ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡಿನ ಇಟ್ಟಿಗೆ ಬಟ್ಟಿಗಳತ್ತ ತೆಂಗಿನ ಮರ

ನೀರಿಲ್ಲದೆ ಒಣಗಿದ ತೆಂಗಿನ ತೋಟಗಳು
Last Updated 20 ಡಿಸೆಂಬರ್ 2020, 3:45 IST
ಅಕ್ಷರ ಗಾತ್ರ

ಹಿರಿಯೂರು: 2015ರ ನಂತರ ವಾಣಿವಿಲಾಸ ಜಲಾಶಯಕ್ಕೆ ಒಳಹರಿವು ಕುಸಿದ ಪರಿಣಾಮ ಅಚ್ಚುಕಟ್ಟು ಪ್ರದೇಶದ 17 ಸಾವಿರ ಎಕರೆಯಲ್ಲಿದ್ದ ತೆಂಗು ಮತ್ತು ಅಡಿಕೆ ತೋಟಗಳು ಒಣಗಿ ಹೋಗಿವೆ. ಒಣಗಿ ಹೋಗಿರುವ ತೆಂಗಿನ ಮರಗಳು ಈಗ ತಮಿಳುನಾಡಿನತ್ತ ಮುಖ ಮಾಡಿವೆ. ಇಟ್ಟಿಗೆ ಸುಡಲು ಒಣಗಿದ ತೆಂಗಿನ ಮರಗಳನ್ನು ಸಾಗಿಸಲಾಗುತ್ತಿದೆ.

‘ತಾಲ್ಲೂಕಿನ ಪಟ್ರೆಹಳ್ಳಿ, ಪಿಟ್ಲಾಲಿ, ನಂದಿಹಳ್ಳಿ, ರಂಗನಾಥಪುರ, ಆರನಕಟ್ಟೆ, ದೊಡ್ಡಕಟ್ಟೆ, ಕಸವನಹಳ್ಳಿ, ಆಲೂರು, ಹೊಸಯಳನಾಡು ಸೇರಿ ಅಚ್ಚುಕಟ್ಟು ಪ್ರದೇಶದಲ್ಲಿನ ಬಹುತೇಕ ತೋಟಗಳು ಒಣಗಿ ಹೋಗಿದ್ದವು. ನಮ್ಮ ತೋಟದಲ್ಲಿ ನೀರಿಲ್ಲದೆ ಒಣಗಿ ನಿಂತಿರುವ ತೆಂಗಿನ ಮರಗಳನ್ನು ನಿತ್ಯ ಕಂಡಾಗ ಕಣ್ಣುಗಳು ತೇವಗೊಳ್ಳುತ್ತಿದ್ದವು. ಮರಗಳನ್ನು ಕತ್ತರಿಸಿ ಸಾಗಿಸುವಷ್ಟು ಆರ್ಥಿಕ ಶಕ್ತಿ ಬಹಳಷ್ಟು ರೈತರಲ್ಲಿಲ್ಲ. ಹೀಗಾಗಿ ತಮಿಳುನಾಡು ಕಡೆಯವರು ಲಾರಿಯಲ್ಲಿ ಬಂದು ಅವರೇ ಕತ್ತರಿಸಿ ಒಯ್ಯುತ್ತಿದ್ದಾರೆ’ ಎನ್ನುತ್ತಾರೆ ಪಿಟ್ಲಾಲಿ ಗ್ರಾಮದ ರೈತ ರವಿ.

‘ನಮ್ಮ ತಾತ ಬೆಳೆಸಿದ ತೋಟಗಳಿವು. ಅಡಿಕೆ, ತೆಂಗು ಎಂದರೆ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದರು. ವಾಣಿವಿಲಾಸ ಜಲಾಶಯದಲ್ಲಿ ನೀರು ಖಾಲಿ ಆಗುತ್ತಿದ್ದಂತೆ ನೂರಾರು ರೈತರು ಅನುಭವಿಸಿದ ಮಾನಸಿಕ ಯಾತನೆ ವಿವರಿಸಲು ಆಗದು’ ಎಂದರು.

‘2019ರಿಂದ ಜಲಾಶಯಕ್ಕೆ ನೀರು ಬರ ತೊಡಗಿದೆ. ಆದರೆ, ಒಣಗಿದ ತೋಟದ ಜಾಗದಲ್ಲಿ ಏನು ಮಾಡಬೇಕು ಎಂಬುದು ತಿಳಿಯದಾಗಿದೆ. ಮತ್ತೆ ಅಂತಹ ತೋಟ ಮಾಡಲು ನಮ್ಮ ಜೀವಿತಾವಧಿಯಲ್ಲಿ ಸಾಧ್ಯವೇ ಎಂಬ ಪ್ರಶ್ನೆ ಕಾಡುತ್ತದೆ’ ಎನ್ನುತ್ತಾರೆ ಎಪ್ಪತ್ತು ವರ್ಷದ ಆಲೂರಿನ ಸಿದ್ದರಾಮಣ್ಣ.

‘ತಮಿಳುನಾಡಿನಲ್ಲಿ ಇಟ್ಟಿಗೆ ಸುಡಲು ಮರಗಳನ್ನು ಒಯ್ಯುತ್ತಿದ್ದೇವೆ. ಖಾಲಿ ಲಾರಿ ಹೋಗುವ ಬದಲು ತೆಂಗಿನ ಮರ ತುಂಬಿಕೊಂಡು ಹೋಗುತ್ತಿದ್ದೇವೆ. ಹಣ ಕೊಟ್ಟು ಖರೀದಿಸಿದರೆ ನಮಗೆ ನಷ್ಟವೇ ಹೆಚ್ಚು. ರೈತರು ಉಚಿತವಾಗಿ ಕತ್ತರಿಸಿಕೊಂಡು ಹೋಗಲು ಕೇಳುತ್ತಿದ್ದಾರೆ’ ಎಂದು ಹೊಸೂರು ಸಮೀಪದ ಪಳನಿಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT