ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪರ್ಕ ವ್ಯವಸ್ಥೆಯಿಲ್ಲದ ವಾಣಿವಿಲಾಸ ಸಾಗರ ಜಲಾಶಯ ನಡುಗಡ್ಡೆಯಲ್ಲಿ ಕಟ್ಟಡ!

Published 16 ನವೆಂಬರ್ 2023, 20:34 IST
Last Updated 16 ನವೆಂಬರ್ 2023, 20:34 IST
ಅಕ್ಷರ ಗಾತ್ರ

ಚಿತ್ರದುರ್ಗ: ವಾಣಿವಿಲಾಸ ಸಾಗರ ಜಲಾಶಯ (ವಿ.ವಿ. ಸಾಗರ) ಭರ್ತಿಯಾದರೆ ಹಿಂಭಾಗದಲ್ಲಿರುವ ನಡುಗಡ್ಡೆಯು ಸಂಪರ್ಕ ಕಳೆದುಕೊಳ್ಳಲಿದೆ ಎಂಬ ವಿಷಯ ಗೊತ್ತಿದ್ದರೂ ₹2.70 ಕೋಟಿ ವೆಚ್ಚದಲ್ಲಿ ಕೌಶಲಾಭಿವೃದ್ಧಿ ಕೇಂದ್ರಕ್ಕಾಗಿ ಕಟ್ಟಡ ನಿರ್ಮಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಈ ಕಟ್ಟಡವನ್ನು ಯಾವ ಉದ್ದೇಶಕ್ಕೆ ಕಟ್ಟಲಾಗಿದೆ ಎಂಬ ಕುರಿತು ಜಿಜ್ಞಾಸೆ ಶುರುವಾಗಿದ್ದು, ಜನವಸತಿ ಪ್ರದೇಶದಿಂದ ಬಹುದೂರದಲ್ಲಿ ಕಟ್ಟಡ ನಿರ್ಮಿಸಿ ಅನುದಾನ ಪೋಲು ಮಾಡಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಹೊಸದುರ್ಗ ತಾಲ್ಲೂಕಿನತಿಮ್ಮಯ್ಯನಹಟ್ಟಿ ವ್ಯಾಪ್ತಿಯ ಮುಳುಗಡೆ ಪ್ರದೇಶದಲ್ಲಿ ಕೌಶಲಾಭಿವೃದ್ಧಿ ಕೇಂದ್ರದ ಕಟ್ಟಡವನ್ನು ಜಿಲ್ಲಾ ಖನಿಜ ನಿಧಿಯಿಂದ (ಡಿಎಂಎಫ್‌) ₹1.80 ಕೋಟಿ ಹಾಗೂ ಶಾಸಕರಾಗಿದ್ದ ಗೂಳಿಹಟ್ಟಿ ಶೇಖರ್‌ ಅವರಪ್ರದೇಶಾಭಿವೃದ್ಧಿ ನಿಧಿಯಿಂದ₹90 ಲಕ್ಷ ವಿನಿಯೋಗಿಸಿ ಕಟ್ಟಲಾಗಿದೆ. ಕಾಮಗಾರಿ ಪೂರ್ಣ
ಗೊಳ್ಳುವ ಮೊದಲೇ ವಿ.ವಿ. ಸಾಗರದ ನೀರಿನ ಮಟ್ಟ ಹೆಚ್ಚಾಗಿದ್ದರಿಂದ ನಡುಗಡ್ಡೆ ಜಲಾವೃತವಾಗಿದ್ದು, ಕಟ್ಟಡದ ಸಂಪರ್ಕ ಕಡಿತಗೊಂಡಿದೆ.

ತಿಮ್ಮಯ್ಯನಹಟ್ಟಿಯಿಂದ 3 ಕಿ.ಮೀ ದೂರದಲ್ಲಿ, ವಿ.ವಿ. ಸಾಗರದ ಹಿನ್ನೀರಿನಲ್ಲಿ 2021ರಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು.

ತಾತ್ಕಾಲಿಕವಾಗಿ ನಿರ್ಮಿಸಿದ್ದ ರಸ್ತೆ ಮೂಲಕ ನಿರ್ಮಾಣ ಸಾಮಗ್ರಿಗಳನ್ನು ಸಾಗಿಸಲಾಗಿತ್ತು. 2022ರ ಸೆಪ್ಟೆಂಬರ್‌ನಲ್ಲಿ ಜಲಾಶಯದ ನೀರಿನ ಮಟ್ಟ ಹೆಚ್ಚಾಗಿ ರಸ್ತೆಗಳು ಜಲಾವೃತವಾದ ಬಳಿಕ ದೋಣಿಯಲ್ಲಿ ಸೀಮೆಂಟ್‌, ಕಬ್ಬಿಣ, ಮರಳು ಸಾಗಿಸಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಒಂದು ಅಂತಸ್ತಿನ ಈ ಕಟ್ಟಡದಲ್ಲಿ ತರಬೇತಿಗೆ ಸಭಾಂಗಣ, ವಾಸ್ತವ್ಯಕ್ಕೆ ಕೊಠಡಿ ಸೇರಿ ಅಗತ್ಯ ಸೌಲಭ್ಯಗಳಿವೆ.

‘ನಡುಗಡ್ಡೆಯಲ್ಲಿ ಕೌಶಲಾಭಿವೃದ್ಧಿ ಕೇಂದ್ರ ಸ್ಥಾಪಿಸಿ ತರಬೇತಿ ನೀಡುವುದಾದರೂ ಯಾರಿಗೆ’ ಎಂದು ಹೊಸದುರ್ಗ ಶಾಸಕ ಬಿ.ಜಿ. ಗೋವಿಂದಪ್ಪ ಈಚೆಗೆ ನಡೆದ ಡಿಎಂಎಫ್‌ ಪ್ರತಿಷ್ಠಾನದ ಆಡಳಿತ ಮಂಡಳಿ ಸಭೆಯಲ್ಲಿ ಪ್ರಶ್ನಿಸಿದ್ದರು. ಜನವಸತಿ ಪ್ರದೇಶದಿಂದ ಬಹುದೂರದಲ್ಲಿ ಕಟ್ಟಡ ನಿರ್ಮಿಸಿ ಅನುದಾನ ಪೋಲು ಮಾಡಿ ತಪ್ಪು ಎಸಗಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆಯೂ ಅವರು ಪಟ್ಟು ಹಿಡಿದಿದ್ದಾರೆ. ಕಟ್ಟಡ ನಿರ್ಮಾಣದ ಹೊಣೆ ಹೊತ್ತಿರುವ ನಿರ್ಮಿತಿ ಕೇಂದ್ರವು ಗುತ್ತಿಗೆದಾರರಿಗೆ ನೀಡಬೇಕಾಗಿದ್ದ ಬಾಕಿ ಪಾವತಿಯನ್ನು ತಡೆ ಹಿಡಿದಿದೆ.

ಕಟ್ಟಡಕ್ಕೆ ಬಳಸಿದ ಸ್ಥಳ ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿದೆ. ಇಲಾಖೆಯ ಅನುಮತಿ ಪಡೆಯದೇ ಕಟ್ಟಡ ನಿರ್ಮಿಸಿರುವುದೂ ಪರಿಶೀಲನೆಯಿಂದ ಬೆಳಕಿಗೆ ಬಂದಿದೆ.

‘ಈ ಹಿಂದೆ ಡಿಎಂಎಫ್‌ ಪ್ರತಿಷ್ಠಾನದ ಆಡಳಿತ ಮಂಡಳಿ ಸಭೆಯ ಅನುಮತಿ ಪಡೆದು ಕಟ್ಟಡ ನಿರ್ಮಿಸಲಾಗಿದೆ. ಯಾವ ಉದ್ದೇಶಕ್ಕೆ ಬಳಕೆ ಮಾಡಬೇಕು ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಯಾವ ಇಲಾಖೆಯ ಅಧೀನಕ್ಕೆ ಕಟ್ಟಡವನ್ನು ಒಪ್ಪಿಸಬೇಕು ಎಂಬುದರ ಬಗ್ಗೆ ಚರ್ಚೆ ನಡಯಬೇಕಿದೆ. ಈಜು, ಜಲಸಾಹಸ ಕ್ರೀಡೆಗೆ ಬಳಕೆ ಮಾಡಿದರೆ ಸೂಕ್ತ ಎಂಬ ಅಭಿಪ್ರಾಯವನ್ನು ಕೆಲವರು ವ್ಯಕ್ತಪಡಿಸಿದ್ದಾರೆ’ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಜಿ.ಆರ್‌.ಜೆ ಹೇಳಿದ್ದಾರೆ.

ವಿ.ವಿ.ಸಾಗರದ ಹಿನ್ನೀರಿನ ನಡುಗಡ್ಡೆಯಲ್ಲಿ ಕೌಶಲಾಭಿವೃದ್ಧಿ ಕೇಂದ್ರ ನಿರ್ಮಿಸಿರುವುದು
ವಿ.ವಿ.ಸಾಗರದ ಹಿನ್ನೀರಿನ ನಡುಗಡ್ಡೆಯಲ್ಲಿ ಕೌಶಲಾಭಿವೃದ್ಧಿ ಕೇಂದ್ರ ನಿರ್ಮಿಸಿರುವುದು

ಜಲಸಾಹಸ ಕ್ರೀಡೆ ಉತ್ತೇಜಿಸಲು ಕಟ್ಟಡವನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಿದರೆ ಸೂಕ್ತ ಎಂಬ ಸಲಹೆ ಕೇಳಿಬಂದಿದೆ. ಡಿಎಂಎಫ್‌ ಟ್ರಸ್ಟ್‌ನ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು

–ದಿವ್ಯ ಪ್ರಭು ಜಿ.ಆರ್‌.ಜೆ ಜಿಲ್ಲಾಧಿಕಾರಿ

ದೋಣಿ ಮೂಲಕವೇ ಸಂಪರ್ಕ!

ಮುಳುಗಡೆ ಪ್ರದೇಶದಲ್ಲಿರುವ ಈ ಕಟ್ಟಡ ಜಲಾಶಯದ ನೀರಿನ ಮಟ್ಟಕ್ಕಿಂತ 25 ಅಡಿ ಎತ್ತರದಲ್ಲಿದೆ. ನೀರಿನ ಮಧ್ಯ ಭಾಗದಲ್ಲಿದ್ದರೂ ವಿ.ವಿ. ಸಾಗರ ಭರ್ತಿಯಾಗಿ ಕೋಡಿ ಹರಿದರೂ ಕಟ್ಟಡ ಮುಳುಗುವುದಿಲ್ಲ. ಇಂತಹ ಕಟ್ಟಡಕ್ಕೆ ದೋಣಿಯೊಂದೇ ಸಂಪರ್ಕ ಸಾಧನವಾಗಿದೆ. ಕೌಶಲಾಭಿವೃದ್ಧಿ ತರಬೇತಿಗೆ ಕಟ್ಟಡ ಮೀಸಲಿಟ್ಟರೆ ಜನರನ್ನು ಕರೆದೊಯ್ಯುವ ಸಮಸ್ಯೆ ಎದುರಾಗಬಹುದು. ಹಿನ್ನೀರಿನಲ್ಲಿರುವ ಜಲಸಾಹಸ ಕ್ರೀಡಾ ತರಬೇತಿ ಕೇಂದ್ರಕ್ಕೆ ಈ ಕಟ್ಟಡ ಹಸ್ತಾಂತರಿಸುವುದು ಸೂಕ್ತ ಎಂಬುದು ಜಿಲ್ಲಾ ಖನಿಜ ನಿಧಿ ಪ್ರತಿಷ್ಠಾನ ಟ್ರಸ್ಟ್‌ನ ಆಡಳಿತ ಮಂಡಳಿ ಸದಸ್ಯರು ಸಲಹೆ ನೀಡಿದ್ದಾರೆ. ಕಟ್ಟಡ ನಿರ್ಮಾಣ ಆರಂಭಿಸಿದ ಸಂದರ್ಭ ಜಲಾಶಯದಲ್ಲಿ ನೀರಿನ ಸಂಗ್ರಹವಿರಲಿಲ್ಲ. 2022ರಲ್ಲಿ ಭಾರಿ ಮಳೆ ಸುರಿದ ಕಾರಣ 89 ವರ್ಷಗಳ ನಂತರ ವಿ.ವಿ. ಸಾಗರ ಭರ್ತಿಯಾಗಿ ಈ ನಡುಗಡ್ಡೆಯ ಸಂಪರ್ಕ ಕಡಿದುಕೊಂಡಿದ್ದರಿಂದ ಕಟ್ಟಡ ನಿರ್ಮಾಣದ ಉದ್ದೇಶವು ಈಡೇರದಂತಾಯಿತು ಎಂದೂ ಮೂಲಗಳು ಹೇಳಿವೆ. ಜಲಾಶಯಕ್ಕೆ ನೀರು ಹರಿಸಲೆಂದೇ ಭದ್ರಾ ಮೇಲ್ದಂಡೆ ಯೋಜನೆ ರೂಪಿಸಲಾಗಿದೆ. ಯೋಜನೆ ಸಾಕಾರಗೊಂಡಲ್ಲಿ ನಡುಗಡ್ಡೆ ಮುಳುಗುವುದು ಖಚಿತವಾಗಿ ಗೊತ್ತಿತ್ತು. ಆದರೂ ಹಿನ್ನೀರಿನ ಪ್ರದೇಶದಲ್ಲಿ ಈ ಕಟ್ಟಡ ನಿರ್ಮಿಸಿರುವುದು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT