ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: 484 ವಾರಿಯರ್‌ಗಳಿಗೆ ಕೋವಿಶೀಲ್ಡ್ ಲಸಿಕೆ

ಲಸಿಕೆ ನೀಡುವ ಕಾರ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಚಾಲನೆ
Last Updated 16 ಜನವರಿ 2021, 15:07 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ನರ್ಸ್‌ವೊಬ್ಬರು ಕೋವಿಶೀಲ್ಡ್‌ ಲಸಿಕೆ ಹಾಕಿಸಿಕೊಳ್ಳಲು ಕೊಠಡಿ ಪ್ರವೇಶಿಸಿದರು. ಮತ್ತೊಬ್ಬ ನರ್ಸ್ ಭುಜಕ್ಕೆ ಚುಚ್ಚುಮದ್ದು ಹಾಕಲು ಮುಂದಾದಾಗ ಬೇಡ ತಡಿಯಿರಿ ಎಂದರು. ನೀವೇ ಹಿಂದೇಟು ಹಾಕಿದರೆ ಹೇಗೆ? ಲಸಿಕೆ ಹಾಕಿಸಿಕೊಳ್ಳಿ ಏನಾಗುವುದಿಲ್ಲ’ ಎಂದು ಧೈರ್ಯ ತುಂಬಿದಾಗ ಅವರು ಒಪ್ಪಿದರು.

ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಶೀಲ್ಡ್ ಲಸಿಕೆ ನೀಡಲು ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಚಾಲನೆ ನೀಡಿದ ಬಳಿಕ ನಡೆದ ಪ್ರಸಂಗವಿದು.

ಲಸಿಕೆ ಹಾಕಿಸಿಕೊಂಡ ವೈದ್ಯರು, ನರ್ಸ್, ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರಿಗೆ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಿದರು. ಇದೇ ವೇಳೆ ಸಚಿವರು, ಸಂಸದರು, ಶಾಸಕರು ಕೆಲವರಲ್ಲಿದ್ದ ಅಂಜಿಕೆ ಹೋಗಲಾಡಿಸಿ, ಧೈರ್ಯ ತುಂಬಲು ಮುಂದಾದರು.

ಜಿಲ್ಲಾ ಆಸ್ಪತ್ರೆ, ಜಿಲ್ಲೆಯ ಎಲ್ಲ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆ, ಬಸವೇಶ್ವರ ವೈದ್ಯಕೀಯ ಕಾಲೇಜು ಸೇರಿ ಜಿಲ್ಲೆಯ ಎಂಟು ಕೇಂದ್ರಗಳಲ್ಲಿ ಲಸಿಕೆ ಹಾಕಲಾಯಿತು. ಪ್ರತಿ ಕೇಂದ್ರದಲ್ಲೂ 100 ವಾರಿಯರ್‌ಗಳಿಗೆ ಲಸಿಕೆ ನೀಡಲು ಗುರಿ ನಿಗದಿಯಾಗಿತ್ತು. ಆದರೆ, 484 ಜನಕ್ಕೆ ಮಾತ್ರ ಮೊದಲ ದಿನ ಚುಚ್ಚುಮದ್ದು ಹಾಕಲಾಯಿತು.

ಐತಿಹಾಸಿಕ ದಿನ: ‘ದೇಶಕ್ಕೆ ಇದು ಐತಿಹಾಸಿಕ ದಿನವಾಗಿದೆ. ಪ್ರಧಾನಿ ಮೋದಿ ಚಾಲನೆ ನೀಡಿದ್ದು, ಖಂಡಿತ ಇದರಿಂದ ಅನುಕೂಲವಾಗಲಿದೆ. ರಾಜ್ಯದಲ್ಲಿ 7 ಲಕ್ಷ ಹಾಗೂ ಜಿಲ್ಲೆಯಲ್ಲಿ 15,680 ವಾರಿಯರ್‌ಗಳಿಗೆ ಮೊದಲ ಹಂತದಲ್ಲಿ ಲಸಿಕೆ ನೀಡಲಾಗುವುದು’ ಎಂದು ಶ್ರೀರಾಮುಲು ಹೇಳಿದರು.

‘ರಾಜ್ಯದಲ್ಲಿ ಕೋವಿಡ್ ಪ್ರಕರಣ ಕಾಣಿಸಿಕೊಂಡು ಕಲಬುರ್ಗಿಯಲ್ಲಿ ಒಬ್ಬರು ಮೃತಪಟ್ಟಾಗ ಆತಂಕ ಹೆಚ್ಚಿತ್ತು. ಈ ವೇಳೆ ವೈದ್ಯರು, ನರ್ಸ್‌ಗಳಿಗೆ ಅಲ್ಲಿನ ಜಿಲ್ಲಾಧಿಕಾರಿಯೊಂದಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದೇವೆ. ಹಂತ-ಹಂತವಾಗಿ ಜನರಲ್ಲಿದ್ದ ಭಯ ದೂರವಾಗಿದೆ. ಆದರೂ ಸರ್ಕಾರದ ಮಾರ್ಗಸೂಚಿ ಪಾಲಿಸಿದರೆ, ನಿಮಗೂ ಮತ್ತು ಎಲ್ಲರಿಗೂ ಉತ್ತಮ’ ಎಂದರು.

ಸಂಸದ ಎ. ನಾರಾಯಣಸ್ವಾಮಿ, ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ. ನಂದಿನಿದೇವಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಿ.ಎಲ್. ಫಾಲಾಕ್ಷ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಚ್.ಜೆ. ಬಸವರಾಜಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT