ಸೋಮವಾರ, ಆಗಸ್ಟ್ 2, 2021
28 °C
ಕೊರೊನಾ ವಾರಿಯರ್ಸ್‌ಗೂ ಅಂಟಿದ ಸೋಂಕು

ವೈದ್ಯ ಸೇರಿ 9 ಜನರಿಗೆ ಕೋವಿಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಿದ ವೈದ್ಯರೊಬ್ಬರು ಸೇರಿ ಜಿಲ್ಲೆಯ 9 ಜನರಿಗೆ ಕೊರೊನಾ ಸೋಂಕು ಅಂಟಿದೆ. ಸೋಂಕಿಗೆ ಸಂಬಂಧಿಸಿದ ವರದಿಯನ್ನು ಖಚಿತಪಡಿಸಿಕೊಳ್ಳಲು ಶಿವಮೊಗ್ಗದ ಪ್ರಯೋಗಾಲಯಕ್ಕೆ ಗಂಟಲು ದ್ರವದ ಮಾದರಿ ರವಾನೆ ಮಾಡಲಾಗಿದೆ.

ಚಿತ್ರದುರ್ಗದ ಕರುವಿನಕಟ್ಟೆ ವೃತ್ತ, ಕೆಳಗೋಟೆ, ಜಿಲ್ಲಾ ಆಸ್ಪತ್ರೆಯ ವೈದ್ಯ ಸೇರಿ ಹೊಳಲ್ಕೆರೆಯ ಇಬ್ಬರು ಹಾಗೂ ಹಿರಿಯೂರಿನ ಮೂವರಿಗೆ ಸೋಂಕು ಇರುವುದು ದೃಢಪಟ್ಟಿದೆ. ಜಿಲ್ಲಾ ಕೋವಿಡ್‌ ಆಸ್ಪತ್ರೆ ಹಾಗೂ ಕೋವಿಡ್‌ ಕೇರ್‌ ಸೆಂಟರ್‌ಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಿದ ವೈದ್ಯರೊಬ್ಬರಿಗೆ ಸೋಂಕು ಅಂಟಿರುವುದು ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿಯಲ್ಲಿ ಆತಂಕ ಮೂಡಿಸಿದೆ. ಚಿಕಿತ್ಸೆ ನೀಡಿ ಮನೆಯಲ್ಲೇ ಕ್ವಾರಂಟೈನ್‌ಗೆ ಒಳಗಾಗಿದ್ದ ವೈದ್ಯರಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದವು. ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಇರುವುದು ದೃಢಪಟ್ಟಿದೆ.

‘ಪ್ರಾಥಮಿಕ ಪರೀಕ್ಷೆಯಲ್ಲಿ ಮಾತ್ರ ಸೋಂಕು ಕಾಣಿಸಿಕೊಂಡಿದೆ. ಪಾಸಿಟಿವ್‌ ಬಂದಿರುವ ಪ್ರತಿಯೊಬ್ಬರ ಗಂಟಲು ದ್ರವದ ಮಾದರಿಯನ್ನು ಶಿವಮೊಗ್ಗದ ಪ್ರಯೋಗಾಲಯಕ್ಕೆ ರವಾನಿಸಲಾಗುತ್ತದೆ. ಪ್ರಯೋಗಾಲಯದ ವರದಿ ಖಚಿತಪಡಿಸಲಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಿ.ಎಲ್‌.ಫಾಲಾಕ್ಷ ತಿಳಿಸಿದ್ದಾರೆ.

‘ಸೋಂಕಿನ ಲಕ್ಷಣ ಕಾಣಿಸಿಕೊಂಡಿರುವ ಎಲ್ಲರೂ ರೋಗಿಗಳ ಪ್ರಾಥಮಿಕ ಸಂಪರ್ಕಿತರು. ಬೆಂಗಳೂರಿಗೆ ಪ್ರಯಾಣ ಬೆಳೆಸಿದವರಲ್ಲಿ ಸೋಂಕು ಪತ್ತೆಯಾಗಿದೆ. ಅನಗತ್ಯವಾಗಿ ಮನೆಯಿಂದ ಹೊರಗೆ ಬರುವ ಮುನ್ನ ಆಲೋಚಿಸಬೇಕು’ ಎಂದು ಹೇಳಿದರು.

ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ 14, ಹಿರಿಯೂರು ತಾಲ್ಲೂಕಿನ ಧರ್ಮಪುರ ಕೇರ್‌ ಸೆಂಟರ್‌ನಲ್ಲಿ 4, ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರ ಹಾಗೂ ಚಳ್ಳಕೆರೆ ತಾಲ್ಲೂಕಿನ ಬಿ.ದುರ್ಗದಲ್ಲಿ 3, ಮೊಳಕಾಲ್ಮುರು ತಾಲ್ಲೂಕಿನ ರಾಂಪುರದಲ್ಲಿ 2 ಹಾಗೂ ನಾಯಕನಹಟ್ಟಿಯಲ್ಲಿ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬರು ಕೋವಿಡ್‌ ರೋಗದಿಂದ ಮೃತಪಟ್ಟಿದ್ದಾರೆ.

ಹಳ್ಳಿಗೆ ಬೆಂಗಳೂರು ಭಯ

ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಲಾಕ್‌ಡೌನ್‌ಗೆ ನಿರ್ಧರಿಸಿದ್ದರಿಂದ ರಾಜಧಾನಿಯ ಬಹುತೇಕರು ಹಳ್ಳಿಗಳತ್ತ ಮುಖ ಮಾಡಿದ್ದಾರೆ. ಕೋಟೆನಾಡಿನ ಬಹುತೇಕ ಗ್ರಾಮಗಳಲ್ಲಿ ಆತಂಕ ಶುರುವಾಗಿದೆ.

ಬೆಂಗಳೂರಿಗೆ ಕೆಲಸ ಅರಸಿ ಹೋಗುವವರ ಸಂಖ್ಯೆ ಚಿತ್ರದುರ್ಗ ಜಿಲ್ಲೆಯಲ್ಲಿ ಹೆಚ್ಚು. ಹಿರಿಯೂರು, ಚಳ್ಳಕೆರೆ, ಚಿತ್ರದುರ್ಗ ಹಾಗೂ ಹೊಸದುರ್ಗ ತಾಲ್ಲೂಕಿನ ಹಲವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಸೋಂಕು ಹೆಚ್ಚುತ್ತಿರುವ ಹಾಗೂ ಲಾಕ್‌ಡೌನ್‌ ಘೋಷಣೆಯಾಗಿರುವುದರಿಂದ ಭಾನುವಾರದಿಂದಲೇ ಗ್ರಾಮಗಳಿಗೆ ಮರಳುತ್ತಿದ್ದಾರೆ.

ರಾಜ್ಯ ರಾಜಧಾನಿಯಿಂದ ಮರಳುವವರನ್ನು ಗ್ರಾಮಕ್ಕೆ ಸೇರಿಸಲು ವಿರೋಧ ವ್ಯಕ್ತವಾಗುತ್ತಿದೆ. ಕೆಲವು ಹಳ್ಳಿಗಳು ಸ್ವಯಂ ದಿಗ್ಬಂಧನಕ್ಕೂ ಒಳಗಾಗಿವೆ. ಕ್ವಾರಂಟೈನ್‌ನಲ್ಲಿ ಇರುವಂತೆ, ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸ್ಥಳೀಯರು ಒತ್ತಡ ಹೇರುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು