ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜು ಸ್ಥಳಾಂತರಕ್ಕೆ ವಿರೋಧ: ಸುರಿಯುತ್ತಿದ್ದ ಮಳೆಯಲ್ಲಿ ಶಾಸಕ ರಘುಮೂರ್ತಿ ಧರಣಿ

ವಿದ್ಯಾರ್ಥಿಗಳು, ಪೋಷಕರ ಆಕ್ರೋಶ
Last Updated 6 ಆಗಸ್ಟ್ 2020, 13:10 IST
ಅಕ್ಷರ ಗಾತ್ರ

ಚಿತ್ರದುರ್ಗ: ತಾಲ್ಲೂಕಿನ ತುರುವನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಬೆಳಗಾವಿ ಜಿಲ್ಲೆಯ ನಿಪ್ಪಾಣಿಗೆ ಸ್ಥಳಾಂತರಿಸಿದ ರಾಜ್ಯ ಸರ್ಕಾರದ ಕ್ರಮಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. ಚಳ್ಳಕೆರೆ ವಿಧಾನಸಭಾ ಕ್ಷೇತ್ರ ಶಾಸಕ ಟಿ.ರಘುಮೂರ್ತಿ ಸುರಿಯುತ್ತಿದ್ದ ಮಳೆಯಲ್ಲೇ ಗುರುವಾರ ಧರಣಿ ನಡೆಸಿ ಆಕ್ರೋಶ ಹೊರಹಾಕಿದರು.

ಒನಕೆ ಓಬವ್ವ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು. ಕಾಲೇಜು ವಿದ್ಯಾರ್ಥಿಗಳು, ಪೋಷಕರು ಹಾಗೂ ಕಾಂಗ್ರೆಸ್‌ ಮುಖಂಡರು ಹೋರಾಟಕ್ಕೆ ಸಾಥ್‌ ನೀಡಿದರು. ಮಾಸ್ಕ್‌ ಧರಿಸಿದ್ದ ಪ್ರತಿಭಟನಾಕಾರರು ಅಂತರ ಕಾಪಾಡಿಕೊಂಡು ರಸ್ತೆಯಲ್ಲೇ ಕುಳಿತರು. ಸೋನೆಯಂತೆ ಸುರಿಯುತ್ತಿದ್ದ ಮಳೆಯಲ್ಲಿ ಪ್ರತಿಭಟನೆ ಮುಂದುವರಿಯಿತು.

100ಕ್ಕೂ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳನ್ನು ಹೊಂದಿರುವ ಆರು ಪ್ರಥಮ ದರ್ಜೆ ಕಾಲೇಜುಗಳನ್ನು ಬೇರೆಡೆ ಸ್ಥಳಾಂತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರ ಸ್ವಕ್ಷೇತ್ರ ನಿಪ್ಪಾಣಿಗೆ ತುರುವನೂರು ಕಾಲೇಜನ್ನು ಮಂಜೂರು ಮಾಡಲಾಗಿದೆ. ಕಾಂಗ್ರೆಸ್‌ ಶಾಸಕರೊಬ್ಬರು ಪ್ರತಿನಿಧಿಸುತ್ತಿರುವ ಕ್ಷೇತ್ರದ ಕಾಲೇಜು ಸಚಿವರ ಕ್ಷೇತ್ರಕ್ಕೆ ಸ್ಥಳಾಂತರವಾಗುತ್ತಿರುವ ವಿಚಾರ ರಾಜಕೀಯ ಸ್ವರೂಪ ಪಡೆದುಕೊಂಡಿದೆ.

‘ತುರುವನೂರು ಕಾಲೇಜು ಆರಂಭಗೊಂಡ ಬಳಿಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗಿದೆ. ವಿಶೇಷವಾಗಿ ವಿದ್ಯಾರ್ಥಿನಿಯರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಸರ್ಕಾರದ ನಿಯಮದ ಪ್ರಕಾರ 45 ವಿದ್ಯಾರ್ಥಿಗಳಿರಬೇಕು. ಆದರೆ, 55 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ಕಾಲೇಜು ಕಿತ್ತುಕೊಳ್ಳುವುದು ಎಷ್ಟು ಸರಿ’ ಎಂದು ಶಾಸಕ ರಘುಮೂರ್ತಿ ಪ್ರಶ್ನಿಸಿದರು.

‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕಾಲೇಜು ಮಂಜೂರಾಗಿತ್ತು. ಕಾಂಗ್ರೆಸ್‌–ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕಟ್ಟಡಕ್ಕೆ ಅನುದಾನ ಸಿಕ್ಕಿತ್ತು. ₹ 2.8 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗುತ್ತಿದೆ. ಪ್ರಥಮ ವರ್ಷದ ಪದವಿ ಪ್ರವೇಶಕ್ಕೆ 57 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ’ ಎಂದರು.

‘ಸರ್ಕಾರದ ಆದೇಶ ಹೊರಬಿದ್ದ ಗಳಿಗೆಯಿಂದ ಕಾಲೇಜು ಉಳಿಸಿಕೊಳ್ಳಲು ಶ್ರಮಿಸುತ್ತಿದ್ದೇನೆ. ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದೇನೆ. ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಸದರ ಗಮನಕ್ಕೂ ತಂದಿದ್ದೇನೆ. ಸಕಾರಾತ್ಮಕ ಸ್ಪಂದನೆ ದೊರೆಯದಿದ್ದರೆ ಉಪವಾಸ ಸತ್ಯಾಗ್ರಹ ಆರಂಭಿಸುತ್ತೇನೆ’ ಎಂದು ಹೇಳಿದರು.

ಛಲವಾದಿ ಗುರುಪೀಠದ ಬಸವನಾಗಿದೇವ ಸ್ವಾಮೀಜಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಪ್ರಕಾಶಮೂರ್ತಿ, ಮಾಜಿ ಅಧ್ಯಕ್ಷ ರವಿಕುಮಾರ್‌, ಮಾಜಿ ಸದಸ್ಯ ಬಾಬುರೆಡ್ಡಿ ಇದ್ದರು.

ಚಿತ್ರದುರ್ಗಕ್ಕೆ ಪಾದಯಾತ್ರೆ
ಕಾಲೇಜು ಸ್ಥಳಾಂತರವನ್ನು ವಿರೋಧಿಸಿ ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ಗುರುವಾರ ತುರುವನೂರಿನಿಂದ ಚಿತ್ರದುರ್ಗಕ್ಕೆ 24 ಕಿ.ಮೀ ಪಾದಯಾತ್ರೆ ನಡೆಸಿದರು.

ತುರುವನೂರಿನ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಾದಯಾತ್ರೆ ಹೊರಟರು. ಅನುಮತಿ ಪಡೆದಿಲ್ಲ ಎಂಬ ಕಾರಣ ಮುಂದಿಟ್ಟು ಪಾದಯಾತ್ರೆ ತಡೆಯಲು ಪೊಲೀಸರು ಮುಂದಾದರು. ಈ ವೇಳೆ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.

‘ಅಭಿವೃದ್ಧಿಯಲ್ಲಿ ಹಿಂದುಳಿದ ಚಿತ್ರದುರ್ಗ ಜಿಲ್ಲೆಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ವೈದ್ಯಕೀಯ ಕಾಲೇಜು ಒಮ್ಮೆ ಕೈತಪ್ಪಿದೆ. ಸರ್ಕಾರಿ ಪದವಿ ಕಾಲೇಜು ಕಿತ್ತುಕೊಳ್ಳಲು ಬಿಡುವುದಿಲ್ಲ’ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವು ಹೇಳಿದರು.

ಆದೇಶ ಹಿಪಡೆಯಲು ಒತ್ತಾಯ
ಕಾಲೇಜು ಸ್ಥಳಾಂತರದ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.

ಕಾಲೇಜು ಸ್ಥಾಪನೆ ಆಗಿದ್ದರಿಂದ ಗ್ರಾಮೀಣ ಪ್ರದೇಶಕ್ಕೆ ಅನುಕೂಲವಾಗಿದೆ. ಮೂಲ ಸೌಲಭ್ಯ ಕಲ್ಪಿಸಿದ್ದರೆ ಇನ್ನಷ್ಟು ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದರು. ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ಕಾಲೇಜಿಗೆ ದುಃಸ್ಥಿತಿ ಎದುರಾಗಿದೆ. ಬೋಧಕ ಸಿಬ್ಬಂದಿಯನ್ನು ಕೂಡಲೇ ನೇಮಕ ಮಾಡಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಶಂಕರಪ್ಪ, ಜಿಲ್ಲಾ ಘಟಕ ಅಧ್ಯಕ್ಷ ಬಸ್ತಿಹಳ್ಳಿ ಸುರೇಶಬಾಬು, ತಾಲ್ಲೂಕು ಘಟಕದ ಅಧ್ಯಕ್ಷ ಧನಂಜಯ, ಮುಖಂಡರಾದ ಕೆ.ಪಿ.ಭೂತಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT