ಚಿತ್ರದುರ್ಗ: ಗ್ರಾಮೀಣ ಪ್ರದೇಶದಲ್ಲಿ ನೈರ್ಮಲ್ಯ ಕಾಪಾಡುವ ಉದ್ದೇಶದಿಂದ ‘ಸ್ವಚ್ಛ ಭಾರತ್ ಮಿಷನ್’ ಯೋಜನೆಯಡಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಾರಂಭಿಸಿದ ‘ಘನ ತ್ಯಾಜ್ಯ ನಿರ್ವಹಣೆ’ಯು ಜಿಲ್ಲೆಯಲ್ಲಿ ಅಂಕಿ ಸಂಖ್ಯೆಗೆ ಮಾತ್ರ ಸೀಮಿತವಾಗಿದೆ. ಸ್ವಚ್ಛತೆ ಎಂಬುದು ದೂರದ ಮಾತಾಗಿದೆ.
ಯೋಜನೆ 2016ರಲ್ಲಿ ಪ್ರಾರಂಭವಾದರೂ, 2020ರಲ್ಲಿ ಕೊಂಚ ವೇಗ ಪಡೆದಿತ್ತು. ಗ್ರಾಮೀಣ ಭಾಗದಲ್ಲಿ ಮನೆ ಕಸ ಸರಿಯಾದ ರೀತಿಯಲ್ಲಿ ವಿಲೇವಾರಿ ಆಗಬೇಕೆಂಬ ಉದ್ದೇಶದಿಂದ ಜಿಲ್ಲೆಯ 189 ಗ್ರಾಮ ಪಂಚಾಯಿತಿಗಳ ಪೈಕಿ 176 ಪಂಚಾಯಿತಿಗಳಿಗೆ ‘ಸ್ವಚ್ಛ ವಾಹಿನಿ’ ವಾಹನ ನೀಡಲಾಗಿದೆ. 13 ಕಡೆ ಬಾಡಿಗೆ ವಾಹನಗಳು ಕಾರ್ಯ ನಿರ್ವಹಿಸುತ್ತಿವೆ. ಇದರಲ್ಲಿ 87 ಮಂದಿ ಮಹಿಳಾ ಚಾಲಕಿಯರಿದ್ದಾರೆ.
ಗ್ರಾಮ ಪಂಚಾಯಿತಿಗಳಿಗೆ ನೀಡಿದ ವಾಹನಗಳು ಪ್ರಾರಂಭದ ಒಂದೆರಡು ದಿನ ಸಂಚರಿಸಿದ್ದು ಬಿಟ್ಟರೆ ಮತ್ತೆ ರಸ್ತೆಗಿಳಿದಿಲ್ಲ. ಬಹುತೇಕ ಪಂಚಾಯಿತಿಗಳಲ್ಲಿ ವಾಹನಗಳು ಮೂಲೆ ಸೇರಿವೆ. ಕೆಲವೆಡೆ ವಾರಕ್ಕೊಮ್ಮೆ, ಹದಿನೈದು ದಿನಗಳಿಗೊಮ್ಮೆ ಅಧಿಕಾರಿಗಳಿಗೆ ಫೋಟೊ ಮಾಹಿತಿ ಕಳುಹಿಸುವ ಸಲುವಾಗಿ ಹಳ್ಳಿಗಳ ಬೀದಿಗಳಲ್ಲಿ ಫೋಟೊಶೂಟ್ ನಡೆಸುವುದು ಮಾಮೂಲಿಯಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಪ್ರಾರಂಭದಲ್ಲಿ ಪ್ರತಿ ಮನೆಗೆ ಹಸಿ, ಒಣ ಕಸ ಸಂಗ್ರಹಿಸುವ ‘ಡಸ್ಟ್‌ಬಿನ್’ಗಳನ್ನು ವಿತರಿಸಿ ಕಸ ನಿರ್ವಹಣೆಯ ಕುರಿತು ಜಾಗೃತಿ ಮೂಡಿಸಲಾಯಿತು. ಇತರೆ ಮೂಲ ಸೌಕರ್ಯ ಒದಗಿಸದೆಯೇ ಗ್ರಾಮ ಪಂಚಾಯಿತಿಗಳಿಗೆ ತಲಾ ಒಂದು ವಾಹನ ನೀಡಿದ್ದರಿಂದ ಕಸ ಸಂಗ್ರಹಣೆ ನಿಜಕ್ಕೂ ಸವಾಲಾಗಿ ಪರಿಣಮಿಸಿತು. ಅನಿವಾರ್ಯವಾಗಿ ವಾಹನಗಳನ್ನು ಗ್ರಾಮ ಪಂಚಾಯಿತಿ ಕಟ್ಟಡದ ಆವರಣದಲ್ಲಿ ನಿಲ್ಲಿಸಿದ್ದೇವೆ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು.
ಜಿಲ್ಲಾ ಪಂಚಾಯಿತಿ ನೀಡಿರುವ ವಾಹನಗಳು ಪದೇ ಪದೆ ದುರಸ್ತಿಗೆ ಬರುತ್ತಿವೆ. ಅದರ ರಿಪೇರಿಯ ಖರ್ಚನ್ನು ಭರಿಸಲು ಸಾಧ್ಯವಾಗದ ಸ್ಥಿತಿಯಲ್ಲಿ ಪಂಚಾಯಿತಿಗಳಿವೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಜತೆ ಒಪ್ಪಂದ ಮಾಡಿಕೊಂಡು 87 ಮಹಿಳೆಯರಿಗೆ ವಾಹನ ಚಾಲನಾ ತರಬೇತಿ ನೀಡಿ, ಚಾಲನಾ ಪರವಾನಗಿಯನ್ನೂ ಕೊಡಿಸಲಾಗಿದೆ. ಪ್ರಾರಂಭದಲ್ಲಿ ಮಾತ್ರ ಮಹಿಳೆಯರು ವಾಹನ ಚಲಾಯಿಸುತ್ತಿದ್ದರು. ಕ್ರಮೇಣಕ ಅವರ ಮನೆಯ ಪುರುಷರು, ವಾಹನ ಚಾಲನಾ ಪರವಾನಗಿ ಇಲ್ಲದ ಗ್ರಾಮ ಪಂಚಾಯಿತಿಯ ನೀರುಗಂಟಿ, ಸ್ವಚ್ಛತಾ ಕಾರ್ಮಿಕರೇ ವಾಹನ ಚಲಾಯಿಸಿಕೊಂಡು ಮನೆಮನೆಗೆ ತೆರಳಿ ಕಸ ಸಂಗ್ರಹಿಸುತ್ತಿದ್ದಾರೆ.
ನಗರಕ್ಕೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಮಾತ್ರ ಸ್ವಚ್ಛ ವಾಹಿನಿ ಸಂಚಾರ ನಡೆಸುತ್ತಿದೆ. ಇತರೆಡೆಗಳಲ್ಲಿ ಕಸವು ತಿಪ್ಪೆ ಇಲ್ಲವೇ ರಸ್ತೆ ಬದಿ ಮತ್ತು ಚರಂಡಿ ಸೇರುತ್ತಿದೆ. ಒಣ ಕಸವನ್ನು ಸುಟ್ಟು ಹಾಕಲಾಗುತ್ತಿದೆ.
ಘನತ್ಯಾಜ್ಯ ನಿರ್ವಹಣೆ ಬಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ, ಸದಸ್ಯರಿಗೆ ತಿಳಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿಯಿಂದ ನಿರಂತರವಾಗಿ ತರಬೇತಿ ಪ್ರವಾಸಗಳನ್ನು ಆಯೋಜಿಸಲಾಗುತ್ತಿದೆ. ಕೊಪ್ಪಳ, ತುಮಕೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ನಡೆಸಲಾಗಿದೆ. ಸ್ಥಳೀಯ ಸೌಲಭ್ಯಗಳನ್ನು ಬಳಸಿಕೊಂಡು ಯೋಜನೆಯನ್ನು ಯಾವ ರೀತಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ ಎಂಬುದನ್ನು ಪ್ರಾಯೋಗಿಕವಾಗಿ ತಿಳಿದುಕೊಂಡು ಬಂದು ಗ್ರಾಮ ಪಂಚಾಯಿತಿಗಳಲ್ಲಿ ಅಳವಡಿಸಿಕೊಳ್ಳಲು ತಿಳಿಸಲಾಗಿದೆ. ಆದರೆ, ಗ್ರಾಮ ಪಂಚಾಯಿತಿಗಳಲ್ಲಿ ಸಿಬ್ಬಂದಿ ಕೊರತೆ, ಆರ್ಥಿಕ ಸಮಸ್ಯೆಯಿಂದ ಸಾಧನೆ ಸಾಧ್ಯವಾಗುತ್ತಿಲ್ಲ.
ಸಂಗ್ರಹಿಸಿದ ಕಸವನ್ನು ಸೂಕ್ತವಾಗಿ ವಿಲೇವಾರಿಗೊಳಿಸಲು ಘನತ್ಯಾಜ್ಯ ಸಂಗ್ರಹ ಘಟಕಗಳನ್ನು ನಿರ್ಮಾಣ ಮಾಡಲಾಗಿದೆ. 108 ಹೊಸ ಕಟ್ಟಡಗಳಿದ್ದು, 81 ಹಳೆ ಕಟ್ಟಡಗಳಲ್ಲಿವೆ. ಸ್ವಸಹಾಯ ಗುಂಪುಗಳಿಗೆ ಘನತ್ಯಾಜ್ಯ ನಿರ್ವಹಣೆ ಕುರಿತು ತರಬೇತಿಗಳು ನಡೆಯುತ್ತಲೇ ಇವೆ. ಆದರೆ, ಈ ಎಲ್ಲ ಸಾಧನೆ ದಾಖಲೆಯಲ್ಲಿ ಮಾತ್ರ ಇರುವುದು ದುರಂತದ ಸಂಗತಿ.
ಗ್ರಾಮೀಣ ಭಾಗದಲ್ಲಿ ‘ಸ್ವಚ್ಛ ವಾಹಿನಿ’ ಮೂಲಕ ಕಸ ಸಂಗ್ರಹಿಸಲಾಗುತ್ತಿದೆ. ಸಮಸ್ಯೆ ಕಂಡು ಬಂದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಂದ ಮಾಹಿತಿ ಪಡೆದು ಕ್ರಮ ವಹಿಸಲಾಗುವುದು–ಎಸ್.ಜೆ. ಸೋಮಶೇಖರ್ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ
‘ಸ್ವಚ್ಛ ವಾಹಿನಿ’ ವಾಹನ ಬಿ.ದುರ್ಗ ಹಿರೇಕಂದವಾಡಿಯಲ್ಲಿ ಮಾತ್ರ ಸಂಚರಿಸುತ್ತದೆ. ತಣಿಗೆಹಳ್ಳಿಗೆ ಬರುವುದಿಲ್ಲ. ಆದ್ದರಿಂದ ಮತ್ತೊಂದು ವಾಹನವನ್ನು ಗ್ರಾಮ ಪಂಚಾಯಿತಿಗೆ ನೀಡಿದರೆ ಹಳ್ಳಿಗಳ ನೈರ್ಮಲ್ಯಕ್ಕೆ ಅನುಕೂಲವಾಗುತ್ತದೆ–ಎ.ಶೃತಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ
ಕಸದ ವಾಹನ ಬಂದ ಹೊಸದರಲ್ಲಿ ಪ್ರಚಾರಕ್ಕೆ ಮಾತ್ರ ತಣಿಗೆಹಳ್ಳಿಗೆ ಬಂದಿತ್ತು. ನಂತರದಲ್ಲಿ ಆ ವಾಹನ ಕಾಣಿಸಿಲ್ಲ. ಮನೆ ಮುಂದೆ ಬಿದ್ದ ಕಸ ಮತ್ತು ತ್ಯಾಜ್ಯವನ್ನು ಆಯಾ ಮನೆಯವರು ನಿತ್ಯಗೂಡಿಸಿ ತಿಪ್ಪೆಗೆ ಹಾಕುತ್ತಿದ್ದಾರೆ–ಡಿ. ರಶ್ಮಿ ಗೃಹಿಣಿ ತಣಿಗೆಹಳ್ಳಿ
ಹಳ್ಳಿಗರು ಕಸವನ್ನು ತಿಪ್ಪೆ ಜಮೀನಿಗೆ ಹಾಕುತ್ತಾರೆ. ಆದರೆ ಪ್ಲಾಸ್ಟಿಕ್ ಚೀಲ ಬಾಟಲಿಗಳು ಗ್ರಾಮದ ರಸ್ತೆ ಬದಿಯಲ್ಲಿ ಬಿದ್ದು ನೈರ್ಮಲ್ಯಕ್ಕೆ ತೊಂದರೆಯಾಗಿದೆ. ತ್ಯಾಜ್ಯ ವಿಲೇವಾರಿಗೆ ಸ್ವಚ್ಛ ವಾಹಿನಿ ವಾಹನ ಬೇಕು–ಮೈತ್ರೇಯಿ ಗೃಹಿಣಿ ಹಳೆರಂಗಾಪುರ
ಹಳ್ಳಿಗಳಲ್ಲಿ ಜಾರಿಯಾಗದ ಸ್ವಚ್ಛ ಭಾರತ ಕಲ್ಪನೆ ರಾಜ ಸಿರಿಗೆರೆ ಸಿರಿಗೆರೆ: ಗ್ರಾಮೀಣ ಭಾಗದಲ್ಲಿ ಸ್ವಚ್ಛ ಭಾರತ್ ಕಲ್ಪನೆ ಪರಿಣಾಮಕಾರಿಯಾಗಿ ಜಾರಿಗೊಂಡಿಲ್ಲ. ಇದಕ್ಕೆ ಸಿರಿಗೆರೆ ಗ್ರಾಮ ಪಂಚಾಯಿತಿ ಉತ್ತಮ ನಿದರ್ಶನ. ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುವ ಜಮ್ಮೇನಹಳ್ಳಿ ಸಿದ್ದಾಪುರ ಹಳೆರಂಗಾಪುರ ಸೀಗೇಹಳ್ಳಿ ಹೊಸರಂಗಾಪುರ ಗ್ರಾಮಗಳಲ್ಲಿ ಇದರ ಬಗ್ಗೆ ಜನರಿಗೆ ತಿಳಿದಿಲ್ಲ. ಗ್ರಾಮಗಳಲ್ಲಿ ನೈರ್ಮಲ್ಯ ಕಾಪಾಡುವ ಕೆಲಸ ಆಗುತ್ತಿಲ್ಲ. ಸಿರಿಗೆರೆ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮಗಳ ನೈರ್ಮಲ್ಯ ಕಾಪಾಡಲು ಎರಡು ವಾಹನಗಳಿವೆ. ಒಂದನ್ನು ತರಳಬಾಳು ಮಠವು ಗ್ರಾಮ ಪಂಚಾಯಿತಿಗೆ ನೀಡಿದೆ. ಮತ್ತೊಂದನ್ನು 15ನೇ ಹಣಕಾಸು ಯೋಜನೆಯಡಿ ಖರೀದಿಸಲಾಗಿದೆ. ಮಠವು ನೀಡಿದ ವಾಹನ ಸಿರಿಗೆರೆಯ ಬೀದಿ ಬೀದಿಗಳಲ್ಲಿ ಮನೆಗಳಿಂದ ಕಸ ಸಂಗ್ರಹಿಸಿ ಬುಕ್ಕರಾಯನಕೆರೆಯಲ್ಲಿ ನಿಗದಿಪಡಿಸಿರುವ ಜಾಗದಲ್ಲಿ ಸುರಿಯುತ್ತದೆ. ಇದರಿಂದಾಗಿ ಸಿರಿಗೆರೆಯಲ್ಲಿ ಶೇ 100ರಷ್ಟು ಸ್ವಚ್ಛ ಭಾರತ್ ಯೋಜನೆ ಪಾಲನೆಯಾಗಿದೆ. ಆದರೆ ಗ್ರಾಮೀಣ ಭಾಗದಲ್ಲಿ ಮಾತ್ರ ಇದಕ್ಕೆ ವಿರುದ್ಧವಾದ ಸ್ಥಿತಿ ಇದೆ. ಗ್ರಾಮ ಪಂಚಾಯಿತಿ ಸದಸ್ಯರ ಅನಿಸಿಕೆಯನ್ನು ಪಡೆಯದೆ ಜಿಲ್ಲಾ ಪಂಚಾಯಿತಿಯು ನಿಗದಿಪಡಿಸಿದ ಏಜೆನ್ಸಿಯಿಂದ ವಾಹನ ಖರೀದಿಸಿದೆ. ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಖರೀದಿಸಿರುವ ಮೂರು ಚಕ್ರದ ವಾಹನಗಳು ಹಳ್ಳಿಗಳ ರಸ್ತೆಗೆ ಇಳಿದು ಓಡಾಡುವುದು ಕಷ್ಟವೆನ್ನುವುದು ಸದಸ್ಯರ ಆರೋಪ. ಹೀಗಾಗಿ ಸಿರಿಗೆರೆ ಗ್ರಾಮ ಪಂಚಾಯಿತಿಗೆ ಬಂದಿರುವ ವಾಹನ ಬಳಕೆಯಾಗದೇ ಪಂಚಾಯಿತಿ ಆವರಣದ ಮೂಲೆಯೊಂದರಲ್ಲಿ ನಿಂತಿದೆ. ಈ ವಾಹನದಲ್ಲಿ ಕಸ ಸಂಗ್ರಹಿಸಿದರೆ ಮತ್ತೆ ಅದನ್ನು ತೆಗೆಯಲು ಕಾರ್ಮಿಕರು ಬೇಕು. ಇದರಲ್ಲಿ ಟಿಪ್ಪರ್ ವ್ಯವಸ್ಥೆ ಇಲ್ಲ. ಇದು ಪಂಚಾಯಿತಿಗಳಿಗೆ ದುಬಾರಿ. ಜತೆಗೆ ಸರಬರಾಜಾಗಿರುವ ವಾಹನದ ಕಸ ಸಂಗ್ರಹಣಾ ಸಾಮರ್ಥ್ಯ ತೀರಾ ಕಡಿಮೆ. ಇದರಿಂದ ಪಂಚಾಯಿತಿಗೇ ಹೊರೆ ಹೆಚ್ಚು ಎನ್ನುತ್ತಾರೆ ಸದಸ್ಯರು. ಆದ್ದರಿಂದ ಮೂಲೆ ಸೇರಿರುವ ವಾಹನವನ್ನು ವಾಪಾಸ್ಸು ತೆಗೆದುಕೊಂಡು ಹೋಗಲು ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗೆ ತಿಳಿಸಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಪ್ರತಿ ಮನೆಗಳಿಗೆ ಹಸಿ ಮತ್ತು ಒಣ ತ್ಯಾಜ್ಯಗಳನ್ನು ಬೇರ್ಪಡಿಸಿ ವಿಸರ್ಜಿಸಲು ಪ್ಲಾಸ್ಟಿಕ್ ಬಕೆಟ್‌ಗಳನ್ನು ನೀಡಲಾಗಿದೆ. ಇವುಗಳಲ್ಲಿ ಹಾಕಿದ ತ್ಯಾಜ್ಯವನ್ನು ಜಮೀನುಗಳಿಗೆ ತೆಗೆದುಕೊಂಡು ಹೋಗಿ ಹಾಕಲಾಗುತ್ತಿದೆ.
ಪ್ರಚಾರಕ್ಕೆ ಸೀಮಿತವಾದ ಕಸ ಸಂಗ್ರಹ ವಾಹನ ಜಿ.ತಿಮ್ಮಪ್ಪ ಚಿಕ್ಕಜಾಜೂರು: ಗ್ರಾಮೀಣ ಪ್ರದೇಶಗಳಲ್ಲಿನ ಕಸ ಮತ್ತು ಇನ್ನಿತರ ತ್ಯಾಜ್ಯ ವಸ್ತುಗಳನ್ನು ಆಯಾ ಗ್ರಾಮ ಪಂಚಾಯಿತಿಯ ಪೌರ ಕಾರ್ಮಿಕರಿಂದ ಸಂಗ್ರಹಿಸಿ ಅದನ್ನು ಸರಿಯಾದ ರೀತಿ ವಿಂಗಡಿಸಿ ವಿಲೇವಾರಿ ಮಾಡಲು ಸರ್ಕಾರ ಗ್ರಾಮ ಪಂಚಾಯಿತಿಗಳಿಗೆ ವಾಹನ ಸೌಲಭ್ಯ ಕಲ್ಪಿಸಿದೆ. ಆದರೆ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಕಸ ವಿಲೇವಾರಿ ಆಗುತ್ತಿಲ್ಲ. ಗ್ರಾಮದ ಹೊರ ಭಾಗದ ರಸ್ತೆ ಬದಿಗೆ ಅಥವಾ ನಿರ್ಜನ ಪ್ರದೇಶಗಳಲ್ಲಿ ಕಸದ ರಾಶಿ ಗೋಚರಿಸುತ್ತಿವೆ. ಗ್ರಾಮ ನೈರ್ಮಲ್ಯ ಎಂಬುದು ಕಡತಕ್ಕೆ ಸೀಮಿತವಾಗಿರುವುದು ದುರಂತ. ಬಿ. ದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿ.ದುರ್ಗ ಕಲ್ಲವ್ವನಾಗತಿಹಳ್ಳಿ ಹಿರೇಕಂದವಾಡಿ ಹಾಗೂ ತಣಿಗೆಹಳ್ಳಿ ಗ್ರಾಮಗಳಲ್ಲಿ ಕಸ ಸಂಗ್ರಹಿಸಲು ಒಂದು ವಾಹನ ನೀಡಲಾಗಿದೆ. ಇದು ಬಿ. ದುರ್ಗ ಮತ್ತು ಹಿರೇಕಂದವಾಡಿ ಗ್ರಾಮಕ್ಕೆ ಮಾತ್ರ ಸಿಮೀತವಾಗಿದೆ. ಕಲ್ಲವ್ವನಾಗತಿಹಳ್ಳಿ ತಣಿಗೆಹಳ್ಳಿಗೆ ಈ ವಾಹನ ಕಸ ಸಂಗ್ರಹಕ್ಕೆಂದು ಒಮ್ಮೆಯೂ ಹೋಗಿಲ್ಲ. ಇಂತಹ ಒಂದು ವಾಹನ ಇದೆ ಎಂಬುದು ಗ್ರಾಮಸ್ಥರಿಗೂ ತಿಳಿದಿಲ್ಲ. ಬಿ.ದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಸಂಬಂಧಿಸಿದ ಮಾನದಂಡಗಳನ್ನೆಲ್ಲಾ ಗಾಳಿಗೆ ತೂರಲಾಗಿದೆ. ಎರಡು ದಿನ ಅಥವಾ ವಾರಕ್ಕೊಮ್ಮೆ ಕಸ ಸಂಗ್ರಹದ ವಾಹನದೊಂದಿಗೆ ಬರುವ ಪೌರ ಕಾರ್ಮಿಕರು ಮನೆಗಳ ಮುಂದೆ ಬಿದ್ದ ಮತ್ತು ಚರಂಡಿಯ ತ್ಯಾಜ್ಯವನ್ನು ತುಂಬಿಕೊಂಡು ಹೋಗುತ್ತಾರೆ. ಈ ಕಸದಲ್ಲಿನ ಪ್ಲಾಸ್ಟಿಕ್ ಅನ್ನು ಬೇರ್ಪಡಿಸುವ ಗೋಜಿಗೆ ಹೋಗದೆ ಎಲ್ಲವನ್ನು ಗ್ರಾಮದ ಹೊರ ಭಾಗದಲ್ಲಿ ಸುರಿಯುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಕಸದಲ್ಲಿನ ಪೇಪರ್ ಪ್ಲಾಸ್ಟಿಕ್ ಗಾಳಿಗೆ ಹಾರಿ ಜಮೀನುಗಳಿಗೆ ಹೋಗಿ ಬೀಳುತ್ತಿವೆ. ಇದರಿಂದ ರೈತರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ ಎನ್ನುತ್ತಾರೆ ಬಿ.ದುರ್ಗ ಗ್ರಾಮಸ್ಥ ಕಿರಣ್. ಹಸಿ ಕಸ ಒಣ ಕಸವನ್ನು ಸರಿಯಾದ ರೀತಿ ಬೇರ್ಪಡಿಸಿ ವಿಲೇವಾರಿ ಮಾಡದಿದ್ದರೆ ಪರಿಸರ ಮತ್ತಷ್ಟು ಕಲುಷಿತಗೊಳ್ಳಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.