ಚಿತ್ರದುರ್ಗ: ಸ್ವಾತಂತ್ರ್ಯ ಸಂಗ್ರಾಮದ ನೆನಪುಗಳ ಚಿತ್ರಶಾಲೆಯಾಗಬೇಕಿದ್ದ ನಗರದ ಹೋರಾಟಗಾರರ ಸ್ಮಾರಕ ಸೌಧ (ವೀರಸೌಧ) ನಿರ್ವಹಣೆ ಕೊರತೆಯಿಂದ ಪಾಳು ಬಿದ್ದಿದೆ. ಕ್ರೀಡಾಂಗಣ ರಸ್ತೆಯಲ್ಲಿರುವ ಈ ಭವನದ ಚಾವಣಿ ಸೋರುತ್ತಿದೆ, ಗೋಡೆಗಳು ಬಿರುಕು ಬಿಟ್ಟಿವೆ, ಕಿಟಕಿಯ ಗಾಜು ಒಡೆದು ಹೋಗಿವೆ.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜಿಲ್ಲೆಯ ಹೋರಾಟಗಾರರ ಪಾತ್ರ ಬಲುದೊಡ್ಡದು. ತುರುವನೂರು, ಮರಡಿಹಳ್ಳಿ, ರಾಮಜೋಗಿಹಳ್ಳಿ, ರಾಮಗಿರಿ, ರಾಮಾಪುರ, ಹರಿಯಬ್ಬೆ, ಶ್ರವಣಿಗಿರಿ ಮುಂತಾದ ಗ್ರಾಮಗಳ ಹೆಚ್ಚಿನ ಜನರು ಸ್ವಾತಂತ್ರ್ಯ ಹೋರಾಟಗಾದಲ್ಲಿ ಭಾಗಿಯಾಗಿದ್ದರು. ಜಿಲ್ಲೆಯಲ್ಲಿ 12 ಜನ ಹೋರಾಟಗಾರರಿದ್ದು, ಅಂದಿನ ದಿನಗಳ ನೆನಪುಗಳನ್ನು ಬಿಚ್ಚಿಡುತ್ತಾರೆ.
ಜಿಲ್ಲೆಯಾದ್ಯಂತ 145 ಮಂದಿ ಸ್ವಾತಂತ್ರ್ಯ ಹೋರಾಟಗಾರರ ಪತ್ನಿಯರಿದ್ದು, ಮಾಸಾಶನ ಪಡೆಯುತ್ತಿದ್ದಾರೆ. ಹೋರಾಟಗಾರರು ಹಾಗೂ ಕುಟುಂಬ ಸದಸ್ಯರೆಲ್ಲರೂ ಸೇರಿ ‘ಹೋರಾಟಗಾರರ ಉತ್ತರಾಧಿಕಾರಿಗಳ ಸಂಘ’ ರಚಿಸಿದ್ದು ವಿವಿಧ ಚಟುವಟಿಕೆ ನಡೆಸುತ್ತಿದ್ದಾರೆ. ಯೋಗ ತರಬೇತಿ, ಆರೋಗ್ಯ ತಪಾಸಣಾ ಶಿಬಿರ, ಸಾಂಸ್ಕೃತಿಕ ಮತ್ತಿತರ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ.
ಆದರೆ, ಸ್ಮಾರಕ ಸೌಧ ದುರಸ್ತಿ ಕಾಣದ ಹಿನ್ನೆಲೆಯಲ್ಲಿ ಸಂಘದ ಚಟುವಟಿಕೆಗಳಿಗೆ ತೊಡಕಾಗಿದೆ. ವೀರಸೌಧಕ್ಕೆ ಕಾಯಕಲ್ಪ ನೀಡುವಂತೆ ಒತ್ತಾಯಿಸಿ ಸಂಘದ ಸದಸ್ಯರು ಹಲವು ವರ್ಷಗಳಿಂದಲೂ ಹೋರಾಟ ನಡೆಸುತ್ತಿದ್ದರೂ ಜಿಲ್ಲಾಡಳಿತ ತಿರುಗಿ ನೋಡದ ಕಾರಣ ಕಟ್ಟಡ ಪಾಳು ಬೀಳುವಂತಾಗಿದೆ.
77ನೇ ಸ್ವಾತಂತ್ರ ದಿನಾಚರಣೆಗೆ ವಾರವಷ್ಟೇ ಉಳಿದಿದ್ದು ಈವರೆಗೂ ವೀರಸೌಧದ ಆವರಣವನ್ನು ಸ್ವಚ್ಛಗೊಳಿಸಿಲ್ಲ. ಸ್ವಚ್ಛಗೊಳಿಸುವಂತೆ ಕೋರಿ ಉತ್ತರಾಧಿಕಾರಿಗಳ ಸಂಘದ ಸದಸ್ಯರು ಮನವಿ ಮಾಡಿದ್ದಾರೆ. ಆದರೂ ಅಧಿಕಾರಿಗಳು ಸ್ಪಂದಿಸಿಲ್ಲ. ಕಟ್ಟಡದ ಹೊರ ಭಾಗದಲ್ಲಿರುವ ಧ್ವಜಸ್ತಂಭ, ವೇದಿಕೆ ಬಳಿ ಮುಳ್ಳುಗಿಡ ಬೆಳೆದಿದ್ದು, ಕಾಲಿಡಲಾಗದ ಸ್ಥಿತಿ ಇದೆ. ಆವರಣದಲ್ಲಿ ಹಾಕಲಾಗಿದ್ದ ಕಲ್ಲುಬೆಂಚುಗಳು ಮುರಿದು ಬಿದ್ದಿದ್ದು ಕೂರಲೂ ವ್ಯವಸ್ಥೆ ಇಲ್ಲ.
ಮುಕ್ಕಾಲು ಎಕರೆ ಪ್ರದೇಶದಲ್ಲಿರುವ ಸ್ಮಾರಕ ಸೌಧದ ಆವರಣದಲ್ಲಿ 2 ಕಟ್ಟಡಗಳಿವೆ. ಒಂದು ಕಟ್ಟಡ ಸಭಾಂಗಣ ಹಾಗೂ ಕಚೇರಿ ಇದೆ. ಇನ್ನೊಂದು ಕಟ್ಟಡದಲ್ಲಿರುವ ಗ್ರಂಥಾಲಯವನ್ನು ಗ್ರಂಥಾಲಯ ಇಲಾಖೆ ನಡೆಸುತ್ತಿದೆ. ಕಟ್ಟಡ ನಿರ್ವಹಣೆಗೆ ಜಿಲ್ಲಾಡಳಿತ ಯಾವುದೇ ಅನುದಾನ ನೀಡುತ್ತಿಲ್ಲ, ಸ್ವಚ್ಛತೆಗೆ ಸಿಬ್ಬಂದಿಯನ್ನೂ ನೇಮಕ ಮಾಡದ ಕಾರಣ ಇಡೀ ಆವರಣ ಅವ್ಯವಸ್ಥೆಯ ಆಗರವಾಗಿದೆ ಎಂಬುದು ಸಾರ್ವಜನಿಕರ ದೂರು.
ಸ್ವಾತಂತ್ರ್ಯ ಹೋರಾಟಗಾರರ ನೆನಪಿನಲ್ಲಿ ಸರ್ಕಾರ 2006ರಲ್ಲಿ ಕಟ್ಟಡ ನಿರ್ಮಾಣ ಮಾಡಿದೆ. ಚಾವಣಿ ಸೋರುತ್ತಿದ್ದು ಮಳೆ ಬಂದರೆ ನೀರು ತುಂಬಿಕೊಳ್ಳುತ್ತದೆ. ಗೋಡೆಗಳು ಬಿರುಕುಟ್ಟಿರುವ ಕಾರಣ ಅಲ್ಲಿಂದಲೂ ನೀರಿಳಿಯುತ್ತದೆ. ನೆಲಹಾಸು ಕಿತ್ತು ಹೋಗಿದ್ದು ಅಲ್ಲಲ್ಲಿ ತೇಪೆ ಹಾಕಲಾಗಿದೆ. ಹೋರಾಟಗಾರರ ಪೇಂಟಿಂಗ್‌ಗಳು, ಭಾವಚಿತ್ರಗಳಿದ್ದು ಅವುಗಳಿಗೆ ಸಂರಕ್ಷಣೆ ಇಲ್ಲವಾಗಿದೆ.
‘ಹೋರಾಟಗಾರರ ಒತ್ತಾಯದ ಮೇರೆಗೆ ಸರ್ಕಾರ ಈಚೆಗೆ ವೀರಸೌಧ ದುರಸ್ತಿಗೆ ₹ 22 ಲಕ್ಷ ಹಣ ಬಿಡುಗಡೆ ಮಾಡಿತ್ತು. ಆದರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಟೆಂಡರ್ ಪ್ರಕ್ರಿಯೆ ನಡೆಸದ ಕಾರಣ ಹಣ ವಾಪಸ್ ಹೋಯಿತು. ಕಟ್ಟಡಕ್ಕೆ ಕಾಯಕಲ್ಪ ನೀಡುವಂತೆ ಹಲವು ಬಾರಿ ಹೋರಾಟ ನಡೆಸಿದ್ದೇವೆ, ಆದರೂ ನಮ್ಮ ಬೇಡಿಕೆ ಈಡೇರಿಲ್ಲ’ ಎಂದು ಉತ್ತರಾಧಿಕಾರಿಗಳ ಸಂಘದ ಅಧ್ಯಕ್ಷ ಜಿ.ಟಿ. ಗುರುರಾಜೇಂದ್ರ ಹೇಳಿದರು.
‘ಸ್ವಾತಂತ್ರ್ಯ ದಿನಾಚರಣೆ ಬಂದರೂ ಸ್ಮಾರಕ ಸೌಧದ ಸ್ವಚ್ಛತೆ ಕಾಪಾಡದಿರುವುದು ದುರದೃಷ್ಟಕರ. ನಮ್ಮ ಮಾಸಾಶನವೂ ಸರಿಯಾಗಿ ಬರುತ್ತಿಲ್ಲ. ಔಷಧಿ ಖರೀದಿಗೆ ತೊಂದರೆಯಾಗಿದೆ’ ಎಂದು ಸ್ವಾತಂತ್ರ್ಯ ಹೋರಾಟಗಾರ ಗೋವಿಂದಪ್ಪ ಬೇಸರ ವ್ಯಕ್ತಪಡಿಸಿದರು.
ಖಾಸಗಿ ಕಂಪನಿಗಳ ಸಿಎಸ್‌ಆರ್ ಅನುದಾನ ಬಳಸಿ ಸಾತಂತ್ರ್ಯ ಹೋರಾಟಗಾರರ ಸ್ಮಾರಕ ಸೌಧ ದುರಸ್ತಿ ಮಾಡಿಸಲು ಪ್ರಯತ್ನಿಸಲಾಗುವುದು. ಜೊತೆಗೆ ಆವರಣ ಸ್ವಚ್ಛಗೊಳಿಸಲು ಸಿಬ್ಬಂದಿಗೆ ಸೂಚಿಸುತ್ತೇನೆಬಿ.ಟಿ.ಕುಮಾರಸ್ವಾಮಿ ಹೆಚ್ಚುವರಿ ಜಿಲ್ಲಾಧಿಕಾರಿ
ಹಲವು ವರ್ಷಗಳಿಂದಲೂ ವಿದ್ಯುತ್ ಬಿಲ್ ಪಾವತಿ ಮಾಡದ ಕಾರಣ ಸ್ವಾತಂತ್ರ್ಯ ಹೋರಾಟಗಾರರ ಭವನಕ್ಕೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿದೆ. ಬೆಸ್ಕಾಂ ಅಧಿಕಾರಿಗಳು ಹಲವು ಬಾರಿ ಸೂಚನೆ ನೀಡಿದರೂ ಬಿಲ್ ಪಾವತಿ ಮಾಡದ ಹಿನ್ನೆಲೆಯಲ್ಲಿ ಸಂಪರ್ಕ ಬಂದ್ ಆಗಿದೆ. ‘ಭವನ ನೋಡಿಕೊಳ್ಳಲು ಕಾವಲುಗಾರರೊಬ್ಬರನ್ನು ನೇಮಿಸಿದ್ದು ಅವರಿಗೆ ನಾವು ಮಾಸಿಕ ಕೇವಲ ₹ 2000 ವೇತನ ನೀಡುತ್ತಿದ್ದೇವೆ. ಜಿಲ್ಲಾಡಳಿತದಿಂದ ಕಾವಲುಗಾರ ಸಿಬ್ಬಂದಿಯನ್ನು ನೇಮಿಸಿ ಸರಿಯಾಗಿ ಭವನವನ್ನು ನಿರ್ವಹಣೆ ಮಾಡಬೇಕು’ ಎಂಬುದು ಉತ್ತರಾಧಿಕಾರಿಗಳ ಸಂಘದ ಕೋರಿಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.