ಬುಧವಾರ, ಮೇ 18, 2022
23 °C

₹ 1.67 ಕೋಟಿ ಕಂದಾಯ ವಂಚನೆ: ಆರೋಪಿ ಶರಣಾಗತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಚಿತ್ರದುರ್ಗ ಉಪನೋಂದಣಿ ಕಚೇರಿಯ ₹ 1.67 ಕೋಟಿ ಕಂದಾಯ ಹಣವನ್ನು ಸರ್ಕಾರಕ್ಕೆ ವಂಚಿಸಿದ್ದ ಆರೋಪಿ ಜಾಮೀನು ಸಿಗದೇ ನ್ಯಾಯಾಲಯಕ್ಕೆ ಶರಣಾಗಿದ್ದಾನೆ.

ಶ್ರೀರಾಯ್ ಅಸೋಸಿಯೇಟ್ ಮಾಲೀಕ ಹಾಗೂ ದಸ್ತಾವೇಜು ಬರಹಗಾರ (ಸ್ಟಾಂಪ್ ವೆಂಡರ್) ಸಿ. ಮಂಜುನಾಥ ಯಾದವ್ (36) ಕೆ-2 ಚಲನ್ ತಿದ್ದಿ ಸರ್ಕಾರಕ್ಕೆ ₹1,67,71,170 ಕಂದಾಯ ವಂಚಿಸಿದ್ದ. ನ್ಯಾಯಾಲಯಕ್ಕೆ ಶರಣಾದ ಆರೋಪಿಯನ್ನು ಜ. 14ರಂದು ಚಿತ್ರದುರ್ಗ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಆರೋಪಿಯಿಂದ 1 ಲ್ಯಾಪ್‌ಟಾಪ್, 1 ಸಿಪಿಯು, 1 ಮೊಬೈಲ್ ಹಾಗೂ ಹೆಚ್ಚಿನ ತನಿಖೆಗಾಗಿ ಚಿತ್ರದುರ್ಗ ಜಿಲ್ಲಾ ಉಪನೋಂದಣಾಧಿಕಾರಿ ಕಚೇರಿಯ 3 ಸಿಪಿಯುಗಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳನ್ನು ಹೆಚ್ಚಿನ ಪರಿಶೀಲನೆಗಾಗಿ ಎಫ್.ಎಸ್.ಎಲ್. ಕೇಂದ್ರಕ್ಕೆ ಕಳಹಿಸಿ ತನಿಖೆ ಮುಂದುವರಿಸಿದ್ದಾರೆ.

ಘಟನೆಯ ವಿವರ: ‘ಚಿತ್ರದುರ್ಗ ಉಪ ನೋಂದಣಿ ಕಚೇರಿಯಲ್ಲಿ 2020 ಅ. 28 ರಿಂದ 2021 ಆ. 31ರ ವರೆಗಿನ ಅವಧಿಯಲ್ಲಿ ಸಹಿ ಮಾಡಿರುವ ಎಲ್ಲ ದಸ್ತಾವೇಜುಗಳು ಕಾನೂನುಬಾಹಿರವಾಗಿವೆ. ಸಿ. ಮಂಜುನಾಥ ಯಾದವ್ ಚಿತ್ರದುರ್ಗದ ಆಕ್ಸಿಸ್ ಮತ್ತು ಐಸಿಐಸಿಐ ಬ್ಯಾಂಕ್ ಶಾಖೆಗಳ ಖಾತೆಯಿಂದ ದಸ್ತಾವೇಜುಗಳ ಮೌಲ್ಯಕ್ಕೆ ಅನುಗುಣವಾಗಿ ಸರ್ಕಾರಿ ಶುಲ್ಕವನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ನಾನಾ ಲೆಕ್ಕ ಶೀರ್ಷಿಕೆಗಳಲ್ಲಿ ಇ-ಪೇಮೆಂಟ್ ಮೂಲಕ ಕಡಿಮೆ ಶುಲ್ಕ ಪಾವತಿಸಿ ಸರಿಯಾದ ಶುಲ್ಕ ಪಾವತಿಸಿರುವಂತೆ ಕೆ-2 ಚಲನ್ ತಿದ್ದಿ ಸರ್ಕಾರಕ್ಕೆ ₹ 1,67,71,170ಗಳಷ್ಟು ಕಂದಾಯ ವಂಚಿಸಿದ್ದಾನೆ’ ಎಂದು ಜಿಲ್ಲಾ ನೋಂದಣಾಧಿಕಾರಿ ರವೀಂದ್ರ ಪೂಜಾರ್ ಅವರು ಆರೋಪಿಯ ವಿರುದ್ಧ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಚಿತ್ರದುರ್ಗ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಎಸ್. ಪಾಂಡುರಂಗ ಅವರು ತನಿಖೆ ಆರಂಭಿಸಿದ್ದರು. ಆದರೆ ಈ ವಿಷಯ ತಿಳಿದ ಸಿ. ಮಂಜುನಾಥ ಯಾದವ್ ತಲೆ ಮರೆಸಿಕೊಂಡು, ಚಿತ್ರದುರ್ಗ ಕೋರ್ಟ್‌ ಮತ್ತು ಬೆಂಗಳೂರು ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದನು. ಆದರೆ ಎರಡೂ ಕೋರ್ಟ್‌ಗಳಲ್ಲಿ ಜಾಮೀನು ಸಿಗದ ಕಾರಣ ಜ. 11ರಂದು ಕೋರ್ಟ್‌ಗೆ ಶರಣಾಗಿದ್ದಾನೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು