ಶುಕ್ರವಾರ, ಜನವರಿ 28, 2022
25 °C
ಬೋಸೆದೇವರಹಟ್ಟಿಯನ್ನು ಪಟ್ಟಣ ಪಂಚಾಯಿತಿಯಿಂದ ಬೇರ್ಪಡಿಸಲು ಒತ್ತಾಯ

ನಾಯಕನಹಟ್ಟಿ ಪ.ಪಂ. ಚುನಾವಣೆ ಬಹಿಷ್ಕರಿಸಲು ಗ್ರಾಮಸ್ಥರ ತೀರ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಯಕನಹಟ್ಟಿ: ಬೋಸೆದೇವರಹಟ್ಟಿ ಗ್ರಾಮವನ್ನು ನಾಯಕನಹಟ್ಟಿ ಪಟ್ಟಣ ಪಂಚಾಯಿತಿಯಿಂದ ಬೇರ್ಪಡಿಸದಿದ್ದರೆ ಇದೇ ತಿಂಗಳ 27ರಂದು ನಡೆಯುವ ಪಟ್ಟಣ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಬೋಸೆದೇವರಹಟ್ಟಿ ಗ್ರಾಮದಲ್ಲಿ ಭಾನುವಾರ ಗ್ರಾಮಸ್ಥರು ಸಭೆ ಸೇರಿ ಚುನಾವಣೆಯನ್ನು ಬಹಿಷ್ಕರಿಸುವ ತೀರ್ಮಾನ ಕೈಗೊಂಡರು.

ಗ್ರಾಮಸ್ಥ ಎಂ.ಬಿ. ಓಬಯ್ಯ ಮಾತನಾಡಿ, ‘ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬೋಸೆದೇವರಹಟ್ಟಿಯು ಅತ್ಯಂತ ಹಿಂದುಳಿದ ಗ್ರಾಮವಾಗಿದೆ. ಈ ಗ್ರಾಮದಲ್ಲಿ ಬಹುತೇಕರು ಕೃಷಿಯನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ಗ್ರಾಮವು 5 ವರ್ಷಗಳ ಹಿಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿತ್ತು. ಪ್ರಸ್ತುತ ನಾಯಕನಹಟ್ಟಿ ಪಟ್ಣ ಪಂಚಾಯಿತಿ ವ್ಯಾಪ್ತಿಯಲ್ಲಿರುವುದರಿಂದ ದುಬಾರಿ ತೆರಿಗೆ, ಆಸ್ತಿಹಕ್ಕು, ಖಾತೆ ವರ್ಗಾವಣೆ ಸೇರಿ ಹಲವು ವಿಷಯಗಳಲ್ಲಿ ಗ್ರಾಮಸ್ಥರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಆದ್ದರಿಂದ ಗ್ರಾಮವನ್ನು ಪಟ್ಟಣ ಪಂಚಾಯಿತಿಯಿಂದ ಬೇರ್ಪಡಿಸಿ ಪತ್ಯೇಕ ಗ್ರಾಮ ಪಂಚಾಯಿತಿಯಾಗಿ ಘೋಷಿಸಬೇಕು’ ಎಂದು ಆಗ್ರಸಿಹಿದರು.

ನಾಯಕನಹಟ್ಟಿ ಹೋಬಳಿ ನೀರಾವರಿ ಮತ್ತು ಸಾಮಾಜಿಕ ಹೋರಾಟ ಸಮಿತಿ ಅಧ್ಯಕ್ಷ ಜಿ.ಬಿ. ಮುದಿಯಪ್ಪ, ‘ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ 15ಮತ್ತು 16ನೇ ವಾರ್ಡ್‌ಗಳು ಬೋಸೆದೇವರಹಟ್ಟಿಯಲ್ಲಿ ಕಂಡು ಬರುತ್ತವೆ. ಅಲ್ಲದೇ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 8 ಗ್ರಾಮಗಳು ಬರುತ್ತವೆ. ಈ ವಾರ್ಡ್‌ಗಳಲ್ಲಿ ಬಹುತೇಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರೇ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಸಕಾಲಕ್ಕೆ ಮಳೆ, ಬೆಳೆ ಇಲ್ಲದೆ ಹಾಗೂ ಅತಿವೃಷ್ಟಿ ಮತ್ತು ಅನಾವೃಷ್ಟಿಗೆ ಸಿಲುಕಿ ಕಂಗಾಲಾಗಿದ್ದಾರೆ’ ಎಂದು ತಿಳಿಸಿದರು.

‘ಕೂಲಿ ಕಾರ್ಮಿಕರು ಉದ್ಯೋಗವನ್ನು ಅರಸಿ ಬೆಂಗಳೂರು, ಮಂಗಳೂರಿಗೆ ಗುಳೆ ಹೋಗುತ್ತಿದ್ದಾರೆ. ಪಟ್ಟಣ ಪಂಚಾಯಿತಿಯಾಗಿರುವ ಕಾರಣ ಇಲ್ಲಿನ ವಿದ್ಯಾರ್ಥಿಗಳಿಗೆ ಗ್ರಾಮೀಣ ಕೃಪಾಂಕ ಪ್ರಮಾಣಪತ್ರ ದೊರೆಯುವುದಿಲ್ಲ. ನೂರಾರು ರೈತರು ಉದ್ಯೋಗ ಖಾತ್ರಿ ಯೋಜನೆಯ ಕೂಲಿಯಿಂದ ವಂಚಿತರಾಗುತ್ತಿದ್ದಾರೆ. ಕೃಷಿ ಇಲಾಖೆಯಿಂದ ಸೌಲಭ್ಯಗಳು ದೊರೆಯುತ್ತಿಲ್ಲ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮದ 2 ವಾರ್ಡ್‌ಗಳನ್ನು ಬೇರ್ಪಡಿಸದಿದ್ದರೆ ಪಟ್ಟಣ ಪಂಚಾಯಿತಿ ಚುನಾವಣೆ ಬಹಿಷ್ಕರಿಸಲಾಗುವುದು’ ಎಂದು ಎಚ್ಚರಿಸಿದರು.

ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಎಸ್.ಪಿ. ನಾಗರಾಜ, ಮುಖಂಡರಾದ ಡಿ.ಬಿ. ಬೋರಯ್ಯ, ಬಸವರಾಜ, ಎನ್.ಬಿ. ಬೋರಯ್ಯ, ಪಾಪಣ್ಣ, ಪ್ರಕಾಶ್, ಮಲ್ಲಕ್‌ಬೋರಯ್ಯ, ಸಣ್ಣಬೊಮ್ಮಯ್ಯ, ದಾಸಣ್ಣ, ದಿಲೀಪ್, ಗಂಡಯ್ಯ, ಕೆ.ಆರ್. ಬೋರಯ್ಯ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು