ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾಯಕನಹಟ್ಟಿ | 'ಸಚಿವ ಸ್ಥಾನದಿಂದ ನಾಗೇಂದ್ರ ವಜಾಕ್ಕೆ ಆಗ್ರಹ'

ಪರಿಶಿಷ್ಟ ಪಂಗಡ ಸಮುದಾಯಕ್ಕೆ ಸರ್ಕಾರದಿಂದ ನಿರಂತರ ವಂಚನೆ
Published 30 ಮೇ 2024, 16:04 IST
Last Updated 30 ಮೇ 2024, 16:04 IST
ಅಕ್ಷರ ಗಾತ್ರ

ನಾಯಕನಹಟ್ಟಿ: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ₹ 187.33 ಕೋಟಿ ಅವ್ಯವಹಾರದ ಹೊಣೆ ಹೊತ್ತು ಸಚಿವ ಬಿ.ನಾಗೇಂದ್ರ ಅವರ ರಾಜಿನಾಮೆ ಪಡೆಯದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಬಿಜೆಪಿ ಎಸ್.ಟಿ.ಮೋರ್ಚಾದ  ಜಿಲ್ಲಾ ಘಟಕದ ಅಧ್ಯಕ್ಷ ಪಿ.ಶಿವಣ್ಣ ಎಚ್ಚರಿಸಿದರು.

ನಾಯಕನಹಟ್ಟಿ ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ರಾಜ್ಯದ ಪರಿಶಿಷ್ಟ ಪಂಗಡ ಸಮುದಾಯಕ್ಕೆ ವಂಚಿಸಿಕೊಂಡು ಬಂದಿದ್ದಾರೆ. ಅಧಿಕಾರಕ್ಕೆ ಬಂದ ನಾಲ್ಕೇ ತಿಂಗಳಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕಾಗಿ ಮೀಸಲಿಟ್ಟಿದ ₹ 11,143 ಕೋಟಿ ಹಣವನ್ನು ನಿಗಮಗಳಿಂದ ವಾಪಸ್‌ ಪಡೆದು ಅನ್ಯ ಕಾರ್ಯಗಳಿಗೆ ಬಳಸಿದ್ದಾರೆ. ಇದರಿಂದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕೆ ಕುತ್ತು ಬಂದಿದೆ. ಹಾಗೇ ವಸತಿನಿಲಯಗಳ ನಿರ್ವಹಣೆಗೆ ಅನುದಾನ ಬಂದಿಲ್ಲ. ಬೀದಿ ಬದಿ ವ್ಯಾಪಾರಿಗಳು, ಕುಶಲಕರ್ಮಿಗಳಿಗೆ ನೇರ ಸಾಲ ಸೌಲಭ್ಯ ದೊರತೆಯುತ್ತಿಲ್ಲ. ನಿರುದ್ಯೋಗಿ ಯುವಕರು ಸ್ವಯಂ ಉದ್ಯೋಗ ಕೈಗೊಳ್ಳಲು ವಾಹನ ಸಾಲ, ಐರಾವತ ಯೋಜನೆಯ ಕಾರುಗಳು, ಗಂಗಾಕಲ್ಯಾಣ ಯೋಜನೆ ಸೇರಿ ಹತ್ತು ಹಲವು ಕಾರ್ಯಕ್ರಮಗಳು ಸ್ಥಗಿತವಾಗಿವೆ. ಪರಿಣಾಮವಾಗಿ ಸಮುದಾಯದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಆರೋಪಿಸಿದರು.

ಈ ಎಲ್ಲ ಸಮಸ್ಯೆಗಳ ಮಧ್ಯೆ ಇತ್ತೀಚಿಗೆ ನಿಗಮದಲ್ಲಿದ್ದ ₹ 187.33 ಕೋಟಿ ಹಣ ಅಕ್ರಮವಾಗಿ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿದೆ. ಇದೇ ವಿಷಯಕ್ಕೆ ನಿಗಮದ ಅಧಿಕಾರಿ ಪಿ.ಚಂದ್ರಶೇಖರ್ ಅವರು ಅವ್ಯಹವಾರದ ಕುರಿತು ಡೆತ್‌ನೋಟು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವ್ಯವಹಾರ ನಡೆದಿರುವುದನ್ನು ಸಚಿವ ನಾಗೇಂದ್ರ ಅವರೂ ಒಪ್ಪಿಕೊಂಡಿದ್ದಾರೆ. ಈ ಸಂಬಂಧ ತನಿಖೆ ನಡೆಯುತ್ತಿದ್ದು, ಘಟನೆಯ ಸತ್ಯಾಸತ್ಯತೆ ಹೊರ ಬರುವವರೆಗೂ ಬಿ. ನಾಂಗೇದ್ರ ಅವರನ್ನು ಸಚಿವ ಸ್ಥಾನದಲ್ಲಿ ಮುಂದುವರಿಸಬಾರದು. ತಕ್ಷಣವೇ ಅವರ ರಾಜೀನಾಮೆ ಪಡೆದು ಪಾರದರ್ಶಕವಾಗಿ ತನಿಖೆ ನಡೆಯಲು ಅನುವು ಮಾಡಿಕೊಡಬೇಕು. ಇಲ್ಲದಿದ್ದರೆ ಅವರ ರಾಜೀನಾಮೆ ಪಡೆಯುವವರೆಗೂ ಜಿಲ್ಲೆಯಾದ್ಯಂತ ಎಸ್.ಟಿ.ಮೋರ್ಚಾದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT