ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಜಾಜೂರು | 2,900 ಹೆಕ್ಟೇರ್ ಮೆಕ್ಕೆಜೋಳ ಹಾನಿ; ವರದಿ ಸಲ್ಲಿಕೆ

ಬಿ.ದುರ್ಗ ಹೋಬಳಿ ವ್ಯಾಪ್ತಿಯಲ್ಲಿ ಅಪಾರ ಹಾನಿ, ನಿರಂತರ ಮಳೆಯಿಂದಾಗಿ ಅಪಾರ ನಷ್ಟ
Published 6 ಸೆಪ್ಟೆಂಬರ್ 2024, 6:50 IST
Last Updated 6 ಸೆಪ್ಟೆಂಬರ್ 2024, 6:50 IST
ಅಕ್ಷರ ಗಾತ್ರ

ಚಿಕ್ಕಜಾಜೂರು: ಜೂನ್‌, ಜುಲೈ ತಿಂಗಳಲ್ಲಿ ನಿರಂತರವಾಗಿ ಸುರಿದ ಮಳೆಗೆ ಬಿ.ದುರ್ಗ ಹೋಬಳಿ ವ್ಯಾಪ್ತಿಯೊಂದರಲ್ಲೇ 2,900 ಹೆಕ್ಟೇರ್‌ ಪ್ರದೇಶದಲ್ಲಿ ಮೆಕ್ಕೆಜೋಳ ಹಾನಿಯಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಚಿತ್ರದುರ್ಗ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದಾರೆ.

ಬಿ.ದುರ್ಗ, ಚಿಕ್ಕಜಾಜೂರು ಪ್ರದೇಶದ 9,500 ಹೆಕ್ಟೇರ್‌ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿತ್ತು. ನಿರಂತರವಾಗಿ ಮಳೆ ಸುರಿದ ಪರಿಣಾಮ ಅಪಾರ ಪ್ರಮಾಣದ ಬೆಳೆಗೆ ಹಾನಿಯಾಗಿತ್ತು. ವಿವಿಧೆಡೆ ಹಳ್ಳಗಳು ಉಕ್ಕಿ ಹರಿದು ಮೆಕ್ಕೆಜೋಳ ಬೆಳೆ ಕೊಚ್ಚಿ ಹೋಗಿತ್ತು. ನಂತರ ಬೆಳೆ ಹಾನಿಗೀಡಾದ ಬಗ್ಗೆ ವರದಿ ನೀಡುವಂತೆ ಜಿಲ್ಲಾಡಳಿತ ಸೂಚನೆ ನೀಡಿತ್ತು.

ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆ ಸಹಯೋಗದಲ್ಲಿ ಹೋಬಳಿಯಾದ್ಯಂತ ಜಮೀನುಗಳಿಗೆ ಭೇಟಿ ನೀಡಿ ಅಧಿಕಾರಿಗಳು ವರದಿ ತಯಾರಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದಾರೆ. ಇದರ ಪ್ರಕಾರ ಒಟ್ಟು 2,900 ಹೆಕ್ಟೇರ್‌ ಹಾನಿಯಾಗಿದೆ.

‘ನಮ್ಮ ವರದಿಯ ನಂತರ, ಕೇಂದ್ರ ಮತ್ತು ರಾಜ್ಯ ತನಿಖಾ ತಂಡಗಳು ಜಮೀನುಗಳಿಗೆ ಭೇಟಿ ನೀಡಿ, ವರದಿ ತಯಾರಿಸುತ್ತವೆ. ಅವರ ವರದಿ ಬಂದ ನಂತರ ಹಾನಿಗೊಳಗಾದ ರೈತರಿಗೆ ಪ್ರಕೃತಿ ವಿಕೋಪ ವಿಪತ್ತು ನಿಧಿಯಿಂದ ಪರಿಹಾರ ಸಿಗುತ್ತದೆ‘ ಎಂದು ಕೃಷಿ ಇಲಾಖೆ ಅಧಿಕಾರಿ ಮಂಜುನಾಥ್‌ ತಿಳಿಸಿದರು.

ರೈತರಿಗೆ ಅಪಾರ ನಷ್ಟ:

ಭಾರಿ ಮಳೆಯಿಂದಾಗಿ ಈ ಬಾರಿ ಸಾವಿರಾರು ರೈತರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.  ನಯಾ ಪೈಸೆ ಅದಾಯ ಕಾಣದೆ ಮುಂದೆ ಜೀವನ ಸಾಗಿಸುವುದು ಹೇಗೆ ಎಂಬ ಪ್ರಶ್ನೆ ನಿರ್ಮಾಣವಾಗಿದೆ. ಆರಂಭದ ದಿನಗಳಲ್ಲಿ ಉತ್ತಮ ಮಳೆಯಾದಾಗ ರೈತರು ಖುಷಿ ಪಟ್ಟಿದ್ದರು.  ಬಿತ್ತನೆ ಬೀಜ ಸಂಗ್ರಹಿಸಿ ಬಿತ್ತನೆಯನ್ನೂ ಮಾಡಿದ್ದರು. ವಾರದ ನಂತರ, ಕೆಲವರು ಎಡೆಕುಂಟೆಯನ್ನು ಹೊಡೆದರು.

ಆದರೆ, ನಿರಂತರವಾಗಿ ಮಳೆ ಸುರಿಯುತ್ತಿದ್ದರಿಂದ, ಬಹುತೇಕ ಜಮೀನುಗಳಲ್ಲಿ ಬಿತ್ತನೆ ಮಾಡಿದ ಮೆಕ್ಕೆಜೋಳ ನೀರಿನಲ್ಲಿ ಬೆಳೆಯುವಂತಾಯಿತು. ಮೆಕ್ಕೆಜೋಳಕ್ಕೆ ಬದಲು ಕಳೆಯೇ ಎದ್ದು ಕಾಣಿಸಲಾರಂಭಿಸಿತು. ಎಡೆಕುಂಟೆಯನ್ನೂ ಹೊಡೆಯಲು ಮಳೆ ಬಿಡಲಿಲ್ಲ.

‘ನೀರು ಹೆಚ್ಚಾಗಿದ್ದರಿಂದ ಕೊಳೆ ರೋಗ ಬರಬಹುದೆಂದು ಮಳೆಯಲ್ಲಿಯೇ ಮೇಲುಗೊಬ್ಬರವಾಗಿ ಯೂರಿಯಾವನ್ನು ಹಾಕಿದೆವು. ನಂತರ, ಕಳೆ ಏಳದಂತೆ ಕಳೆನಾಶಕವನ್ನು ಹೊಡೆದೆವು. ಅದರೆ, ನಿರಂತರ ಮಳೆಯಿಂದಾಗಿ ನಮ್ಮ ಎಲ್ಲಾ ಪ್ರಯತ್ನಗಳು ನೀರಿನಲ್ಲಿ ಹೋಮ ಮಾಡದಂತಾಗಿದೆ‘ ಎಂದು ಅಂದನೂರು ಗ್ರಾಮದ ರೈತರಾದ ಗಿರೀಶ್‌, ಪರಮೇಶ್ವರಪ್ಪ ಮತ್ತಿತರರು ಅಳಲು ತೋಡಿಕೊಂಡರು.

ಸಿಗದ ಪ್ರತಿಫಲ:

ನಿರಂತರ ಮಳೆಯಿಂದಾಗಿ ಗ್ಯಾರೆಹಳ್ಳಿ, ಅಂದನೂರು, ಗಂಜಿಗಟ್ಟೆ, ಕಾಗಳಗೆರೆ, ಹಿರಿಯೂರು, ಮಲ್ಲೇನಹಳ್ಳಿ, ಕಾಳಘಟ್ಟ, ಮುತ್ತುಗದೂರು, ಸಾಸಲು, ಕಾಳಘಟ್ಟ ವಡ್ಡರಹಟ್ಟಿ, ಲಂಬಾಣಿಹಟ್ಟಿ, ಕಡೂರು, ಚಿಕ್ಕಜಾಜೂರು, ಹಿರೇಎಮ್ಮಿಗನೂರು, ಚಿಕ್ಕಎಮ್ಮಿಗನೂರು, ಕಾಮನಹಳ್ಳಿ, ನಂದಿಹಳ್ಳಿ ಸೇರಿದಂತೆ ಹಲವು ಹಳ್ಳಿಗಳ ರೈತರಿಗೆ ಅಪಾರ ನಷ್ಟ ಉಂಟಾಗಿದೆ.

ಬೆಳೆ ಹಾಳಾಗಿದ್ದರಿಂದ ಆಗಸ್ಟ್‌ ತಿಂಗಳಿನ ಕೊನೆಯಲ್ಲಿ ದನ, ಕರು ಹಾಗೂ ಕುರಿ ಮಂದೆ ಬಿಟ್ಟು ಬೆಳೆ ಮೇಯಿಸಿದ್ದಾರೆ. ಮತ್ತೆ ಕೆಲವರು ಮೆಕ್ಕೆಜೋಳವನ್ನು ಅಳಿಸಿ, ರಾಗಿಯನ್ನು ಬಿತ್ತನೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಮೆಕ್ಕೆಜೋಳ ಬಿತ್ತನೆ ಪ್ರತಿ ಎಕರೆಗೆ ₹ 20,000– 25,000ದವರೆಗೆ ಖರ್ಚಾಗಿದೆ. ಆದರೆ ಯಾವುದೇ ಪ್ರತಿಫಲ ಸಿಗುತ್ತಿಲ್ಲ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಾರೆ.  

ರಾಗಿ ಬಿತ್ತನೆಗೂ ಹಿನ್ನೆಡೆ:

ಈ ವೇಳೆಗಾಗಲೇ ಹೋಬಳಿಯಲ್ಲಿ ರಾಗಿ ಬಿತ್ತನೆ ಕಾರ್ಯ ಆರಂಭವಾಗಬೇಕಾಗಿತ್ತು. ಆದರೆ, ನಿರಂತರ ಮಳೆ ಕಾರಣದಿಂದ ಬಿತ್ತನೆ ಕುಂಠಿತವಾಗಿದೆ. ಹೋಬಳಿಯಲ್ಲಿ ಒಟ್ಟು 1,500 ಹೆಕ್ಟೇರ್‌ ರಾಗಿ ಬಿತ್ತನೆಯ ಗುರಿ ಇದ್ದು, ಈವರೆಗೆ 900 ಹೆಕ್ಟೇರ್‌ನಷ್ಟು ಮಾತ್ರ ರಾಗಿ ಬಿತ್ತನೆಯಾಗಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT