ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯ ಮಾರಾಟದ ಪರವಾನಗಿ ರದ್ದುಪಡಿಸಿ: ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

Last Updated 20 ಫೆಬ್ರುವರಿ 2021, 7:30 IST
ಅಕ್ಷರ ಗಾತ್ರ

ಸಾಣೇಹಳ್ಳಿ(ಹೊಸದುರ್ಗ): ‘ಸಾಣೇಹಳ್ಳಿ ಗ್ರಾಮದಲ್ಲಿ ಮದ್ಯ ಮಾರಾಟ ಮಾಡುವವರ ಪರವಾನಗಿ ರದ್ದುಪಡಿಸಬೇಕು ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಒತ್ತಾಯಿಸಿದರು.

ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಎಸ್‌.ಎಸ್‌. ಒಳಾಂಗಣ ರಂಗಂದಿರದಲ್ಲಿ ಶುಕ್ರವಾರ ನಡೆದ ‘ಸಾಣೇಹಳ್ಳಿ ಮದ್ಯಮುಕ್ತ ಗ್ರಾಮ’ ಕುರಿತ ಅಬಕಾರಿ, ಪೊಲೀಸ್‌ ಇಲಾಖೆ ಅಧಿಕಾರಿಗಳ ಮತ್ತು ಮದ್ಯ ಮಾರಾಟ ಗುತ್ತಿಗೆದಾರರ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ನರಕ ಸೃಷ್ಟಿ ಮಾಡುವ ಸಾಮಾಜಿಕ ಪಿಡುಗುಗಳಲ್ಲಿ ಮದ್ಯಪಾನವೂ ಒಂದು. ಗುಜರಾತ್, ಬಿಹಾರ, ಆಂಧ್ರಪ್ರದೇಶ ಮುಂತಾದೆಡೆ ಸಂಪೂರ್ಣ ಮದ್ಯ ನಿಷೇಧವಾಗಿರುವಾಗ ಕರ್ನಾಟಕದಲ್ಲಿ ಯಾಕೆ ಸಾಧ್ಯವಾಗದು? ಎಂದು ಸರ್ಕಾರವನ್ನು ಪ್ರಶ್ನಿಸಿದರು.

ಮದ್ಯಕ್ಕೆ ಬಡ ಕುಟುಂಬ ಗಳೇ ಹೆಚ್ಚು ಆಹುತಿಯಾಗುತ್ತಲಿವೆ. ಇದನ್ನು ತಪ್ಪಿಸಬೇಕೆನ್ನುವ ಆಲೋಚನೆ ಇಟ್ಟುಕೊಂಡು ಸಾಣೇಹಳ್ಳಿಯಿಂದಲೇ ಮದ್ಯ ವಿರೋಧಿ ಆಂದೋಲನ ಆರಂಭಿಸಿದ್ದೇವೆ. ಇದಕ್ಕೆ ಗ್ರಾಮ ಪಂಚಾ ಯತಿಯ ಸದಸ್ಯರು ಬೆಂಬಲಿಸಿದ್ದಾರೆ. ಆದರೆ ಮದ್ಯ ಮಾರಾಟ ಮಾಡುವ ಗುತ್ತಿಗೆದಾರರ ಕುಮ್ಮಕ್ಕಿನಿಂದ ಸಾಧ್ಯವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಅಬಕಾರಿ ಉಪ ಆಯುಕ್ತ ನಾಗಶಯನ, ‘ಅನಧಿಕೃತವಾಗಿ ಹಳ್ಳಿಗಳಲ್ಲಿ ಮದ್ಯಮಾರಾಟ ಮಾಡು ವುದನ್ನು ತಡೆಯಲು ನಮ್ಮ ಇಲಾಖೆ ಪೂರ್ಣವಾಗಿ ಬದ್ಧವಾಗಿದೆ. ವಾರ್ಷಿಕ ₹22 ಸಾವಿರ ಕೋಟಿ ಆದಾಯವನ್ನು ನಮ್ಮ ಇಲಾಖೆಗೆ ಸರ್ಕಾರ ನಿಗದಿ ಪಡಿಸಿದೆ. ಈ ವರ್ಷ ಎರಡು ತಿಂಗಳ ಲಾಕ್‌ಡೌನ್ ಆದರೂ ನಿಗದಿತ ಆದಾಯ ಕೊಡಲೇಬೇಕು. ಇಲ್ಲದೇ ಹೋದರೆ ಅಸಮರ್ಥ ಅಧಿಕಾರಿ ಎಂದು ಡಿಮೋಷನ್ ಮಾಡುವರು’ ಎಂದು ತಿಳಿಸಿದರು.

ಹೊಸದುರ್ಗ ತಾಲ್ಲೂಕಿನ ಮದ್ಯ ಮಾರಾಟದ ಗುತ್ತಿಗೆದಾರರಾದ ಬೆಲಗೂರು ರವಿಕುಮಾರ್, ಹೊಸದುರ್ಗ ಮಂಜುನಾಥ್, ಪ್ರವೀಣ್, ಎಂ.ಎಲ್.ಸಿ.ಸಿರಿ, ಕುಮಾರ್, ವಿಜಯಲಕ್ಷ್ಮೀ, ಸಾಯಿಲಕ್ಷ್ಮೀ ಮುಂತಾದ ಬಾರ್‌ ಮಾಲೀಕರು ಪ್ರತಿಕ್ರಿಯಿಸುತ್ತಾ, ‘ಇನ್ನು ಮುಂದೆ ಒಂದೇ ಒಂದು ಬಾಟಲಿಯನ್ನೂ ಹಳ್ಳಿಗೆ ಕೊಡುವುದಿಲ್ಲ. ಸಮಾಜದ ಒಳಿತಿಗಾಗಿ ನಾವು ನಿಮ್ಮ ಮಾತನ್ನು ಪಾಲಿಸುತ್ತೇವೆ’ ಎಂದು ಬೆಂಬಲ ವ್ಯಕ್ತಪಡಿಸಿದರು.

ಅಬಕಾರಿ ನಿರೀಕ್ಷಕಿ ಪ್ರಮೀಳಾ, ಸಬ್‌ಇನ್‌ಸ್ಪೆಕ್ಟರ್‌ ಶಿವಕುಮಾರ್, ನಾಗರಾಜು, ದಿನೇಶ್ ಅವರೂ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT