ಗುರುವಾರ , ಏಪ್ರಿಲ್ 9, 2020
19 °C

ಗುಂಪು ಸೇರಿದ್ದವರನ್ನು ಚದುರಿಸಲು ಲಾಠಿ ಬೀಸಿದ ಪೋಲಿಸರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಳ್ಳಕೆರೆ: ಕೊರೊನಾ ನಿಯಂತ್ರಿಸುವ ಹಿನ್ನೆಲೆಯಲ್ಲಿ ಮಾ.31ರ ವರೆಗೆ ರಾಜ್ಯದಾದ್ಯಾಂತ ನಿಷೇಧಾಜ್ಞೆ ಜಾರಿಯಲಿದ್ದರೂ ಮಂಗಳವಾರ ಎಂದಿನಂತೆ ನಗರದ ಮುಖ್ಯರಸ್ತೆಗಳ ಬದಿಯಲ್ಲಿ ಸೊಪ್ಪು, ತರಕಾರಿ ಹಾಗೂ ಹೂ-ಹಣ್ಣು ಮಾರಾಟ ನಡೆಯಿತು.

ತಿಂಡಿ ಹೋಟೆಲ್, ಗ್ಯಾರೇಜ್, ರೆಸ್ಟೋರೆಂಟ್, ಕಾಫಿ, ಟೀ ಹಾಗೂ ಬಟ್ಟೆ ಅಂಗಡಿಗಳು ಸಂಪೂರ್ಣ ಬಾಗಿಲು ಮುಚ್ಚಿದ್ದವು. ಬಸ್ ಹಾಗೂ ಲಾರಿಗಳನ್ನು ಹೊರತುಪಡಿಸಿ ಇನ್ನುಳಿದ ಆಟೊ, ಕಾರು, ಕ್ರೂಜರ್ ಸೇರಿದಂತೆ ದ್ವಿಚಕ್ರ ವಾಹನಗಳ ಸಂಚಾರ ದಟ್ಟವಾಗಿತ್ತು. ಬೆಳ್ಳಂ ಬೆಳಿಗ್ಗೆಯೇ ನೆಹರೂ ಸರ್ಕಲ್ ಜನದಟ್ಟಣೆಯಿಂದ ತುಂಬಿ ಹೋಗಿತ್ತು.

ಲಾಠಿಯ ರುಚಿ ತೋರಿಸಿದ ಪೋಲಿಸರು

ಮುಖ್ಯರಸ್ತೆಗಳಲ್ಲಿ ಬಟ್ಟೆ ಅಂಗಡಿಗಳು ಬಾಗಿಲು ಮುಚ್ಚಿದ್ದ ಕಾರಣ ವಿವಿಧ ಬಡಾವಣೆಗಳ ಗಾರ್ಮೆಂಟ್ಸ್‌ಗಳಲ್ಲಿ ನೂಕು ನುಗ್ಗಲು ನಡೆಯುತ್ತಿತ್ತು. ಹಳ್ಳಿಗಳಿಂದ ಮೋಟಾರ್ ಬೈಕ್‍ಗಳಲ್ಲಿ ತಂಡ ತಂಡವಾಗಿ ಬಂದ ಯುವಕರು ಜೀನ್ಸ್‌ಪ್ಯಾಂಟ್, ಟೀ ಷರ್ಟ್ ಖರೀದಿಸಲು ಅಂಗಡಿಗೆ ಮುಗಿಬಿದ್ದಿದ್ದ ಕಾರಣ ಪೋಲಿಸರು ಅಂಗಡಿಗಳ ಮೇಲೆ ದಾಳಿ ಮಾಡಿ ಯುವಕರಿಗೆ ಲಾಠಿಯಿಂದ ಥಳಿಸುವ ಮೂಲಕ ಗುಂಪಾಗಿ ಸೇರಿದ್ದ ಜನರನ್ನು ಚದುರಿಸಿ ಅಂಗಡಿಗಳ ಬಾಗಿಲು ಮುಚ್ಚಿಸಿದರು.

ಸಂತೆಗೆ ತಡೆ: ಇಲ್ಲಿನ ಪಾವಗಡ ರಸ್ತೆ ಬಳಿ ಹಬ್ಬದ ಸಂತೆ ನಡೆಸಲು ಸೇರಿದ್ದ ನೂರಾರು ಜನರನ್ನು ಚದುರಿಸಿದ ಪೋಲಿಸರು, ಮಾರಾಟಕ್ಕೆ ತಂದ ತರಕಾರಿ, ಹಣ್ಣು, ಹೂ, ತೆಂಗಿನ ಕಾಯಿ ಮುಂತಾದ ವಸ್ತುಗಳನ್ನು ಲಾರಿಯಲ್ಲಿ ಸಾಗಿಸಿದರು.

ಯಗಾದಿಗೆಂದೇ ಮಾರಾಟ ಮಾಡುವ ಸಲುವಾಗಿ ₹ 25 ಸಾವಿರ ವೆಚ್ಚದಲ್ಲಿ ತಾಜ ಹಣ್ಣುಗಳನ್ನು ತಂದಿದ್ದೆ. ಕೊರೊನಾ ಭೀತಿಯಿಂದ ಮಾರಾಟ ಮಾಡಲು ಬಿಡುತ್ತಿಲ್ಲ. ಇದರಿಂದ ತುಂಬಾ ನಷ್ಟವಾಗಿದೆ’ ಎನ್ನುತ್ತಾರೆ ಹಣ್ಣು ಮಾರಾಟಗಾರ ಮಂಜುನಾಥ್.

ಕಮರಿದ ಕನಸು

ಯುಗಾದಿ ಹಬ್ಬಕ್ಕೆಂದೇ ನಗರದ ಸುತ್ತ ಮುತ್ತಲ ಗ್ರಾಮಗಳ ರೈತರು, ಬೆಳೆದಿದ್ದ ಹೂ, ಹಣ್ಣು, ಸೊಪ್ಪು, ಹಸಿರು ತರಕಾರಿಗಳನ್ನು ಹೊತ್ತು ತಂದಿದ್ದರು. ಮಾವಿನ ಎಲೆ, ಬೇವು ಹಾಗೂ ಬಾಳೆಕಂದುಗಳ ಮಾರಾಟದಿಂದ ಬಂದ ಹಣದಲ್ಲಿ ಮನೆ ಮಂದಿಗೆಲ್ಲಾ ಹೊಸಬಟ್ಟೆ ಕೊಡಿಸುವ ಆಸೆಯಲ್ಲಿದ್ದ ರೈತ ಸಮುದಾಯದ ಕನಸು ನಿಷೇಧಾಜ್ಞೆ ಜಾರಿಯಿಂದ ಕಮರಿ ಹೋದಂತಾಗಿದೆ.

‘ಮನುಕುಲ ಸಂರಕ್ಷಣೆಯ ದೃಷ್ಟಿಯಿಂದ ಎಲ್ಲರೂ ಸರ್ಕಾರದ ಜೊತೆ ಕೈಜೋಡಿಸಬೇಕು. ತಪ್ಪದೇ ಕಾನೂನು ನಿಯಮವನ್ನು ಪಾಲಿಸಬೇಕು. ಮನೆಯಲ್ಲಿಯೇ ಉಳಿದು ಹಬ್ಬವನ್ನು ಸರಳವಾಗಿ ಆಚರಿಸಬೇಕು’ ಎಂದು ಪೋಲಿಸ್ ವೃತ್ತ ನಿರೀಕ್ಷಕ ಈ. ಆನಂದ್ ಜನರಲ್ಲಿ ಮನವಿ ಮಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು