ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ಗ್ರಾಮಗಳು ಸಾರಿಗೆ ಸೌಲಭ್ಯದಿಂದ ದೂರ

ಮ್ಯಾಸಬೇಡ ಬುಡಕಟ್ಟು ಸಮುದಾಯದ 20ಕ್ಕೂ ಹೆಚ್ಚು ಹಟ್ಟಿಗಳಿಗೆ ಬಸ್ ಸೌಲಭ್ಯ ಇಲ್ಲ
Last Updated 18 ಆಗಸ್ಟ್ 2021, 5:05 IST
ಅಕ್ಷರ ಗಾತ್ರ

ಚಳ್ಳಕೆರೆ: ಆಂಧ್ರದ ಗಡಿ ಭಾಗಕ್ಕೆ ಹೊಂದಿಕೊಂಡ ತಾಲ್ಲೂಕಿನ ತಳಕು ಹಾಗೂ ಪರಶುರಾಂಪುರ ಹೋಬಳಿ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಜಲ್ಲಿ ಕಲ್ಲು ಹಾಗೂ ಮಣ್ಣಿನ ಹದಗೆಟ್ಟ ರಸ್ತೆ ಇರುವ ಕಾರಣ ಆ ಗ್ರಾಮಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು ಇಲಾಖೆ ಆಸಕ್ತಿ ತೋರುತ್ತಿಲ್ಲ ಎನ್ನಲಾಗಿದೆ.

ನಿರ್ವಹಣೆಯ ಕೊರತೆಯಿಂದ ಗಡಿ ಭಾಗದ ರಸ್ತೆಗೆ ಹಾಕಿದ್ದ ಜಲ್ಲಿ ಕಲ್ಲುಗಳು ಚೂರು ಚೂರಾಗಿ ರಸ್ತೆ ಉದ್ದಕ್ಕೂ ಬಿದ್ದಿವೆ. ರಸ್ತೆ ಮಧ್ಯೆ ದೊಡ್ಡ ದೊಡ್ಡ ತಗ್ಗು–ಗುಂಡಿಗಳು ನಿರ್ಮಾಣವಾಗಿವೆ. ಸಣ್ಣ ಪುಟ್ಟ ವಾಹನ ಸಂಚಾರಕ್ಕೂ ರಸ್ತೆ ಯೋಗ್ಯವಾಗಿಲ್ಲ. ಮಳೆ ಬಂದಾಗ ಗುಂಡಿಯಲ್ಲಿ ನೀರು ತುಂಬಿಕೊಂಡು ರಸ್ತೆ ಕೊಚ್ಚೆ–ಕೆಸರಿನಿಂದ ಕೂಡಿರುತ್ತದೆ.

ಹಾಗಾಗಿ ತಾಲ್ಲೂಕಿನ ದೊಡ್ಡಓಬಯ್ಯನಹಟ್ಟಿ, ಮರಡಿಹಟ್ಟಿ, ಪಿಲ್ಲಹಳ್ಳಿ, ಸೂರನಹಳ್ಳಿ, ಬೂದಿಹಳ್ಳಿ, ಹನುಂತನಹಳ್ಳಿ, ತಿಮ್ಮಣ್ಣನಹಳ್ಳಿ, ಪಾತಪ್ಪನಗುಡಿ, ಓಬಳಾಪುರ, ಮೋದೂರು ಮತ್ತು ಡಾಂಬರು ರಸ್ತೆಯ ವ್ಯವಸ್ಥೆ ಇರುವ ಕುರಿನಿಂಗಯ್ಯನಹಟ್ಟಿ, ನಾಯಕನಹಟ್ಟಿ ಹಾಗೂ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮ್ಯಾಸಬೇಡ ಬುಡಕಟ್ಟು ಸಮುದಾಯದ 20ಕ್ಕೂ ಹೆಚ್ಚು ಹಟ್ಟಿಗಳಿಗೆ ಬಸ್ ಸೌಲಭ್ಯ ಇಲ್ಲವೇ ಇಲ್ಲ.
ನಡೆದೇ ಹೋಗಬೇಕು. ದೊಡ್ಡ ಓಬಯ್ಯನಹಟ್ಟಿ, ಪುಟ್ಲೋರಹಳ್ಳಿ ಹಾಗೂ ಮರಡಿಹಟ್ಟಿ ಗ್ರಾಮದ ರಸ್ತೆಗಳನ್ನು ಮುಳ್ಳುಕಂಟಿಗಳು ಆವರಿಸಿಕೊಂಡಿವೆ.

ನರೇಗಾ ಯೋಜನೆಯಡಿ ಈ ಗ್ರಾಮದ ಅಲ್ಲಲ್ಲಿ ಸಿ.ಸಿ ರಸ್ತೆ ನಿರ್ಮಿಸಲಾಗಿದೆ. ಜಾಜೂರು ಮಾರ್ಗದ ಮಣ್ಣಿನ ರಸ್ತೆಗೆ ಮೆಟ್ಲಿಂಗ್ ಹಾಕಿಲ್ಲ. ಹೀಗಾಗಿ ಈ ಭಾಗದಲ್ಲಿ ಯಾವ ವಾಹನವೂ ಚಲಿಸುತ್ತಿಲ್ಲ. ಪ್ರತಿದಿನ ಅರಣ್ಯ ಪ್ರದೇಶದ ಮಧ್ಯ ಇರುವ ಕೆರೆಯನ್ನು ದಾಟಿ 5–6 ಕಿ.ಮೀ.ವರೆಗಿನ ಜಾಜೂರು ಗ್ರಾಮಕ್ಕೆ ಜನರು ನಡೆದೇ ಹೋಗಬೇಕು. ಮಳೆಗಾಲದಲ್ಲಿ ಹಳ್ಳ ಹರಿದರೆ, ರಸ್ತೆ ಕೊರಕಲಾಗುತ್ತದೆ. ಕೆರೆಯಲ್ಲಿ ನೀರು ತುಂಬಿದರೆ ಆದಿನ ಜನರು ಗ್ರಾಮವನ್ನು ಬಿಟ್ಟು ಎಲ್ಲಿಯೂ ಹೋಗದ ಸ್ಥಿತಿ ನಿರ್ಮಾಣವಾಗುತ್ತದೆ.

ಕಡೇವುಡೆ ಗ್ರಾಮದ ಮಣ್ಣಿನ ರಸ್ತೆ ತೀರಾ ಹದಗೆಟ್ಟಿದೆ. ಮಳೆ ನೀರು ಹರಿದು ರಸ್ತೆಯ ಅಲ್ಲಲ್ಲಿ ಕೊರಕಲು ಉಂಟಾಗಿದೆ. ಹೀಗಾಗಿ ಲೋಕೋಪಯೋಗಿ ಇಲಾಖೆ ಮಣ್ಣಿನ ರಸ್ತೆಯನ್ನು 3–4 ಬಾರಿ ದುರಸ್ತಿ ಮಾಡಿಸಿದೆ. ಒಂದು ಬಾರಿ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ಗ್ರಾಮ ವಾಸ್ತವ್ಯ ಮತ್ತು ಎರಡು ಬಾರಿ ಜನಸ್ಪಂದನ ಕಾರ್ಯಕ್ರಮಗಳು ನಡೆದಿವೆ. ಇದರಿಂದ ಕಡೇವುಡೆ ಗ್ರಾಮಕ್ಕೆ ಕಿಂಚಿತ್ತೂ ಉಪಯೋಗವಾಗಿಲ್ಲ ಎನ್ನಲಾಗಿದೆ.

ಬುಡ್ನಹಟ್ಟಿ ಗ್ರಾಮದ ಮಾರ್ಗದಿಂದ ಕುರಿನಿಂಗಯ್ಯನಹಟ್ಟಿ ಗ್ರಾಮಕ್ಕೆ ಇದುವರೆಗೆ ಖಾಸಗಿ ಹಾಗೂ ಸರ್ಕಾರಿ ಬಸ್‍ಗಳ ಪ್ರವೇಶವೇ ಇಲ್ಲ. ಆದರೂ ಇಲ್ಲಿ ಡಾಂಬರ್ ರಸ್ತೆ ನಿರ್ಮಿಸಿದ್ದಾರೆ. ಹೀಗಾಗಿ ಜನರು, ಬೈಕ್, ಆಟೊ ಹಾಗೂ ಸರಕು ಹೇರುವ ಟೆಂಪೊ ಮುಂತಾದ ವಾಹನವನ್ನೇ ಅವಲಂಬಿಸಿದ್ದಾರೆ.

ಸರ್ಕಾರಿ ಬಸ್‌ ಓಡಿಸಿ

ರೈತ ಸಂಘದ ಒತ್ತಾಯದ ಮೇರೆಗೆ ಚಳ್ಳಕೆರೆಯಿಂದ ಪುಟ್ಲೋರಹಳ್ಳಿ ಗ್ರಾಮಕ್ಕೆ ಒಂದೇ ಒಂದು ಸರ್ಕಾರಿ ಬಸ್ ಬಿಡಲಾಗಿತ್ತು. ಕೋವಿಡ್ ನೆಪದಲ್ಲಿ ಈಗ ಅದು ಬರುತ್ತಿಲ್ಲ. ಹೀಗಾಗಿ ಓಡಾಟಕ್ಕೆ ತುಂಬಾ ತೊಂದರೆಯಾಗುತ್ತಿದೆ.

ರಸ್ತೆಯನ್ನು ಅಭಿವೃದ್ಧಿಪಡಿಸುವ ಮೂಲಕ ಗಡಿ ಗ್ರಾಮಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಕ್ಯಾದಿಗುಂಟೆ ಗ್ರಾಮದ ತಿಮ್ಮರಾಜು, ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರಲ್ಲಿ ಮನವಿ ಮಾಡಿದ್ದಾರೆ.

ಶಾಲಾ ಮಕ್ಕಳು ಆಟೊದಲ್ಲೇ ಸಂಚರಿಸಬೇಕಿದೆ

ಖಾಸಗಿ ಹಾಗೂ ಸರ್ಕಾರಿ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ನಿತ್ಯ ಸಂಚಾರಕ್ಕೆ ಸರಕು ಸಾಗಣೆ ವಾಹನ ಗಡಿ ಭಾಗದ ಜನರಿಗೆ ಅನಿವಾರ್ಯವಾಗಿದೆ. ಶಾಲಾ ಮಕ್ಕಳು ಕೂಡ 40–50 ಕಿ.ಮೀ ದೂರದ ನಗರದ ಶಾಲೆ–ಕಾಲೇಜುಗಳಿಗೆ ಆಟೊದಲ್ಲೇ ಸಂಚರಿಸುತ್ತಾರೆ.

ಸರ್ಕಾರಿ ಸಾರಿಗೆ ಘಟಕ ಮತ್ತು ಬಸ್ ನಿಲ್ದಾಣ ಇವು ಲೆಕ್ಕಕ್ಕೆ ಉಂಟು ಆಟಕ್ಕೆ ಇಲ್ಲ ಎನ್ನುವಂತಾಗಿದೆ ಎಂದು ಬಸಾಪುರ ಗ್ರಾಮದ ಗೋವಿಂದಪ್ಪ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT