ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳೆಗೇರಿ ಅಭಿವೃದ್ಧಿ ಆಮೆಗತಿ

l ಜಿಲ್ಲೆಯಲ್ಲಿವೆ 65 ‘ಘೋಷಿತ ಕೊಳೆಗೇರಿ’ಗಳು l ಹಕ್ಕುಪತ್ರ ವಿತರಿಸಲು 19 ಕಡೆ ಸಮೀಕ್ಷೆ
Last Updated 6 ಡಿಸೆಂಬರ್ 2021, 5:31 IST
ಅಕ್ಷರ ಗಾತ್ರ

ಚಿತ್ರದುರ್ಗ: ನಗರವೂ ಸೇರಿ ಜಿಲ್ಲೆಯಲ್ಲಿ ಕೊಳೆಗೇರಿ ಪ್ರದೇಶಗಳ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಆದರೂ ಪರಿಣಾಮಕಾರಿಯಾಗಿ ಆಗುತ್ತಿಲ್ಲ. ಆಮೆಗತಿಯಲ್ಲಿ ಇರುವ ಕಾರಣ ವಸತಿ ಸೌಲಭ್ಯಕ್ಕಾಗಿ ಅನೇಕರು ಹಾತೊರೆಯುತ್ತಿದ್ದಾರೆ.

ನಾಲ್ಕು ದಶಕಗಳ ಹಿಂದೆ ಜಿಲ್ಲೆಯ ನಗರ, ಪಟ್ಟಣ ಪ್ರದೇಶಗಳಲ್ಲಿ ಕೊಳೆಗೇರಿ ನಿವಾಸಿಗಳು ವಾಸಿಸಲು ಯೋಗ್ಯವಲ್ಲದ ಸ್ಥಳಗಳಲ್ಲಿ ಗುಡಿಸಲು, ಶೆಡ್‌ ಮೊದಲಾದವುಗಳನ್ನು ಹಾಕಿಕೊಂಡು ಬದುಕು ನಡೆಸುತ್ತಿದ್ದರು. ನೀರು ಮೊದಲಾದ ಮೂಲಸೌಲಭ್ಯಗಳಿಗೆ ನಿತ್ಯ ಪರದಾಡುತ್ತಿದ್ದರು. ಆದರೆ, ಹಲವೆಡೆ ಇಂತಹ ಪರಿಸ್ಥಿತಿ ಈಗಿಲ್ಲದಿದ್ದರೂ ಸಮಸ್ಯೆಗೆ ಶಾಶ್ವತ ಪರಿಹಾರ ಇನ್ನೂ ಲಭಿಸಿಲ್ಲ.

ಸರ್ಕಾರ, ಮಂಡಳಿ, ಸ್ಥಳೀಯ ಸಂಸ್ಥೆಗಳು ಸ್ಪಂದಿಸಿರುವ ಕಾರಣ 40ಕ್ಕೂ ಹೆಚ್ಚು ಕೊಳೆಗೇರಿ ಪ್ರದೇಶಗಳಲ್ಲಿ ರಸ್ತೆ, ನೀರು, ಚರಂಡಿ, ವಿದ್ಯುತ್ ದೀಪಗಳ ಸೌಲಭ್ಯ ದೊರೆತಿದೆ. ಆದರೆ, ಉಳಿದೆಡೆ ಇರುವ ಸ್ಥಳಗಳಲ್ಲಿ ಮೂಲಸೌಕರ್ಯ ಇಲ್ಲದೆಯೇ ಕೊಳೆಗೇರಿ ಜನರ ಬದುಕು ಮತ್ತಷ್ಟು ಅಸಹನೀಯವಾಗಿದೆ.

ಸರ್ಕಾರದ ಹಲವು ಯೋಜನೆಗಳಡಿ ಈ ಹಿಂದೆ ಜಿಲ್ಲೆಯ ಕೊಳೆಗೇರಿ ನಿವಾಸಿಗಳಿಗೆ ಸೂರು ಕಲ್ಪಿಸಿಕೊಡುವ ಉದ್ದೇಶದಿಂದ ವಿವಿಧ ಸ್ಥಳಗಳಲ್ಲಿ ನೂರಾರು ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಸರ್ಕಾರದ ಹಣದ ಜತೆಗೆ ಸ್ವಂತ ಹಣ ಖರ್ಚು ಮಾಡಿ ಒಂದಿಷ್ಟು ಜನ ತಕ್ಕಮಟ್ಟಿಗೆ ಉತ್ತಮವಾಗಿ ಕಟ್ಟಿಕೊಳ್ಳಲು ಮುಂದಾದ ಪರಿಣಾಮ ಅವೆಲ್ಲವೂ ಭದ್ರವಾಗಿದೆ. ಆದರೆ, ಗುತ್ತಿಗೆ ಪಡೆದವರು ನಿರ್ಮಿಸಿರುವ ಮನೆಗಳು ಗುಣಮಟ್ಟದಿಂದ ಕೂಡಿಲ್ಲ. ನಿರ್ಮಾಣವಾದ ಐದಾರು ವರ್ಷಗಳಲ್ಲೇ ಸೋರುತ್ತಿವೆ ಎಂಬ ಆರೋಪವೂ ಇದೆ. ಸೋರುತ್ತಿರುವ ಸೂರುಗಳಲ್ಲೇ ನಿವಾಸಿಗಳು ಬದುಕುವಂತಾಗಿದೆ.

ರಾಜೀವ್‌ ಗಾಂಧಿ ಆವಾಸ್ ಯೋಜನೆಯ ಅಡಿಯಲ್ಲೂ ಈ ಹಿಂದೆ ಚಿತ್ರದುರ್ಗದ ಗಾಂಧಿ ನಗರ, ವೆಂಕಟೇಶ್ವರ ನಗರ, ರಾಜೇಂದ್ರ ನಗರ, ಜಟ್‌ಪಟ್‌ ನಗರ, ಸ್ವಾಮಿ ವಿವೇಕಾನಂದ ನಗರ, ಕಾಮನಬಾವಿ ಬಡಾವಣೆಯಲ್ಲಿ ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡಲಾಗಿದೆ. ಅದರಲ್ಲಿ ಎಲ್ಲರಿಗೂ ಮನೆ ಸಿಕ್ಕಿಲ್ಲ ಎಂಬ ಆರೋಪವೂ ಇದೆ. ಕೆಲವೆಡೆ ಅಪಾರ್ಟ್‌ಮೆಂಟ್ ಮಾದರಿಯಲ್ಲಿ ಮನೆಗಳನ್ನು ನಿರ್ಮಿಸಿಕೊಡುವುದು, ಅರ್ಹರಿಗೆ ಹಕ್ಕುಪತ್ರ ವಿತರಿಸುವ ಸಂಬಂಧ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನೀಡಿರುವ ಭರವಸೆಗಳು ಮಾತಿನಲ್ಲಷ್ಟೇ ಉಳಿದಿವೆ. ಅವರಿಗೆ ಸೌಕರ್ಯ ಒದಗಿಸುವಲ್ಲಿ ಆಡಳಿತ ವರ್ಗ ವಿಫಲವಾಗಿದೆ ಎಂಬ ಆರೋಪಗಳಿವೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ‘ಸರ್ವರಿಗೂ ಸೂರು’ ಯೋಜನೆಯಡಿ ಚಿತ್ರದುರ್ಗ ನಗರದ ಹೊಸ ಸಂತೆ ಮೈದಾನ, ಜೆ.ಜೆ. ಹಟ್ಟಿ, ಕವಾಡಿಗರ ಹಟ್ಟಿ, ಕಾಮನಬಾವಿ ಬಡಾವಣೆ, ಸಿ.ಕೆ. ಪುರ, ಛಲವಾದಿ ಕಾಲೊನಿ ಸೇರಿ ಒಟ್ಟು ಏಳು ಕಡೆಗಳಲ್ಲಿ 1,200 ಫಲಾನುಭವಿಗಳಿಗೆ ತಲಾ ₹ 7 ಲಕ್ಷ ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಿಕೊಡುವ ಕಾರ್ಯ ಪ್ರಗತಿಯಲ್ಲಿದೆ.

ಸರ್ಕಾರಿ ಜಾಗ, ಸರ್ಕಾರಿ ಗೋಮಾಳ ಹಾಗೂ ಖಾಸಗಿ ಪ್ರದೇಶಗಳಲ್ಲೂ ಕೊಳೆಗೇರಿ ನಿವಾಸಿಗಳು ವಾಸ ಮಾಡುತ್ತಿದ್ದಾರೆ. ಖಾಸಗಿ ಸ್ಥಳಗಳ ಮಾಲೀಕರು ಒಂದಿಷ್ಟು ಕಾಲವಕಾಶ ನೀಡಿ ತಮ್ಮ ಸುಪರ್ದಿಗೆ ಸ್ಥಳಗಳನ್ನು ವಾಪಸ್‌ ಪಡೆದುಕೊಂಡಿದ್ದಾರೆ. ಕೆಲ ಮಾಲೀಕರು ನ್ಯಾಯಾಲಯದ ಮೆಟ್ಟಿಲೇದ್ದಾರೆ.

ತಪ್ಪದ ಸಂಕಷ್ಟ: ಸ್ವಂತ ಮನೆ ಇಲ್ಲದೆ, ಖಾಲಿ ಜಾಗದಲ್ಲಿ ಟೆಂಟ್ ಅಥವಾ ಶೆಡ್ ಹಾಕಿಕೊಂಡಿರುವ ನೂರಾರು ಕುಟುಂಬಗಳನ್ನು ಜಿಲ್ಲೆಯಲ್ಲಿ ಕಾಣಬಹುದಾಗಿದೆ. ನಿತ್ಯವೂ ಪ್ಲಾಸ್ಟಿಕ್ ವಸ್ತುಗಳು, ಕನ್ನಡಕ, ಗುಜರಿ ವಸ್ತುಗಳನ್ನು ಸಂಗ್ರಹಿಸಿ ಮಾರಾಟ ಮಾಡಿ, ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದಾರೆ. ಮೂಲಸೌಕರ್ಯಗಳಿಲ್ಲದೆ ಪರದಾಡುತ್ತಿದ್ದಾರೆ. ಚಿಕ್ಕ ಮಕ್ಕಳು, ವೃದ್ಧರು ಹಾಗೂ ಹೆಣ್ಣುಮಕ್ಕಳು ಕೆಲ ಉಗ್ರಾಣದ ಬಳಿ ಬಿದ್ದಿರುವ ಕಾಳುಗಳನ್ನು ಆರಿಸಿಕೊಂಡು ಬಂದು, ಅದನ್ನೇ ಸ್ವಚ್ಛಗೊಳಿಸಿ, ಅಡುಗೆಗೆ ಸಿದ್ಧಪಡಿಸಿಕೊಳ್ಳುವ ದೃಶ್ಯ ಮನಕಲಕಿಸುತ್ತದೆ. ಸಂಬಂಧಿಸಿದ ಅಧಿಕಾರಿಗಳು ಇವರತ್ತ ಗಮನಹರಿಸಿಲ್ಲ ಎಂಬ ದೂರು ಕೇಳಿಬರುತ್ತಿದೆ.

‘ಸರ್ಕಾರ ಹಕ್ಕುಪತ್ರ ವಿತರಿಸುವ ಸಂಬಂಧ ಜಿಲ್ಲೆಯಲ್ಲಿ 19 ಕೊಳೆಗೇರಿ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಲು ಸೂಚನೆ ನೀಡಿದೆ. ಅದರಂತೆ ಕಾರ್ಯಪ್ರವೃತ್ತರಾಗಿದ್ದೇವೆ. ಈಗಾಗಲೇ 14 ಕಡೆ ಸರ್ವೆ ಕಾರ್ಯ ಪೂರ್ಣಗೊಂಡಿದೆ. ಐದು ಕಡೆ ಬಾಕಿ ಉಳಿದಿದ್ದು, ತ್ವರಿತವಾಗಿ ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ‘ಪ್ರಜಾವಾಣಿ’ಗೆ ಮಂಡಳಿಯ ಸಹಾಯಕ ಎಂಜಿನಿಯರ್ ವೀರೇಶ್‌ ಬಾಬು ಮಾಹಿತಿ ನೀಡಿದ್ದಾರೆ.

ವಸತಿ ಸಚಿವ ವಿ.ಸೋಮಣ್ಣ ಅವರು ಕೂಡ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಜಿಲ್ಲೆಯ ಕೊಳೆಗೇರಿ ನಿವಾಸಿಗಳಿಗೆ ಸರ್ವರಿಗೂ ಸೂರು ಯೋಜನೆಯಡಿ ಸಾವಿರಾರು ಮನೆಗಳನ್ನು ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ. ಇದು ನಿವಾಸಿಗಳಲ್ಲಿ ಒಂದಿಷ್ಟು ಆಶಾಭಾವನೆ ಮೂಡಿಸಿದೆ.

ಕೋಟ್‌...

ಜಿಲ್ಲೆಯ ಕೊಳೆಗೇರಿ ಪ್ರದೇಶಗಳ ಪೈಕಿ ಇನ್ನೂ ಅರ್ಧದಷ್ಟು ಪ್ರದೇಶಗಳು ಅಭಿವೃದ್ಧಿ ಹೊಂದಬೇಕಿದೆ. ಅಲ್ಲಿ ವಸತಿ, ಮೂಲಸೌಕರ್ಯ ಕಲ್ಪಿಸಿದರೆ, ಜೀವನ ನಿರ್ವಹಿಸಲು ನಿವಾಸಿಗಳಿಗೆ ಅನುಕೂಲವಾಗಲಿದೆ.

ಗಣೇಶ್‌, ಕರ್ನಾಟಕ ಕೊಳೆಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ಅಧ್ಯಕ್ಷ

ಹಿರೇಕೆರೆ ತುಂಬಿದ್ದು, ಮತ್ತೆ ಮಳೆ ಬಂದರೆ ನಮ್ಮ ಬಡಾವಣೆಗೆ ನೀರು ನುಗ್ಗುತ್ತದೆ. ಪುರಸಭೆಯವರು ಚರಂಡಿ ಸ್ವಚ್ಛಗೊಳಿಸಬೇಕು. ಈ ಮೂಲಕ ಇಲ್ಲಿ ವಾಸಿಸುವ ಜನರಿಗೆ ಅನುಕೂಲ ಮಾಡಿಕೊಡಬೇಕು.

ಆರ್. ಗೋಪಾಲ್, ಹೊಳಲ್ಕೆರೆ

ಅತಂತ್ರ ಸ್ಥಿತಿಯಲ್ಲಿ ಜೀವನ

ಚಿತ್ರದುರ್ಗ, ಹೊಸದುರ್ಗ, ಹಿರಿಯೂರು, ಮೊಳಕಾಲ್ಮುರು ತಾಲ್ಲೂಕುಗಳಲ್ಲೂ ಕೊಳೆಗೇರಿ ನಿವಾಸಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ನಗರ, ಪಟ್ಟಣ ಪ್ರದೇಶಗಳಲ್ಲಿ ಮನೆ, ನಿವೇಶನ ಇಲ್ಲದವರು ಅಥವಾ ವಲಸೆ ಬಂದವರು (ಅಲೆಮಾರಿಗಳು) ಹೊರವಲಯದಲ್ಲಿ, ಖಾಲಿ ಜಾಗದಲ್ಲಿ ತಾತ್ಕಾಲಿಕವಾಗಿ ಗುಡಿಸಲು, ಶೆಡ್ ಹಾಕಿಕೊಂಡಿದ್ದಾರೆ.

ವಾಸಕ್ಕೆ ಯೋಗ್ಯವಲ್ಲದ ಜಾಗವನ್ನೇ ಕೆಲವರು ಅಯ್ಕೆ ಮಾಡಿಕೊಳ್ಳುತ್ತಾರೆ. ನಂತರ ಅದು ಕೊಳೆಗೇರಿಯಾಗಿ ಬದಲಾಗುತ್ತದೆ. ಒತ್ತುವರಿಯ ಆತಂಕದಲ್ಲೇ ಬದುಕು ಸಾಗಿಸುತ್ತಿದ್ದಾರೆ. ಇದರಿಂದಾಗಿ ನಿವಾಸಿಗಳು ಅತಂತ್ರ ಸ್ಥಿತಿ ಎದುರಿಸುವಂತಾಗಿದೆ. ಇಂಥವರಿಗೆ ಸೂರು ಒದಗಿಸುವ ಧ್ಯೇಯೋದ್ದೇಶಕ್ಕಾಗಿಯೇ ರಚಿತವಾದ ಕೊಳೆಗೇರಿ ಅಭಿವೃದ್ಧಿ ಮಂಡಳಿಯಲ್ಲಿ ಕೆಲ ಯೋಜನೆಗಳಿವೆ. ಆದರೆ, ಇವು ಸಾಕಾಗುತ್ತಿಲ್ಲ ಎಂಬ ಮಾತು ಕೇಳಿಬರುತ್ತಿದೆ.

ಕೊಳೆಗೇರಿ ಪ್ರದೇಶಗಳಲ್ಲಿ ಸಮಸ್ಯೆ ಜೀವಂತ

ಶಿವಗಂಗಾ ಚಿತ್ತಯ್ಯ

ಚಳ್ಳಕೆರೆ: ನಗರ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿವೆ. ಆದರೆ, ಬಹುತೇಕ ಕೊಳೆಗೇರಿ ಪ್ರದೇಶಗಳಲ್ಲಿ ಕಾಂಕ್ರೀಟ್‌ ರಸ್ತೆಗಳು ನಿರ್ಮಾಣವಾಗಿದ್ದರೂ ಮೂಲಸೌಕರ್ಯ ಸಮಸ್ಯೆ ಇನ್ನೂ ಜೀವಂತವಾಗಿದೆ.

ಇದಕ್ಕೆ ಇಲ್ಲಿಯ ಗಾಂಧಿ ನಗರ, ಅಂಬೇಡ್ಕರ್‌ ನಗರ, ಜಗಜೀವನರಾಂ, ಜನತಾ ಕಾಲೊನಿ, ರಹಿಂ ನಗರ, ಸೂಜಿಮಲ್ಲೇಶ್ವರ ನಗರ, ಶಾಂತಿ ನಗರ, ಇಂಜನಹಟ್ಟಿ, ಮದಕರಿ ನಗರ ಇತರ ಬಡಾವಣೆಗಳಲ್ಲಿ ಇರುವ ಕೊಳೆಗೇರಿ ಪ್ರದೇಶಗಳು ಸಾಕ್ಷಿಯಾಗಿವೆ.

ಕಾಂಕ್ರೀಟ್‌ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗಳು ಕೂಡ ಗುಣಮಟ್ಟದಿಂದ ಕೂಡಿಲ್ಲ. ಇದರಿಂದಾಗಿ ಬಹುತೇಕ ಹಾಳಾಗಿವೆ. ನಿರ್ವಹಣೆ ಕೊರತೆಯ ಕಾರಣಕ್ಕೆ ಅಳವಡಿಸಿದ್ದ ಕುಡಿಯುವ ನೀರಿನ ಪೈಪ್ ಒಡೆದು ಹೋಗಿ ಸಂಪರ್ಕವೇ ಕಡಿತಗೊಂಡಿದೆ. ಹಲವೆಡೆ ನೀರಿಗಾಗಿ ಜನರು ಪರದಾಡುವಂತಾಗಿದೆ.

ಕೊಳೆಗೇರಿ ಪ್ರದೇಶಗಳಲ್ಲಿ ಎಲ್ಲೆಂದರಲ್ಲೇ ಹರಿಯುತ್ತಿರುವ ಕೊಳೆಚೆ ನೀರು, ಕಸದ ರಾಶಿ ದುರ್ವಾಸನೆ ಬೀರುತ್ತಿದೆ. ರಸ್ತೆಯಲ್ಲಿ ನಿತ್ಯ ಸಂಚರಿಸಲು ಅಸಹ್ಯ ಆಗುತ್ತಿದೆ. ಹೀಗಾಗಿ ಬೀದಿ ನಾಯಿ–ಹಂದಿಗಳ ವಾಸ ಸ್ಥಳವಾಗಿಯೂ ಮಾರ್ಪಟ್ಟಿವೆ. ಸದಾ ಕೊಚ್ಚೆಯಿಂದ ತುಂಬಿರುತ್ತವೆ. ಸೊಳ್ಳೆಗಳ ಕಾಟವೂ ಹೆಚ್ಚಾಗಿದೆ. ಇದರಿಂದಾಗಿ ಸಾಂಕ್ರಾಮಿಕ ರೋಗದ ಭೀತಿ ನಿವಾಸಿಗಳನ್ನು ಕಾಡುತ್ತಿದೆ.

ಈ ಪ್ರದೇಶಗಳಲ್ಲಿ ವಾಸಿಸುವ ಬಹುತೇಕರು ಕೂಲಿ ಕಾರ್ಮಿಕರೇ ಆಗಿದ್ದಾರೆ. ಅಲ್ಪ–ಸ್ವಲ್ಪ ಮಳೆ ಬಿದ್ದರು ಸಾಕು ಮನೆಗಳು ಸೋರುತ್ತವೆ. ನಿದ್ದೆಗೆಟ್ಟು ಇಡೀ ರಾತ್ರಿ ಕಳೆಯುವ ದುಸ್ಥಿತಿ ನಿರ್ಮಾಣವಾಗಿದೆ. ಶುದ್ಧ ಕುಡಿಯುವ ನೀರಿಲ್ಲ. ಸ್ವಚ್ಛತೆ ಹಾಗೂ ನೈರ್ಮಲ್ಯಕ್ಕೆ ಆದ್ಯತೆ ನೀಡಿಲ್ಲ. ಹೀಗೆ ಹತ್ತು ಹಲವು ಸಮಸ್ಯೆ ಅನುಭವಿಸುತ್ತಲೇ ಜೀವಿಸುವಂತಾಗಿದೆ.

ಚರಂಡಿ ಸ್ವಚ್ಛತೆ, ಕಸ ವಿಲೇವಾರಿ 15–20 ದಿನಗಳಿಗೆ ಒಮ್ಮೆ ಮಾಡುತ್ತಾರೆ. ಕೊಳೆಗೇರಿ ಪ್ರದೇಶಗಳ ಸಮಸ್ಯೆ ಕೇಳುವವರೇ ಇಲ್ಲ. ಯಾರೂ ಇತ್ತ ಗಮನಹರಿಸುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಮತ ಕೇಳಲು ಮಾತ್ರ ಬರುತ್ತಾರೆ ಎಂದು ಅಂಬೇಡ್ಕರ್‌ ನಗರದ ವಾಸಿ ಓಬಣ್ಣ ಳಲು ತೋಡಿಕೊಂಡರು.

ಮಳೆಯಾದಾಗ ಮನೆಗೆ ನುಗ್ಗುವ ಹಾವು, ಚೇಳು

ಸಾಂತೇನಹಳ್ಳಿ ಸಂದೇಶ್‌ಗೌಡ

ಹೊಳಲ್ಕೆರೆ: ಮಳೆಯಾದಾಗ ಪಟ್ಟಣದ ಕೆಲ ಕೊಳೆಗೇರಿ ಪ್ರದೇಶಗಳ ಮನೆಗಳಿಗೆ ಕೊಳಚೆ ನೀರು ಮಾತ್ರವಲ್ಲ. ಹಾವು, ಚೇಳು ಇತರ ಸರಿಸೃಪಗಳು ನುಗ್ಗಿ ಜನರಲ್ಲಿ ಭೀತಿ ಉಂಟು ಮಾಡುತ್ತಿವೆ. ಆತಂಕದಲ್ಲೇ ಬದುಕುವಂತಾಗಿದೆ.

ಸದ್ಯ ಪಟ್ಟಣದ ಹಿರೇಕೆರೆ ತುಂಬಿದ್ದು, ಕೆರೆಯ ಹಿನ್ನೀರು ಪ್ರದೇಶದ ಕೊಳಚೆ ನೀರು ಕೊಳೆಗೇರಿ ಪ್ರದೇಶಗಳ ಮನೆಗಳವರೆಗೂ ನಿಂತಿದೆ.

ಗಣಪತಿ ದೇಗುಲದ ಹಿಂಭಾಗದ ಪ್ರದೇಶ, ದಾವಣಗೆರೆ ಕ್ರಾಸ್ ಕೋಡಿ ಭಾಗದಲ್ಲಿ ಕೊಳಚೆ ನೀರು ಮನೆಗಳ ಪಕ್ಕದಲ್ಲೇ ಹರಿಯುತ್ತಿದೆ. ದಾವಣಗೆರೆ ಕ್ರಾಸ್ ಸಮೀಪದ ಪ್ರದೇಶದಲ್ಲಿ ಕೊಳಚೆ ನೀರು ಹರಿಯುತ್ತಿದ್ದು, ಇಲ್ಲಿನ ಜನ ಸೊಳ್ಳೆ, ದುರ್ವಾಸನೆಗಳ ನಡುವೆ ಬದುಕುವ ದುಸ್ಥಿತಿ ನಿರ್ಮಾಣವಾಗಿದೆ.

‘ವರ್ಷವಾದರೂ ಇಲ್ಲಿನ ಚರಂಡಿ ಸ್ವಚ್ಛಗೊಳಿಸಿಲ್ಲ. ಇದರಿಂದಾಗಿ ಕೊಳಚೆ ನೀರು ಸರಾಗವಾಗಿ ಮುಂದೆ ಹರಿಯುತ್ತಿಲ್ಲ. ಸೊಳ್ಳೆಗಳು ಹೆಚ್ಚಿವೆ. ಹಿರೇಕೆರೆ ತುಂಬಿದ್ದು, ಕೋಡಿ ನೀರು ಹರಿಯುವ ಹಳ್ಳವನ್ನು ಸ್ವಚ್ಛಗೊಳಿಸಿ, ಎರಡೂ ಕಡೆ ತಡೆಗೋಡೆ ನಿರ್ಮಿಸಬೇಕು’ ಎನ್ನುತ್ತಾರೆ ಇಲ್ಲಿನ ನಿವಾಸಿಗಳಾದ ಆರ್. ಗೋಪಾಲ್, ಮಂಜಣ್ಣ, ರೂಪಾ, ನಸ್ರಿನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT