ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಪ್ರಯಾಣಿಕರಿಗೆ ಆಸರೆಯಾದ ಖಾಸಗಿ ಬಸ್‌

ರಸ್ತೆಗೆ ಇಳಿದ ಕೆಎಸ್‌ಆರ್‌ಟಿಸಿ ಬಸ್‌, ತೀವ್ರಗೊಂಡ ಸಾರಿಗೆ ನೌಕರರ ಮುಷ್ಕರ
Last Updated 8 ಏಪ್ರಿಲ್ 2021, 10:55 IST
ಅಕ್ಷರ ಗಾತ್ರ

ಚಿತ್ರದುರ್ಗ: ಆರನೇ ವೇತನ ಆಯೋಗಕ್ಕೆ ಪಟ್ಟುಹಿಡಿದಿರುವ ಸಾರಿಗೆ ನೌಕರರು ಮುಷ್ಕರವನ್ನು ತೀವ್ರಗೊಳಿಸಿದ್ದಾರೆ. ಎರಡನೇ ದಿನವೂ ಕರ್ತವ್ಯಕ್ಕೆ ಗೈರಾಗುವ ಮೂಲಕ ಹೋರಾಟಕ್ಕೆ ಬದ್ಧರಾಗಿರುವ ಸಂದೇಶ ರವಾನಿಸಿದ್ದಾರೆ. ಸಾರಿಗೆ ಬಸ್‌ಗಳಿಗೆ ಪರ್ಯಾಯವಾಗಿ ಖಾಸಗಿ ಬಸ್‌ಗಳು ಗುರುವಾರ ಪ್ರಯಾಣಿಕರಿಗೆ ಸೇವೆ ಒದಗಿಸಿದವು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಚಿತ್ರದುರ್ಗ ವಿಭಾಗ ವ್ಯಾಪ್ತಿಯ 294 ಬಸ್‌ಗಳಲ್ಲಿ ಒಂದು ಬಸ್‌ ಮಾತ್ರ ಚಳ್ಳಕೆರೆಗೆ ಸಂಚರಿಸಿತು. ಪೊಲೀಸ್‌ ಭದ್ರತೆಯಲ್ಲಿ ಗುರುವಾರ ಬೆಳಿಗ್ಗೆ ಬಸ್‌ ಸಾಗಿತು. ಒಂದೊಂದೇ ಬಸ್‌ ರಸ್ತೆಗೆ ಇಳಿಯುವ ನಿರೀಕ್ಷೆಯನ್ನು ಇದು ಹುಟ್ಟುಹಾಕಿತ್ತು. 1,250 ನೌಕರರಲ್ಲಿ ಚಾಲಕರು, ನಿರ್ವಾಹಕರು ಗೈರು ಹಾಜರಾಗಿದ್ದರಿಂದ ನಿರೀಕ್ಷೆ ಹುಸಿಯಾಯಿತು.

ಖಾಸಗಿ ಬಸ್‌ ಸೇವೆ:

ಸರ್ಕಾರದ ನಿರ್ದೇಶನದಂತೆ ಸಾರಿಗೆ ಬಸ್‌ಗೆ ಪರ್ಯಾಯವಾಗಿ ಖಾಸಗಿ ಬಸ್‌ ಸೇವೆಯನ್ನು ಕಲ್ಪಿಸಲಾಗಿದೆ. ಸಾರಿಗೆ ಬಸ್‌ ಸಂಚರಿಸುವ ಮಾರ್ಗದಲ್ಲಿಯೇ ಖಾಸಗಿ ಬಸ್‌ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಆವರಣದಲ್ಲಿಯೇ ಖಾಸಗಿ ಬಸ್‌, ಕ್ರೂಸರ್‌, ಮ್ಯಾಕ್ಸಿಕ್ಯಾಬ್‌ಗಳು ಸೇವೆ ಒದಗಿಸುತ್ತಿವೆ. ಪ್ರಯಾಣಿಕರಿಗೆ ಉಂಟಾಗುತ್ತಿದ್ದ ಸಮಸ್ಯೆ ಕಡಿಮೆಯಾಗಿದೆ.

ಬೆಂಗಳೂರು, ದಾವಣಗೆರೆ, ಹಿರಿಯೂರು, ಹೊಳಲ್ಕೆರೆ, ಭರಮಸಾಗರ ಸೇರಿ ಹಲವು ಊರುಗಳಿಗೆ ಖಾಸಗಿ ಬಸ್‌ ಸೇವೆ ಸಮರ್ಪಕವಾಗಿದೆ. ಬಸ್‌ ನಿಲ್ದಾಣದಲ್ಲಿ ಸಾರಿಗೆ ಬಸ್‌ ನಿಲುಗಡೆ ಮಾಡುತ್ತಿದ್ದ ಸ್ಥಳದಲ್ಲಿಯೇ ಖಾಸಗಿ ಬಸ್‌ಗಳು ನಿಲ್ಲುತ್ತಿವೆ. ಮತ್ತೊಂದು ಬದಿಗೆ ಕ್ರೂಸರ್‌ ಹಾಗೂ ಇತರೆ ಪ್ರವಾಸಿ ವಾಹನಗಳು ಸೇವೆಗೆ ಸಜ್ಜಾಗಿದ್ದವು. ಸೀಟುಗಳು ಭರ್ತಿಯಾಗುವ ವರೆಗೆ ಕಾಯುತ್ತಿದ್ದ ಚಾಲಕರು ನಂತರ ಪ್ರಯಾಣ ಬೆಳೆಸುತ್ತಿದ್ದರು.

ಪ್ರಯಾಣಿಕರ ಸಂಖ್ಯೆ ಕಡಿಮೆ:

ಪ್ರಯಾಣಿಕರ ಬೇಡಿಕೆಗಿಂತ ಹೆಚ್ಚಿನ ಸಂಖ್ಯೆಯ ಖಾಸಗಿ ಬಸ್‌ಗಳು ಸಂಚಾರಕ್ಕೆ ಸಜ್ಜಾಗಿದ್ದವು. ಎಲ್ಲ ಬಸ್‌ಗಳನ್ನು ರಸ್ತೆಗೆ ಇಳಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಖಾಸಗಿ ಬಸ್‌ ಮಾಲೀಕರಿಗೆ ಸೂಚನೆ ನೀಡಿದ್ದರು. ತೆರಿಗೆ ಪಾವತಿಸಲು ಸಾಧ್ಯವಾಗದೇ ವರ್ಷದಿಂದ ನಿಲುಗಡೆ ಮಾಡಿದ್ದ ಬಸ್‌ಗಳು ಕೂಡ ಸಂಚಾರ ಆರಂಭಿಸಿದವು. ಹೀಗಾಗಿ, ಖಾಸಗಿ ಬಸ್‌ ನಿಲ್ದಾಣದಲ್ಲಿ ಎಂದಿಗಿಂತಲೂ ಹೆಚ್ಚಿನ ಬಸ್‌ಗಳು ಕಾಣುತ್ತಿದ್ದವು.

ಮುಷ್ಕರ ಅರಿತಿದ್ದ ಸಾರ್ವಜನಿಕರು ಬಸ್‌ ಸೇವೆ ಪಡೆದಿದ್ದು ಕಡಿಮೆ. ಅನಿವಾರ್ಯ ಕಾರಣಕ್ಕೆ ಕೆಲವರು ಪ್ರಯಾಣ ಮಾಡಿದರು. ಶಿವಮೊಗ್ಗ, ಬೆಂಗಳೂರಿಗೆ ತೆರಳುವ ಬಸ್‌ಗಳು ಭರ್ತಿಯಾಗುವುದು ಅಪರೂಪವಾಗಿತ್ತು. ದಾವಣಗೆರೆ, ಜಗಳೂರು, ಹಿರಿಯೂರು ಮಾರ್ಗವಾಗಿ ಸಾಗುವ ಬಸ್‌ಗಳಿಗೆ ಮಾತ್ರ ಹೆಚ್ಚಿನ ಬೇಡಿಕೆ ಇತ್ತು. ಕಾಲೇಜು ವಿದ್ಯಾರ್ಥಿಗಳು ಬಸ್‌ಗಳಿಗೆ ಕಾದು ಕುಳಿತಿದ್ದ ದೃಶ್ಯ ಅಲ್ಲಲ್ಲಿ ಕಂಡುಬಂದಿತು.

ಪ್ರಯಾಣ ದರ ಹೆಚ್ಚಳ

ಸಾರಿಗೆ ನೌಕರರ ಮುಷ್ಕರವನ್ನು ನೆಪ ಮಾಡಿಕೊಂಡ ಕೆಲ ಖಾಸಗಿ ಬಸ್‌ಗಳು ಪ್ರಯಾಣ ದರವನ್ನು ಹೆಚ್ಚಿಸಿವೆ. ಕನಿಷ್ಠ ₹ 10ರಿಂದ ₹ 100 ರೂಪಾಯಿ ವರೆಗೆ ಹೆಚ್ಚಿನ ದರ ವಸೂಲಿ ಮಾಡಿರುವುದು ಗುರುವಾರ ಬೆಳಕಿಗೆ ಬಂದಿದೆ.

ದಾವಣಗೆರೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್‌ ಮಾರ್ಗ ಮಧ್ಯದ ಚಿತ್ರದುರ್ಗಕ್ಕೂ ಸೇವೆ ನೀಡಿತು. ನಿಗದಿತ ₹ 70 ದರದ ಬದಲಿಗೆ ₹ 80 ವಿಧಿಸಿತ್ತು. ಬಸ್‌ ನಿರ್ವಾಹಕರ ಈ ಕ್ರಮವನ್ನು ಕೆಲ ಪ್ರಯಾಣಿಕರು ಪ್ರಶ್ನಿಸಿದರು. ಸಾರಿಗೆ ಇಲಾಖೆ ಅಧಿಕಾರಿಗಳು ಮಧ್ಯಪ್ರವೇಶಿಸಿ ದರ ಹೆಚ್ಚಿಸದಂತೆ ಎಚ್ಚರಿಕೆ ನೀಡಿದರು.

ಚಿತ್ರದುರ್ಗದಿಂದ ಬೆಂಗಳೂರಿಗೆ ಕನಿಷ್ಠ ₹ 247ರಿಂದ ₹ 491ರವರೆಗೆ ಟಿಕೆಟ್‌ ದರವಿದೆ. ಸಾಮಾನ್ಯ ಬಸ್‌ಗಳ ಪ್ರಯಾಣ ದರ ಜನರ ಕೈಗೆಟುಕುವಂತಿದೆ. ಆದರೆ, ಖಾಸಗಿ ಬಸ್‌ಗಳು ₹ 400 ದರ ನಿಗದಿ ಮಾಡಿವೆ. ಈ ಬಗ್ಗೆ ಅನೇಕ ಪ್ರಯಾಣಿಕರು ಕಿಡಿಕಾರಿದರು.

ಬಿಗಿ ಪೊಲೀಸ್‌ ಭದ್ರತೆ

ಮುಷ್ಕರ ತೀವ್ರಗೊಂಡ ಪರಿಣಾಮ ಬಸ್‌ ನಿಲ್ದಾಣದ ಸುತ್ತ ಪೊಲೀಸ್‌ ಭದ್ರತೆಯನ್ನು ಹೆಚ್ಚಿಸಲಾಗಿದೆ. ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯ (ಡಿಎಆರ್‌) ತುಕಡಿಯನ್ನು ನಿಯೋಜಿಸಲಾಗಿದೆ.

ಅಲ್ಲದೇ, ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಗೆ ರಕ್ಷಣೆ ಕೊಡುವ ಆಶ್ವಾಸನೆಯನ್ನೂ ಜಿಲ್ಲಾಡಳಿತ ನೀಡಿದೆ. ಸಾರಿಗೆ ಬಸ್‌ ನಿಲ್ದಾಣಕ್ಕೆ ಖಾಸಗಿ ಬಸ್‌ಗಳ ಪ್ರವೇಶ ಕಲ್ಪಿಸಿರುವುದು ನೌಕರರಲ್ಲಿ ಅಸಮಾಧಾನ ಮೂಡಿಸಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಬಸ್‌ ನಿಲ್ದಾಣದ ಸಮೀಪ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT