ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ ಮುಟ್ಟಿದರೆ ಹರಿವುದು ನೆತ್ತರು: ಮಾಜಿ ಸಚಿವ ಎಚ್‌.ಆಂಜನೇಯ ಎಚ್ಚರಿಕೆ

Last Updated 26 ನವೆಂಬರ್ 2020, 11:49 IST
ಅಕ್ಷರ ಗಾತ್ರ

ಚಿತ್ರದುರ್ಗ: ವಿಶ್ವವೇ ಒಪ್ಪುವ ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್‌ ಅವರು ದೇಶಕ್ಕೆ ನೀಡಿದ್ದಾರೆ. ಕೆಲ ಮತೀಯ ಶಕ್ತಿಗಳು ಸಂವಿಧಾನ ಬದಲಿಸುವ ಹವಣಿಕೆಯಲ್ಲಿವೆ. ಸಂವಿಧಾನಕ್ಕೆ ಕೈಹಾಕಿದರೆ ದಂಗೆ ಏಳುತ್ತದೆ. ಕಾಶ್ಮೀರದಿಂದ ಕನ್ಯಕುಮಾರಿವರೆಗೂ ನೆತ್ತರು ಹರಿಯುತ್ತದೆ ಎಂದು ಮಾಜಿ ಸಚಿವ ಎಚ್‌.ಆಂಜನೇಯ ಎಚ್ಚರಿಕೆ ನೀಡಿದರು.

ಸಂವಿಧಾನ ಅರ್ಪಣಾ ದಿನಾಚರಣೆಯ ಅಂಗವಾಗಿ ತಾಲ್ಲೂಕಿನ ದೊಡ್ಡಸಿದ್ದವ್ವನಹಳ್ಳಿಯಲ್ಲಿ ಮಾದಿಗ ಸಮಾಜ ಗುರುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕಾಲಕ್ಕೆ ಅನುಗುಣವಾಗಿ ಸಂವಿಧಾನಕ್ಕೆ ತಿದ್ದುಪಡಿ ತರಲು ಅಂಬೇಡ್ಕರ್‌ ಅವಕಾಶ ಮಾಡಿಕೊಟ್ಟಿದ್ದಾರೆ. ತಿದ್ದುಪಡಿ ಮೂಲಕ ಅಗತ್ಯ ಇರುವುದನ್ನು ಸಂವಿಧಾನಕ್ಕೆ ಸೇರಿಸಿ. ದೇಶದ ಅಭಿವೃದ್ಧಿಗೆ ಹಾಗೂ ಜನರ ಒಳಿತಿಗೆ ಕಾನೂನು ರೂಪಿಸಿ. ಸಂವಿಧಾನದ ವಿರುದ್ಧ ಅಪಸ್ವರ ಎತ್ತುವುದನ್ನು ಕೈಬಿಡಿ’ ಎಂದು ಸಲಹೆ ನೀಡಿದರು.

‘ಸಾವಿರಾರು ಜಾತಿಗಳನ್ನು ಹೊಂದಿದ, ಮೂಢನಂಬಿಕೆ ಹಾಗೂ ಅಸಮಾನತೆಯನ್ನು ಮೈವೆತ್ತ ದೇಶಕ್ಕೆ ಸಂವಿಧಾನ ಮಾರ್ಗದರ್ಶನ ನೀಡುತ್ತಿದೆ. ಸಂಪತ್ತಿನ ಸಮಾನ ಹಂಚಿಕೆ, ಸಮಾನತೆಯ ಅಶಯದೊಂದಿಗೆ ಸಂವಿಧಾನವನ್ನು ರೂಪಿಸಲಾಗಿದೆ. ಸ್ವಾತಂತ್ರ್ಯ ಕೆಲವೇ ವರ್ಗಕ್ಕೆ ಸೀಮಿತವಾಗುವ ಅಪಾಯವನ್ನು ಇದು ತಪ್ಪಿಸಿದೆ. ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಸರ್ಕಾರ ನಡೆದುಕೊಳ್ಳಬೇಕು’ ಎಂದು ಹೇಳಿದರು.

‘ಸ್ವಾತಂತ್ರ್ಯ ಪೂರ್ವದಲ್ಲಿ ವಿದೇಶದಲ್ಲಿ ಶಿಕ್ಷಣ ಪಡೆದ ಬೆರಳೆಣಿಕೆ ಪ್ರತಿಭಾವಂತರಲ್ಲಿ ಅಂಬೇಡ್ಕರ್‌ ಕೂಡ ಒಬ್ಬರು. ಕೆಳ ಜಾತಿಯಲ್ಲಿ ಜನಿಸಿದ ಅವರು ದೇಶಕ್ಕೆ ಅತ್ಯುತ್ತಮ ಸಂವಿಧಾನ ನೀಡಿದ್ದಾರೆ. ಮೀಸಲಾತಿ ಸೌಲಭ್ಯ ಕಲ್ಪಿಸಿ ಅವಕಾಶ ವಂಚಿತ ಸಮುದಾಯಕ್ಕೆ ನೆರವಾಗಿದ್ದಾರೆ. ಮಹಾತ್ಮ ಗಾಂಧೀಜಿ ಅವರೊಂದಿಗೆ ತಾತ್ವಿಕ ಭಿನ್ನಾಭಿಪ್ರಾಯ ಹೊಂದಿದ್ದರೂ ನೆಹರೂ ಸಂಪುಟದಲ್ಲಿ ಅಂಬೇಡ್ಕರ್‌ಗೆ ಅವಕಾಶ ಸಿಕ್ಕಿತ್ತು. ಆದರೂ, ಕೆಲವರು ಸತ್ಯಾಂಶವನ್ನು ತಿರುಚುವ ಕೆಲಸ ಮಾಡುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಶೋಷಿತ ಸಮುದಾಯಕ್ಕೆ ಸಮಾಜದಲ್ಲಿ ಮನ್ನಣೆ ಇರಲಿಲ್ಲ. ಕೆರೆಯ ನೀರು ಮುಟ್ಟುವುದಕ್ಕೂ ಅವಕಾಶವಿರಲಿಲ್ಲ. ದೇಗುಲ ಪ್ರವೇಶ ನಿಷಿದ್ಧವಾಗಿತ್ತು. ಬೀದಿಯಲ್ಲಿ ಮುಕ್ತವಾಗಿ ಸಂಚರಿಸುವ ಸ್ವಾತಂತ್ರ್ಯವೂ ಮಾದಿಗ ಸಮುದಾಯಕ್ಕೆ ಇರಲಿಲ್ಲ. ನೋವು, ಅವಮಾನವನ್ನು ಸಹಿಸಿಕೊಂಡು ಸಮಾಜದ ಏಳಿಗೆಗೆ ಒಳಿತು ಬಯಸುತ್ತೇವೆ. ಹಗೆ ಸಾಧಿಸುವ ಸಮುದಾಯ ನಮ್ಮದಲ್ಲ’ ಎಂದರು.

ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ಕಲ್ಪಿಸುವಂತೆ 25 ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇವೆ. ಆದರೆ, ಈವರೆಗೆ ಸೌಲಭ್ಯ ಮಾತ್ರ ಸಿಕ್ಕಿಲ್ಲ ಎಂದು ಎಚ್‌.ಆಂಜನೇಯ ಬೇಸರ ವ್ಯಕ್ತಪಡಿಸಿದರು.

‘ಪರಿಶಿಷ್ಟ ಜಾತಿ ಪಟ್ಟಿಯಲ್ಲಿ 101 ಜಾತಿಗಳಿವೆ. ತೋಳ, ಹುಲಿ, ಚಿರತೆ, ಕೋಣದಂತಹ ಜಾತಿಗಳು ಇಲ್ಲಿವೆ. ನಾವು ಕುರಿಯ ರೀತಿಯಲ್ಲಿದ್ದೇವೆ. ಉಳಿದವರನ್ನು ಎದುರಿಸುವ ಶಕ್ತಿ ಖಂಡಿತ ಇಲ್ಲ. ಶೋಷಿತ ಸಮುದಾಯದ ನೋವು ಅರಿತು ಒಳಮೀಸಲಾತಿ ಸೌಲಭ್ಯ ಕಲ್ಪಿಸಿ’ ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿಯ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಆರ್‌.ನರಸಿಂಹರಾಜು, ಜಲತಜ್ಞ ಎನ್‌.ಜೆ.ದೇವರಾಜ ರೆಡ್ಡಿ, ಅಂಚೆ ಇಲಾಖೆ ನಿವೃತ್ತ ನೌಕರ ಡಿ.ಎಸ್‌.ಕಾಂತಪ್ಪ, ಬಿಎಸ್‌ಪಿ ಮುಖಂಡ ವೆಂಕಟೇಶ್‌ ಐಹೊಳೆ, ಮುಖಂಡರಾದ ಆರ್‌.ಎಲ್‌.ಷಣ್ಮುಖ, ಆರ್‌.ಬಾಬುರಾಜ್‌, ಎಸ್‌.ತಿಪ್ಪೇಸ್ವಾಮಿ, ಎಂ.ಸೋಮಶೇಖರ್‌, ಎಂ.ಎಚ್‌.ಲಕ್ಷ್ಮಣ್‌, ಚಂದ್ರಶೇಖರ್‌ ಇದ್ದರು.

***

ನಿಗಮ, ಮಂಡಳಿಗಳಿಗೆ ರಾಜ್ಯ ಸರ್ಕಾರ ಮಾಡಿದ ನೇಮಕಾತಿಯಲ್ಲಿ ಮಾದಿಗ ಸಮುದಾಯಕ್ಕೆ ಅನ್ಯಾಯವಾಗಿದೆ. ಮಾದಿಗ ಸಮುದಾಯಕ್ಕೂ ಪ್ರತಿನಿಧ್ಯ ನೀಡಬೇಕು.

–ಎಚ್‌.ಆಂಜನೇಯ
ಮಾಜಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT