ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಯಲ್ಲಿ ಬಿಜೆಪಿ ಸುಲಭವಾಗಿ ಗೆಲುವು ಸಾಧಿಸಲಿದೆ: ನಳಿನ್‌ಕುಮಾರ್‌ ಕಟೀಲ್‌

Last Updated 24 ಜುಲೈ 2021, 13:00 IST
ಅಕ್ಷರ ಗಾತ್ರ

ಚಿತ್ರದುರ್ಗ: ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಸುಲಭವಾಗಿ ಗೆಲುವು ಸಾಧಿಸಲಿದೆ. ಗ್ರಾಮೀಣ ಪ್ರದೇಶದಲ್ಲಿ ಪಕ್ಷ ಹೆಚ್ಚು ಸಬಲವಾಗಿದ್ದು, ಗೆಲುವಿನ ವಿಶ್ವಾಸ ಮತ್ತು ಮಾನಸಿಕವಾಗಿ ಕಾರ್ಯಕರ್ತರನ್ನು ಸಜ್ಜುಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅಭಿಪ್ರಾಯಪಟ್ಟರು.

ಇಲ್ಲಿನ ಇಂಡಿಯನ್‌ ಇಂಟರ್‌ ನ್ಯಾಷನಲ್‌ ಶಾಲೆಯಲ್ಲಿ ಶನಿವಾರ ನಡೆದ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮುಂಬರುವ ಚುನಾವಣೆಗಳ ಗೆಲುವಿನ ಕಾರ್ಯತಂತ್ರ ರೂಪಿಸಲಾಗುತ್ತಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಹೆಚ್ಚು ಸದಸ್ಯರನ್ನು ಹೊಂದಿರುವ ಕಾರಣಕ್ಕೆ ಈ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ. ಇನ್ನು ಮುಂದೆ ಬಿಜೆಪಿಗೆ ಖುಷಿಯ ದಿನಗಳು ಬರಲಿವೆ’ ಎಂದು ಹೇಳಿದರು.

‘ಪಕ್ಷ ಸಂಘಟನೆಯ ದೃಷ್ಟಿಯಿಂದ ಪ್ರತಿ ತಿಂಗಳು ಪದಾಧಿಕಾರಿಗಳ ಸಭೆ ನಡೆಸಲಾಗುತ್ತಿತ್ತು. ಕೋವಿಡ್ ಕಾಣಿಸಿಕೊಂಡ ಪರಿಣಾಮ ಒಂದೆಡೆ ಸೇರಿ ಚರ್ಚೆ ನಡೆಸಲು ಆರು ತಿಂಗಳಿಂದ ಸಾಧ್ಯವಾಗಿರಲಿಲ್ಲ. ಆದರೂ, ತಿಂಗಳಿಗೆ ಎರಡು ಬಾರಿ ವರ್ಚುವಲ್‌ ಸಭೆಗಳನ್ನು ನಡೆಸಲಾಗಿದೆ’ ಎಂದರು.

‘ಇದೇ ಮೊದಲ ಬಾರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಕರ್ನಾಟಕಕ್ಕೆ ಹೆಚ್ಚು ಸಚಿವ ಸ್ಥಾನಗಳು ಸಿಕ್ಕಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಗೌರವ ಸ್ಥಾನ ನೀಡಿದ್ದಾರೆ. ಕೆಲವೇ ಜನರ ಹಿಡಿತದಲ್ಲಿದ್ದ ಸಹಕಾರಿ ರಂಗಕ್ಕೆ ಪ್ರತ್ಯೇಕ ಸಚಿವಾಲಯ ಸೃಜಿಸಿ ಅಮಿತ್‌ ಷಾ ಅವರಿಗೆ ಹೊಣೆ ನೀಡಿದ್ದು ಶ್ಲಾಘನೀಯ’ ಎಂದು ಕೊಂಡಾಡಿದರು.

ಸರ್ಕಾರದ ಕಾರ್ಯಕ್ಕೆ ಮೆಚ್ಚುಗೆ

‘ಕೃಷಿ ಕ್ಷೇತ್ರದ ಕಾಯ್ದೆಗಳನ್ನು ಸರ್ಕಾರ ತಿದ್ದುಪಡಿ ಮಾಡುವ ಮೂಲಕ ಅನುಕೂಲ ಮಾಡಿಕೊಟ್ಟಿದೆ. ಉದ್ಯಮಿ, ಎಂಜಿನಿಯರ್‌ ಕೂಡ ಕೃಷಿ ಮಾಡುವಂತೆ ಪ್ರೇರೇಪಿಸಲಾಗುತ್ತಿದೆ. ಇತರೆ ಕ್ಷೇತ್ರದವರು ಕೃಷಿ ಮಾಡಲು ಇದ್ದ ತೊಡಕುಗಳನ್ನು ನಿವಾರಿಸಲಾಗಿದೆ. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಲಾಗಿದೆ. ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗಲಿದೆ’ ಎಂದು ಹೇಳಿದರು.

‘ಕೋವಿಡ್‌ ಆರಂಭದಲ್ಲಿ ರಾಜ್ಯದಲ್ಲಿ ಎರಡು ಪ್ರಯೋಗಾಲಯ ಮಾತ್ರ ಇದ್ದವು. ಈ ಪ್ರಯೋಗಾಲಯಗಳ ಸಂಖ್ಯೆ ಈಗ 145ಕ್ಕೆ ಏರಿಕೆಯಾಗಿದೆ. ಪ್ರತಿ ಜಿಲ್ಲೆಗೆ ಸರಾಸರಿ ಹತ್ತು ಆಮ್ಲಜನಕ ಟ್ಯಾಂಕರ್‌ಗಳನ್ನು ನೀಡಲಾಗಿದೆ. ವೆಂಟಿಲೇಟರ್‌, ಐಸಿಯು ಹಾಸಿಗೆ ಕೊರತೆ ಆಗದಂತೆ ನೋಡಿಕೊಳ್ಳಲಾಗಿದೆ. ಎಂಟು ವೈದ್ಯಕೀಯ ಕಾಲೇಜು ತೆರೆಯುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಹುಸಿ ಪ್ರೀತಿ

‘ಎಚ್‌.ಡಿಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶಾಸಕರ ನಿಧಿ ಬಿಡುಗಡೆ ಆಗಿರಲಿಲ್ಲ. ಬಿ.ಎಸ್‌.ಯಡಿಯೂರಪ್ಪ ಅವರು ಅಧಿಕಾರಕ್ಕೆ ಬಂದ ಬಳಿಕ ಈ ಸಮಸ್ಯೆ ನಿವಾರಣೆಯಾಗಿದೆ. ಎಲ್ಲ ಶಾಸಕರಿಗೂ ಹೆಚ್ಚಿನ ಅನುದಾನ ನೀಡುತ್ತಿದ್ದಾರೆ. ರಸ್ತೆ, ಕುಡಿಯುವ ನೀರು ಸೌಲಭ್ಯಕ್ಕೆ ಅನುದಾನದ ಕೊರತೆ ಆಗದಂತೆ ನೋಡಿಕೊಂಡಿದ್ದಾರೆ’ ಎಂದು ಹೇಳಿದರು.

‘ದಲಿತರ ಸ್ವಾಭಿಮಾನದ ಸಂಕೇತದಂತಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ ಅವರನ್ನು ಕಾಂಗ್ರೆಸ್‌ ಅವಮಾನಿಸಿದೆ. ದೇಶದ ಮೊದಲ ಸಚಿವ ಸಂಪುಟದ ಸದಸ್ಯರಾಗಿದ್ದ ಅವರು ರಾಜೀನಾಮೆ ನೀಡುವಂತಹ ಪರಿಸ್ಥಿತಿ ಸೃಷ್ಟಿಸಿ, ಲೋಕಸಭಾ ಚುನಾವಣೆಯಲ್ಲಿಯೂ ಸೋಲಿಸಿದೆ. ಅಂತ್ಯಸಂಸ್ಕಾರಕ್ಕೆ ದೆಹಲಿಯಲ್ಲಿ ಸ್ಥಳ ನೀಡಲಿಲ್ಲ. ಈಗ ದಲಿತರ ಬಗ್ಗೆ ಹುಸಿ ಪ್ರೀತಿ ತೋರುತ್ತಿದೆ’ ಎಂದು ಆರೋಪಿಸಿದರು.

ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್‌ ಕುಮಾರ್‌, ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕರಾದ ಜಿ.ಎಚ್‌.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ, ಗೂಳಿಹಟ್ಟಿ ಡಿ.ಶೇಖರ್‌, ಕೆ.ಪೂರ್ಣಿಮಾ, ಚಿದಾನಂದಗೌಡ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ.ಮುರುಳಿ ಇದ್ದರು.

ಕೋವಿಡ್‌ ನಿರ್ವಹಣೆಗೆ ಆದ್ಯತೆ: ಕಾರ್ಣಿಕ್‌

ಸಂಭಾವ್ಯ ಕೋವಿಡ್‌ ಮೂರನೇ ಅಲೆಯ ನಿರ್ವಹಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸಲು ತೀರ್ಮಾನಿಸಲಾಗಿದೆ. ಪ್ರತಿ ಬೂತ್‌ ಮಟ್ಟದಲ್ಲಿ ಇಬ್ಬರು ಆರೋಗ್ಯ ಸೇವಕರನ್ನು ಗುರುತಿಸಿ ಅಗತ್ಯ ತರಬೇತಿ ನೀಡಲಾಗುವುದು ಎಂದು ಬಿಜೆಪಿ ವಕ್ತಾರ ಗಣೇಶ್ ಕಾರ್ಣಿಕ್‌ ತಿಳಿಸಿದರು.

ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೋವಿಡ್ ಮೂರನೇ ಅಲೆಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ಲಸಿಕೆ ಪಡೆಯುವರ ಸಂಖ್ಯೆ ಇತ್ತೀಚೆಗೆ ಕಡಿಮೆಯಾಗಿದೆ. ಲಸಿಕೆಗೆ ಜನರನ್ನು ಪ್ರೇರೇಪಿಸಲು ನಿರ್ಧರಿಸಲಾಗಿದೆ’ ಎಂದರು.

‘ಪಕ್ಷ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರು, ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಮುಂಬರುವ ಚುನಾವಣೆಗೆ ಸಜ್ಜುಗೊಳಿಸಬೇಕಿದೆ. ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸಮಾವೇಶವನ್ನು ಆಗಸ್ಟ್‌ ತಿಂಗಳಲ್ಲಿ ನಡೆಸಲಾಗುವುದು. ಸಾಮಾಜಿಕ ಬದಲಾವಣೆಗೆ ಶ್ರಮಿಸಿದವರನ್ನು ಗುರುತಿಸಲಾಗುವುದು. ಬೂತ್‌ ಅಧ್ಯಕ್ಷರ ಮನೆಗೆ ನಾಮಫಲಕ ಹಾಕುವ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು’ ಎಂದರು.

ಬಿಜೆಪಿ ವಕ್ತಾರರಾದ ತೇಜಸ್ವಿನಿಗೌಡ, ಮಾಧ್ಯಮ ಸಂಚಾಲಕ ಅವಿನಾಶ್‌, ಮುಖಂಡರಾದ ನಾಗರಾಜ್‌ ಬೇದ್ರೆ, ದಗ್ಗೆ ಶಿವಪ್ರಕಾಶ್‌ ಇದ್ದರು.

***

ಪ್ರತಿ ತಿಂಗಳು ನಡೆಯುವ ಪದಾಧಿಕಾರಿಗಳ ಸಭೆಯಲ್ಲಿ ಜಿಲ್ಲೆ, ಮಂಡಲ, ಬೂತ್‌ ಮಟ್ಟದಲ್ಲಿ ಬಿಜೆಪಿ ಕೈಗೊಳ್ಳುವ ಕಾರ್ಯಯೋಜನೆ ಸಿದ್ಧವಾಗುತ್ತದೆ. ಇದು ಪಕ್ಷಕ್ಕೆ ಇನ್ನಷ್ಟು ಶಕ್ತಿಯನ್ನು ತಂದುಕೊಡುತ್ತದೆ.

- ಎನ್‌.ರವಿಕುಮಾರ್‌,ಬಿಜೆಪಿ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT