ಶುಕ್ರವಾರ, ಮಾರ್ಚ್ 24, 2023
22 °C
ಒಳಮೀಸಲಾತಿಗೆ ಕಾಂಗ್ರೆಸ್‌–ಬಿಜೆಪಿ ಜಂಟಿ ಪತ್ರಿಕಾಗೋಷ್ಠಿ

ಸದಾಶಿವ ಆಯೋಗ ವರದಿ ಮಂಡನೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಅಧಿವೇಶನದಲ್ಲಿ ಮಂಡಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಸರ್ವಪಕ್ಷಗಳ ಮಾದಿಗ ಸಮುದಾಯದ ನಾಯಕರ ನಿಯೋಗ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಕಾಂಗ್ರೆಸ್‌, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕರನ್ನು ಭೇಟಿ ಮಾಡಲು ತೀರ್ಮಾನಿಸಿದೆ.

ಒಳಮೀಸಲಾತಿಗೆ ಸಂಬಂಧಿಸಿದಂತೆ ಬುಧವಾರ ನಡೆದ ಕಾಂಗ್ರೆಸ್‌–ಬಿಜೆಪಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಸಂಸದ ಎ.ನಾರಾಯಣಸ್ವಾಮಿ ಹಾಗೂ ಕಾಂಗ್ರೆಸ್‌ ಪಕ್ಷದ ಮಾಜಿ ಸಚಿವ ಎಚ್‌.ಆಂಜನೇಯ ಮಾಹಿತಿ ನೀಡಿದರು. ಇದಕ್ಕೂ ಮೊದಲು ನಡೆದ ಸಭೆಯಲ್ಲಿ ಸಮುದಾಯದ ನಾಯಕರು ಕೆಲ ನಿರ್ಧಾರ ಕೈಗೊಂಡಿದ್ದಾರೆ.

‘ಸದಾಶಿವ ಆಯೋಗದ ವರದಿ ಸಲ್ಲಿಕೆಯಾದ ಬಳಿಕ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ರಾಜ್ಯದಲ್ಲಿ ಅಧಿಕಾರ ನಡೆಸಿವೆ. ಒಳಮೀಸಲಾತಿಗೆ ನಡೆಯುತ್ತಿದ್ದ ಹೋರಾಟದ ಸಂದರ್ಭದಲ್ಲಿ ಶೋಷಿತ ಸಮುದಾಯದ ಪರವಾಗಿದ್ದ ಪಕ್ಷ, ಅಧಿಕಾರಕ್ಕೆ ಏರಿದ ಬಳಿಕ ವರಸೆ ಬದಲಿಸಿರುವುದನ್ನು ಗಮನಿಸಿದ್ದೇವೆ. ಆಯೋಗದ ವರದಿಯನ್ನು ಸದನದಲ್ಲಿ ಮಂಡಿಸುವ ಸಂಕಲ್ಪವನ್ನು ಮೂರು ಪಕ್ಷಗಳು ಮಾಡಿಲ್ಲ’ ಎಂದು ಎ.ನಾರಾಯಣಸ್ವಾಮಿ ಬೇಸರ ವ್ಯಕ್ತಪಡಿಸಿದರು.

‘ಮಾದಿಗ ಸಮುದಾಯದ ಆರು ಶಾಸಕರು, ಇಬ್ಬರು ಸಂಸದರು, ಇಬ್ಬರು ವಿಧಾನಪರಿಷತ್‌ ಸದಸ್ಯರು ಅಧಿಕಾರದಲ್ಲಿದ್ದಾರೆ. ಕೋವಿಂದ ಎಂ.ಕಾರಜೋಳ ಅವರು ಉಪಮುಖ್ಯಮಂತ್ರಿಯಾಗಿದ್ದಾರೆ. ಸಮಾಜದ ಹಿತ ಕಾಪಾಡುವ ಉದ್ದೇಶದಿಂದ ಎಲ್ಲರೂ ಒಗ್ಗೂಡಲು ತೀರ್ಮಾನಿಸಿದ್ದೇವೆ. ಅಧಿವೇಶನಕ್ಕೂ ಮೊದಲು ಬೆಂಗಳೂರಿನಲ್ಲಿ ಸರ್ವಪಕ್ಷದ ಮುಖಂಡರ ಸಭೆ ಕರೆದು ಚರ್ಚಿಸಲಿದ್ದೇವೆ’ ಎಂದು ಎಚ್‌.ಆಂಜನೇಯ ತಿಳಿಸಿದರು.

‘ಸಮಾಜ ಕಲ್ಯಾಣ ಸಚಿವರಾಗಿದ್ದ ಅವಧಿಯಲ್ಲಿ ಸದಾಶಿವ ಆಯೋಗದ ವರದಿ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಎರಡು ಬಾರಿ ಚರ್ಚೆ ನಡೆಸಿದೆ. ವರದಿ ಅನುಷ್ಠಾನಕ್ಕೆ ಸಿದ್ದರಾಮಯ್ಯ ಅವರು ಒಲವು ತೋರಿದ್ದರಾದರೂ ಪರಿಸ್ಥಿತಿ ಪೂರಕವಾಗಿ ಇರಲಿಲ್ಲ. ವರದಿ ಜಾರಿಗೆ ತರಲು ಸಾಧ್ಯವಾಗಲಿಲ್ಲ ಎಂಬ ಕೊರಗು ಉಳಿದಿದೆ. ನಾರಾಯಣಸ್ವಾಮಿ ಕೂಡ ಇದೇ ವ್ಯಥೆ ಅನುಭವಿಸುತ್ತಿದ್ದಾರೆ’ ಎಂದು ಹೇಳಿದರು.

ಬಲಗೈ’ಗೆ ತಪ್ಪು ಕಲ್ಪನೆ: ಸಂಸದ

‘ಎಡಗೈ’ಗಿಂತಲೂ ಹೆಚ್ಚು ಜನಸಂಖ್ಯೆ ಹೊಂದಿರುವುದಾಗಿ ‘ಬಲಗೈ’ ಸಮುದಾಯ ತಪ್ಪು ಕಲ್ಪನೆ ಹೊಂದಿದೆ ಎಂದು ಸಂಸದ ಎ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.

‘ಜನಸಂಖ್ಯೆ ಪ್ರಮಾಣವನ್ನು ಖಚಿತಪಡಿಸಿಕೊಳ್ಳಲು ಎಲ್‌.ಜಿ.ಹಾವನೂರ ವರದಿ ಅಧ್ಯಯನ ಮಾಡಲಿ. ಕೆಲ ವರ್ಷಗಳ ಹಿಂದೆ ರಾಜ್ಯದಲ್ಲಿ ನಡೆದ ಜಾತಿಗಣತಿಯನ್ನು ಪರಿಶೀಲಿಸಲಿ. ಉದ್ಯೋಗ, ಶಿಕ್ಷಣ ಹಾಗೂ ಸಂಪತ್ತಿನಲ್ಲಿ ಎಡಗೈ ಸಮುದಾಯ ತೀರಾ ಹಿಂದುಳಿದಿದೆ’ ಎಂದು ಹೇಳಿದರು.

‘ಇಂತಹ ತಪ್ಪು ಕಲ್ಪನೆಗಳಿಂದಾಗಿ ಸಹೋದರರ ನಡುವೆ ಹೊಂದಾಣಿಕೆ ಸಮಸ್ಯೆ ಉಂಟಾಗುತ್ತಿದೆ. ಒಳಮೀಸಲಾತಿ ಜಾರಿಗೆ ಸರ್ಕಾರದ ಮೇಲೆ ಒತ್ತಡ ಹೇರಲು ಬಲಗೈ ಸಮುದಾಯದ ಬೆಂಬಲವನ್ನು ಪಡೆಯಲು ಪ್ರಯತ್ನಿಸುತ್ತಿದ್ದೇವೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು