ಗುರುವಾರ , ಅಕ್ಟೋಬರ್ 21, 2021
29 °C

ಹತ್ತಿಗೆ ಸಾರ್ವಕಾಲಿಕ ಅಧಿಕ ಬೆಲೆ: ಕ್ವಿಂಟಾಲ್‌ಗೆ ಎಷ್ಟಿದೆ ಗೊತ್ತಾ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಹತ್ತಿಗೆ ಸಾರ್ವಕಾಲಿಕ ದರ ಸಿಕ್ಕಿದ್ದು, ಡಿಸಿಎಚ್‌ ತಳಿಯ ಕ್ವಿಂಟಲ್‌ ಹತ್ತಿ ಗುರುವಾರ ₹ 12,886 ಕ್ಕೆ ಮಾರಾಟವಾಗಿದೆ. ಹತ್ತಿ ಆವಕ ಈಗಷ್ಟೇ ಆರಂಭವಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಚಿತ್ರದುರ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿ ದಿನ ಬಿಟ್ಟು ದಿನ ಹತ್ತಿ ಮಾರುಕಟ್ಟೆ ನಡೆಯುತ್ತದೆ. ಚಿತ್ರದುರ್ಗ, ದಾವಣಗೆರೆ, ತುಮಕೂರು ಹಾಗೂ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಿಂದಲೂ ಹತ್ತಿ ಮಾರುಕಟ್ಟೆಗೆ ಬರುತ್ತಿದೆ. ಕಳೆದ ವರ್ಷಕ್ಕೆ ಹೋಲಿಸದರೆ ಹತ್ತಿ ದರ ಬಹುತೇಕ ದ್ವಿಗುಣಗೊಂಡಿದೆ.

ಕರ್ನಾಟಕ, ಗುಜರಾತ್‌, ಮಧ್ಯಪ್ರದೇಶ, ಉತ್ತರಪ್ರದೇಶ ಹಾಗೂ ಆಂಧ್ರಪ್ರದೇಶದಲ್ಲಿ ಹತ್ತಿಯನ್ನು ಪ್ರಮುಖವಾಗಿ ಬೆಳೆಲಾಗುತ್ತದೆ. ಉತ್ತರ ಭಾರತದ ಹಲವೆಡೆ ಭಾರಿ ಮಳೆಯಾಗಿದ್ದು, ಹತ್ತಿ ಬೆಳೆಗೆ ಹಾನಿಯಾಗಿದೆ. ಇದರಿಂದ ಉತ್ಪಾದನೆ ಕುಸಿತ ಕಾಣುತ್ತಿದೆ. ಮಾರುಕಟ್ಟೆಗೆ ಆವಕ ಕಡೆಮೆಯಾದ ಪರಿಣಾಮ ಬೆಲೆ ಏರಿಕೆಯಾಗುತ್ತಿದೆ ಎಂಬುದು ಚಿತ್ರದುರ್ಗ ಎಪಿಎಂಸಿ ಜಂಟಿ ನಿರ್ದೇಶಕ ವಿ.ರಮೇಶ್‌ ಅವರ ವಿಶ್ಲೇಷಣೆ.

ಹತ್ತಿ ಬೆಳೆಯ ಹಂಗಾಮು ಈಗಷ್ಟೇ ಆರಂಭವಾಗಿದೆ. ಡಿಸಿಎಚ್‌ ಹಾಗೂ ಬನ್ನಿ ತಳಿಯ ಹತ್ತಿ ಮಾರುಕಟ್ಟೆಗೆ ಬರುತ್ತಿದೆ. ಜುಲೈನಲ್ಲಿ 662 ಕ್ವಿಂಟಲ್‌, ಆಗಷ್ಟ್‌ನಲ್ಲಿ 12 ಸಾವಿರ ಕ್ವಿಂಟಲ್‌ ಹಾಗೂ ಸೆ.1ರಿಂದ ಈವರೆಗೆ 15 ಸಾವಿರ ಕ್ವಿಂಟಲ್‌ ಹತ್ತಿ ಬಂದಿದೆ. ಡಿಸೆಂಬರ್‌ವರೆಗೂ ಹತ್ತಿ ಆವಕ ಆಗಲಿದ್ದು, ಬೆಲೆಯಲ್ಲಿ ಇನ್ನಷ್ಟು ಬದಲಾವಣೆ ಆಗುವ ಸಾಧ್ಯತೆ ಇದೆ.

2020ರ ಸೆಪ್ಟೆಂಬರ್‌ ತಿಂಗಳಲ್ಲಿ ಪ್ರತಿ ಕ್ವಿಂಟಲ್‌ ಹತ್ತಿ ₹ 6,550ಕ್ಕೆ ಮಾರಾಟವಾಗಿತ್ತು. ಕಳೆದ ವರ್ಷ ಗರಿಷ್ಠ 8 ಸಾವಿರದವರೆಗೆ ದರ ಸಿಕ್ಕಿತ್ತು. 2021ರ ಮಾರ್ಚ್‌ ತಿಂಗಳಿಂದ ಹತ್ತಿ ಉತ್ತಮ ದರಕ್ಕೆ ಮಾರಾಟವಾಗಿತ್ತು. ಕ್ವಿಂಟಲ್‌ ಹತ್ತಿ ಗರಿಷ್ಠ ₹ 8,833 ದರ ಸಿಕ್ಕಿತ್ತು. ಸೆಪ್ಟೆಂಬರ್‌ ತಿಂಗಳಲ್ಲಿ ಸರಾಸರಿ ₹ 10,567 ದರ ದಾಖಲಾಗಿದೆ.

ಹತ್ತಿ ಉತ್ಪಾದನೆ ಆಧರಿಸಿ ದರ ನಿಗದಿಯಾಗುತ್ತದೆ. ಕರ್ನಾಟಕವೂ ಸೇರಿ ಹಲವು ರಾಜ್ಯದ ರೈತರು ಹತ್ತಿ ಬದಲು ಪರ್ಯಾಯ ಬೆಳೆಯ ಮೊರೆ ಹೋಗಿದ್ದಾರೆ. ಚಿತ್ರದುರ್ಗ ಮಾರುಕಟ್ಟೆಗೆ 2011–12ರಲ್ಲಿ 4.16 ಲಕ್ಷ ಕ್ವಿಂಟಲ್‌ ಹತ್ತಿ ಆವಕವಾಗಿತ್ತು. 2020–21ರ ವೇಳೆಗೆ ಇದು 1.88 ಲಕ್ಷ ಕ್ವಿಂಟಲ್‌ಗೆ ಕುಸಿದಿದೆ. ಇದು ಕೂಡ ಬೆಲೆ ಏರಿಕೆಗೆ ಕಾರಣ ಎಂಬುದು ಎಪಿಎಂಸಿ ಅಧಿಕಾರಿಗಳ ಅಭಿಪ್ರಾಯ.

 ***

ಕರ್ನಾಟಕದಲ್ಲಿ ಉತ್ತಮ ಗುಣಮಟ್ಟದ ಹತ್ತಿ ಮಾರುಕಟ್ಟೆಗೆ ಬರುತ್ತಿದೆ. ಇದರಿಂದ ಗರಿಷ್ಠ ಬೆಲೆ ಸಿಗುತ್ತಿದೆ. ಇಷ್ಟು ದರ ಯಾವ ವರ್ಷವೂ ರೈತರಿಗೆ ಸಿಕ್ಕಿರಲಿಲ್ಲ.

ವಿ.ರಮೇಶ್‌
ಜಂಟಿ ನಿರ್ದೇಶಕ, ಎಪಿಎಂಸಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು