ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಜಾಜೂರು | ನೆಲದಲ್ಲೇ ಉಳಿದ ಸಾಂಬಾರ್‌ ಸೌತೆ: ಕಮರಿದ ಬದುಕು

Published : 10 ಆಗಸ್ಟ್ 2024, 6:30 IST
Last Updated : 10 ಆಗಸ್ಟ್ 2024, 6:30 IST
ಫಾಲೋ ಮಾಡಿ
Comments

ಚಿಕ್ಕಜಾಜೂರು: ಕೇರಳದಲ್ಲಿ ಭಾರಿ ಮಳೆಯ ಕಾರಣ ಖರೀದಿದಾರರು ಬಾರದ ಕಾರಣ ಇಲ್ಲಿನ ಹೊಲಗಳಲ್ಲಿ ಬೆಳೆದಿದ್ದ ಸಾಂಬಾರ್‌ ಸೌತೆ ಕಟಾವು ಮಾಡಲು ಸಾಧ್ಯವಾಗದೇ ಹೊಲದಲ್ಲೇ ಉಳಿದಿದೆ.

ಸಮೀಪದ ಬಿ. ದುರ್ಗ ಗ್ರಾಮದ ರೈತರಾದ ಬಿ.ಎಸ್‌. ಚಿಕ್ಕಪ್ಪ ಅವರು ಮೂರೂವರೆ ಎಕರೆ ಹಾಗೂ ಅವರ ಸಹೋದರ ಬಿ.ಎಸ್‌. ಧರಣೇಶ್‌ ಅವರು ಒಂದು ಎಕರೆ ಭೂಮಿಯಲ್ಲಿ ಮೇ ತಿಂಗಳಿನಲ್ಲಿ ಸಾಂಬಾರ್‌ ಸೌತೆ ನಾಟಿ ಮಾಡಿದ್ದರು. ಬಿತ್ತನೆ ಪೂರ್ವದ ಬೇಸಾಯ, ಬೀಜ, ತಳಗೊಬ್ಬರ, ಕುಂಟೆ, ಕಳೆ, ಮೇಲು ಗೊಬ್ಬರ, ಬಳ್ಳಿಗೆ ಔಷಧ ಸಿಂಪಡಣೆ ಸೇರಿ ಒಟ್ಟು  ₹ 70,000ಕ್ಕೂ ಹೆಚ್ಚು ಖರ್ಚು ಮಾಡಿದ್ದರು. ಬಳ್ಳಿಯಲ್ಲಿ ಕಾಯಿಗಳು ಹುಲುಸಾಗಿ ಬೆಳೆದಿದ್ದು, ಖರೀದಿದಾರರು ಬಾರದ ಕಾರಣ ನಷ್ಟ ಸಂಭವಿಸುವ ಆತಂಕದಲ್ಲಿದ್ದಾರೆ.

ಆಗಸ್ಟ್‌ ತಿಂಗಳ ಮೊದಲ ವಾರದಲ್ಲಿ ಮಾರುಕಟ್ಟೆಯಲ್ಲಿ ಸಾಂಬಾರ್‌ ಸೌತೆಗೆ ಕೆ.ಜಿ.ಗೆ ₹ 27 ದರ ಇತ್ತು. ಬರುವ ವಾರ ಕೊಯ್ಲು ಮಾಡಲು ನಿರ್ಧರಿಸಿದ್ದೆವು. ಎರಡೂ ಜಮೀನಿನಿಂದ 40 ರಿಂದ 50 ಟನ್‌ ಸಾಂಬಾರ ಸೌತೆ ನಿರೀಕ್ಷಿಸಿದ್ದೆವು. ಕೊಯ್ಲು ಮಾಡಿ ಮಾರಾಟ ಮಾಡುವಾಗ ಕೆ.ಜಿ.ಗೆ ₹ 18ರಿಂದ ₹ 20 ದರ ಸಿಕ್ಕರೂ, ಖರ್ಚು ಕಳೆದು ₹ 8 ಲಕ್ಷದಿಂದ ₹ 9 ಲಕ್ಷ ಆದಾಯ ಸಿಗುತ್ತಿತ್ತು. ಆದರೆ, ಸುರಿಯುತ್ತಿರುವ ಮಳೆಯಿಂದಾಗಿ ಕೊಯ್ಲು ಮಾಡಲಾಗಲಿಲ್ಲ. ದುರಾದೃಷ್ಟಕ್ಕೆ ಕೇರಳದಲ್ಲೂ ಅಧಿಕ ಮಳೆಯಾಗಿ ಅನಾಹುತ ಸಂಭವಿಸಿದ್ದರಿಂದ ಅಲ್ಲಿಂದ ಯಾವೊಬ್ಬ ಖರೀದಿದಾರರೂ ಇತ್ತ ಸುಳಿಯಲಿಲ್ಲ. ಇದರಿಂದಾಗಿ ಬೆಳೆದ ಬೆಳೆ ಎಲ್ಲವೂ ಹೊಲದಲ್ಲೇ ಉಳಿಯುವಂತಾಯಿತು. ಹಾಕಿದ ಬಂಡವಾಳವೂ ಸಿಗುತ್ತಿಲ್ಲ ಎಂದು ರೈತ ಬಿ.ಎಸ್‌. ಚಿಕ್ಕಪ್ಪ ಬೇಸರ ವ್ಯಕ್ತಪಡಿಸಿದರು.

ದೇವಸ್ಥಾನಗಳಿಗೆ ಸರಬರಾಜು ಮಾಡುವ ಹಿಂಗಿತ: ಹೊಲದಲ್ಲಿರುವ ಬೆಳೆ ಸುಮ್ಮನೆ ಹಾಳಾಗುವ ಬದಲು ನಿತ್ಯ ದಾಸೋಹ ಮಾಡುತ್ತಿರುವ ಯಾವುದಾದರೂ ದೇವಸ್ಥಾನಕ್ಕೆ ಉಚಿತವಾಗಿ ಕೊಡಲು ನಿರ್ಧರಿಸಿದ್ದೇವೆ. ಇದರಿಂದ ನಮಗೂ ಕೊಂಚ ಸಮಾಧಾನ ಸಿಕ್ಕಂತಾಗುತ್ತದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT