ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಳಕಾಲ್ಮುರು |ವಾರದ ಸಂತೆ: ಮೂಲಸೌಕರ್ಯ ಕೊರತೆ, ಗ್ರಾಹಕರು–ವ್ಯಾಪಾರಿಗಳು ಹೈರಾಣು

ಬಾಣಲೆಯಿಂದ ಬೆಂಕಿಗೆ ಬಿದ್ದ ಸ್ಥಿತಿಯಲ್ಲಿ ವ್ಯಾಪಾರಿಗಳು; ಕನಿಷ್ಠ ಮೂಲಸೌಕರ್ಯಗಳೂ ಇಲ್ಲ
Published 29 ಮಾರ್ಚ್ 2024, 6:35 IST
Last Updated 29 ಮಾರ್ಚ್ 2024, 6:35 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಪಟ್ಟಣದಲ್ಲಿ ಪ್ರತಿ ಬುಧವಾರ ನಡೆಯುವ ವಾರದಸಂತೆ ಮೈದಾನದಲ್ಲಿ ಕನಿಷ್ಠ ಮೂಲಸೌಕರ್ಯಗಳೂ ಇಲ್ಲದ ಪರಿಣಾಮ ಗ್ರಾಹಕರು ಮತ್ತು ವ್ಯಾಪಾರಿಗಳು ಹೈರಾಣಾಗಿ ಹೋಗಿದ್ದಾರೆ.

ಹಲವು ದಶಕಗಳಿಂದ ಪಟ್ಟಣದ ಒಳಗಡೆಯ ಮುಖ್ಯರಸ್ತೆ ಬದಿಯಲ್ಲಿ ವಾರದ ಸಂತೆಯನ್ನು ನಡೆಸಿಕೊಂಡು ಬರಲಾಗುತ್ತಿತ್ತು. ಅಧಿಕ ವಾಹನ ಸಂಚಾರದಿಂದ ವ್ಯಾಪಾರಿಗಳು ಮತು ಗ್ರಾಹಕರು ಜೀವಭಯದಲ್ಲಿ ವ್ಯಾಪಾರ ಮಾಡಬೇಕಿದೆ ಎಂಬ ದೂರು ವ್ಯಕ್ತವಾಗಿದ್ದ ಪರಿಣಾಮ 4 ತಿಂಗಳ ಹಿಂದೆ ತಾಲ್ಲೂಕು ಆಡಳಿತವು ಕೃಷಿ ಇಲಾಖೆ ಸಮೀಪದಲ್ಲಿನ ಕಂದಾಯ ಇಲಾಖೆಗೆ ಸೇರಿದ ಜಾಗವನ್ನು ಸಂತೆ ಮೈದಾನಕ್ಕೆ ನಿಗದಿ ಮಾಡಿತ್ತು. 

ಹೊಸ ಸ್ಥಳದಲ್ಲಿ ನೆಲವನ್ನು ಸಮತಟ್ಟು ಮಾಡಿರುವುದನ್ನು ಹೊರತುಪಡಿಸಿದರೆ, ವ್ಯಾಪಾರಕ್ಕೆ ಬೇಕಾದ ಯಾವುದೇ ಅನುಕೂಲವನ್ನು ಮಾಡಿಕೊಟ್ಟಿಲ್ಲ. ವ್ಯಾಪಾರಿಗಳು ಕುಳಿತುಕೊಳ್ಳಲು ಕಟ್ಟೆ, ನೆರಳಿನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಸಾಮೂಹಿಕ ಶೌಚಾಲಯ ವ್ಯವಸ್ಥೆ ಮಾಡಿಲ್ಲ. ಸಮೀಪದ ಮುಳ್ಳುಪೊದೆಗಳನ್ನೇ ಮಲಮೂತ್ರ ವಿಸರ್ಜನೆಗೆ ಅವಲಂಬಿಸಬೇಕಾಗಿದೆ ಎಂದು ವ್ಯಾಪಾರಿಗಳು ದೂರಿದರು.

ಮೊದಲೇ ಮೊಳಕಾಲ್ಮುರು ಬಿರುಬಿಸಿಲಿಗೆ ಹೆಸರು ವಾಸಿಯಾಗಿದೆ. ನೆರಳಿನ ವ್ಯವಸ್ಥೆ ಇಲ್ಲದ ಕಾರಣ ತಂದಿರುವ ತರಕಾರಿ, ಸೊಪ್ಪು, ಹಣ್ಣುಗಳು ಗ್ರಾಹಕರು ಬರುವ ಮುನ್ನವೇ ಬಾಡಿಹೋಗುತ್ತಿದೆ. ಇದರಿಂದ ಗ್ರಾಹಕರು ಕೊಳ್ಳದೇ ವಾಪಸ್‌ ಹೋಗುತ್ತಾರೆ. ನೂತನ ಸಂತೆ ಮೈದಾನ ಪಟ್ಟಣದಿಂದ ದೂರ ಇರುವುದರಿಂದ, ಮೊದಲಿಗೆ ಹೋಲಿಕೆ ಮಾಡಿದರೆ ಗ್ರಾಹಕರು ಬರುವುದೂ ತಡವಾಗುತ್ತಿದೆ. ತಂದಿರುವ ತರಕಾರಿ ಒಣಗಿ, ಖರ್ಚಾಗದೇ ಉಳಿದು ನಷ್ಟವಾಗುತ್ತಿದೆ ಎಂದು ವ್ಯಾಪಾರಿಗಳಾದ ಕೊಟ್ರಮ್ಮ, ಮಹಮದ್‌ ಆಲಿ ದೂರಿದರು. 

ಸಂತೆ ಮೈದಾನ ಆರಂಭವಾದಾಗ, ಅದರ ಅಭಿವೃದ್ಧಿಗಾಗಿ ಪಟ್ಟಣ ಪಂಚಾಯಿತಿಯಿಂದ ₹1 ಕೋಟಿ ಅನುದಾನ ಮಂಜೂರಾಗಿದೆ. ತಕ್ಷಣ ಅಭಿವೃದ್ಧಿ ಕಾರ್ಯ ಆರಂಭವಾಗಲಿವೆ  ಎಂದು ಜನಪ್ರತಿನಿಧಿಗಳು ಭರವಸೆ ನೀಡಿದ್ದರು. ಆದರೆ ಇದು ಕಾರ್ಯರೂಪಕ್ಕೆ ಬಂದಿಲ್ಲ. ಈಗ ಲೋಕಸಭಾ ಚುನಾವಣೆ ನೀತಿಸಂಹಿತೆ ಜಾರಿಯುಲ್ಲಿರುವ ಕಾರಣ ಇನ್ನೂ 3 ತಿಂಗಳು ಕಾಮಗಾರಿ ಆರಂಭ ಕಷ್ಟ. ಆದ್ದರಿಂದ ಜಿಲ್ಲಾಡಳಿತ ಇತ್ತ ಗಮನಹರಿಸಿ ತಕ್ಷಣ ಕಾರ್ಯಾರಂಭಕ್ಕೆ ಕ್ರಮ ಕೈಗೊಳ್ಳಬೇಕು ಎಂದು ವ್ಯಾಪಾರಿಗಳಾದ ಮಾರಕ್ಕ, ಶಾಂತಮ್ಮ, ಜನಸಂಸ್ಥಾನ ಸಂಸ್ಥೆ ಕಾರ್ಯದರ್ಶಿ ವಿರೂಪಾಕ್ಷಪ್ಪ ಮನವಿ ಮಾಡಿದ್ದಾರೆ. 

ಸೌಲಭ್ಯಗಳನ್ನು ಕಲ್ಪಿಸದಿದ್ದರೂ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಪಟ್ಟಣ ಪಂಚಾಯಿತಿ ನೆಲ ಬಾಡಿಗೆ ವಸೂಲಿಗೆ ಹರಾಜು ಮಾಡುತ್ತಿದೆ. ಈ ಬಗ್ಗೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
-ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ರೈತ ಸಂಘದ ಹಿರಿಯ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT