ಭಾನುವಾರ, ಏಪ್ರಿಲ್ 2, 2023
31 °C
ಬೀದಿಗೆ ಇಳಿದ ಕಾಂಗ್ರೆಸ್‌ ನಾಯಕರು, ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ

ಬೆಲೆ ಏರಿಕೆ ವಿರೋಧಿಸಿ ಸೈಕಲ್‌ ಜಾಥಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಇಂಧನ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್‌ ನಾಯಕರು ಸೈಕಲ್‌ ಜಾಥಾ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹಣದುಬ್ಬರ ನಿಯಂತ್ರಿಸಿ ಸಾಮಾನ್ಯರ ಬದುಕಿಗೆ ಅನುಕೂಲಕರ ಪರಿಸ್ಥಿತಿ ನಿರ್ಮಿಸುವಂತೆ ಆಗ್ರಹಿಸಿದರು.

ರೈಲ್ವೆ ನಿಲ್ದಾಣದಿಂದ ಹೊರಟ ಸೈಕಲ್‌ ಜಾಥಾ ದಾವಣಗೆರೆ ರಸ್ತೆ, ಗಾಂಧಿ ವೃತ್ತ, ವಾಸವಿಮಹಲ್‌ ರಸ್ತೆ ಮೂಲಕ ಒನಕೆ ಓಬವ್ವ ವೃತ್ತ ತಲುಪಿತು. ಕೆಪಿಸಿಸಿ ವಕ್ತಾರ ವಿ.ಎಸ್‌.ಉಗ್ರಪ್ಪ, ಮಾಜಿ ಸಚಿವ ಎಚ್‌.ಆಂಜನೇಯ ಸೇರಿ ಹಲವು ನಾಯಕರು ಸೈಕಲ್‌ ತುಳಿದು ಗಮನ ಸೆಳೆದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು.

ವಿ.ಎಸ್‌.ಉಗ್ರಪ್ಪ ಮಾತನಾಡಿ, ‘ಕೋವಿಡ್‌ ತೊಂದರೆಗೆ ಸಿಲುಕಿದ ಜನರನ್ನು ಬೆಲೆ ಏರಿಕೆ ಸಂಕಷ್ಟಕ್ಕೆ ದೂಡಿದೆ. ಜೀವನ ನಿರ್ವಹಣೆಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇಂಧನ ಹಾಗೂ ಅಗತ್ಯ ವಸ್ತುಗಳ ಬೆಲೆ ಗಗನಮುಖಿಯಾಗಿದೆ. ಹಣದುಬ್ಬರ ನಿಯಂತ್ರಿಸುವ ಹೊಣೆಗಾರಿಕೆಯನ್ನು ಸರ್ಕಾರಗಳು ತೋರುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘2014ರಲ್ಲಿ ಕಚ್ಚಾತೈಲದ ಬೆಲೆ ಬ್ಯಾರಲ್‌ಗೆ 120 ಡಾಲರ್‌ ಇತ್ತು. ಆಗ ಪೆಟ್ರೋಲ್‌ ₹ 67 ಹಾಗೂ ಡೀಸೆಲ್‌ ₹ 63, ಅಡುಗೆ ಅನಿಲ ₹ 400 ಇತ್ತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಬ್ಯಾರಲ್‌ಗೆ 70 ಡಾಲರ್‌ ಇದೆ. ಆದರೆ, ಪೆಟ್ರೋಲ್‌, ಡೀಸೆಲ್‌ ಹಾಗೂ ಅಡುಗೆ ಅನಿಲದ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಜನಸಾಮಾನ್ಯರ ಬದುಕಿನ ಮೇಲೆ ಇದು ಪರಿಣಾಮ ಬೀರುತ್ತಿದೆ’ ಎಂದು ದೂರಿದರು.

‘ಅಡುಗೆ ಎಣ್ಣೆಯ ಬೆಲೆ ಲೀಟರ್‌ಗೆ ₹ 200 ತಲುಪಿದೆ. ಅಕ್ಕಿ, ರಾಗಿ, ಬೇಳೆ ಸೇರಿ ಜನಸಾಮಾನ್ಯರು ಬಳಕೆ ಮಾಡುವ ವಸ್ತುಗಳ ದರದಲ್ಲಿ ಭಾರಿ ಏರಿಕೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಯಾವುದೇ ಬದ್ಧತೆ ಇಲ್ಲ. ಭಾವನಾತ್ಮಕ ವಿಚಾರದಲ್ಲಿ ಉನ್ಮಾದ ಸೃಷ್ಟಿಸುವ ಬದಲು ಆರ್ಥಿಕ ಸಂಕಷ್ಟಗಳಿಗೆ ಸ್ಪಂದಿಸಿ’ ಎಂದು ಆಗ್ರಹಿಸಿದರು.

‘ರಫೆಲ್‌ ಯುದ್ಧ ವಿಮಾನ ಖರೀದಿಯಲ್ಲಿ ಅಂದಾಜು ₹ 36 ಸಾವಿರ ಕೋಟಿ ಭ್ರಷ್ಟಾಚಾರ ನಡೆದಿದೆ. ಜಂಟಿ ಸದನ ಸಮಿತಿ ತನಿಖೆಗೆ ಪ್ರಧಾನಿ ಹಿಂದೇಟು ಹಾಕುತ್ತಿದ್ದಾರೆ. ಸತ್ಯಹರಿಶ್ಚಂದ್ರರಂತೆ ಬಿಂಬಿಸಿಕೊಳ್ಳುವ ಪ್ರಧಾನಿ ಮೋದಿ ಭ್ರಷ್ಟಾಚಾರದಲ್ಲಿ ಗೋಮುಖ ವ್ಯಾಘ್ರರಂತೆ ವರ್ತಿಸುತ್ತಿದ್ದಾರೆ. ತಮಗೆ ಬೇಕಾದ ಕಂಪನಿಗಳಿಗೆ ಆರ್ಥಿಕ ಅನುಕೂಲ ಮಾಡಿಕೊಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಕೇಂದ್ರದ ರೀತಿಯಲ್ಲೇ ರಾಜ್ಯದಲ್ಲಿಯೂ ಭ್ರಷ್ಟಾಚಾರದ ಗಂಗೋತ್ರಿ ಹರಿಯುತ್ತಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕುಟುಂಬ ಭ್ರಷ್ಟಾಚಾರದಲ್ಲಿ ಮುಳುಗಿರುವುದನ್ನು ಬಿಜೆಪಿ ನಾಯಕರೇ ಬಹಿರಂಗಪಡಿಸಿದ್ದಾರೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಿಂದ ₹ 16 ಕೋಟಿ ಲಂಚ ಪಡೆದಿರುವ ಆರೋಪ ಮಾಧ್ಯಮದಲ್ಲಿ ವರದಿಯಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ಅವರು ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.

‘ಬಿಜೆಪಿಗಿದೆ ಕೌರವ ಗುಣ’

ಹೆಣ್ಣು, ಹೊನ್ನು, ಮಣ್ಣಿಗೆ ಕಾತರಿಸುವ ಬಿಜೆಪಿ ನಾಯಕರಲ್ಲಿ ಕೌರವ ಗುಣಗಳಿವೆ. ಇದು ಜನರಿಗೂ ಗೊತ್ತಾಗಿದೆ ಎಂದು ಉಗ್ರಪ್ಪ ಟೀಕಿಸಿದರು.

‘ಕಾಂಗ್ರೆಸ್‌ನಲ್ಲಿ ಪಂಚ ಕೌರವರಿದ್ದಾರೆ’ ಎಂಬ ಸಚಿವ ಕೆ.ಎಸ್‌.ಈಶ್ವರಪ್ಪ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಉಗ್ರಪ್ಪ, ‘ರಾಮಾಯಣ ಮತ್ತು ಮಹಾಭಾರತದ ಬಗ್ಗೆ ಈಶ್ವರಪ್ಪ ಅವರಿಗೆ ಜ್ಞಾನವಿದ್ದಂತೆ ಕಾಣುತ್ತಿಲ್ಲ. ಕೌರವರ ಸಂಖ್ಯೆ ಎಷ್ಟು ಎಂಬುದೇ ಅವರಿಗೆ ಗೊತ್ತಿಲ್ಲ. ಬೆಳಗಾವಿ ಸಾಹುಕಾರ ಹೆಣ್ಣಿನ ಮೋಹಕ್ಕೆ ಒಳಗಾದದ್ದು ಎಲ್ಲರಿಗೂ ಗೊತ್ತಿದೆ. ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಮಾಡುತ್ತಿರುವ ಅನಾಚಾರಗಳೂ ಬಹಿರಂಗವಾಗುತ್ತಿವೆ’ ಎಂದು ತಿರುಗೇಟು ನೀಡಿದರು.

ಕೆಪಿಸಿಸಿ ವೀಕ್ಷಕರೂ ಆಗಿರುವ ವಿಧಾನಪರಿಷತ್ ಸದಸ್ಯ ನಾಸೀರ್‌ ಅಹಮ್ಮದ್‌, ನಾಗರಾಜ್‌, ಮೋಹನ್‌ಬಾಬು, ಕೆಪಿಸಿಸಿ ಅಸಂಘಟಿತ ಕಾರ್ಮಿಕ ವಿಭಾಗದ ಅಧ್ಯಕ್ಷ ಜಿ.ಎಸ್‌.ಮಂಜುನಾಥ್‌, ಕಾಂಗ್ರೆಸ್ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ ಇದ್ದರು.

***

ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಸರ್ಕಾರಗಳ ವೈಫಲ್ಯ ಖಂಡಿಸಿ ದೇಶದ ಎಲ್ಲೆಡೆ ಸೈಕಲ್‌ ಜಾಥಾ ನಡೆಸಲಾಗಿದೆ. ಹೋರಾಟ ಇನ್ನೂ ತೀವ್ರಗೊಳ್ಳಲಿದೆ.

-ಎಂ.ಕೆ.ತಾಜ್‌ಪೀರ್‌, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು