಷುಕರನ್ನು ಪತ್ತೆಹಚ್ಚಿ ನಿರಾಶ್ರಿತರ ಕೇಂದ್ರದಲ್ಲಿ ಪುನರ್ವಸತಿ ಕಲ್ಪಿಸಲು ಕೋವಿಡ್‌ ಅಡ್ಡಿಯಾಗಿದೆ. ಕೊರೊನಾ ಸೋಂಕು ಹರಡುವ ಭೀತಿ ಇರುವುದರಿಂದ ಹೊರಗಿನವನ್ನು ಕೇಂದ್ರಕ್ಕೆ ಸೇರಿಸುತ್ತಿಲ್ಲ. ಆದರೂ, ಒಂದು ವರ್ಷದಲ್ಲಿ 27 ಜನರಿಗೆ ಪುನರ್ವಸತಿ ಕಲ್ಪಿಸಲಾಗಿದೆ’ ಎನ್ನುತ್ತಾರೆ ಮಹದೇವಯ್ಯ.

ವಸತಿ ರಹಿತ ಭಿಕ್ಷುಕರು ವಿರಳ

ಹೊಸದುರ್ಗ: ಪಟ್ಟಣದ ವ್ಯಾಪ್ತಿಯಲ್ಲಿ ಭಿಕ್ಷಾಟನೆಯನ್ನು ಸಂಪೂರ್ಣ ನಿಯಂತ್ರಿಸಲು ಪುರಸಭೆಯು ಅಗತ್ಯ ಕ್ರಮ ಕೈಗೊಂಡಿದೆ.

ದುರ್ಗಾಂಬಿಕಾ ದೇಗುಲ, ಅಶೋಕ ರಂಗಮಂದಿರ, ಬಸ್‌ ನಿಲ್ದಾಣ, ಮುಖ್ಯರಸ್ತೆ, ಫುಟ್‌ಪಾತ್‌, ಹಳೆ ಬಸ್‌ ನಿಲ್ದಾಣ ಸಮೀಪ ಸೇರಿ ಪಟ್ಟಣದ ಇನ್ನಿತರ ಕಡೆಗಳಲ್ಲಿ ಭಿಕ್ಷುಕರು, ನಿರಾಶ್ರಿತರನ್ನು ಸಮೀಕ್ಷೆ ಮಾಡಲಾಗಿದೆ.

ಮನೆಯಿಲ್ಲದೇ ಬೀದಿಯಲ್ಲಿ ಮಲಗುತ್ತಿದ್ದ 13 ಮಂದಿ ನಿರಾಶ್ರಿತರನ್ನು ಸಮೀಕ್ಷೆಯಲ್ಲಿ ಗುರುತಿಸಲಾಗಿದೆ. ಅದರಲ್ಲಿ ಮನೆಯಿದ್ದರೂ ತಾಲ್ಲೂಕಿನ ಹಳ್ಳಿಗಳಿಗೆ ಹೋಗಲು ಸಾಧ್ಯವಾಗದ ಹಾಗೂ ಪಟ್ಟಣದ ಕೋಟೆ ಭಾಗದ ತಮ್ಮ ಸ್ವಂತ ಮನೆಗೆ ತೆರಳಲು ಆಗದ ಕೆಲವರು ಕಂಡುಬಂದಿದ್ದರು. ಇನ್ನುಳಿದ ನಾಲ್ಕೈದು ನಿರಾಶ್ರಿತರನ್ನು ಮಾತ್ರ ನಿರಾಶ್ರಿತರ ಕೇಂದ್ರಕ್ಕೆ ಕಳಿಸಲಾಗಿದೆ.

ಕೋಟೆ ಭಾಗದಲ್ಲಿ ವೃದ್ಧಾಶ್ರಮ ಇರುವುದರಿಂದ ಭಿಕ್ಷುಕರು ಕಡಿಮೆಯಾಗಿದ್ದಾರೆ. ಈಚಿನ ದಿನಗಳಲ್ಲಿ ವಸತಿರಹಿತ ಭಿಕ್ಷುಕರು ಕಾಣಿಸುತ್ತಿಲ್ಲ. ಕೆಲವೊಮ್ಮೆ ಊರಿಂದ ಊರಿಗೆ ಸುತ್ತುವ ಅಲೆಮಾರಿ ಜನಾಂಗದ ಕೆಲವರು ಮಾತ್ರ ಭಿಕ್ಷಾಟನೆ ಮಾಡುತ್ತಿದ್ದಾರೆ. ನಿರಾಶ್ರಿತರು ಹಾಗೂ ಬೀದಿಬದಿ ವ್ಯಾಪಾರಸ್ಥರ ಹಿತಕಾಪಾಡಲು ಪುರಸಭೆಯಲ್ಲಿ ಬಡತನ ನಿರ್ಮೂಲನೆ ಕೋಶವಿದೆ ಎಂದು ಪುರಸಭೆ ಪರಿಸರ ಎಂಜಿನಿಯರ್‌ ಜಿ.ವಿ. ತಿಮ್ಮರಾಜು ‘ಪ್ರಜಾವಾಣಿ’ಗೆ ವಿವರಿಸಿದರು.

ನಾಯಕನಹಟ್ಟಿ ಜಾತ್ರೆಗೆ ಬರುವ ಭಿಕ್ಷುಕರು

ನಾಯಕನಹಟ್ಟಿ: ಎರಡು ವಾರಗಳಿಗೂ ಹೆಚ್ಚು ಕಾಲ ನಡೆಯುವ ಗುರುತಿಪ್ಪೇರುದ್ರಸ್ವಾಮಿ ಜಾತ್ರೆಗೆ ಭಿಕ್ಷುಕರ ದಂಡು ಹರಿದುಬರುತ್ತದೆ. ಭಿಕ್ಷುಕರನ್ನು ನಿಯಂತ್ರಿಸಲು ಸ್ಥಳೀಯ ಸಂಸ್ಥೆ ಶ್ರಮಿಸುತ್ತಿದೆ.

ಜಾತ್ರೆ, ಉತ್ಸವಗಳಲ್ಲಿ ದೇವಾಲಯದ ಮುಂಭಾಗ ಭಿಕ್ಷಾಟನೆ ನಡೆಯುತ್ತದೆ. ದೇವಾಲಯಕ್ಕೆ ಬರುವ ಭಕ್ತರು, ಮಹಿಳೆಯರು, ಮಕ್ಕಳ ಗಮನಸೆಳೆದು ಪುಡಿಗಾಸು ಪಡೆಯಲಾಗುತ್ತದೆ. ಹೊರಮಠ ಮತ್ತು ಒಳಮಠ ದೇವಾಲಯಗಳ ಮುಂಭಾಗ ವಾರ್ಷಿಕ ಜಾತ್ರೆ ಹಾಗೂ ಪಲ್ಲಕ್ಕಿ ಉತ್ಸವ ನಡೆಯುವ ಸ್ಥಳದಲ್ಲಿ ಹೆಚ್ಚು ಭಿಕ್ಷುಕರು ಇರುತ್ತಾರೆ.

ಹೆಣ್ಣು ದೈವಗಳ ದೀಕ್ಷೆ ಪಡೆದು ಆರಾಧಿಸುವ ಜೋಗತಿಯರು, ಗರಡುಗಂಬವನ್ನು ಹಿಡಿದು ಬರುವ ದಾಸಯ್ಯಗಳು, ಗುರುಪರಂಪರೆ, ಅವಧೂತ ಪರಂಪರೆಯ ಸಾಧುಗಳು, ಕಾವಿಧಾರಿಗಳು, ಅಂಗವೈಕಲ್ಯಕ್ಕೆ ಒಳಗಾದವರು, ವೃದ್ಧರು, ನಿರ್ಗತಿಕರು... ಹೀಗೆ ಅನೇಕರು ದೇಗುಲದ ಬಳಿ ಭಿಕ್ಷಾಟನೆಯಲ್ಲಿ ತೊಡಗುತ್ತಾರೆ. ಅದರಲ್ಲೂ ನಾಯಕನಹಟ್ಟಿ ಜಾತ್ರೆಗೆ ಉತ್ತರ ಕರ್ನಾಟಕದ ಭಾಗದಿಂದ ಅತಿಹೆಚ್ಚು ಭಿಕ್ಷುಕರು ಬರುತ್ತಾರೆ.

ದೈವಭಕ್ತಿಯಿಂದ ಬರುವ ಭಕ್ತರು, ಪ್ರವಾಸಿಗರು ಪುಣ್ಯಕ್ಷೇತ್ರ ಭೇಟಿಯ ಸಂದರ್ಭದಲ್ಲಿ ಭಿಕ್ಷೆ ರೂಪದಲ್ಲಿ ಹಣ ನೀಡಿದರೆ ಒಳಿತಾಗುತ್ತದೆ ಎಂಬ ನಂಬಿಕೆ ಇದೆ. ಜಾತ್ರೆಯಲ್ಲಿ ಸಾವಿರಾರು ರೂಪಾಯಿಗಳವರೆಗೆ ಭಿಕ್ಷೆ ಹಣ ದೊರೆಯುತ್ತದೆ. ಈ ದೇವಾಲಯಗಳಲ್ಲಿ ವರ್ಷದ ಎಲ್ಲ ದಿನಗಳಲ್ಲಿ ನಿರಂತರ ದಾಸೋಹ ವ್ಯವಸ್ಥೆ ಇದೆ. ಊಟ ಹಾಗೂ ವಸತಿ ವ್ಯವಸ್ಥೆಗೂ ತೊಂದರೆಯಾಗದು ಎಂಬುದು ಭಿಕ್ಷುಕರ ಭಾವನೆ.

ಜಾತ್ರೆ ಮುಕ್ತಾಯವಾದ ನಂತರ ಮತ್ತೊಂದು ಜಾತ್ರೆಗೆ ತೆರಳುತ್ತಾರೆ. ಪ್ರತಿಯೊಂದು ಜಾತ್ರೆಯು ಯಾವ ತಿಂಗಳಲ್ಲಿ ನಡೆಯುತ್ತದೆ ಎಂಬ ಖಚಿತ ಮಾಹಿತಿ ಭಿಕ್ಷುಕರ ಬಳಿ ಇದೆ. ನಿರಾಶ್ರಿತ ಕೇಂದ್ರದ ಅಧಿಕಾರಿಗಳು ಭಿಕ್ಷಾಟನೆಯಲ್ಲಿ ತೊಡಗುವವರನ್ನು ವಶಕ್ಕೆ ಪಡೆದು ಪುನರ್ವಸತಿ ಕಲ್ಪಿಸುತ್ತಿದ್ದಾರೆ. ಇದರಿಂದ ಕೆಲವು ವರ್ಷಗಳಿಂದ ದೇವಾಲಯದ ಬಳಿ ಭಿಕ್ಷಾಟನೆಯಲ್ಲಿ ತೊಡಗುವವರ ಸಂಖ್ಯೆ ವಿರಳವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT