ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ | ರಸ್ತೆ ಬದಿ ಕಟ್ಟಡ ತ್ಯಾಜ್ಯ: ಮಳೆ ನೀರು ಹರಿವಿಗೆ ಅಡ್ಡಿ

ನೀರಿನ ಮೂಲಗಳಿಗೆ ಧಕ್ಕೆಯಾಗುವ ಆತಂಕ
Last Updated 26 ಜೂನ್ 2022, 5:18 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಪಟ್ಟಣ ವ್ಯಾಪ್ತಿಯಲ್ಲಿ ಕಟ್ಟಡಗಳ ನೆಲಸಮ ತ್ಯಾಜ್ಯವನ್ನು ಬೇಕಾಬಿಟ್ಟಿ ಹಾಕಲಾಗುತ್ತಿದೆ ಎಂಬ ದೂರು ಕೇಳಿ ಬಂದಿದೆ.

ಪಟ್ಟಣದ ರಾಯದುರ್ಗ ರಸ್ತೆ, ಕೋನಸಾಗರ ರಸ್ತೆ, ರಾಯಾಪುರ ರಸ್ತೆಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಬಹುದು. ಕೋನಸಾಗರ ರಸ್ತೆಯಲ್ಲಿ ಬೇಕಾಬಿಟ್ಟಿ ಕಟ್ಟಡ ತ್ಯಾಜ್ಯ ಹಾಕಲಾಗಿದ್ದು ರಸ್ತೆ ಬದಿ ದೊಡ್ಡ, ದೊಡ್ಡ ಗುಡ್ಡಗಳು ನಿರ್ಮಾಣವಾಗಿವೆ. ಇದರಿಂದ ರಸ್ತೆ ನಿರ್ಮಾಣದ ವೇಳೆ ಮಾಡಿರುವ ಟ್ರಂಚ್ ತುಂಬಿ ಮಳೆ ನೀರು ರಸ್ತೆ ಮೇಲೆ ಬೇಕಾಬಿಟ್ಟಿ ಹರಿಯುತ್ತಿದೆ. ಮಳೆ ನೀರಿನ ಜತೆ ಮಣ್ಣು ಕೊಚ್ಚಿಕೊಂಡು ಹೋಗುವ ಕಾರಣ ನೀರಿನ ಮೂಲಗಳಿಗೆ ಧಕ್ಕೆಯಾಗುವ ಆತಂಕ ಎದುರಾಗಿದೆ.

‘ರಸ್ತೆ ನಿರ್ಮಾಣ ಮಾಡುವಾಗ ಮೊದಲು ಎರಡೂ ಬದಿಗಳಲ್ಲಿ ಟ್ರಂಚ್‌ಗಳನ್ನು ನಿರ್ಮಿಸಲಾಗುತ್ತದೆ. ಇದರ ಮೂಲ ಉದ್ದೇಶ ರಸ್ತೆಯ ಮೇಲೆ ಬೀಳುವ ನೀರು ಸರಾಗವಾಗಿ ಹರಿದು ಹೋಗಬೇಕು ಎನ್ನುವುದು. ಕಟ್ಟಡ ತ್ಯಾಜ್ಯವನ್ನು ಕಾನೂನು ಬಾಹಿರವಾಗಿ ಹಾಕಿ ಟ್ರಂಚ್‌ಗಳನ್ನು ಮುಚ್ಚುವುದರಿಂದ ನೀರು ರಸ್ತೆಯ ಮೇಲೆ ಹರಿದು ಬೇಗ ರಸ್ತೆ ಹಾಳಾಗುತ್ತದೆ. ಜೊತೆಗೆ ಸಮೀಪದ ಮನೆ, ನಿವೇಶನ, ಹೊಲಗಳಿಗೆ ನುಗ್ಗುತ್ತದೆ. ಇದರಿಂದ ಪಾರಂಪರಿಕವಾಗಿ ನೀರು ಹರಿಯುವ ದಾರಿಗೂ ಧಕ್ಕೆಯಾಗುತ್ತಿದೆ’ ಎಂದು ನಾಗರಿಕರಾದ ಮಂಜುನಾಥ್, ಶ್ಯಾಮಸುಂದರ್ ದೂರಿದರು.

‘ಕಟ್ಟಡ ತ್ಯಾಜ್ಯವನ್ನು ಇದೇ ಜಾಗದಲ್ಲಿ ಹಾಕಿ ಎಂದು ನಾವು ಯಾವುದೇ ನಿರ್ದೇಶನ ನೀಡಿಲ್ಲ. ಸಮೀಪದ ಪಾಳುಬಾವಿ, ತಗ್ಗುಪ್ರದೇಶದಲ್ಲಿ ಹಾಕಬೇಕು. ಆದರೆ ರಸ್ತೆ ಬದಿ ಬೇಕಾಬಿಟ್ಟಿ ಹಾಕುವುದು ಸರಿಯಲ್ಲ. ಕತ್ತಲಾದ ನಂತರ ಅಥವಾ ಬೆಳಗಾಗುವ ಮೊದಲು ಟ್ರ್ಯಾಕ್ಟರ್‌ನವರು ತಂದು ಹಾಕುತ್ತಾರೆ. ಇದರಲ್ಲಿ ಪಟ್ಟಣ ಪಂಚಾಯಿತಿ ಹೊಣೆ ಜತೆಗೆ ಜನರ ಸಹಕಾರ ಮುಖ್ಯವಾಗಿದೆ. ಪ್ರಕೃತಿ ಉಳಿಸಿಕೊಳ್ಳುವುದು ಎಲ್ಲರ ಹೊಣೆಯಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕಾಂತರಾಜ್ ಹೇಳಿದರು.

ಮುಖ್ಯರಸ್ತೆ ವಿಸ್ತರಣೆಯ ಆರಂಭದ ನಂತರ ಈ ಸಮಸ್ಯೆ ಹೆಚ್ಚಾಗಿದೆ. ಕೆಲವರಿಗೆ ನಾನು ಖುದ್ದು ಹೇಳಿ ತಡೆದಿದ್ದೇನೆ. ತ್ಯಾಜ್ಯವಿದ್ದಲ್ಲಿ ಪಟ್ಟಣ ಪಂಚಾಯಿತಿ ಗಮನಕ್ಕೆ ತಂದಲ್ಲಿ ಸಂಭವನೀಯ ಸ್ಥಳವನ್ನು ತೋರಿಸುತ್ತೇವೆ. ಮುಂದಿನ ದಿನಗಳಲ್ಲಿ ಇದನ್ನು ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು. ಟ್ರ್ಯಾಕ್ಟರ್ ಮಾಲೀಕರಿಗೆ ಈ ಕುರಿತು ನಿರ್ದೇಶನ ನೀಡಲಾಗುವುದು ಎಂದು ಕಾಂತರಾಜ್ ಭರವಸೆ ನೀಡಿದರು.

*

ಇದು ಕಣ್ತಪ್ಪಿಸಿ ಮಾಡುವ ಕೆಲಸವಾಗಿದೆ. ಸಂಜೆ ಮತ್ತು ಬೆಳಗಿನ ಜಾವ ಸಿಬ್ಬಂದಿಯನ್ನು ನೇಮಿಸಿ ಬೇಕಾಬಿಟ್ಟಿ ತ್ಯಾಜ್ಯ ಹಾಕುವುದನ್ನು ತಡೆಯಲಾಗುವುದು.
- ಕಾಂತರಾಜ್, ಮುಖ್ಯಾಧಿಕಾರಿ, ಪಟ್ಟಣ ಪಂಚಾಯಿತಿ

*

ರಸ್ತೆಬದಿ ಕಟ್ಟಡಗಳ ತ್ಯಾಜ್ಯವನ್ನು ಹಾಕುವುದು ಪಟ್ಟಣದ ಅಂದಕ್ಕೆ ಧಕ್ಕೆ ತರುತ್ತದೆ. ವಾಯುವಿಹಾರಕ್ಕೆ ಅಡ್ಡಿಯಾಗುತ್ತದೆ. ಇದನ್ನು ತಪ್ಪಿಸಲು ಸೂಕ್ತ ಸ್ಥಳಗಳನ್ನು ಗುರುತಿಸಿ ಪ್ರಚುರ ಪಡಿಸಬೇಕು.
- ಮಂಜುನಾಥ್, ನಾಗರಿಕ, ಮೊಳಕಾಲ್ಮುರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT