ಆಡುಮಲ್ಲೇಶ್ವರಕ್ಕೆ ನಗರ ಸಾರಿಗೆ; ಪ್ರಯಾಣಿಕರ ಸಂಖ್ಯೆ ಕ್ಷೀಣ

7
ಜೂನ್‌ನಲ್ಲಿ ಸಂಚಾರ ಪ್ರಾರಂಭವಾದಾಗ ಉತ್ತಮ ಪ್ರತಿಕ್ರಿಯೆ * ಒಂದೆರಡು ತಿಂಗಳಿನಿಂದ ಸ್ಪಂದನ ಇಲ್ಲ

ಆಡುಮಲ್ಲೇಶ್ವರಕ್ಕೆ ನಗರ ಸಾರಿಗೆ; ಪ್ರಯಾಣಿಕರ ಸಂಖ್ಯೆ ಕ್ಷೀಣ

Published:
Updated:
Deccan Herald

ಚಿತ್ರದುರ್ಗ: ಆಡುಮಲ್ಲೇಶ್ವರ ಕಿರು ಮೃಗಾಲಯಕ್ಕೆ ಕೆಎಸ್‌ಆರ್‌ಟಿಸಿ ಚಿತ್ರದುರ್ಗ ವಿಭಾಗೀಯ ಘಟಕದಿಂದ ಜೂನ್‌ ತಿಂಗಳಿನಿಂದಲೂ ವಾರಕ್ಕೊಮ್ಮೆ ಮೂರು ಬಾರಿ ನಗರ ಸಾರಿಗೆ ಬಸ್‌ಗಳ ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ಒಂದೆರಡು ತಿಂಗಳಿನಿಂದ ಪ್ರಯಾಣಿಕರ ಸಂಖ್ಯೆ ಕ್ಷೀಣಿಸುತ್ತಿದೆ.

ಕೋಟೆನಾಡಿನ ಸುಂದರ ಪ್ರವಾಸಿ ತಾಣಗಳಲ್ಲೊಂದಾದ ಇಲ್ಲಿಗೆ ಆಟೊದಲ್ಲಿ ಹೋಗಿ ಬರುವುದು ದುಬಾರಿ. ಈ ಹಿನ್ನೆಲೆಯಲ್ಲಿ ಇಲ್ಲಿನ ವಿಭಾಗೀಯ ಘಟಕದಿಂದ ನಗರ ಸಾರಿಗೆ ಬಸ್‌ಗಳು ಸಂಚರಿಸಲು ಅನುವು ಮಾಡಿಕೊಡಲಾಗಿತ್ತು. ಮೊದಲ ಎರಡು ಮೂರು ತಿಂಗಳು ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿತ್ತು.

ಇಲ್ಲಿಗೆ ನಗರ ಸಾರಿಗೆ ಸೌಲಭ್ಯ ಕಲ್ಪಿಸುವಂತೆ ಸ್ಥಳೀಯ ನಾಗರಿಕರ ಒತ್ತಾಯವೂ ಇದ್ದ ಕಾರಣ ಅದಕ್ಕೆ ಸ್ಪಂದಿಸಿ ಸೌಲಭ್ಯ ನೀಡಲಾಗಿತ್ತು. ಆದರೆ, ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ಹೇಳಿಕೊಳ್ಳುವಷ್ಟರ ಮಟ್ಟಿಗೆ ಪ್ರಯಾಣಿಕರು ಬಸ್‌ಗಳಲ್ಲಿ ಸಂಚರಿಸಿಲ್ಲ ಎಂಬುದು ಒಂದೆಡೆಯಾದರೆ. ಮತ್ತೊಂದೆಡೆ ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಬಸ್ ಅನ್ನು ನಿಲ್ದಾಣದಿಂದ ಬಿಡುತ್ತಿಲ್ಲ ಎಂಬ ಆಕ್ಷೇಪವೂ ವ್ಯಕ್ತವಾಗಿದೆ.  

‘ಡಿಸೆಂಬರ್ ತಿಂಗಳಲ್ಲಿ ಹೊರ ಜಿಲ್ಲೆಗಳಿಂದಲೇ ಸಾಕಷ್ಟು ಮಂದಿ ತಮ್ಮ ಸ್ವಂತ ಇಲ್ಲವೇ ಬಾಡಿಗೆ ವಾಹನಗಳನ್ನು ಮಾಡಿಕೊಂಡು ಇಲ್ಲಿನ ಪ್ರವಾಸಿ ತಾಣಗಳನ್ನು ನೋಡಲು ಬರುವುದು ಸಾಮಾನ್ಯ. ಅದರಲ್ಲಿ ಶಾಲಾ ಮಕ್ಕಳೇ ಅಧಿಕ. ಈಗ ಮದುವೆಗಳ ಸೀಜನ್. ಅಲ್ಲದೆ ಪರೀಕ್ಷೆ ಸಮೀಪಿಸುತ್ತಿರುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯ ಪ್ರಯಾಣಿಕರು ಆಡುಮಲ್ಲೇಶ್ವರಕ್ಕೆ ನಗರ ಸಾರಿಗೆಯಲ್ಲಿ ಪ್ರಯಾಣಿಸುತ್ತಿಲ್ಲ’ ಎಂದು ಕೆಎಸ್‌ಆರ್‌ಟಿಸಿ ಚಿತ್ರದುರ್ಗ ಘಟಕದ ವ್ಯವಸ್ಥಾಪಕ ಕೃಷ್ಣಪ್ರಸಾದ್ ತಿಳಿಸಿದರು.

‘ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಆಡುಮಲ್ಲೇಶ್ವರಕ್ಕೆ ಪ್ರತಿ ಭಾನುವಾರ ಬೆಳಿಗ್ಗೆ 11ಕ್ಕೆ, ಮಧ್ಯಾಹ್ನ 2ಕ್ಕೆ, ಸಂಜೆ 5ಕ್ಕೆ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಆಡುಮಲ್ಲೇಶ್ವರದಿಂದ ಬೆಳಿಗ್ಗೆ 11.45 ಕ್ಕೆ, ಮಧ್ಯಾಹ್ನ 2.45 ಕ್ಕೆ, ಸಂಜೆ 5.45 ಕ್ಕೆ ನಗರ ಸಾರಿಗೆ ಬಸ್‌ಗಳು ಸಂಚರಿಸುತ್ತಿದ್ದವು. ಪ್ರಯಾಣಿಕರ ಸಂಖ್ಯೆ ಇಳಿಕೆಯಾದ ಹಿನ್ನೆಲೆಯಲ್ಲಿ ಸದ್ಯ ಎರಡು ಬಾರಿ ಸಂಚರಿಸುತ್ತಿವೆ’ ಎನ್ನುತ್ತಾರೆ ಅವರು.

‘ಆಡುಮಲ್ಲೇಶ್ವರಕ್ಕೆ ಹೋಗಲು ಕಿರಿದಾದ ರಸ್ತೆ ಮಾರ್ಗ ಹಾಗೂ ತಿರುವುಗಳು ಹೆಚ್ಚಿವೆ. ಹೀಗಿದ್ದರೂ ನಾವು ಸಾರಿಗೆ ವ್ಯವಸ್ಥೆ ಕಲ್ಪಿಸಿದ್ದೇವೆ. ಮುಂದಿನ ದಿನಗಳಲ್ಲಿ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ವಿಶ್ವಾಸವೂ ಇದೆ’ ಎನ್ನುತ್ತಾರೆ ಅವರು.

‘ಹೆಚ್ಚಿನ ಪ್ರಯಾಣಿಕರು ನಮ್ಮ ನಗರಸಾರಿಗೆ ಬಸ್‌ಗಳಲ್ಲೇ ಸಂಚರಿಸಿದರೆ ಇನ್ನಷ್ಟು ಬಸ್‌ಗಳನ್ನು ಸಂಚಾರಕ್ಕೆ ಬಿಡಲು ಈಗಾಗಲೇ ತೀರ್ಮಾನಿಸಲಾಗಿದ್ದು, ಅನುಮತಿ ಪಡೆದು ಕ್ರಮ ಕೈಗೊಳ್ಳುತ್ತೇವೆ’ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !