ಸೋಮವಾರ, 8 ಡಿಸೆಂಬರ್ 2025
×
ADVERTISEMENT
ADVERTISEMENT

ಚಿತ್ರದುರ್ಗ| ಮಾರಕ ಪ್ಲಾಸ್ಟಿಕ್‌ಗೆ ಬೀಳದ ಕಡಿವಾಣ: ಎಗ್ಗಿಲ್ಲದೆ ಬಳಕೆ

Published : 8 ಡಿಸೆಂಬರ್ 2025, 6:11 IST
Last Updated : 8 ಡಿಸೆಂಬರ್ 2025, 6:11 IST
ಫಾಲೋ ಮಾಡಿ
Comments
ನಾಯಕನಹಟ್ಟಿ ಪಟ್ಟಣದಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ತಿನ್ನುತ್ತಿರುವ ಬಿಡಾಡಿ ದನಗಳು
ನಾಯಕನಹಟ್ಟಿ ಪಟ್ಟಣದಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ತಿನ್ನುತ್ತಿರುವ ಬಿಡಾಡಿ ದನಗಳು
ಎಸ್‌.ಲಕ್ಷ್ಮಿ 
ಎಸ್‌.ಲಕ್ಷ್ಮಿ 
ರಾಜೇಂದ್ರ ಚಕ್ರವರ್ತಿ
ರಾಜೇಂದ್ರ ಚಕ್ರವರ್ತಿ
ಹೊಳಲ್ಕೆರೆ ಪಟ್ಟಣದ ಶಿವನಕೆರೆಯಲ್ಲಿ ತುಂಬಿರುವ ಪ್ಲಾಸ್ಟಿಕ್ ತ್ಯಾಜ್ಯ
ಹೊಳಲ್ಕೆರೆ ಪಟ್ಟಣದ ಶಿವನಕೆರೆಯಲ್ಲಿ ತುಂಬಿರುವ ಪ್ಲಾಸ್ಟಿಕ್ ತ್ಯಾಜ್ಯ
ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಾಕಷ್ಟು ಜಾಗೃತಿ ಮೂಡಿಸಲಾಗಿದೆ. ದಾಸ್ತಾನು ಮಳಿಗೆಗಳ ಮೇಲೆ ದಾಳಿ ನಡೆಸಿ ವಶಕ್ಕೆ ಪಡೆಯುವ ಕೆಲಸ ನಿರಂತರವಾಗಿದೆ. ದಂಡ ಪ್ರಮಾಣ ಹೆಚ್ಚಿಸಲಾಗುತ್ತದೆ
ಎಸ್‌.ಲಕ್ಷ್ಮಿ ಪೌರಾಯುಕ್ತೆ ಚಿತ್ರದುರ್ಗ
ಜಿಲ್ಲೆಯಲ್ಲಿ ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಬೀಳುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ವ್ಯಾಪಾರಸ್ಥರಿಗೆ ಮಾಹಿತಿ ನೀಡಿ ದಾಳಿ ನಡೆಸುವುದು ಮಾಮೂಲಿಯಾಗಿದೆ. ಈ ವಿಚಾರದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.
ರಾಜೇಂದ್ರ ಚಕ್ರವರ್ತಿ ಸಮಾಜಸೇವಕ
ದಾಳಿಗೆ ಜಗ್ಗದ ವ್ಯಾಪಾರಸ್ಥರು
ಚಿತ್ರದುರ್ಗ ನಗರಸಭೆ ಅಧಿಕಾರಿಗಳ ತಂಡ ನಡೆಸುವ ದಾಳಿಗೆ ವ್ಯಾಪಾರಸ್ಥರು ಜಗ್ಗುತ್ತಿಲ್ಲ. 2024ರ ಜನವರಿಯಿಂದ 2025 ರ ಅವಧಿಯಲ್ಲಿ ₹131300 ದಂಡ ವಿಧಿಸಿದ್ದರೂ ಇವುಗಳ ಬಳಕೆ ನಿಂತಿಲ್ಲ.  ‘ನೀವು ನಮ್ಮಂತಹ ಸಣ್ಣಪುಟ್ಟ ವ್ಯಾಪಾರಸ್ಥರ ಮೇಲೆ ದಾಳಿ ನಡೆಸುವುದಲ್ಲ. ನಿಮಗೆ ಧೈರ್ಯವಿದ್ದರೆ ಮೊದಲು ಪ್ಲಾಸ್ಪಿಕ್‌ ಕಾರ್ಖಾನೆಗಳನ್ನು ಬಂದ್‌ ಮಾಡಿಸಿ’ ಎಂದು ವ್ಯಾಪಾರಿಗಳು ಹೇಳುತ್ತಾರೆ ಎಂದು ನಗರಸಭೆ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.  ‘ದಾಳಿ ನಡೆಸಿ ದಂಡ ಹಾಕುವಾಗ ಅಧಿಕಾರಿಗಳು ಜನಪ್ರತಿನಿಧಿಗಳಿಂದ ಒತ್ತಡ ಬರುವುದು ಮಾಮೂಲಿಯಾಗಿದೆ. ಜತೆಗೆ ಅಂಗಡಿಗಳು ಪ್ಲಾಸ್ಟಿಕ್‌ ಬೇಕಿದ್ದರೆ ತೆಗೆದುಕೊಂಡು ಹೋಗಿ ಆದರೆ ದಂಡ ಮಾತ್ರ ಕಟ್ಟುವುದಿಲ್ಲ ಎಂದು ನೇರವಾಗಿ ಹೇಳುತ್ತಾರೆ’ ಎನ್ನುತ್ತಾರೆ ಸಿಬ್ಬಂದಿ.
ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್‌
ಮರುಬಳಕೆಯಾಗದ ಪ್ಲಾಸ್ಟಿಕ್‌ನಿಂದ ಪರಿಸರಕ್ಕೆ ಹಾನಿಯುಂಟಾಗುತ್ತಿದೆ. ದೇಶದಲ್ಲಿ ಅಂದಾಜಿನ ಪ್ರಕಾರ ನಿತ್ಯ 25000 ಟನ್‌ಗಳಷ್ಟು ಪ್ಲಾಸ್ಟಿಕ್‌ ತ್ಯಾಜ್ಯ ಉತ್ಪಾದನೆ ಆಗುತ್ತಿದೆ. ಇದರಲ್ಲಿ ಅರ್ಧದಷ್ಟು ತ್ಯಾಜ್ಯವನ್ನು ಸಂಗ್ರಹಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಎಲ್ಲೆಂದರಲ್ಲಿ ‍ಪ್ಲಾಸ್ಟಿಕ್‌ ತ್ಯಾಜ್ಯ ಕಣ್ಣಿಗೆ ರಾಚುತ್ತಿದೆ. ನಗರ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ದಿನ ಕಳೆದಂತೆ ಪ್ಲಾಸ್ಟಿಕ್‌ ತ್ಯಾಜ್ಯ ಹೆಚ್ಚಾಗುತ್ತಿದೆ. ಏಕ ಬಳಕೆ ಪ್ಲಾಸ್ಟಿಕ್‌ ಪರಿಸರವನ್ನು ನಿತ್ಯ ಹಾಳು ಮಾಡುತ್ತಿದೆ. ಬಳಸಿ ಬಿಸಾಡುವ ಬಾಟಲಿ ಹಾಗೂ ಇತರೆ ವಸ್ತುಗಳು ನೀರಿಗೆ ಸೇರಿ ಜಲಚರಗಳನ್ನು ಸರ್ವನಾಶ ಮಾಡುತ್ತಿದೆ. ಜಾನುವಾರುಗಳ ದೇಹ ಸೇರಿ ಪಚನ ಕ್ರಿಯೆಗೆ ಅಡ್ಡಿಯುಂಟು ಮಾಡುತ್ತಿದೆ. ಪರೋಕ್ಷವಾಗಿ ಮಾನವ ದೇಹ ಸೇರಿ ಅನೇಕ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ ಎಂದು ತಜ್ಞರು ಹೇಳಿದ್ದಾರೆ.
ಆದೇಶಕ್ಕಿಲ್ಲ ಕವಡೆ ಕಾಸಿನ ಕಿಮ್ಮತ್ತು
ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಅಂಗಡಿಗಳಲ್ಲೂ ಪ್ಲಾಸ್ಟಿಕ್‌ ಲೋಟ ಬ್ಯಾಗ್ ಊಟದ ತಟ್ಟೆ ಕವರ್‌ ಸೇರಿ ಇತರೆ ವಸ್ತುಗಳ ಬಳಕೆ ಮತ್ತು ಮಾರಾಟ ರಾಜಾರೋಷವಾಗಿ ನಡೆಯುತ್ತಿದೆ. ಸರ್ಕಾರದ ಆದೇಶದಂತೆ 100 ಮೈಕ್ರಾನ್‌ಗಿಂತ ತೆಳುವಾದ ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್ ಭಿತ್ತಿಪತ್ರ ತೋರಣ ಫ್ಲೆಕ್ಸ್‌ ತಟ್ಟೆ ಚಮಚ ಊಟದ ಟೇಬಲ್‌ ಮೇಲೆ ಹರಡುವ ಪ್ಲಾಸ್ಟಿಕ್ ಹಾಳೆ ಥರ್ಮಾಕೋಲ್‍ನಿಂದ ತಯಾರಾದ ವಸ್ತುಗಳ ಬಳಕೆ ನಿಷೇಧಿಸಲಾಗಿದೆ. ಆದರೆ ಸರ್ಕಾರಿ ಸಭೆ ಸೇರಿದಂತೆ ಎಲ್ಲ ಕಡೆ ಪ್ಲಾಸ್ಟಿಕ್‌ ಎಗ್ಗಿಲ್ಲದ ಬಳಕೆಯಾಗುತ್ತಿದೆ. ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಎಲ್ಲ ಗ್ರಾಮಗಳಲ್ಲೂ ಫ್ಲೆಕ್ಸ್‌ ಹಾವಳಿ ಹೆಚ್ಚಾಗಿದೆ. ಯಾವುದೇ ಹಬ್ಬ ಜನ್ಮದಿನ ಜಾತ್ರೆ ರಥೋತ್ಸವ ಬಯಲು ನಾಟಕಗಳ ಬಗ್ಗೆ ದೊಡ್ಡ ಪ್ರಮಾಣದಲ್ಲಿ ಫ್ಲೆಕ್ಸ್‌ಗಳನ್ನು ಹಾಕಿಸುವ ರೂಢಿ ಹೆಚ್ಚಾಗಿದೆ. ಅದೂ ಸಹ ಪರಿಸರಕ್ಕೆ ಮಾರಕ ಎಂಬುದು ಅಧಿಕಾರಿಗಳಿಗೆ ಅರ್ಥವಾಗುತ್ತಿಲ್ಲ. ಪಟ್ಟಣ ಪಂಚಾಯಿತಿಯಲ್ಲಿ ಫ್ಲೆಕ್ಸ್ ಅಳವಡಿಕೆಗೂ ಅನುಮತಿ ನೀಡಿ ಶುಲ್ಕ ಸಂಗ್ರಹಿಸುತ್ತಿರುವುದು ವಿಪರ್ಯಾಸದ ಸಂಗತಿ. ಹೋಟೆಲ್‍ಗಳ ಬಳಿ ಟೀ ಸ್ಟಾಲ್‍ ದಿನಸಿ ಅಂಗಡಿಗಳ ಬಳಿ ಬಸ್‍ನಿಲ್ದಾಣ ಆಟೊ ನಿಲ್ದಾಣ ಸರ್ಕಾರಿ ಕಚೇರಿ ಆಸ್ಪತ್ರೆ ಬಳಿ ಏಕಬಳಕೆಯ ಪ್ಲಾಸ್ಟಿಕ್ ಹರಡಿಕೊಂಡಿರುವುದು ಕಂಡು ಬರುತ್ತವೆ. ಪಟ್ಟಣದಲ್ಲಿರುವ ಬಿಡಾಡಿ ದನಗಳು ಹಾಗೂ ಗ್ರಾಮೀಣ ಪ್ರದೇಶದ ಜಾನುವಾರುಗಳು ಮೇವಿನೊಂದಿಗೆ ಪ್ಲಾಸ್ಟಿಕ್‌ ತಿಂದು ನಂತರ ಅಜೀರ್ಣದ ಸಮಸ್ಯೆಯಿಂದ ಬಳಲುತ್ತವೆ. ಇದು ರೈತರನ್ನು ಚಿಂತೆಗೆ ದೂಡಿದೆ. ಈ ಹಿಂದೆ ಪಟ್ಟಣ ಪಂಚಾಯಿತಿಯಿಂದ ಪ್ಲಾಸ್ಟಿಕ್‌ ಮುಕ್ತ ಪಟ್ಟಣಕ್ಕಾಗಿ ಕಾರ್ಯಾಚರಣೆ ನಡೆಸಿ ಅರಿವು ಮೂಡಿಸಲಾಗಿತ್ತು. ಆದರೂ ಪ್ಲಾಸ್ಟಿಕ್‌ ಬಳಕೆ ಮಾತ್ರ ನಿಂತಿಲ್ಲ. ಅಧಿಕಾರಿಗಳು ವರ್ಷಕ್ಕೆ ಒಮ್ಮೆಯೂ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸುತ್ತಿಲ್ಲ. ಇದರಿಂದ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ಬಹುತೇಕ ಅಂಗಡಿಗಳಲ್ಲಿ ಪ್ಲಾಸ್ಟಿಕ್‌ ಬಳಕೆ ಹೆಚ್ಚಾಗಿದೆ. ಜೊತೆಗೆ ಅಷ್ಟೇ ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಆದರೂ ಪಟ್ಟಣ ಪಂಚಾಯತಿ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ ಎಂಬುದು ನಾಗರಿಕರ ಆರೋಪ. 
ಪ್ಲಾಸ್ಟಿಕ್ ತ್ಯಾಜ್ಯದ ಗೂಡಾದ ಧರ್ಮಪುರ
ಪ್ಲಾಸ್ಟಿಕ್‌ ಹಾವಳಿಯಿಂದ ಧರ್ಮಪುರ ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಇಲ್ಲಿನ ಪ್ರಧಾನ ರಸ್ತೆಗೆ ಹೊಂದಿಕೊಂಡಿರುವ ಕೆರೆ ಕೋಡಿ ಸಂಪೂರ್ಣವಾಗಿ ಪ್ಲಾಸ್ಟಿಕ್ ತ್ಯಾಜ್ಯದಿಂದ ತುಂಬಿದ್ದು ಹಂದಿಗಳ ವಾಸಸ್ಥಾನವಾಗಿದೆ. ಇದರಿಂದ ನಾಗರಿಕರಿಗೆ ರೋಗ ಭೀತಿಯೂ ಎದುರಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಪಟ್ಟಣ ಪಂಚಾಯಿತಿ ಸ್ಥಾನಮಾನ ಹೊಂದಲು ಅಣಿಯಾಗುತ್ತಿದೆ. ಆದರೆ ಗ್ರಾಮದ ಅರಳೀಕೆರೆ ರಸ್ತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪಕ್ಕದ ಚರಂಡಿ ಪ್ರಧಾನ ರಸ್ತೆ ಪಕ್ಕದಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ತುಂಬಿದೆ.  ಗ್ರಾಮದಲ್ಲಿ ಇತ್ತೀಚೆಗೆ ತಲೆ ಎತ್ತಿರುವ ಹೋಟೆಲ್‌ ಅಂಗಡಿ ಮುಂಗಟ್ಟು ಫಾಸ್ಟ್‌ಪುಡ್ ಅಂಗಡಿಗಳು ಬೇಕರಿಗಳು ಟೀ ಸ್ಟಾಲ್‌ ಕೋಳಿ ಮತ್ತು ಮಾಂಸದ ಅಂಗಡಿಗಳಲ್ಲಿ ಪ್ಲಾಸ್ಟಿಕ್‌ ಬಳಕೆ ಸಾಮಾನ್ಯವಾಗಿದೆ. ಗ್ರಾಮದ ಪ್ರತಿ ಬೀದಿಯೂ ಪ್ಲಾಸ್ಟಿಕ್ ಮಯವಾಗಿದೆ. ಬಿಡಾಡಿ ದನಗಳು ಪ್ಲಾಸ್ಟಿಕ್ ತಿಂದು ಅನಾರೋಗ್ಯಕ್ಕೆ ಈಡಾಗುತ್ತಿವೆ. ಬಿರಿಯಾನಿ ಅಂಗಡಿಯವರು ಗ್ರಾಹಕರಿಗೆ ಪ್ಲಾಸ್ಟಿಕ್‌ ಕವರ್‌ನಲ್ಲಿ ಊಟವನ್ನು ಕಟ್ಟಿ ಕೊಡುತ್ತಾರೆ. ತಿಂದ ಬಳಿಕ ಪ್ಲಾಸ್ಟಿಕ್‌ ಕವರ್‌ ಅನ್ನು ಎಲ್ಲೆಂದರಲ್ಲಿ ಬಿಸಾಡುತ್ತಾರೆ. ಪ್ಲಾಸ್ಟಿಕ್ ಲೋಟ ಕರಗದ ಚೀಲದಿಂದ ಪರಿಸರ ಹಾಳಾಗಿದೆ. ಪ್ಲಾಸ್ಟಿಕ್‌ ಬಳಸಬಾರದೆಂಬ ನಿಯಮವಿದೆ. ಆದರೆ ಇಲ್ಲಿ ಯಾವುದೇ ನಿಯಮಗಳು ಅನ್ವಯಿಸುವುದಿಲ್ಲ ಎಂಬಂತೆ ಅಂಗಡಿಯವರು ಹೋಟೆಲ್‌ನವರು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕರು ದೂರುತ್ತಾರೆ.  ‘ಪ್ಲಾಸ್ಟಿಕ್‌ ಬಳಕೆಯಿಂದ ಆಗುವ ತೊಂದರೆ ಬಗ್ಗೆ ಈವರೆಗೂ ಅಧಿಕಾರಿಗಳು ಗ್ರಾಮ ಪಂಚಾಯಿತಿಯವರು ಜಾಗೃತಿ ಮೂಡಿಸುವ ಯಾವುದೇ ಪ್ರಯತ್ನ ಮಾಡದಿರುವುದು ದುರಾದೃಷ್ಟವೇ ಸರಿ. ಪ್ಲಾಸ್ಟಿಕ್‌ ಬಳಕೆ ಮಾಡುವ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ಮಾಡುವುದೂ ದೂರದ ಮಾತಾಗಿದೆ’ ಎಂದೂ ನಾಗರಿಕರು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT