ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರದುರ್ಗ ಲೋಕಸಭಾ ಚುನಾವಣೆ: ‘ಕೈ’ ಕೋಟೆ ಭದ್ರಪಡಿಸಿಕೊಂಡ ಕಾಂಗ್ರೆಸ್‌

ಐದು ಕ್ಷೇತ್ರದಲ್ಲಿ ಕಾಂಗ್ರೆಸ್‌, ಒಂದರಲ್ಲಿ ಬಿಜೆಪಿ ಗೆಲುವು
Published 5 ಜೂನ್ 2024, 6:58 IST
Last Updated 5 ಜೂನ್ 2024, 6:58 IST
ಅಕ್ಷರ ಗಾತ್ರ

ಚಿತ್ರದುರ್ಗ: ಐದು ವರ್ಷಗಳ ಹಿಂದೆ ಛಿದ್ರಗೊಂಡಿದ್ದ ‘ಕೈ’ ಕೋಟೆಯ ಕಲ್ಲುಗಳನ್ನು ಕಾಂಗ್ರೆಸ್‌ ಒಂದೊಂದಾಗಿ ಜೋಡಿಸಿ ಭದ್ರಪಡಿಸಿಕೊಂಡಿದೆ. ನಿರೀಕ್ಷೆ ಮೀರಿ ಅರಳಿದ ‘ಕಮಲ’ವನ್ನು ಆಳವಾಗಿ ಬೇರೂರಿಸುವ ಉಮೇದಿನಲ್ಲಿದ್ದ ಬಿಜೆಪಿ, ಆಡಳಿತ ವಿರೋಧಿ ಅಲೆಯಲ್ಲಿ ದಳ ಉದುರಿಸಿಕೊಂಡು ಪೇಲವವಾಗಿ ಕಾಣುತ್ತಿದೆ.

ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದೆ. ಒಂದರಲ್ಲಿ ಸ್ಥಾನ ಉಳಿಸಿಕೊಳ್ಳಲಷ್ಟೇ ಬಿಜೆಪಿ ಶಕ್ತವಾಗಿದೆ. ಜನತಾ ಪರಿವಾರದ ಪ್ರಭಾವವನ್ನು ಬಳಸಿಕೊಂಡು ಗೆಲುವಿನ ಲೆಕ್ಕಾಚಾರ ಹಾಕಿದ್ದ ಜೆಡಿಎಸ್‌ಗೆ ಅತೀವ ನಿರಾಸೆಯಾಗಿದೆ. ಖಾತೆ ತೆರೆಯುವ ಹಂಬಲದಲ್ಲಿ ಶಕ್ತಿ ಮೀರಿ ಶ್ರಮಿಸಿದ್ದ ಆಮ್‌ ಆದ್ಮಿ ಪಾರ್ಟಿ, ಸಮಾಜವಾದಿ ಪಕ್ಷಗಳಿಗೆ ಮುಖಭಂಗವಾಗಿದೆ.

ಪಕ್ಷ ಹಾಗೂ ವೈಯಕ್ತಿಕ ವರ್ಚಸ್ಸಿಗೆ ಸಿಗುವ ಮನ್ನಣೆಯಿಂದಾಗಿ ಸಾಂಪ್ರದಾಯಿಕ ಎದುರಾಳಿಗಳೇ ಮುಖಾಮುಖಿ ಆಗಿದ್ದರು. ವಯೋಮಿತಿ ನಿರ್ಬಂಧವನ್ನು ಮೀರಿ 75 ವರ್ಷದ ಇಬ್ಬರು ಅಭ್ಯರ್ಥಿಗಳನ್ನು ಬಿಜೆಪಿ ಅಖಾಡಕ್ಕೆ ಇಳಿಸಿದರೂ ಯಶಸ್ಸು ಗಳಿಸಲು ಸಾಧ್ಯವಾಗಿಲ್ಲ. 2018ರಲ್ಲಿ ಐದರಲ್ಲಿ ಬಿಜೆಪಿ ಹಾಗೂ ಒಂದರಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿತ್ತು. ಈ ಫಲಿತಾಂಶ ಪ್ರಸಕ್ತ ಚುನಾವಣೆಯಲ್ಲಿ ಸಂಪೂರ್ಣ ಉಲ್ಟಾ ಆಗಿದೆ. ಕಾಂಗ್ರೆಸ್‌ಗೆ ಹಲವು ವರ್ಷಗಳ ಬಳಿಕ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.

ಪಕ್ಷ ಸಂಘಟನೆಯಲ್ಲಿ ಸಬಲಗೊಂಡಿದ್ದ ಬಿಜೆಪಿ ಕಾರ್ಯಕರ್ತರ ಪಡೆಯನ್ನು ಕಟ್ಟಿಕೊಂಡು ಚುನಾವಣೆ ಎದುರಿಸಲು ಸಕಲ ರೀತಿಯಲ್ಲಿ ಸಜ್ಜಾಗಿತ್ತು. ಆರು ತಿಂಗಳ ಹಿಂದಿನಿಂದಲೂ ಚುನಾವಣೆಯ ಸಿದ್ಧತೆ ಮಾಡಿಕೊಂಡು ಆರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಹುಮ್ಮಸ್ಸಿನಲ್ಲಿತ್ತು. ಚುನಾವಣೆ ಘೋಷಣೆಯಾಗುತ್ತಿದ್ದಂತೆ ಉತ್ತರ ಭಾರತದ ಹಲವು ರಾಜ್ಯಗಳಿಂದ ಬಿಜೆಪಿ ಕಾರ್ಯಕರ್ತರ ದಂಡು ಜಿಲ್ಲೆಗೆ ಲಗ್ಗೆ ಇಟ್ಟಿತ್ತು. ಕೇಂದ್ರ ಸಚಿವರು, ಗುಜರಾತ್‌ ಸಚಿವರು ಕೂಡ ಇಲ್ಲಿಯೇ ಬೀಡುಬಿಟ್ಟಿದ್ದರು. ಬಿಜೆಪಿಯ ಕಾರ್ಯತಂತ್ರಗಳು ಕೊನೆಗೂ ಕೈಹಿಡಿಯಲಿಲ್ಲ.

ಬಿಜೆಪಿಯ ಪ್ರಭಾವಿ ನಾಯಕರು ಜಿಲ್ಲೆಗೆ ಧಾವಿಸಿ ಪ್ರಚಾರ ನಡೆಸಿದ್ದರು. ಕೇಂದ್ರ ಸಚಿವೆ ಸ್ಮೃತಿ ಇರಾನಿ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ, ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿ ಅನೇಕರು ಜಿಲ್ಲೆಯ ಹಲವು ಕ್ಷೇತ್ರಗಳಲ್ಲಿ ಮತಯಾಚನೆ ಮಾಡಿದ್ದರು. ಈ ಪ್ರಯತ್ನ ಕೂಡ ಮತದಾರರನ್ನು ಸೆಳೆಯುವಲ್ಲಿ ಸಫಲವಾಗಲಿಲ್ಲ. ಆಡಳಿತ ವಿರೋಧಿ ಅಲೆಯಲ್ಲಿ ಕಮಲ ಕೊಚ್ಚಿ ಹೋಗಿದೆ.

ಕಾಂಗ್ರೆಸ್‌ಗೆ ಸಾಂಪ್ರದಾಯಿಕ ಮತ ಬುಟ್ಟಿ ಜಿಲ್ಲೆಯಲ್ಲಿ ದೊಡ್ಡದಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದ ಮತದಾರರೇ ಜಿಲ್ಲೆಯಲ್ಲಿ ಹೆಚ್ಚಾಗಿದ್ದಾರೆ. ಮೀಸಲಾತಿಯ ಮರು ಹಂಚಿಕೆ ಮಾಡಿದ್ದ ಬಿಜೆಪಿಗೆ ಲಾಭ ತಂದುಕೊಡಬಹುದು ಎಂಬ ನಿರೀಕ್ಷೆ ಇತ್ತು. ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿಯ ಮತಗಳು ಕೈಹಿಡಿಯುವ ಅತೀವ ಭರವಸೆ ಹೊಂದಿತ್ತು. ಇದು ಸಂಪೂರ್ಣ ಹುಸಿಯಾಗಿದೆ.

Quote - ಕಾಂಗ್ರೆಸ್‌ ಐತಿಹಾಸಿಕ ಗೆಲುವು ಸಾಧಿಸಿದೆ. ಬಿಜೆಪಿ ದುರಾಡಳಿತಕ್ಕೆ ಜನ ತಕ್ಕ ಪಾಠ ಕಲಿಸಿದ್ದಾರೆ. ಬೆಲೆ ಏರಿಕೆ ಕೋಮುವಾದದ ವಿರುದ್ಧ ತೀರ್ಪು ನೀಡಿದ್ದಾರೆ‌. ಬಿ.ಎನ್‌.ಚಂದ್ರಪ್ಪ ಕೆಪಿಸಿಸಿ ಕಾರ್ಯಾಧ್ಯಕ್ಷ

ಮೋಡಿ ಮಾಡದ ಮೋದಿ ರ‍್ಯಾಲಿ

ಪ್ರಧಾನಿ ನರೇಂದ್ರ ಮೋದಿ ಅವರು ಚಿತ್ರದುರ್ಗದಲ್ಲಿ ನಡೆಸಿದ ಚುನಾವಣಾ ಪ್ರಚಾರ ರ‍್ಯಾಲಿ ಮೋಡಿ ಮಾಡಿದಂತೆ ಕಾಣುತ್ತಿಲ್ಲ. ಆರು ಕ್ಷೇತ್ರಗಳನ್ನು ಗೆಲ್ಲುವ ಉತ್ಸಾಹದಲ್ಲಿದ್ದ ಬಿಜೆಪಿ ಒಂದು ಕ್ಷೇತ್ರವನ್ನು ಉಳಿಸಿಕೊಳ್ಳಲು ಹರಸಾಹಸಪಟ್ಟಿದೆ.

ರಾಜ್ಯದಲ್ಲಿ ಎರಡನೇ ಹಂತದ ಚುನಾವಣಾ ಪ್ರಚಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಚಿತ್ರದುರ್ಗದಿಂದ ಆರಂಭಿಸಿದ್ದರು.

ಡಬಲ್‌ ಎಂಜಿನ್‌ ಸರ್ಕಾರದ ಕೊಡುಗೆ ಸಾಧನೆಯನ್ನು ಬಿಚ್ಚಿಟ್ಟಿ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದ್ದರು. ಮತ್ತೊಮ್ಮೆ ಅವಕಾಶ ನೀಡುವಂತೆಯೂ ಕೋರಿಕೊಂಡಿದ್ದರು. ಪ್ರಧಾನಿ ಮೋದಿ ಅವರ ಮಾತಿಗೆ ಮತದಾರರು ಮಣೆ ಹಾಕಿಲ್ಲ.

‘ಜೋಡೊ’ ಸಾಗಿದೆಡೆ ‘ಕೈ’ಗೆ ಗೆಲುವು

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದ ‘ಭಾರತ್‌ ಜೋಡೊ’ ಯಾತ್ರೆ ಜಿಲ್ಲೆಯಲ್ಲಿ ಸಾಗಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭೂತಪೂರ್ವ ಗೆಲುವು ಸಾಧಿಸಿದೆ. ತುಮಕೂರು ಜಿಲ್ಲೆಯ ಹುಳಿಯಾರು ಮೂಲಕ ಚಿತ್ರದುರ್ಗ ಜಿಲ್ಲೆಗೆ ಪ್ರವೇಶ ಪಡೆದಿದ್ದ ‘ಜೋಡೊ’ ಯಾತ್ರೆ ಜಿಲ್ಲೆಯಲ್ಲಿ ಐದು ದಿನ ಸಾಗಿತ್ತು.

ಹಿರಿಯೂರು ಚಳ್ಳಕೆರೆ ಹಾಗೂ ಮೊಳಕಾಲ್ಮುರು ಕ್ಷೇತ್ರ ವ್ಯಾಪ್ತಿಯಲ್ಲಿ ಯಾತ್ರೆ ಹಾದು ಹೋಗಿತ್ತು. ಚಳ್ಳಕೆರೆಯಲ್ಲಿ ಮಾತ್ರ ಕಾಂಗ್ರೆಸ್‌ ಶಾಸಕರಿದ್ದರು. ಮೊಳಕಾಲ್ಮುರು ಹಾಗೂ ಹಿರಿಯೂರಿನಲ್ಲಿಯೂ ಈಗ ಕಾಂಗ್ರೆಸ್‌ ಅಭ್ಯರ್ಥಿಯನ್ನು ಮತದಾರ ಕೈಹಿಡಿದಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT