ಶುಕ್ರವಾರ, ಆಗಸ್ಟ್ 6, 2021
25 °C
ಅನುಭವ ಹಂಚಿಕೊಂಡ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಫಾಲಾಕ್ಷ

ಕೊರೊನಾ ಮುಕ್ತ ಜಿಲ್ಲೆಗೆ ಪಣ

ಕೆ.ಎಸ್. ಪ್ರಣವಕುಮಾರ್ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ‘ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣ ಕಾಣಿಸಿಕೊಂಡ ನಂತರ ಸೋಂಕಿತರನ್ನು ಗುಣಪಡಿಸಲು ಆರೋಗ್ಯ ಇಲಾಖೆಯ ವೈದ್ಯರು, ನರ್ಸ್‌ಗಳು ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ಐತಿಹಾಸಿಕ ಕೋಟೆನಾಡನ್ನು ಕೊರೊನಾ ಮುಕ್ತವಾಗಿಸಲು ಪಣತೊಟ್ಟಿದ್ದೇವೆ. ಜಿಲ್ಲೆಯ ಸುರಕ್ಷತೆಗಾಗಿ ಹಗಲಿರುಳು ಶ್ರಮಿಸುತ್ತಿದ್ದೇವೆ...’

‘ಕೋವಿಡ್-19’ ನಿಯಂತ್ರಣಕ್ಕೆ ಕಾರ್ಯನಿರ್ವಹಿಸುತ್ತಿರುವ ಕೋಟೆನಾಡಿನ ‘ಕೊರೊನಾ ವಾರಿಯರ್ಸ್‌’ ಆರೋಗ್ಯ ಇಲಾಖೆಯ ನೇತೃತ್ವ ವಹಿಸಿರುವ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಫಾಲಾಕ್ಷ ಅವರ ಮಾತಿದು. ಸೋಂಕು ನಿಯಂತ್ರಣಕ್ಕೆ ಕೈಗೊಂಡ ಕಾರ್ಯಗಳನ್ನು ಅವರು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.

ವಿದೇಶದಿಂದ ಜಿಲ್ಲೆಗೆ ಮರಳಿದ ಒಬ್ಬರಲ್ಲಿ ಮೊದಲು ಸೋಂಕು ಕಾಣಿಸಿಕೊಂಡಾಗ ಕೆಲವರಲ್ಲಿ ಗಾಬರಿ ಉಂಟಾಗಿತ್ತು. ಗುಜರಾತ್‌ನ ಅಹಮದಾಬಾದಿನಿಂದ ಬಂದ ತಬ್ಲೀಗ್ ಜಮಾತ್‌ನ ಆರು ಜನರಲ್ಲಿ ಕೋವಿಡ್-19 ದೃಢಪಟ್ಟಾಗ ಅನೇಕರಲ್ಲಿ ಆತಂಕ ಉಂಟಾಯಿತು. ಆದರೆ, ಇಲಾಖೆಯ ವೈದ್ಯರಾಗಲಿ, ಸಿಬ್ಬಂದಿಯಾಗಲಿ ಧೃತಿಗೆಡಲಿಲ್ಲ. ಧೈರ್ಯವಾಗಿ ಆರೈಕೆ ಮಾಡಲು ಮುಂದಾದ ಪರಿಣಾಮ ಹಂತ ಹಂತವಾಗಿ ಅನೇಕರು ಗುಣಮುಖರಾಗಿದ್ದಾರೆ. ಇದರಿಂದ ಸಾರ್ವಜನಿಕ ವಲಯದಲ್ಲಿ ನಿರ್ಮಾಣವಾಗಿದ್ದ ಭಯದ ವಾತಾವರಣ ದೂರವಾಗುತ್ತಿದೆ. ಜಿಲ್ಲೆಯ ಮಟ್ಟಿಗೆ ಇದು ಉತ್ತಮ ಬೆಳವಣಿಗೆ ಎಂದು ವಿವರಿಸಿದರು.

‘ಹೊರ ರಾಜ್ಯದಿಂದ ಬಂದವರನ್ನು ಚೆಕ್‌ಪೋಸ್ಟ್‌ವೊಂದರ ಬಳಿ ತಡೆದಾಗ 25ಕ್ಕೂ ಹೆಚ್ಚು ಅಧಿಕಾರಿಗಳು ಇದ್ದೆವು. ಮುಂಜಾಗ್ರತಾ ಕ್ರಮಗಳ ನಡುವೆಯೂ ಪ್ರಥಮ ಸಂಪರ್ಕ ಹೊಂದಿದ್ದ ಕಾರಣಕ್ಕಾಗಿ ಜಿಲ್ಲಾಧಿಕಾರಿ ಅವರ ಸೂಚನೆ ಮೇರೆಗೆ ಪೊಲೀಸ್, ಕಂದಾಯ, ಆರೋಗ್ಯ ಇಲಾಖೆ ಅಧಿಕಾರಿಗಳ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳಿಸಿಕೊಡಲಾಗಿತ್ತು. ನನ್ನದು ಎರಡು ಬಾರಿ ಕಳಿಸಿದ್ದೆ. ಎಲ್ಲರದೂ ನೆಗೆಟಿವ್ ಬಂದಾಗ ನಿರಾಳವಾಯಿತು. ಇದು ಕೊರೊನಾ ವಿರುದ್ಧ ಹೋರಾಡಲು ಸರ್ಕಾರಿ ನೌಕರರಲ್ಲಿ ಧೈರ್ಯ ಹೆಚ್ಚಿಸಿತು’ ಎಂದು ವಿವರಿಸಿದರು.

‘ಜಿಲ್ಲೆಯಲ್ಲಿ 18 ಲಕ್ಷ ಜನಸಂಖ್ಯೆ ಇದ್ದು, ಈವರೆಗೂ ಸುಮಾರು 4 ಲಕ್ಷ ಜನರನ್ನು ಸಾವಿರಕ್ಕೂ ಅಧಿಕ ಆಶಾ ಕಾರ್ಯಕರ್ತೆಯರು, ಕಿರಿಯ ಆರೋಗ್ಯ ಸಹಾಯಕಿಯರು ಭೇಟಿ ಮಾಡಿದ್ದಾರೆ. ಇವರೆಲ್ಲರ ಸುರಕ್ಷತೆಗಾಗಿ ಮಾಸ್ಕ್, ಸ್ಯಾನಿಟೈಸರ್, ಕೈಗವಸು ನೀಡಿದ್ದೇವೆ. ಮುಂಜಾಗ್ರತಾ ಕ್ರಮವಾಗಿ ಗರ್ಭಿಣಿಯರು, ಕ್ಯಾನ್ಸರ್ ರೋಗಿಗಳು, ಮಧುಮೇಹಿಗಳು, ರಕ್ತದೊತ್ತಡ, ಅಸ್ತಮಾ ಸೇರಿ ಶ್ವಾಸಕೋಶ ಸಮಸ್ಯೆಯಿಂದ ಬಳಲುವವರ ಮಾಹಿತಿ ಕಲೆ ಹಾಕಿದ್ದಾರೆ. ನಿತ್ಯ ಸಂಜೆ 4 ಗಂಟೆಗೆ ಅವರೆಲ್ಲರೂ ಜಿಲ್ಲಾ ಸರ್ವೇಕ್ಷಣಾಧಿಕಾರಿ ಕಚೇರಿಗೆ ವರದಿ ಒಪ್ಪಿಸುತ್ತಿದ್ದರು. ಅವರ ಶ್ರಮವನ್ನೂ ಮರೆಯುವಂತಿಲ್ಲ’ ಎಂದು ಸ್ಮರಿಸಿದರು.

ಗಂಟಲು ಮತ್ತು ಮೂಗಿನ ದ್ರವ ಸಂಗ್ರಹಿಸಲು ಕೆಲ ಲ್ಯಾಬ್‌ಟೆಕ್ನಿಷನ್‌ಗಳಲ್ಲಿ ಭಯ ಉಂಟಾಗಿತ್ತು. ಅದಕ್ಕಾಗಿ ಅವರಿಗೆ ತರಬೇತಿ ನೀಡಿ ಆತ್ಮಸ್ಥೈರ್ಯ ತುಂಬಲಾಯಿತು. ನಿರ್ಭಿತಿಯಿಂದ ಈವರೆಗೂ ಸುಮಾರು 3,506 ಮಾದರಿ ಸಂಗ್ರಹಿಸಿದ್ದಾರೆ. 3,163 ವರದಿ ನೆಗೆಟಿವ್ ಬಂದಿದೆ. ಇಲಾಖೆಯ 2,175 ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಸೇರಿ ಒಟ್ಟು 3,150 ಜನ ಕೊರೊನಾ ವಿರುದ್ಧ ಹೋರಾಡಿದ್ದಾರೆ. ನಿಯಂತ್ರಣಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸೋಂಕು ಕಾಣಿಸಿಕೊಂಡ ಯಾರಲ್ಲೂ ತೀವ್ರತರವಾದ ರೋಗಲಕ್ಷಣ ಕಾಣಿಸಿಕೊಂಡಿಲ್ಲ. ಪ್ರಾಥಮಿಕ ಹಂತದಲ್ಲೇ ಚಿಕಿತ್ಸೆ ನೀಡಿದ ಕಾರಣ ಗುಣಮುಖರಾಗುತ್ತಿದ್ದಾರೆ. ಈವರೆಗೂ ಸಾವು ಸಂಭವಿಸಿರುವ ಪ್ರಕರಣ ಇಲ್ಲ. ವೆಂಟಿಲೇಟರ್ ಚಿಕಿತ್ಸೆ ನೀಡುವ ಪರಿಸ್ಥಿತಿಯೂ ಎದುರಾಗಿಲ್ಲ. ಇದು ಸಂತಸದ ವಿಚಾರ. ಕೊರೊನಾ ಸೋಂಕು ತಡೆಯಲು ಶ್ರಮಿಸುತ್ತಿರುವ ಪ್ರತಿಯೊಬ್ಬರು ಕೊರೊನಾ ವಾರಿಯರ್ಸ್‌ಗಳಾಗಿದ್ದಾರೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು