ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಗೆದ್ದು ಬಂದ ಖುಷಿ, ಊರಿಗೆ ಬಂದಾಗ ಮಣ್ಣುಪಾಲು

ಹಿರಿಯೂರು ತಾಲ್ಲೂಕಿನ ಕೂನಿಕೆರೆ ಗ್ರಾಮದ ರೈತನ ಅಳಲು
Last Updated 9 ಆಗಸ್ಟ್ 2020, 7:16 IST
ಅಕ್ಷರ ಗಾತ್ರ

ಹಿರಿಯೂರು: ‘‘ಜಮೀನಿನಲ್ಲಿ ಈರುಳ್ಳಿ, ಶೇಂಗಾ, ತೊಗರಿ ಹಾಕಿದ್ದೇನೆ. ಶೇಂಗಾ, ಈರುಳ್ಳಿ ಕಳೆ ತೆಗೆಸಬೇಕು. ಕೋವಿಡ್ ಪಾಸಿಟಿವ್ ಬಂದಿದೆ ಎಂಬ ಕಾರಣಕ್ಕೆ ಕೂಲಿಯವರು ನಮ್ಮ ಹೊಲಕ್ಕೆ ಬರುತ್ತಿಲ್ಲ. ‘ನಿನ್ನಿಂದಲೇ ಕೈಗೆ ಬಂದ ಬೆಳೆ ಹಾಳಾಗುತ್ತಿದೆ, ಎಲ್ಲಿಂದ ಅಂಟಿಸಿಕೊಂಡು ಬಂದೆ ಈ ದರಿದ್ರ ಕಾಯಿಲೇನಾ’ ಎಂದು ಮನೆಯವರೂ ನಿತ್ಯ ಬೈಯ್ಯುತ್ತಾರೆ...’’

ತಾಲ್ಲೂಕಿನ ಕೂನಿಕೆರೆ ಗ್ರಾಮದ ಜಮೀನಿನ ಮನೆಯಲ್ಲಿ ಅಪ್ಪ–ಅಮ್ಮನ ಜತೆ ನೆಲೆಸಿರುವ ಆದಿವಾಲ ಗ್ರಾಮದ 38 ವರ್ಷದ ಜಾಕೀರ್ ಹುಸೇನ್ ಅವರ ನೋವಿನ ಮಾತುಗಳಿವು.

ಜುಲೈ 26ರಂದು ಜ್ವರ ಕಾಣಿಸಿಕೊಂಡಿದ್ದರಿಂದ ವೈದ್ಯರ ಸಲಹೆ ಮೇರೆಗೆ ಕೋವಿಡ್ ಪರೀಕ್ಷೆ ಮಾಡಿಸಿದಾಗ ಪಾಸಿಟಿವ್ ಬಂದಿತ್ತು. ಅಂದೇ ಧರ್ಮಪುರದ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಆಗಸ್ಟ್ 6ರಂದು ಗುಣಮುಖರಾಗಿ ಬಿಡುಗಡೆ ಯಾದ ಅವರು, ಜಮೀನಿನ ಮನೆಯಲ್ಲಿ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ.

‘ಕೂನಿಕೆರೆ ಗ್ರಾಮದ ಸಮೀಪ ನಮ್ಮ ತಂದೆಯವರ ಐದು ಎಕರೆ ಜಮೀನಿದ್ದು, ಅಲ್ಲಿಯೇ ವಾಸವಾಗಿದ್ದೇವೆ. ಹೊಲದಲ್ಲಿ ಒಂದು ಎಕರೆ ಈರುಳ್ಳಿ, ಒಂದು ಎಕರೆ ಶೇಂಗಾ, ಮೂರು ಎಕರೆ ತೊಗರಿ ಹಾಕಿದ್ದೇವೆ. ಆಸ್ಪತ್ರೆಗೆ ದಾಖಲಾಗುವ ಮೊದಲು ಎರಡು ಬಾರಿ ಈರುಳ್ಳಿ ಕಳೆ ಕೀಳಿಸಿದ್ದೆ. ಈಗ ಮೂರನೇ ಬಾರಿ ಕಳೆ ತೆಗೆಸಬೇಕು. ನಮ್ಮ ಹೊಲದ ಪಕ್ಕದ ರೈತರ ಜಮೀನಿಗೆ ಕೂಲಿಯವರು ಬರುತ್ತಿದ್ದಾರೆ. ಆದರೆ, ನನ್ನ ಅಪ್ಪ–ಅಮ್ಮ ಕರೆದರೆ ಬರುತ್ತಿಲ್ಲ. ಊರಿನಲ್ಲಿ ನಮ್ಮನ್ನು ಅಸ್ಪೃಶ್ಯರಂತೆ ನೋಡುತ್ತಿದ್ದಾರೆ. ಕೊರೊನಾ ನನಗೆ ಹೇಗೆ ಬಂತು ಎಂಬುದು ತಿಳಿದಿಲ್ಲ. ನಾನು ಜಮೀನು–ಮನೆ ಬಿಟ್ಟು ಎಲ್ಲಿಯೂ ಹೋಗಿಲ್ಲ. ನನ್ನದಲ್ಲದ ತಪ್ಪಿಗೆ ಇಡೀ ಮನೆಯವರು ಶಿಕ್ಷೆ ಅನುಭವಿಸುವಂತಾಗಿದೆ’
ಎಂದು ಜಾಕೀರ್‌ ಅಲವತ್ತುಕೊಂಡರು.

‘ಆಸ್ಪತ್ರೆಯಿಂದ ಗುಣಮುಖರಾಗಿ ಬಂದವರೆಲ್ಲ, ಅಲ್ಲಿನ ಚಿಕಿತ್ಸೆ, ಊಟೋಪ ಚಾರದ ಬಗ್ಗೆ ಮಾತನಾಡುವುದನ್ನು ಕೇಳಿದ್ದೇನೆ. ಆಸ್ಪತ್ರೆಯಲ್ಲಿದ್ದಾಗಲೂ ನನಗೆ ಬೆಳೆಯದ್ದೇ ಚಿಂತೆ; ಈಗಲೂ ಅದೇ ಚಿಂತೆ ಕಾಡುತ್ತಿದೆ. ಕೂಲಿಯವರು ಬರುವಂತೆ ಮಾಡಲು ಏನು ಮಾಡ ಬೇಕೆಂದು ತಿಳಿಯದಾಗಿದೆ’ ಎಂದು ಜಾಕೀರ್ ಅಸಹಾಯಕತೆ ವ್ಯಕ್ತಪಡಿಸಿದರು.

ಹೊರಗೆ ಬರುವಂತಿಲ್ಲ: ‘ಜಾಕೀರ್ ಹುಸೇನ್ 14 ದಿನ ಹೋಂ ಕ್ವಾರಂಟೈನ್‌ನಲ್ಲಿರಬೇಕು. ಯಾರ ಜತೆಗೂ ಸಂಪರ್ಕ ಬೆಳೆಸುವಂತಿಲ್ಲ. ಅವರ ಮನೆಯವರು ಕೂಲಿಯವ ರೊಂದಿಗೆ ಕೆಲಸ ಮುಂದುವರಿಸಬಹುದು. ಅಲ್ಲಿಯೂ ಅಂತರ ಕಾಪಾಡಿ ಕೊಳ್ಳಬೇಕು’ ಎನ್ನುತ್ತಾರೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT