ಮಂಗಳವಾರ, ಜೂನ್ 2, 2020
27 °C
ಹೆಚ್ಚಾಗಿ ಪುಷ್ಪ ಬೆಳೆದ ರೈತರಿಗೂ ತಟ್ಟಿದ ಬಿಸಿ * ಹೂವಿನ ವ್ಯಾಪಾರಿಗಳು ಕಂಗಾಲು

ಚಿತ್ರದುರ್ಗ: ಪುಷ್ಪೋದ್ಯಮ ತಲ್ಲಣ; ನಷ್ಟದಲ್ಲಿ ರೈತ

ಕೆ.ಎಸ್. ಪ್ರಣವಕುಮಾರ್ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ತಾಲ್ಲೂಕು ವ್ಯಾಪ್ತಿಯಲ್ಲಿ ಅನೇಕ ರೈತರು ಬೆಳೆದಿದ್ದ ಹೂವುಗಳು ಒಣಗಿ ಹೋಗುವ ಸಾಧ್ಯತೆ ದಟ್ಟವಾಗಿದೆ. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸಂತೆ, ಮಾರುಕಟ್ಟೆ ರದ್ದಾಗಿರುವ ಕಾರಣ ಪುಷ್ಪೋದ್ಯಮವೂ ತಲ್ಲಣಗೊಂಡಿದ್ದು, ಈ ಬಾರಿ ಹೂ ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ.

ಮಾರ್ಚ್, ಏಪ್ರಿಲ್‌ ತಿಂಗಳಲ್ಲಿ ಜಾತ್ರೆಗಳು ಹೆಚ್ಚು. ಈ ವೇಳೆ ಹೂವಿನ ದರವೂ ಅಧಿಕ. ಲಾಭದ ದೃಷ್ಟಿಯಿಂದ ಪುಷ್ಪೋದ್ಯಮ ಚಟುವಟಿಕೆಯಲ್ಲಿ ಪ್ರತಿ ವರ್ಷ ನಿರತರಾದ ಅನೇಕ ಹೂ ಬೆಳೆಗಾರರು ಮುಂಚಿತವಾಗಿಯೇ ಹೂವುಗಳನ್ನು ಬೆಳೆಯಲು ಮುಂದಾದರು. ಜಾತ್ರೆಗಳೆಲ್ಲವೂ ಕೊರೊನಾದಿಂದಾಗಿ ರದ್ದಾಗಿರುವ ಕಾರಣ ದಿಕ್ಕೇ ತೋಚದ ಪರಿಸ್ಥಿತಿಯಲ್ಲಿದ್ದಾರೆ.

ಮದುವೆ, ಗೃಹ ಪ್ರವೇಶ ಸರಳವಾಗಿ ಆಚರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸೂಚನೆ ನೀಡಿದ ಕಾರಣ ಕೆಲ ದಿನಗಳಿಂದ ಹೂವಿನ ಅಲಂಕಾರಕ್ಕಾಗಿ ದುಂದು ವೆಚ್ಚ ಮಾಡುವುದು ಬೇಡ ಎಂಬುದಾಗಿ ಕೆಲವರು ನಿರ್ಧರಿಸುತ್ತಿದ್ದಾರೆ. ಇದರಿಂದಾಗಿ ಪುಷ್ಪಗಳಿಗೂ ಬೇಡಿಕೆ ಕಡಿಮೆಯಾಗಿದೆ.

ಸದಾ ಅಲಂಕಾರದಿಂದಲೇ ಕಂಗೊಳಿಸುತ್ತಿದ್ದ ದೇವರ ವಿಗ್ರಹಗಳಿಗೂ ಸರಳವಾಗಿ ಅಲಂಕರಿಸಿ ಅರ್ಚಕರು ಪೂಜೆ ಸಲ್ಲಿಸುತ್ತಿದ್ದಾರೆ. ಜತೆಗೆ ಭಕ್ತರಿಗೆ ದೇಗುಲ ಪ್ರವೇಶಾತಿ ಸಂಪೂರ್ಣ ನಿರ್ಬಂಧಿಸಲಾಗಿದೆ. ಇದೇ ಕಾರಣಕ್ಕಾಗಿ ಬಹುತೇಕ ದೇಗುಲಗಳು ಕೂಡ ಮುಚ್ಚಲ್ಪಟ್ಟಿರುವ ಕಾರಣ ಎಲ್ಲಿಯೂ ವಿಶೇಷ ಅಲಂಕಾರ ಕೂಡ ನಡೆಯುತ್ತಿಲ್ಲ.

ಇನ್ನೂ ಮನೆಗಳಲ್ಲಿ ಪೂಜೆ ನೆರವೇರಿಸಲು ಅನೇಕರು ಪುಷ್ಪ ಖರೀದಿಗೆ ಮೊದಲಿನಂತೆ ಉತ್ಸಾಹ ತೋರುತ್ತಿಲ್ಲ. ಮನೆಗಳ ಮುಂಭಾಗದಲ್ಲಿಯೇ ಸಿಗುವ ಹೂಗಳನ್ನೇ ಸಮರ್ಪಿಸುತ್ತಿದ್ದಾರೆ. ಮನೆ ಮನೆಗೆ ಹೋಗಿ ಹೂ ಮಾರುವವರ ಸಂಖ್ಯೆಯೂ ಎರಡು ದಿನದಿಂದ ಕಡಿಮೆಯಾಗಿದೆ.

ಕೊರೊನಾ ವೈರಸ್ ಭೀತಿಯಿಂದಾಗಿ ತಾಲ್ಲೂಕಿನ ಕೆಲ ಹೂ ಬೆಳೆಗಾರರು ಪುಷ್ಪಗಳನ್ನು ಕೀಳಿಸದೇ ತೋಟದಲ್ಲಿ ಹಾಗೆಯೇ ಬಿಟ್ಟಿದ್ದಾರೆ. ಇದು ಪುಷ್ಪೋದ್ಯಮದ ಮೇಲೂ ಪೆಟ್ಟು ಕೊಡುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು