ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ ಲೋಕಸಭಾ ಕ್ಷೇತ್ರ | ಹೊರಗಿನ ಇಬ್ಬರಲ್ಲಿ ಹಿತವರಿಗೆ ಹುಡುಕಾಟ

ಜಿ.ಬಿ.ನಾಗರಾಜ್‌
Published 21 ಏಪ್ರಿಲ್ 2024, 4:51 IST
Last Updated 21 ಏಪ್ರಿಲ್ 2024, 4:51 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಬರದಿಂದಾಗಿ ಬಿತ್ತಿದ ಶೇಂಗಾ ಜಮೀನಿನಲ್ಲಿಯೇ ಕಮರಿ ಹೋಯಿತು. ಕುರಿ, ಮೇಕೆಗಳಿಗೆ ಕುಡಿಯಲು ನೀರಿಲ್ಲದ ಸ್ಥಿತಿ. ಭದ್ರಾ ಮೇಲ್ದಂಡೆ ಯೋಜನೆ ಜಾರಿಗೊಂಡು, ನೀರಾವರಿ ಸೌಲಭ್ಯ ದೊರಕಲಿದೆ ಎಂಬ ಆಶಾಭಾವದೊಂದಿಗೆ ರಾಜಕಾರಣಿಗಳು ನೀಡುವ ಆಶ್ವಾಸನೆಗೆ ಮರುಳಾಗಿ ಮತ ಹಾಕುತ್ತಲೇ ಇದ್ದೇವೆ. ವರ್ಷಗಳು ಕಳೆದರೂ ಜಮೀನಿನತ್ತ ನೀರು ಬರುತ್ತಿಲ್ಲ...’

ಚಳ್ಳಕೆರೆ ತಾಲ್ಲೂಕಿನ ಭರಮಸಾಗರದ ವೀರಭದ್ರಪ್ಪ ‘ಪ್ರಜಾವಾಣಿ’ ಎದುರು ಗೊಣಗುತ್ತಲೇ ತಮ್ಮ ಕುರಿಗಳಿಗೆ ಗದರಿದರು. ಉರಿ ಬಿಸಿಲಿನಲ್ಲಿ ಮೇವು ಅರಸಿ ದಿಕ್ಕು ತೋಚಿದತ್ತ ಹೆಜ್ಜೆ ಹಾಕುತ್ತಿದ್ದ ಕುರಿ ಮಂದೆಗೆ ನೀರುಣಿಸುವ ಧಾವಂತ ಅವರಲ್ಲಿತ್ತು.

ಬೇಸಿಗೆಯಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗಿರುವ ಸಂದರ್ಭದಲ್ಲಿ ಎದುರಾಗಿರುವ ಚುನಾವಣಾ ಕಣದಲ್ಲಿ ನೀರಾವರಿ ಮಾತು ಪ್ರತಿಧ್ವನಿಸುತ್ತಿದೆ. ಇದನ್ನೇ ರಾಜಕೀಯ ದಾಳ ಮಾಡಿಕೊಂಡಿರುವ ಕಾಂಗ್ರೆಸ್‌ ಮತ್ತು ಬಿಜೆಪಿ ಆರೋಪ–ಪ್ರತ್ಯಾರೋಪದಲ್ಲಿ ತೊಡಗಿವೆ. ಎದುರಾಳಿಯನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದರೆ ಮತ ಕ್ರೋಡೀಕರಣಗೊಳ್ಳುವ ಲೆಕ್ಕಾಚಾರ ರಾಜಕಾರಣಿಗಳದು.

ಗ್ರಾಮೀಣ ಪ್ರದೇಶದ ಬಹುತೇಕರನ್ನು ಲೋಕಸಭಾ ಚುನಾವಣೆ ಪ್ರಭಾವಿಸಿದಂತೆ ಕಾಣುತ್ತಿಲ್ಲ. ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಕ್ಷೇತ್ರದ ಅಭ್ಯರ್ಥಿಯಾಗಿ ಹೊರಿಗಿನವರು ಅತಿಥಿಗಳಂತೆ ಬರುತ್ತಿರುವುದು ಸ್ಥಳೀಯರ ಆಸಕ್ತಿಯನ್ನು ಕುಗ್ಗಿಸಿದಂತೆ ಕಾಣುತ್ತಿದೆ. ಕಾಂಗ್ರೆಸ್‌ ಮತ್ತು ಬಿಜೆಪಿಯ ಇಬ್ಬರು ಹೊರಗಿನವರಲ್ಲಿ ತಮ್ಮ ಹಿತ ಕಾಯುವವರ ಆಯ್ಕೆಗೆ ಮತದಾರರ ಲೆಕ್ಕಾಚಾರ ಹಾಕುತ್ತಿದ್ದಾನೆ.

ಬಿಜೆಪಿ–ಜೆಡಿಎಸ್‌ ಮೈತ್ರಿಯಾಗಿರುವುದು ಎನ್‌ಡಿಎ ಅಭ್ಯರ್ಥಿ ಗೋವಿಂದ ಕಾರಜೋಳ ಅವರ ಉಮೇದು ಹೆಚ್ಚಿಸಿದೆ. ಮೊದಲ ಬಾರಿಗೆ ಲೋಕಸಭೆಗೆ ಸ್ಪರ್ಧಿಸಿರುವ ಕಾರಜೋಳ ಅವರು ಪ್ರಧಾನಿ ನರೇಂದ್ರ ಮೋದಿ ಪ್ರಭಾವನ್ನು ಅಚಲವಾಗಿ ನಂಬಿಕೊಂಡಿದ್ದಾರೆ. ಅಭ್ಯರ್ಥಿ ಬೆನ್ನಿಗೆ ಕಮಲ ಪಡೆ ಇದೆಯಾದರೂ ಮೂರು ಕ್ಷೇತ್ರಗಳಲ್ಲಿ ‘ತೆನೆಹೊತ್ತ ಮಹಿಳೆ’ಯ ಮೇಲಿನ ಅವಲಂಬನೆ ಅನಿವಾರ್ಯ. ಜೆಡಿಎಸ್‌–ಬಿಜೆಪಿ ನಾಯಕರಲ್ಲಿ ಹೊಂದಾಣಿಕೆ ಸಮಸ್ಯೆ ಇಣುಕಿದೆ. ಟಿಕೆಟ್‌ ಕೈತಪ್ಪಿದ್ದರಿಂದ ಅಸಮಾಧಾನಗೊಂಡವರ ಒಳ ಏಟಿನ ಭೀತಿಯೂ ಕಾಡುತ್ತಿದೆ.

ಕ್ಷೇತ್ರಕ್ಕೆ ನಡೆದ 17 ಚುನಾವಣೆಗಳಲ್ಲಿ 11 ಬಾರಿ ಗೆದ್ದಿರುವ ಕಾಂಗ್ರೆಸ್‌ ಆತ್ಮವಿಶ್ವಾಸ್ವದಲ್ಲಿದೆ. ಭದ್ರಕೋಟೆಯನ್ನು ಕೈವಶ ಮಾಡಿಕೊಳ್ಳುವ ಅಭ್ಯರ್ಥಿಯ ಉತ್ಸಾಹಕ್ಕೆ ಏಳು ಶಾಸಕರು ಜೊತೆಯಾಗಿದ್ದಾರೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಮತ ತಂದುಕೊಡುವ ಭರವಸೆ ಪಕ್ಷಕ್ಕಿದೆ. ಕಾರಜೋಳ ಮತ್ತು ಚಂದ್ರಪ್ಪ ಇಬ್ಬರೂ ದಲಿತ ಎಡಗೈ ಸಮುದಾಯಕ್ಕೆ ಸೇರಿದವರು. ಕ್ಷೇತ್ರ ವ್ಯಾಪ್ತಿಯಲ್ಲಿ ನಿರ್ಣಾಯಕ ಸ್ಥಿತಿಯಲ್ಲಿರುವ ಈ ಸಮುದಾಯ ಯಾರಿಗೆ ಒಲವು ತೋರಲಿದೆ ಎಂಬ ಕುತೂಹಲ ಮೂಡಿದೆ.

ಗೋವಿಂದ ಕಾರಜೋಳ
ಗೋವಿಂದ ಕಾರಜೋಳ
ಭದ್ರಾ ಮೇಲ್ದಂಡೆ ಯೋಜನೆ
ಭದ್ರಾ ಮೇಲ್ದಂಡೆ ಯೋಜನೆ
ಕ್ಷೇತ್ರದಲ್ಲಿ ಮೋದಿ ಅಲೆ ಪ್ರಭಾವ ಕಾಣುತ್ತಿಲ್ಲ. ಸುಳ್ಳು ಆಶ್ವಾಸನೆಗಳನ್ನು ನೀಡಿ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದ್ದು ಜನರಿಗೆ ಅರ್ಥವಾಗಿದೆ.
ಬಿ.ಎನ್‌.ಚಂದ್ರಪ್ಪ ಕಾಂಗ್ರೆಸ್‌ ಅಭ್ಯರ್ಥಿ
ಭದ್ರಾ ಮೇಲ್ದಂಡೆ ಅನುದಾನಕ್ಕೆ ರಾಜ್ಯ ಸರ್ಕಾರ ಸೂಕ್ತ ದಾಖಲೆಗಳನ್ನು ಒದಗಿಸುತ್ತಿಲ್ಲ. ಕೇಂದ್ರ ಸರ್ಕಾರವನ್ನು ಟೀಕಿಸಿ ಕಾಲ ಕಳೆಯುತ್ತಿದೆ.
ಗೋವಿಂದ ಕಾರಜೋಳ ಬಿಜೆಪಿ ಅಭ್ಯರ್ಥಿ

* ಕಳೆದ ಚುನಾವಣೆಯ ಮತದಾನದ ಪ್ರಮಾಣ – ಶೇ 70.71 * 1856876 – ಒಟ್ಟು ಮತದಾರರ ಸಂಖ್ಯೆ 925543 – ಪುರುಷರು 931229 – ಮಹಿಳೆಯರು 104– ಇತರರು

ಬಿ.ಎನ್‌.ಚಂದ್ರಪ್ಪ (ಕಾಂಗ್ರೆಸ್‌) * ಮಾಜಿ ಸಂಸದರಾಗಿರುವ ಇವರು ಕ್ಷೇತ್ರದ ಮತದಾರರಿಗೆ ಪರಿಚಿತರು * ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 7ರಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ * ಪ್ರಚಾರದಲ್ಲಿ ಕಾಣಿಸಿಕೊಳ್ಳದ ರಾಷ್ಟ್ರೀಯ ನಾಯಕರು * ಮಾದಿಗ ಸಮುದಾಯಕ್ಕೆ ಸೇರಿದವರಲ್ಲ ಎಂಬ ವದಂತಿ ಗೋವಿಂದ ಕಾರಜೋಳ (ಬಿಜೆಪಿ) * ಬಿಜೆಪಿ–ಜೆಡಿಎಸ್‌ ಮೈತ್ರಿಯಿಂದ ಮತ ಒಗ್ಗೂಡುವ ವಿಶ್ವಾಸ * ಉಪಮುಖ್ಯಮಂತ್ರಿ ರಾಜ್ಯ ಸಚಿವ ಸಂಪುದಲ್ಲಿ ಹಲವು ಖಾತೆ ನಿಭಾಯಿಸಿದ ಅನುಭವ * ಬಾಗಲಕೋಟೆ ಜಿಲ್ಲೆಯ ಮಧೋಳದ ಇವರು ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಹೊಸಬರು * ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ₹ 5300 ಕೋಟಿ ಅನುದಾನ ಬಿಡುಗಡೆ ಮಾಡದಿರುವುದು

* ಕ್ಷೇತ್ರವನ್ನು ಕಾಡುವ ವಿಷಯಗಳು * ಬಯಲುಸೀಮೆಗೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶ ಹೊಂದಿದ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ನಿರೀಕ್ಷಿತ ಪ್ರಗತಿ ಕಂಡಿಲ್ಲ * ತುಮಕೂರು–ಚಿತ್ರದುರ್ಗ–ದಾವಣಗೆರೆ ನೇರ ರೈಲು ಮಾರ್ಗ ನನೆಗುದಿಗೆ * ಕೈಗಾರಿಕೆಗಳ ಕೊರತೆಯಿಂದ ಉದ್ಯೋಗ ಅರಸಿ ವಲಸೆ ಹೋಗುವ ಜನ * ಈರುಳ್ಳಿ ಟೊಮೆಟೊ ರೇಷ್ಮೆ ಸೇರಿ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಕೊರತೆ * ಪ್ರವಾಸಿತಾಣಗಳ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮ ಉತ್ತೇಜನಕ್ಕೆ ಸೂಕ್ತ ಯೋಜನೆಗಳಿಲ್ಲ

* ಶಾಸಕರ ಬಲಾಬಲ ಕಾಂಗ್ರೆಸ್‌ – 7 ಬಿಜೆಪಿ – 1 * ವಿಧಾನಸಭಾ ಕ್ಷೇತ್ರಗಳು ಚಿತ್ರದುರ್ಗ ಚಳ್ಳಕೆರೆ ಮೊಳಕಾಲ್ಮುರು ಹೊಳಲ್ಕೆರೆ ಹೊಸದುರ್ಗ ಹಿರಿಯೂರು ಶಿರಾ ಪಾವಗಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT