ಹಿರಿಯೂರು: ಸಾಂಕ್ರಾಮಿಕ ರೋಗಗಳಿಂದ ಮುಕ್ತರಾಗಲು ಪ್ರತಿಯೊಬ್ಬರೂ ಶುದ್ಧೀಕರಿಸಿದ ನೀರು ಸೇವಿಸುವುದು ಅಗತ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ನಗರದ 24ನೇ ವಾರ್ಡ್‌ನಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.
‘ಹಿರಿಯೂರು ನಗರದ ಜನರಿಗೆ ಬಹಳಷ್ಟು ವರ್ಷಗಳವರೆಗೆ ವಾಣಿವಿಲಾಸ ಅಣೆಕಟ್ಟೆಯಿಂದ ವೇದಾವತಿ ನದಿ ಮೂಲಕ ನೀರು ತಂದು ಪೂರೈಸಲಾಗುತ್ತಿತ್ತು. ಕುಡಿಯುವ ನೀರು ತುಂಬಾ ಕಲುಷಿತವಾಗಿದೆ ಎಂಬ ದೂರುಗಳು ವ್ಯಾಪಕವಾಗಿ ಬರುತ್ತಿದ್ದವು. ಸಾರ್ವಜನಿಕರ ದೂರನ್ನು ಗಂಭೀರವಾಗಿ ಪರಿಗಣಿಸಿ ಅಂದಾಜು ₹ 40 ಕೋಟಿ ವೆಚ್ಚದಲ್ಲಿ ಪೈಪ್‌ಲೈನ್ ಮೂಲಕ ನಗರಕ್ಕೆ ನೀರು ಪೂರೈಸಲು ಯೋಜನೆ ರೂಪಿಸಿ ಜಾರಿಗೊಳಿಸಲಾಗಿದೆ. ಜನರಿಗೆ ಶುದ್ಧ ನೀರು, ಉತ್ತಮ ರಸ್ತೆ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಸಚಿವರು ಭರವಸೆ ನೀಡಿದರು.
ನಗರಸಭೆ ಅಧ್ಯಕ್ಷ ಅಜಯ್ ಕುಮಾರ್, ಉಪಾಧ್ಯಕ್ಷೆ ಅಂಬಿಕಾ ಆರಾಧ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಈರಲಿಂಗೇಗೌಡ, ವಿ.ಶಿವಕುಮಾರ್, ಧರ್ಮಸ್ಥಳ ಸಂಸ್ಥೆಯ ಯೋಜನಾಧಿಕಾರಿ ಹರಿಪ್ರಸಾದ್ ರೈ ಉಪಸ್ಥಿತರಿದ್ದರು.