ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶ, ನಾಡಿನ ಸಂಸ್ಕೃತಿಯೇ ಬಹುಮುಖಿ

‘ಬಹುಮುಖಿ’ ಕೃತಿ ಲೋಕಾರ್ಪಣೆಯಲ್ಲಿ ಸಂಸ್ಕೃತಿ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್
Last Updated 9 ನವೆಂಬರ್ 2020, 7:36 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ವಿವಿಧ ಧರ್ಮ, ಸಂಸ್ಕೃತಿ, ಸಂಪ್ರದಾಯ ಒಳಗೊಂಡ ಭಾರತ ದೇಶ, ಕನ್ನಡನಾಡು ಬಹುಮುಖಿಯಾಗಿದೆ’ ಎಂದು ಸಂಸ್ಕೃತಿ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಹೇಳಿದರು.

ಪತ್ರಿಕಾ ಭವನದಲ್ಲಿ ಆಶಯ ಪ್ರಕಾಶನ, ಸೃಷ್ಟಿಸಾಗರ ಪ್ರಕಾಶನ, ಮದಕರಿನಾಯಕ ಸಾಂಸ್ಕೃತಿಕ ವೇದಿಕೆಯಿಂದ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಕನ್ನಡ ಪ್ರಾಧ್ಯಾಪಕ ಜೆ.ಕರಿಯಪ್ಪ ಮಾಳಿಗೆ ಅವರ ‘ಬಹುಮುಖಿ’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

‘ಸಾಹಿತಿಗೆ ಆಳವಾದ ಅಧ್ಯಯನದ ತುಡಿತ ಇರಬೇಕು. ಮೊದಲು ಹುಡುಕಾಟದಲ್ಲಿ ತೊಡಗಿ ತನ್ನ ನೆಲದ ಸಂಸ್ಕೃತಿಯನ್ನು ಅರಿಯಬೇಕು. ಆಗ ಮಾತ್ರ ಸಮಾಜಕ್ಕೆ ಉತ್ತಮ ಕೃತಿ ನೀಡಲು ಸಾಧ್ಯ. ಇದನ್ನು ಮಾಳಿಗೆ ಅವರ ಕೃತಿ ಒಳಗೊಂಡಿದೆ’ ಎಂದರು.

‘ಬುಡಕಟ್ಟು ಸಂಸ್ಕೃತಿಯ ಚಿತ್ರದುರ್ಗ ಜಿಲ್ಲೆ ವೈವಿಧ್ಯದಿಂದ ಕೂಡಿದೆ. ಇಲ್ಲಿ ಸಾಹಿತ್ಯ, ಕಲೆ, ಸಂಸ್ಕೃತಿ ಎಲ್ಲವೂ ಅಡಕವಾಗಿದೆ. ಅದನ್ನು ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಕಟ್ಟಿಕೊಡುವಲ್ಲಿ ಬಹುಮುಖಿ ಕೃತಿ ಸಫಲವಾಗಿದೆ. ನೆರೆ ಮತ್ತು ನೆಲೆ ಎರಡೂ ನೈಜತೆಯತ್ತ ನಮ್ಮನ್ನು ಕೊಂಡೊಯ್ಯುತ್ತವೆ’ ಎಂದು ಅಭಿಪ್ರಾಯಪಟ್ಟರು.

‘ಏಕನಾಥೇಶ್ವರಿ, ಜುಂಜಪ್ಪ, ಹಿಡಂಭೇಶ್ವರ, ಜಟ್ಟಿಂಗ ರಾಮೇಶ್ವರ, ಗಾದ್ರಿಪಾಲನಾಯಕ, ಕೆಂಚಾವಧೂತರು ಹೀಗೆ ಇತಿಹಾಸ ಪ್ರಸಿದ್ಧರು ಹಾಗೂ ಸಂಸ್ಕೃತಿಯ ಹರಿಕಾರರು ಬುಡಕಟ್ಟು ಸಂಸ್ಕೃತಿಯಲ್ಲಿ ದೇವರಾಗಿ ಬಿಂಬಿತರಾಗಿದ್ದಾರೆ. ಸಾಕಷ್ಟು ಜನ ದೇವರು ಎಂಬುದಾಗಿ ನಂಬಿದ್ದಾರೆ. ಇವರನ್ನು ಕೃತಿಯೊಳಗೂ ಸಾಹಿತಿ ಪರಿಚಯಿಸುವ ಮೂಲಕ ದುರ್ಗದ ಪರಂಪರೆಯನ್ನು ಎತ್ತಿಹಿಡಿದಿದ್ದಾರೆ. ಆದರೆ, ಇನ್ನಷ್ಟು ಸಂಶೋಧನೆ ಕೈಗೊಂಡರೆ ಹೊಸ ವಿಚಾರಗಳು ನಮಗೆಲ್ಲರಿಗೂ ಲಭಿಸಲಿವೆ’ ಎಂದು ಹೇಳಿದರು.

‘ವೇದ, ಉಪನಿಷತ್ತು, ಶಾಸ್ತ್ರವನ್ನು ಹೆಚ್ಚು ಜನ ಅಧ್ಯಯನ ಮಾಡಿಲ್ಲ. ಆದರೆ, ನಮ್ಮಲ್ಲಿನ ಜನಪದ ಸಾಹಿತ್ಯವನ್ನು ಗ್ರಾಮೀಣ ಭಾಗದ ಪ್ರತಿಯೊಬ್ಬರೂ ಸರಾಗವಾಗಿ ನುಡಿಯುತ್ತಾರೆ. ನೆಲದ ಪವಾಡ ಪುರುಷರನ್ನು, ಮಹನೀಯರನ್ನು ನೆನೆಯದೇ ಹೋದರೆ ಸಂಸ್ಕೃತಿ ಪರಿಚಯವಾಗಲು ಸಾಧ್ಯವಿಲ್ಲ’ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಟಿ.ಯೋಗೇಶ, ‘ತತ್ವಪದದಿಂದ ಆರಂಭವಾಗಿರುವ ಬಹುಮುಖಿ ಕೃತಿಯಲ್ಲಿ ಜನಪದ, ಬುಡಕಟ್ಟು ಸಂಸ್ಕೃತಿ, ಸ್ಥಳೀಯ ಕಲೆ, ಅವಧೂತ ಪರಂಪರೆ ಹೀಗೆ ಪ್ರಾದೇಶಿಕತೆ ಪ್ರತಿಬಿಂಬಿಸುವ ಅಂಶಗಳಿವೆ. ಕೃತಿ ಓದಿಸಿಕೊಂಡು ಹೋಗುವಲ್ಲಿ ಸಫಲವಾಗಿದೆ. ಕರಿಯಪ್ಪ ಮಾಳಿಗೆ ಪ್ರಯತ್ನಕ್ಕೆ ಫಲ ಸಿಕ್ಕಿದೆ’ ಎಂದು ಹೇಳಿದರು.

‘ಭಾರತೀಯ ಸಂಸ್ಕೃತಿಯಲ್ಲಿ ಸಾಮಾನ್ಯವಾಗಿ ವೇದ, ವಚನ ಸಾಹಿತ್ಯ, ದಾಸ ಸಾಹಿತ್ಯ ಓದುತ್ತೇವೆ. ಆದರೆ, ಚಿತ್ರದುರ್ಗ ಜಿಲ್ಲೆಯಲ್ಲಿ ಮಣ್ಣಿನ ಸಂಸ್ಕೃತಿಯ ಪ್ರಾಚೀನತೆ ಈಗಲೂ ಆಳವಾಗಿದೆ. ಆದ್ದರಿಂದ ನಮ್ಮ ಸಂಸ್ಕೃತಿ, ಇಲ್ಲಿನ ಜನಜೀವನವನ್ನು ನಾವು ಎಷ್ಟು ಅಧ್ಯಯನ ಮಾಡಿದ್ದೇವೆ ಎಂಬುದು ಮುಖ್ಯ. ಬದುಕನ್ನು ಹಸನಾಗಿಸುವ ಸಾಮರ್ಥ್ಯ ಸಾಹಿತ್ಯಕ್ಕಿದೆ ಎಂಬುದನ್ನು ಈ ಕೃತಿಯ ಮೂಲಕ ಕಾಣಬಹುದಾಗಿದೆ’ ಎಂದರು.

ಸಾಹಿತಿ ಜೆ.ಕರಿಯಪ್ಪ ಮಾಳಿಗೆ, ‘ಅಪಾರವಾದ ತತ್ವಪದಗಳ ಅಧ್ಯಯನ ಕೈಗೊಂಡಿದ್ದರಿಂದ ಅನುಭಾವ, ಅಧ್ಯಾತ್ಮದ ತುಡಿತ ಹೆಚ್ಚಾಯಿತು. ನಮ್ಮ ಸಂಸ್ಕೃತಿ ಬೇರೆ ಎಲ್ಲೂ ಇಲ್ಲ.ಮನೆಯ ಹಿತ್ತಲಲ್ಲಿಯೇ ಇದೆ’ ಎಂದು ಹೇಳಿದರು.

ಸೃಷ್ಟಿಸಾಗರ ಪ್ರಕಾಶನದ ಮೇಘಾ ಗಂಗಾಧರನಾಯ್ಕ್, ಮದಕರಿನಾಯಕ ಸಾಂಸ್ಕೃತಿಕ ವೇದಿಕೆಯ ವೇಣುಗೋಪಾಲಸ್ವಾಮಿ ನಾಯಕ, ಭೋವಿ ಗುರುಪೀಠದ ಸಿಇಒ ಗೌನಹಳ್ಳಿ ಗೋವಿಂದಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT