ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗದಲ್ಲಿ ಮಾದಕ ಜಾಲ ಗುಪ್ತಗಾಮಿನಿ

ಗಾಂಜಾ ಮಾರಾಟ ಭೇದಿಸುವುದೇ ಸವಾಲು
Last Updated 11 ಜುಲೈ 2022, 2:02 IST
ಅಕ್ಷರ ಗಾತ್ರ

ಚಿತ್ರದುರ್ಗ: ತರಕಾರಿ, ಸೊಪ್ಪಿನ ಟ್ರೇಗಳಲ್ಲಿ ಗಾಂಜಾ ಘಮಲು. ರೈಲಿನ ಮೂಲಕ ಹೊರ ರಾಜ್ಯದಿಂದ ರವಾನೆಯಾಗುವ ಮಾದಕ ದ್ರವ್ಯ. ರೈತರ ಜಮಿನುಗಳಲ್ಲಿ ಹುಲುಸಾಗಿ ಬೆಳೆಯುವ ಗಾಂಜಾ ಗಿಡ... ಇವು ಒಂದು ವರ್ಷದಲ್ಲಿ ಪತ್ತೆಯಾದ ಮಾದಕವಸ್ತು ಪ್ರಕರಣಗಳು.

ಮಾದಕವಸ್ತು ಜಾಲ ಗುಪ್ತಗಾಮಿನಿಯಂತೆ ಜಿಲ್ಲೆಯಲ್ಲಿ ಹರಿಯುತ್ತಿದೆ ಎಂಬುದಕ್ಕೆ ಇವು ಸಾಕ್ಷ್ಯ ಒದಗಿಸುತ್ತಿವೆ. ಪೊಲೀಸ್‌ ಹಾಗೂ ಅಬಕಾರಿ ಇಲಾಖೆಯ ದಾಳಿಯ ನಡುವೆಯೂ ಜಾಲ ಸಕ್ರಿಯವಾಗಿದೆ. ಗಾಂಜಾ ಬೆಳೆ, ಮಾರಾಟ ಹಾಗೂ ಸಾಗಣೆಯ ಪ್ರಕರಣಗಗಳು ನಿರಂತರವಾಗಿ ಪತ್ತೆಯಾಗುತ್ತಿವೆ.

ಮಾದಕವಸ್ತುಗಳಲ್ಲಿ ಗಾಂಜಾ, ಅಫೀಮು, ಕೋಕೆನ್‌ ಹಾಗೂ ಹೆರಾಯಿನ್‌ ಸೇರಿ ಇತರ ಪದಾರ್ಥಗಳಿವೆ. ಇದರಲ್ಲಿ ಗಾಂಜಾ ಬಳಕೆಯದ್ದೇ ಸಿಂಹಪಾಲು. ಇತರ ಮಾದಕವಸ್ತುಗಳ ಬಳಕೆ ಜಿಲ್ಲೆಯಲ್ಲಿ ಕಂಡುಬಂದಿಲ್ಲ. ಮಾದಕವಸ್ತು ಜಾಲಕ್ಕೆ ಹೊರರಾಜ್ಯದ ನಂಟಿರುವುದು ಹಲವು ಪ್ರಕರಣಗಳಿಂದ ಗೊತ್ತಾಗಿದೆ. ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕೇರಳದ ಪೆಡ್ಲರ್‌ಗಳೊಂದಿಗೆ ಸ್ಥಳೀಯ ಮಾರಾಟಗಾರರು ಸಂಪರ್ಕ ಹೊಂದಿರುವುದೂ ಬೆಳಕಿಗೆ ಬಂದಿದೆ.

ಪ್ರಸಕ್ತ ಸಾಲಿನ ಜನವರಿಯಿಂದ ಜೂನ್‌ವರೆಗೆ ಜಿಲ್ಲೆಯಲ್ಲಿ 9 ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ ಗಾಂಜಾ ಮಾರಾಟಗಾರರ ವಿರುದ್ಧ ನಾಲ್ಕು ಹಾಗೂ ಮಾದಕವಸ್ತು ಸೇವಿಸುವವರ ಮೇಲೆ ಐದು ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಿಂದ 12 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. 2021ರಲ್ಲಿ ಏಳು, 2020ರಲ್ಲಿ ಸುಮಾರು ಒಂಬತ್ತು ಪ್ರಕರಣಗಳು ಪತ್ತೆಯಾಗಿವೆ. ಪ್ರತಿ ವರ್ಷ ಜಿಲ್ಲೆಯಲ್ಲಿ ಪತ್ತೆಯಾದ ಮಾದಕವಸ್ತುಗಳ ಪ್ರಕರಣ ಒಂದಂಕಿ ದಾಟಿಲ್ಲ.

‘ದೇಶದಲ್ಲಿ ಬಳಕೆಯಾಗುವ ಗಾಂಜಾ ವಿದೇಶದಿಂದ ಬರುತ್ತಿಲ್ಲ, ಬದಲಿಗೆ ಸ್ಥಳೀಯವಾಗಿ ಬೆಳೆಯಲಾಗುತ್ತಿದೆ’ ಎಂಬುದನ್ನು ಅಂತರರಾಷ್ಟ್ರೀಯ ಮಾದಕವಸ್ತು ನಿಯಂತ್ರಣ ಮಂಡಳಿ ಹೇಳಿರುವುದಕ್ಕೆ ಜಿಲ್ಲೆಯಲ್ಲಿ ಸಾಕ್ಷ್ಯಗಳು ಲಭ್ಯ ಇವೆ. 2020ರಲ್ಲಿ ಮೊಳಕಾಲ್ಮುರು ತಾಲ್ಲೂಕಿನಲ್ಲಿ ಭಾರಿ ಪ್ರಮಾಣದ ಗಾಂಜಾ ಬೆಳೆ ಪತ್ತೆಯಾಗಿತ್ತು. ಸುಮಾರು ₹ 4 ಕೋಟಿ ಮೌಲ್ಯದ 9,871 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಂಡು ಇತ್ತೀಚೆಗೆ ನಾಶಪಡಿಸಲಾಯಿತು.

ಆಂಧ್ರಪ್ರದೇಶದಿಂದ ಕರ್ನಾಟಕ ಮತ್ತು ಕೇರಳಕ್ಕೆ ಸಾಗಣೆ ಮಾಡುತ್ತಿದ್ದ 41 ಕೆ.ಜಿ. ಗಾಂಜಾವನ್ನು 2021ರಲ್ಲಿ ಹೊಳಲ್ಕೆರೆ ತಾಲ್ಲೂಕಿನಲ್ಲಿ ವಶಕ್ಕೆ ಪಡೆಯಲಾಯಿತು. ತರಕಾರಿ, ಸೊಪ್ಪಿನ ನಡುವೆ ಗಾಂಜಾ ಇಟ್ಟು ರವಾನೆ ಮಾಡುತ್ತಿದ್ದದ್ದು ಅಚ್ಚರಿ ಮೂಡಿಸಿತ್ತು. ಗಾಂಜಾವನ್ನು ಹಸಿಸೊಪ್ಪು, ಒಣಗಿದ ಗಿಡ ಹಾಗೂ ಪುಡಿಯ ಮಾದರಿಯಲ್ಲಿ ಮಾರಾಟ ಮಾಡಲಾಗುತ್ತದೆ.

ಚಿತ್ರದುರ್ಗದ ಜಟ್‌ಪಟ್‌ ನಗರದ ಸಮೀಪದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ 9 ಆರೋಪಿಗಳು ಇತ್ತೀಚೆಗೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಜಾಲದ ಪ್ರಮುಖ ರೂವಾರಿ ಶ್ರೀನಿವಾಸ್‌ ಅಲಿಯಾಸ್‌ ಜಪಾನ್‌ ಸೀನ ಕೂಡ ಬಂಧಿತನಾಗಿದ್ದಾನೆ. ಮಾದಕವಸ್ತು ಮಾರಾಟದಲ್ಲಿ ಈತನ ಹೆಸರು ಪ್ರಮುಖವಾಗಿತ್ತು. ಇಂತಹ ಐವರು ಆರೋಪಿಗಳ ಪಟ್ಟಿಯನ್ನು ಪೊಲೀಸರು ಸಿದ್ಧಪಡಿಸಿದ್ದಾರೆ.

ಜಿಲ್ಲೆಯಲ್ಲಿ ಪತ್ತೆಯಾದ ಪ್ರಕರಣಗಳನ್ನು ವಿಶ್ಲೇಷಣೆ ಮಾಡಿದ ಪೊಲೀಸರು ಮಾದಕವಸ್ತು ಸೇವಿಸುವವರ ಮೇಲೆ ನಿಗಾ ಇಟ್ಟಿದ್ದಾರೆ. ಶಿಕ್ಷಣ ವಂಚಿತರು, ಕಾರ್ಮಿಕ ವರ್ಗದವರು ಮಾತ್ರ ಮಾದಕವಸ್ತು ವ್ಯಸನಿಗಳಾಗಿದ್ದಾರೆ. ಇಂತಹ ವ್ಯಸನ ಅಂಟಿಸಿಕೊಂಡವರಲ್ಲಿ ವಿದ್ಯಾರ್ಥಿಗಳ ಪ್ರಮಾಣ ವಿರಳವಾಗಿದೆ. ಮಾದಕವಸ್ತು ವ್ಯಸನಿಗಳೊಂದಿಗೆ ಆಪ್ತ ಸಮಾಶಲೋಚನೆ ನಡೆಸುವ ಮೂಲಕ ವ್ಯಸನಮುಕ್ತ ಮಾಡುವ ಕಾರ್ಯಕ್ಕೂ ಪೊಲೀಸರು ಮುಂದಾಗಿದ್ದಾರೆ.

ಜಟ್‌ಪಟ್‌ ನಗರ, ಕಲ್ಲಿನಕೋಟೆಯ ಸಮೀಪದ ನಿರ್ಜನ ಪ್ರದೇಶ, ಜೋಗಿಮಟ್ಟಿ, ಚಂದ್ರವಳ್ಳಿಯ ತಪ್ಪಲು.. ಹೀಗೆ ನಗರದ ಹಲವು ಸ್ಥಳದಲ್ಲಿ ಮಾದಕವಸ್ತು ಸೇವನೆ ನಡೆಯುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಹಿಂಭಾಗದ ರಸ್ತೆಯೂ ಮಾದಕವಸ್ತು ವ್ಯಸನಿಗಳ ತಾಣವಾಗಿದೆ. ಅನತಿ ದೂರದಲ್ಲಿಯೇ ನಗರ ಪೊಲೀಸ್‌ ಠಾಣೆ ಇದೆ. ಇಂತಹ ಸ್ಥಳಗಳ ಮೇಲೆ ಪೊಲೀಸರು ನಿಗಾ ಇಡಬೇಕು ಎಂಬುದು ಸಾರ್ವಜನಿಕರ ಒತ್ತಾಯ.

ಶಿಕ್ಷೆಯ ಪ್ರಮಾಣ ಕಡಿಮೆ

ಮಾದಕವಸ್ತು ಮಾರಾಟ ಹಾಗೂ ಸಾಗಣೆಯಲ್ಲಿ ಸಿಕ್ಕಿಬೀಳುವ ಆರೋಪಿಗಳಲ್ಲಿ ಬಹುತೇಕರಿಗೆ ಶಿಕ್ಷೆಯಾಗುತ್ತಿಲ್ಲ. ಮಾದಕವಸ್ತು ಜಾಲದ ಬೇರುಗಳು ಇನ್ನಷ್ಟು ಆಳಕ್ಕೆ ಇಳಿಯಲು ಇದೂ ನೆರವು ನೀಡುತ್ತಿದೆ.

ಜಿಲ್ಲೆಯ ಬೆರಳೆಣಿಕೆಯ ವ್ಯಕ್ತಿಗಳು ಈ ಜಾಲದ ರೂವಾರಿಗಳು. ಹಲವು ದಾಳಿಗಳಲ್ಲಿ ಸಿಕ್ಕಿಬೀಳುವ ಆರೋಪಿಗಳು ಸುಲಭವಾಗಿ ಜೈಲಿನಿಂದ ಹೊರಬರುತ್ತಿದ್ದಾರೆ. ಮತ್ತೆ ಜಾಲದ ಸಂಪರ್ಕ ವಿಸ್ತರಿಸುವ ಕೆಲಸ ಕೊನೆ, ಮೊದಲಿಲ್ಲದಂತೆ ನಡೆಯುತ್ತಿದೆ.

ಮಾದಕವಸ್ತು ಮತ್ತು ಮಾನಸಿಕ ವ್ಯಸನ ಪದಾರ್ಥಗಳ ಕಾಯ್ದೆ (ಎನ್‌ಡಿಪಿಎಸ್‌) ಪರಿಣಾಮಕಾರಿಯಾಗಿದ್ದರೂ ಪೊಲೀಸರು ದಾಖಲಿಸುವ ಪ್ರಕರಣದಲ್ಲಿನ ನ್ಯೂನತೆಗಳನ್ನು ಆರೋಪಿಗಳು ಬಳಸಿಕೊಳ್ಳುತ್ತಿದ್ದಾರೆ. ತನಿಖಾ ಹಂತದ ಲೋಪ–ದೋಷಗಳ ನೆರವಿನಿಂದ ಜಾಲ ಇನ್ನಷ್ಟು ಬಲವಾಗುತ್ತಿದೆ.

ರಕ್ತದ ಮಾದರಿ ಸಂಗ್ರಹ

ಮಾದಕವಸ್ತು ಸೇವಿಸುವ ಶಂಕಿತರ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಜಾಲದ ಮೂಲ ಪತ್ತೆ ಮಾಡುವ ಕಾರ್ಯಕ್ಕೆ ಚಿತ್ರದುರ್ಗ ಪೊಲೀಸರು ಮುಂದಾಗಿದ್ದಾರೆ. ಈಗಾಗಲೇ ಕೆಲವರ ರಕ್ತದ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ.

‘ರಕ್ತ ಪರೀಕ್ಷಿಸಿದಾಗ ಮಾದಕ ವಸ್ತು ಸೇವನೆಯ ಮಾಹಿತಿ ಖಚಿತವಾಗುತ್ತದೆ. ಇಂತಹವರನ್ನು ವಿಚಾರಣೆಗೆ ಒಳಪಡಿಸಿ ಖರೀದಿದಾರರ ಮಾಹಿತಿ ಪಡೆಯಲು ಸಾಧ್ಯವಿದೆ. ಎನ್‌ಡಿಪಿಎಸ್‌ ಕಾಯ್ದೆಯಲ್ಲಿ ಇದಕ್ಕೆ ಅವಕಾಶವಿದೆ. ಮಹಾನಗರಗಳಿಗೆ ಮಾತ್ರ ಸೀಮಿತವಾಗಿದ್ದ ಈ ಮಾದರಿಯ ತನಿಖೆಯನ್ನು ಜಿಲ್ಲೆಗಳಿಗೂ ವಿಸ್ತರಿಸಲಾಗಿದೆ. ಮಾದಕ ವ್ಯಸನಿಗಳ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಬಹುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ. ಪರಶುರಾಮ್‌ ಕೋರಿದರು.

ಮೇವಿನ ಸೋಗಿನಲ್ಲಿ ಗಾಂಜಾ ಬೆಳೆ

ಹಿರಿಯೂರು: ತಾಲ್ಲೂಕಿನ ಮೇಟಿಕುರ್ಕೆ ಗ್ರಾಮದಲ್ಲಿ ರೈತರೊಬ್ಬರ ವಾಸದ ಮನೆಯ ಹಿತ್ತಲಿನಲ್ಲಿ 16 ಗಾಂಜಾ ಗಿಡಗಳು, ಕಂದಿಕೆರೆ ಗ್ರಾಮದ ಹೊಲವೊಂದರಲ್ಲಿ 8, ಓಣಿಹಟ್ಟಿಯ ಹೊಲವೊಂದರಲ್ಲಿ 2, ಮ್ಯಾಕ್ಲೂರಹಳ್ಳಿಯಲ್ಲಿ 3 ಗಿಡಗಳು.

ಒಂದು ವರ್ಷದ ಅವಧಿಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳ ಕಣ್ಣಿಗೆ ಬಿದ್ದು ದಾಖಲಾಗಿರುವ ಕೆಲವು ಪ್ರಕರಣಗಳಿವು. ಎಂಟ್ಹತ್ತು ವರ್ಷಗಳ ಹಿಂದೆ ಗಾಂಜಾ ಗಿಡಗಳು ರೈತರ ಜಮೀನುಗಳಲ್ಲಿ ಕಂಡುಬಂದರೆ, ತಕ್ಷಣ ‘ಕುರಿ–ಮೇಕೆಗಳ ಮೇವಿಗಾಗಿ ಬೆಳೆಸಿದ್ದೇವೆ’ ಎಂಬ ಸಿದ್ಧ ಉತ್ತರ ಬೆಳೆಗಾರರಿಂದ ಬರುತ್ತಿತ್ತು. ಈಗ ಪರಿಸ್ಥಿತಿ ಆ ರೀತಿ ಇಲ್ಲ. ಗಾಂಜಾ ಗಿಡಗಳನ್ನು ಬೆಳೆಯುವವರಿಗೆ ಬೆಂಗಳೂರಿನ ಸಂಪರ್ಕ ಇರುವುದು ಕಂಡುಬಂದಿದೆ. ಈ ಆರೋಪವನ್ನು ಅಬಕಾರಿ ಅಧಿಕಾರಿಗಳು ನಿರಾಕರಿಸುತ್ತಿಲ್ಲ.

2021ರ ಜೂನ್‌ನಲ್ಲಿ ದುರ್ಗಮ್ಮ ದೇವಸ್ಥಾನದ ಬೀದಿಯ ಮನೆಯೊಂದರ ಮೇಲೆ ಖಚಿತ ಮಾಹಿತಿ ಆಧರಿಸಿ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದಾಗ ಗಾಂಜಾ ಸೇವನೆ ಮಾಡುತ್ತಿದ್ದುದು ಕಂಡುಬಂದಿತ್ತು. 1 ಕೆ.ಜಿ. 5 ಗ್ರಾಂ ಗಾಂಜಾ ವಶಕ್ಕೆ ಪಡೆದು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ದಾಳಿ ನಡೆಸಿದ ಮನೆಯಲ್ಲಿ ಗಾಂಜಾ ಮಾರಾಟದ ಜೊತೆ ಸೇವನೆಗೂ ಅವಕಾಶವಿತ್ತು. 30 ವರ್ಷದೊಳಗಿನ ಯುವಕರೇ ಗ್ರಾಹಕರು ಎಂಬುದು ಬಹಿರಂಗವಾಗಿತ್ತು.

ಹಿರಿಯೂರು ನಗರದಲ್ಲಿ ಚಿಕ್ಕ ಅಂಗಡಿ ನಡೆಸುತ್ತಿರುವ ಮಹಿಳೆಯೊಬ್ಬರು ಹೊರಗಿನಿಂದ ಗಾಂಜಾ ತಂದು ಮಾರಾಟ ಮಾಡುತ್ತಿದ್ದುದು ಸೆಪ್ಟೆಂಬರ್‌ನಲ್ಲಿ ಪತ್ತೆಯಾಗಿತ್ತು. ಮಹಿಳೆಯ ವಿರುದ್ಧವೂ ಪ್ರಕರಣ ದಾಖಲಿಸಲಾಗಿತ್ತು. ಆದರೂ ಇದಕ್ಕೆ ಕಡಿವಾಣ ಬಿದ್ದಂತೆ ಕಾಣುತ್ತಿಲ್ಲ. ನಿತ್ಯ ಕೂಲಿ ಮಾಡಿ ಬದುಕು ಸಾಗಿಸುವವರೇ ಇಲ್ಲಿನ ಗಿರಾಕಿಗಳು.

ಮಾದಕ ವಸ್ತು ಪ್ರಕರಣಗಳಲ್ಲಿ ಹೊರಗಿನವರ ಸಂಪರ್ಕವಿರುವುದು 2022 ಫೆ.16 ರಂದು ಕಾರೊಂದನ್ನು ಪರಿಶೀಲಿಸಿದಾಗ ದೃಢಪಟ್ಟಿತ್ತು. ಮೂರು ಪ್ಯಾಕೆಟ್‌ಗಳಲ್ಲಿದ್ದ 4 ಕೆ.ಜಿ. 800 ಗ್ರಾಂ ಗಾಂಜಾ ಪತ್ತೆಯಾಗಿತ್ತು. ಬಂಧಿತ ಆರೋಪಿಗಳಲ್ಲಿ ಒಬ್ಬರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಡ್ಡನಹಳ್ಳಿ, ಮತ್ತೊಬ್ಬರು ತುಮಕೂರು ಜಿಲ್ಲೆಯ ಕೊರಟಗೆರೆಯವರು. ಮೂರನೇ ಆರೋಪಿ ಹಿರಿಯೂರು ತಾಲ್ಲೂಕಿನ ಆನೆಸಿದ್ರಿ ಗ್ರಾಮದವರಾಗಿದ್ದರು.

ಮಾರ್ಚ್ 23ರಂದು ತಾಲ್ಲೂಕಿನ ಕೂನಿಕೆರೆ ಗ್ರಾಮದ ಸಮೀಪ ದ್ವಿಚಕ್ರ ವಾಹನದ ಸೀಟಿನ ಕೆಳಗೆ ಬಚ್ಚಿಟ್ಟಿದ್ದ 950 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಜೂನ್ 16ರಂದು ತಾಲ್ಲೂಕಿನ ಬಗ್ಗನಡು ಗ್ರಾಮದ ಡಾಬಾದ ಮೇಲೆ ದಾಳಿ ನಡೆಸಿ ಮಾರಾಟಕ್ಕೆ ಇಟ್ಟಿದ್ದ 3.7 ಕೆ.ಜಿ. ಒಪಿಎಂ ಪೌಡರ್‌ ಅನ್ನು ವಶಪಡಿಸಿಕೊಳ್ಳಲಾಗಿದೆ. ಈ ಎಲ್ಲ ಪ್ರಕರಣಗಳು ತಾಲ್ಲೂಕಿನಲ್ಲಿ ಮಾದಕ ವಸ್ತುವಿನ ಮಾರಾಟ ಜಾಲ ಇರುವ ಸುಳಿವು ನೀಡುತ್ತಿವೆ.

ಮೂಲ ಪತ್ತೆಯೇ ಸವಾಲು

ಮೊಳಕಾಲ್ಮುರು: ಮಳೆಯ ಕೊರತೆಯಿಂದಾಗಿ ಶೇಂಗಾ ಬೆಳೆಗಾರ ಸತತ ನಷ್ಟಕ್ಕೀಡಾಗುತ್ತಿದ್ದು, ರಾಜ್ಯದಲ್ಲೇ ಅತಿ ಹೆಚ್ಚು ‘ಬರಪೀಡಿತ’ ತಾಲ್ಲೂಕು ಎಂಬ ಹಣೆಪಟ್ಟಿ ಅಂಟಿಸಿಕೊಂಡಿದೆ. ಆದರೆ, ಎರಡು ವರ್ಷಗಳ ಹಿಂದೆ ಇಲ್ಲಿ ದಾಖಲಾದ ಗಾಂಜಾ ಬೆಳೆಯ ಪ್ರಕರಣ ರಾಷ್ಟ್ರಮಟ್ಟದ ಗಮನ ಸೆಳೆಯಿತು.

ಗ್ರಾಂ ಲೆಕ್ಕದಲ್ಲಿ ತಾಲ್ಲೂಕಿನಲ್ಲಿ ಗಾಂಜಾ ವಶಕ್ಕೆ ಪಡೆದ ಪ್ರಕರಣಗಳು ಅನೇಕ ವರ್ಷಗಳಿಂದ ದಾಖಲಾಗುತ್ತಿದ್ದವು. ಆದರೆ, ರಾಂಪುರ ಸಮೀಪದ ಕೂಡ್ಲಿಗಿ ರಸ್ತೆಯ ತೋಟವೊಂದರಲ್ಲಿ ಬೆಳೆದಿದ್ದ 10 ಟನ್ ಗಾಂಜಾ ವಶಕ್ಕೆ ಪಡೆದ ಘಟನೆ ತಾಲ್ಲೂಕಿನ ಜನರಲ್ಲಿ ಅಘಾತವುಂಟು ಮಾಡಿತ್ತು.

₹ 4 ಕೋಟಿ ವೆಚ್ಚದ ಈ ಗಾಂಜಾವನ್ನು ಈಚೆಗೆ ರಾಂಪುರದಲ್ಲಿ ಪೊಲೀಸ್ ಇಲಾಖೆ ಮತ್ತು ಮಾದಕ ವಸ್ತುಗಳ ನಿರ್ಮೂಲನಾ ಮಂಡಳಿ ಸಹಯೋಗದಲ್ಲಿ ನಾಶಪಡಿಸಲಾಯಿತು. ಬರಡು ಭೂಮಿ ಹಾಗೂ ಸಂಪರ್ಕ ಕೊರತೆ ಎದುರಿಸುತ್ತಿರುವ ಈ ಪ್ರದೇಶದಲ್ಲಿ ಇಷ್ಟೊಂದು ಪ್ರಮಾಣದ ಗಾಂಜಾ ಕೃಷಿ ಆರಂಭ ಹೇಗಾಯಿತು ಎಂಬ ಪ್ರಶ್ನೆ ಈಗಲೂ ಜನರನ್ನು ಕಾಡುತ್ತಿದೆ.

‘ಬಳ್ಳಾರಿ ಜಿಲ್ಲೆಯ ಸಂಡೂರು, ಕೂಡ್ಲಿಗಿ, ಮೊಳಕಾಲ್ಮುರು ತಾಲ್ಲೂಕಿನ ಗಡಿಯಲ್ಲಿ ಗಾಂಜಾ ಬೆಳೆದಿರುವ ಘಟನೆಗಳು ಬೆಳಕಿಗೆ ಬಂದಿವೆ. ಒಂದೇ ತಂಡಕ್ಕೆ ಸೇರಿದವರ ಕುಮ್ಮಕ್ಕಿನಿಂದಲೇ ಗಾಂಜಾ ಬೆಳದ ಮಾಹಿತಿಯಿದೆ. ಸಂಡೂರಿನಲ್ಲಿ ಗಾಂಜಾ ಪತ್ತೆ ಪ್ರಕರಣದ ನಂತರ ರಾಂಪುರದಲ್ಲಿ ಪತ್ತೆಯಾಯಿತು. ಒಬ್ಬನೇ ಆರೋಪಿ ಇದನ್ನು ಮಾಡಿದ ಅನುಮಾನವೂ ಇದೆ. ಬೆಳೆಗಾರರು, ಮಾರಾಟಗಾರರು ಹಾಗೂ ಸೇವಿಸುವವರ ಕೊಂಡಿಯನ್ನು ಪತ್ತೆ ಮಾಡುವುದು ಸವಾಲಾಗಿದೆ’ ಎನ್ನುತ್ತಾರೆ ಪೊಲೀಸರು.

‘ತಾಲ್ಲೂಕು ಆಂಧ್ರಪ್ರದೇಶದ ಗಡಿಯಲ್ಲಿದ್ದು, ಅಲ್ಲಿಂದ ಗಾಂಜಾ ರವಾನೆಯಾಗುವ ಬಗ್ಗೆ ಮಾಹಿತಿಯಿಲ್ಲ. ಈ ಬಗ್ಗೆ ದೂರಗಳು ಬಂದಿಲ್ಲ. ಗಡಿಯಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಲು ಮನವಿ ಮಾಡಲಾಗಿದೆ. ಇತ್ತೀಚೆಗೆ ಸುತ್ತಮುತ್ತ ಎಲ್ಲಿಯೂ ಗಾಂಜಾ ಪ್ರಕರಣ ವರದಿಯಾಗಿಲ್ಲ’ ಎನ್ನುತ್ತಾರೆ ಮೊಳಕಾಲ್ಮುರು ಸಿಪಿಐ ಸತೀಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT