ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಾಶೀರ್ವಾದ ಬದಲು ಕ್ಷಮಾದಾನ ಕೇಳಿ: ಕೆಪಿಸಿಸಿ ವಕ್ತಾರ ಬಿ.ಎನ್‌.ಚಂದ್ರಪ್ಪ

Last Updated 21 ಆಗಸ್ಟ್ 2021, 12:48 IST
ಅಕ್ಷರ ಗಾತ್ರ

ಚಿತ್ರದುರ್ಗ: ದೇಶವನ್ನು ಕೋವಿಡ್‌ ಸಂಕಷ್ಟಕ್ಕೆ ದೂಡಿದ ಹಾಗೂ ಇಂಧನ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜನಾಶೀರ್ವಾದದ ಬದಲು ಜನರ ಕ್ಷಮೆ ಕೇಳಬೇಕು ಎಂದು ಕೆಪಿಸಿಸಿ ವಕ್ತಾರ ಬಿ.ಎನ್‌.ಚಂದ್ರಪ್ಪ ಆಗ್ರಹಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೋವಿಡ್ ಮೂರನೇ ಅಲೆ ಸೃಷ್ಟಿಯಾಗುವ ಸಾಧ್ಯತೆ ಇದೆ. ಸೋಂಕು ಹರಡುವ ಭೀತಿಯ ಸಂದರ್ಭದಲ್ಲಿ ಕೋಟ್ಯಂತರ ಹಣ ಖರ್ಚು ಮಾಡಿ ಯಾತ್ರೆ ಮಾಡುವ ಅಗತ್ಯ ಏನಿತ್ತು’ ಎಂದು ಪ್ರಶ್ನಿಸಿದರು.

‘ಕೊರೊನಾ ಸಾಂಕ್ರಾಮಿಕ ರೋಗಕ್ಕೆ ಇಡೀ ದೇಶ ತಲ್ಲಣಿಸಿದೆ. ಆಮ್ಲಜನಕದ ಕೊರತೆ ಉಂಟಾಗಿ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ವೈದ್ಯಕೀಯ ಸೌಲಭ್ಯದ ಕೊರತೆಯಿಂದ ದೇಶ ದುರಂತಗಳನ್ನೇ ನೋಡಿದೆ. ಕೋವಿಡ್‌ ಎರಡನೇ ಅಲೆಯ ಸಂದರ್ಭದಲ್ಲಿ ಕುಂಭಮೇಳ ನಡೆಸಿ ಸೋಂಕು ಹರಡಲು ಅವಕಾಶ ಮಾಡಿಕೊಟ್ಟ ಕೇಂದ್ರ ಸರ್ಕಾರ, ಜನಾಶೀರ್ವಾದ ಯಾತ್ರೆಯ ಮೂಲಕ ಮತ್ತೆ ಇಂತಹದೇ ತಪ್ಪು ಮಾಡಿದೆ’ ಎಂದು ಆರೋಪಿಸಿದರು.

‘ಬೆಲೆ ಏರಿಕೆಯ ಪರಿಣಾಮವಾಗಿ ಜನರು ಹೊಟ್ಟೆತುಂಬ ಊಟ ಮಾಡುವುದು ಕಷ್ಟವಾಗಿದೆ. ದೇಶದ ಜನರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಬತ್ತಳಕೆಯಲ್ಲಿದ್ದ ಅಸ್ತ್ರಗಳು ಖಾಲಿಯಾಗಿವೆ. ಅವರನ್ನು ಜನರು ತಿರಸ್ಕಾರ ಮಾಡಲು ಆರಂಭಿಸಿದ್ದಾರೆ. ಹೀಗಾಗಿ, ಸಚಿವ ಸಂಪುಟದ ಸಹೋದ್ಯೋಗಿಗಳನ್ನು ಜನರ ಬಳಿಗೆ ಕಳುಹಿಸುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ಬಾಬು ಜಗಜೀನರಾಂ, ಮೀರಾ ಕುಮಾರ್‌, ಕೆ.ಎಚ್‌.ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆ, ರಮೇಶ ಜಿಗಜಿಣಗಿ ಸೇರಿ ದಲಿತ ಸಮುದಾಯದ ಹಲವು ನಾಯಕರು ಕೇಂದ್ರ ಸಚಿವರಾಗಿದ್ದಾರೆ. ಅವರು ಯಾವತ್ತೂ ಹೀಗೆ ಜಾತ್ರೆ ಮಾಡಲಿಲ್ಲ. ಜನರು ಸಂಕಷ್ಟದಲ್ಲಿದ್ದಾಗ ವಿಜೃಂಭಿಸಲಿಲ್ಲ. ಡಾ.ಮನಮೋಹನ್‌ ಸಿಂಗ್ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಜನಪರ ಆಡಳಿತ ನೀಡಿದ ಕಾಂಗ್ರೆಸ್‌ಗೆ ಜನಾಶೀರ್ವಾದ ಕೇಳುವ ಹಕ್ಕಿದೆಯೇ ಹೊರತು ಬಿಜೆಪಿಗಲ್ಲ’ ಎಂದು ತಿರುಗೇಟು ನೀಡಿದರು.

‘ಮೀಸಲಾತಿ ರದ್ದುಪಡಿಸುತ್ತೇವೆ’ ಎಂದು ಹೇಳಿದ್ದು ಬಿಜೆಪಿ ನಾಯಕರೇ ಹೊರತು ಕಾಂಗ್ರೆಸ್‌ ಅಲ್ಲ. ಮೀಸಲಾತಿ ಬಗ್ಗೆ ಬಿಜೆಪಿ ದ್ವಿಮುಖ ನಿಲುವು ತಳೆಯುತ್ತಿದೆ ಎಂದು ಚಂದ್ರಪ್ಪ ದೂರಿದರು.

‘ಸಂಸದ ಅನಂತಕುಮಾರ್‌ ಹೆಗಡೆ ಅವರು ಸಚಿವರಾಗಿದ್ದ ಅವಧಿಯಲ್ಲಿ ಮೀಸಲಾತಿ ಬಗ್ಗೆ ಆಡಿದ ಮಾತು ದೇಶಕ್ಕೆ ಗೊತ್ತಿದೆ. ಬಿಜೆಪಿ ಹಿರಿಯ ಮುಖಂಡರಾಗಿದ್ದ ರಾಮಜೋಯಿಸ್‌ ಮೀಸಲಾತಿ ವಿರುದ್ಧ ಕಿಡಿಕಾರಿದ್ದರು. ಕಾಂಗ್ರೆಸ್‌ ಯಾವತ್ತೂ ಇಂತಹ ಹೇಳಿಕೆ ನೀಡಿಲ್ಲ’ ಎಂದರು.

ಅಂಬೇಡ್ಕರ್ ವಿಚಾರದಲ್ಲಿ ಕೀಳುಮಟ್ಟದ ರಾಜಕೀಯ ಮಾಡುವ ಅಗತ್ಯ ಕಾಂಗ್ರೆಸ್‌ಗೆ ಇಲ್ಲ. ಬಿಜೆಪಿಗೆ ಚರಿತ್ರೆಯ ಬಗ್ಗೆ ಸರಿಯಾದ ತಿಳಿವಳಿಕೆ ಇಲ್ಲ ಎಂದು ಚಂದ್ರಪ್ಪ ಆರೋಪಿಸಿದರು.

‘ಅಂಬೇಡ್ಕರ್‌ ಅವರ ಪ್ರತಿಭೆಯನ್ನು ಗುರುತಿಸಿದ್ದು ಕಾಂಗ್ರೆಸ್‌. ದೇಶಕ್ಕೆ ಸಂವಿಧಾನ ರಚನೆ ಮಾಡುವ ಜವಾಬ್ದಾರಿ ನೀಡಿದ್ದು ಕಾಂಗ್ರೆಸ್‌. ದೇಶದ ಮೊದಲ ಕಾನೂನು ಸಚಿವರಾಗುವ ಅವಕಾಶವನ್ನು ನಮ್ಮ ಪಕ್ಷ ನೀಡಿದೆ. ಅಂಬೇಡ್ಕರ್‌ಗೆ ನಿಮ್ಮಿಂದ ಏನು ಸಹಾಯವಾಗಿದೆ’ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್‌. ಕಾರ್ಯಾಧ್ಯಕ್ಷ ಕೆ.ಎಂ.ಹಾಲೇಶ್‌, ಮುಖಂಡರಾದ ಹನುಮಲಿ ಷಣ್ಮುಖಪ್ಪ, ಬಿ.ಟಿ.ಜಗದೀಶ್‌, ಗೀತಾ ನಂದಿನಿಗೌಡ, ಸಂಪತ್‌ಕುಮಾರ್‌, ಬಾಲಕೃಷ್ಣಸ್ವಾಮಿ ಯಾದವ್‌ ಇದ್ದರು.

***

ಪ್ರಮಾಣ ವಚನ ಸ್ವೀಕರಿಸಿದಾಗಲೇ ಸಚಿವರು ದೇಶಕ್ಕೆ ಪರಿಚಯ ಆಗಿದ್ದಾರೆ. ಇದಕ್ಕೆ ಸಂಸತ್‌ ಕಲಾಪದಲ್ಲಿ ಸಮಯ ನೀಡಬೇಕಿಲ್ಲ. ಜನವಿರೋಧಿ ಕಾನೂನು ರೂಪಿಸುವಾಗ ಏಕೆ ವಿರೋಧ ಪಕ್ಷಗಳ ಅಭಿಪ್ರಾಯ ಕೇಳಲಿಲ್ಲ?

- ಬಿ.ಎನ್‌.ಚಂದ್ರಪ್ಪ,ಕೆಪಿಸಿಸಿ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT