ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಐದು ಅಸ್ಥಿಪಂಜರ ಪತ್ತೆ ಪ್ರಕರಣ | ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ: ವರದಿ

ಚಿತ್ರದುರ್ಗ: ಐದು ಅಸ್ಥಿಪಂಜರ ಪತ್ತೆ ಪ್ರಕರಣ
Published 16 ಮೇ 2024, 23:34 IST
Last Updated 16 ಮೇ 2024, 23:34 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ನಗರದ ಕಾರಾಗೃಹ ರಸ್ತೆಯ ಪಾಳು ಮನೆಯಲ್ಲಿ ಐವರ ಅಸ್ಥಿಪಂಜರ ಪತ್ತೆಯಾಗಿದ್ದ ಪ್ರಕರಣದಲ್ಲಿ ಮರಣೋತ್ತರ ಪರೀಕ್ಷೆ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದಿದೆ. ಐವರೂ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಸುಳಿವು ದೊರೆತಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ, ‘ಐವರ ಸಾವಿಗೆ ಅತಿಯಾದ ನಿದ್ರೆ ಮಾತ್ರೆ ಸೇವನೆಯೇ ಕಾರಣ ಎಂಬುದಾಗಿ ವರದಿ ಹೇಳಿದೆ’ ಎಂದರು.

‘ಕಳೆದ ಡಿ.28ರಂದು ಐದು ಅಸ್ಥಿಪಂಜರಗಳು ಕಂಡುಬಂದಿದ್ದವು. ದಾವಣಗೆರೆ, ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ 71 ಸಾಕ್ಷ್ಯ ಸಂಗ್ರಹಿಸಿದ್ದರು. ಅಡುಗೆಪಾತ್ರೆಯಲ್ಲಿ ಸಯನೈಡ್‌ ಅಂಶ ಇರುವುದು ಪತ್ತೆಯಾಗಿದೆ. ಇದನ್ನು ಸೇವಿಸಿರುವ ಖಚಿತತೆ ಇಲ್ಲ’ ಎಂದರು.

‘ಸಾವಿಗೆ ಕಾರಣ ತಿಳಿಯಲು ಎಲ್ಲ ಆಯಾಮದಲ್ಲೂ ಪರೀಕ್ಷೆ ನಡೆಸಿದಾಗ ಐವರ ಅಸ್ಥಿಪಂಜರದಲ್ಲೂ ನಿದ್ರೆ ಮಾತ್ರೆಯ ಅಂಶ ಕಂಡುಬಂದಿದೆ. ಗಾಯದಿಂದ ಸಾವು ಸಂಭವಿಸಿಲ್ಲ. ತನಿಖೆ ಮುಂದುವರಿದಿದೆ’ ಎಂದರು.

‘ಘಟನೆ ಬೆಳಕಿಗೆ ಬಂದಾಗ ದೇಹ ಸಂಪೂರ್ಣ ಕೊಳೆತು ಅಸ್ಥಿಪಂಜರಗಳು ಮಾತ್ರ ಲಭ್ಯವಾಗಿದ್ದವು. ಲೋಕೋಪಯೋಗಿ ಇಲಾಖೆಯ ನಿವೃತ್ತ ಎಂಜಿನಿಯರ್‌ ಎನ್‌.ಕೆ. ಜಗನ್ನಾಥ ರೆಡ್ಡಿ, ಪತ್ನಿ ಪ್ರೇಮಲೀಲಾ, ಪುತ್ರಿ ಎನ್‌.ಜೆ.ತ್ರಿವೇಣಿ, ಪುತ್ರರಾದ ಎನ್‌.ಜೆ.ಕೃಷ್ಣ, ಎನ್‌.ಜೆ.ನರೇಂದ್ರ ಅವರು 2019ರ ಫೆಬ್ರುವರಿ ಕೊನೆ ಇಲ್ಲವೇ ಮಾರ್ಚ್‌ ಆರಂಭದಲ್ಲಿ ಮೃತಪಟ್ಟಿದ್ದಾರೆ ಎಂದು ತನಿಖೆಯಿಂದ ತಿಳಿದು ಬಂದಿದೆ’ ಎಂದು ವಿವರಿಸಿದರು.

‘ಔಷಧ ಚೀಟಿಯ ಹಿಂಬದಿಯಲ್ಲಿ ಬರೆದ ಅಪೂರ್ಣ ಪತ್ರವನ್ನು ಆಧರಿಸಿ ಬೆಂಗಳೂರಿನ ವ್ಯಕ್ತಿಯನ್ನು ವಿಚಾರಣೆ ನಡೆಸಿದ್ದು, ಸರಿಯಾದ ಮಾಹಿತಿ ಲಭ್ಯವಾಗಿಲ್ಲ. ಕಾಗದದಲ್ಲಿರುವ ಬರಹ ಸಾವಿಗೂ ಮುನ್ನ ಬರೆದ ಪತ್ರವೇ (ಡೆತ್‌ನೋಟ್‌) ಎಂಬುದೂ ಖಚಿತವಾಗಿಲ್ಲ. ಜತೆಗೆ ಕೈಬರಹ ಖಚಿತಪಡಿಸಿಕೊಳ್ಳಲು ಸಾಂದರ್ಭಿಕ ಸಾಕ್ಷ್ಯಗಳು ಲಭ್ಯವಾಗಿಲ್ಲ’ ಎಂದರು.

‘ಕೆಲವು ವಸ್ತುಗಳು ಯಾವುದೇ ಸಾಕ್ಷ್ಯವನ್ನು ಒದಗಿಸದಷ್ಟು ಹಾಳಾಗಿದ್ದವು. ಕೆಲವು ಔಷಧದ ಚೀಟಿ, ವೈದ್ಯಕೀಯ ವರದಿಗಳು ಪತ್ತೆಯಾಗಿದ್ದವು. ಇವುಗಳ ಆಧಾರದಲ್ಲಿ ಐವರೂ ದೈಹಿಕ, ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರು ಎಂಬುದು ಗೊತ್ತಾಗಿದೆ. ಮಾನಸಿಕ ಸಮಸ್ಯೆ, ಪಡೆಯುತ್ತಿದ್ದ ಚಿಕಿತ್ಸೆ, ಸೇವಿಸುತ್ತಿದ್ದ ಔಷಧದ ಅಂಶಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ’ ಎಂದು ತಿಳಿಸಿದರು.

‘ಜಗನ್ನಾಥ ರೆಡ್ಡಿ ಅವರ ಆಸ್ತಿಯ ಬಗ್ಗೆ ಯಾರಿಗೂ ಖಚಿತ ಮಾಹಿತಿ ಇಲ್ಲ. ಮನೆಯನ್ನು ವಕೀಲರೊಬ್ಬರಿಗೆ ಮಾರಾಟ ಮಾಡಿದ್ದರು ಎಂದು ತಿಳಿದುಬಂದಿದೆ. ಈ ಪ್ರಕರಣ ಹೈಕೋರ್ಟ್‌ನಲ್ಲಿದೆ’ ಎಂದು ಅವರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT