ಮಂಗಳವಾರ, 22 ಜುಲೈ 2025
×
ADVERTISEMENT
ADVERTISEMENT

ಮೈಕ್ರೊ ಫೈನಾನ್ಸ್‌: ಕಿರುಕುಳ ನೀಡಿದರೆ ಕಠಿಣ ಕ್ರಮ

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಗೆ ಭೇಟಿ; ಪೂರ್ವ ವಲಯ ಐಜಿಪಿ ರವಿಕಾಂತೇಗೌಡ ಎಚ್ಚರಿಕೆ
Published : 30 ಜನವರಿ 2025, 16:17 IST
Last Updated : 30 ಜನವರಿ 2025, 16:17 IST
ಫಾಲೋ ಮಾಡಿ
0
ಮೈಕ್ರೊ ಫೈನಾನ್ಸ್‌: ಕಿರುಕುಳ ನೀಡಿದರೆ ಕಠಿಣ ಕ್ರಮ
ಚಿತ್ರದುರ್ಗಕ್ಕೆ ಬಂದ ನೂತನ ಪೂರ್ವ ವಲಯ ಐಜಿಪಿ ಬಿ.ಆರ್‌.ರವಿಕಾಂತೇಗೌಡ ಅವರಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಂಜಿತ್‌ ಕುಮಾರ್‌ ಬಂಡಾರು ಪೊಲೀಸ್‌ ಸಿಬ್ಬಂದಿಯನ್ನು ಪರಿಚಯಿಸಿದರು

ಚಿತ್ರದುರ್ಗ: ‘ಸಾಲ ವಿತರಣೆ ಮಾಡಿರುವ ಮೈಕ್ರೊ ಫೈನಾನ್ಸ್‌ಗಳು ಸಾರ್ವಜನಿಕರಿಗೆ ಕಿರುಕುಳ ನೀಡುವಂತಿಲ್ಲ ಎಂದು ಸರ್ಕಾರ ಸೂಚಿಸಿದೆ. ಎಚ್ಚರಿಕೆ ಮೀರಿ ಜನರಿಗೆ ಕಿರುಕುಳ ನೀಡಿದರೆ ಆರೋಪಿಗಳ ವಿರುದ್ಧ ಕ್ರಮ ಕೈಗೊಂಡು ಜೈಲಿಗೆ ಕಳುಹಿಸಲಾಗುವುದು’ ಎಂದು ಪೂರ್ವವಲಯ ಐಜಿಪಿ ಬಿ.ಆರ್‌.ರವಿಕಾಂತೇಗೌಡ ಹೇಳಿದರು.

ADVERTISEMENT
ADVERTISEMENT

ನೂತನ ಐಜಿಪಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಗೆ ಭೇಟಿ ನೀಡಿ ನಂತರ ಸುದ್ದಿಗಾರರ ಜೊತೆ ಮಾತನಾಡಿದರು.

‘ಮೈಕ್ರೊ ಫೈನಾನ್ಸ್‌ ಸಿಬ್ಬಂದಿ ಕಿರುಕುಳ ನೀಡಿದರೆ ಜನರು ಸಹಾಯವಾಣಿ 112ಕ್ಕೆ ಕರೆ ಮಾಡಬೇಕು. ಸ್ಥಳೀಯ ಪೊಲೀಸ್‌ ಠಾಣೆ, ಕಂಟ್ರೋಲ್‌ ರೂಂಗಳಿಗೂ ಸಂಪರ್ಕಿಸಿ ದೂರು ನೀಡಬಹುದು. ನೇರವಾಗಿ ನನ್ನ ಬಳಿ ಬಂದರೂ ರಕ್ಷಣೆ ನೀಡಲಾಗುವುದು. ಯಾವುದೇ ಕಾರಣಕ್ಕೂ ಮೈಕ್ರೊ ಫೈನಾನ್ಸ್‌ಗಳ ಸಿಬ್ಬಂದಿ ಜನರಿಗೆ ಕಿರುಕುಳ ನೀಡುವುದನ್ನು ಸಹಿಸುವುದಿಲ್ಲ’ ಎಂದರು.

‘ಪೊಲೀಸ್‌ ಠಾಣೆಗೆ ದೂರು ನೀಡಿದ ನಂತರವೂ ಪೊಲೀಸರು ಸೂಕ್ತ ರಕ್ಷಣೆ ನೀಡದಿದ್ದರೆ ಪೊಲೀಸರ ವಿರುದ್ಧವೇ ಕ್ರಮ ಜರುಗಿಸಲಾಗುವುದು. ಪೊಲೀಸ್‌ ಸಿಬ್ಬಂದಿ ಯಾವುದೇ ಮುಲಾಜಿಲ್ಲದೇ ಕ್ರಮ ಜರುಗಿಸಬೇಕು. ಸರ್ಕಾರ ಈ ಕುರಿತು ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಜನರ ರಕ್ಷಣೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ಈ ಕುರಿತಂತೆ ನಮ್ಮ ವಿಭಾಗದ ಎಲ್ಲ ಪೊಲೀಸ್‌ ಠಾಣೆಗಳಿಗೂ ಸೂಚನೆ ನೀಡಲಾಗಿದೆ’ ಎಂದರು.

ADVERTISEMENT

‘ಮೈಕ್ರೊ ಫೈನಾನ್ಸ್‌ ಸಿಬ್ಬಂದಿ ಕಾನೂನು ವ್ಯಾಪ್ತಿಯಲ್ಲಿ ನಡೆದುಕೊಳ್ಳಬೇಕು. ಅನಧಿಕೃತವಾಗಿ ಜನರಿಗೆ ತೊಂದರೆ ಕೊಡುವಂತಿಲ್ಲ. ತೊಂದರೆ ನೀಡುವುದು ಗೊತ್ತಾದರೆ ಅವರ ವಿರುದ್ಧ ಪ್ರಕರಣ ಮಾಡಿ ಸೂಕ್ತ ಕಾನೂನು ಕ್ರಮ ಸೂಚಿಸಲಾಗುವುದು. ಕ್ರಮ ಕೈಗೊಳ್ಳುವ ಪ್ರಕ್ರಿಯೆ ಈಗಾಗಲೇ ರಾಜ್ಯದಾದ್ಯಂತ ಆರಂಭವಾಗಿದೆ. ಈ ನಿಟ್ಟಿನಲ್ಲಿ ಪೊಲೀಸರು ಕೂಡ ನಿರ್ಲಕ್ಷ್ಯ ವಹಿಸುವಂತಿಲ್ಲ’ ಎಂದರು.

ಗಾಂಜಾ ವಿರುದ್ಧ ಜಾಗೃತಿ: ‘ಹದಿಹರೆಯದ ವಿದ್ಯಾರ್ಥಿಗಳು, ಯುವಜನರು ಗಾಂಜಾ ಸೇವನೆ ಮಾಡುತ್ತಿರುವ ಪ್ರಕರಣಗಳು ಆಗಾಗ ಕಂಡುಬರುತ್ತಿವೆ. ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್‌ ಠಾಣೆಗಳಿಗೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಶಾಲಾ, ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ನಮ್ಮ ಅಧಿಕಾರಿಗಳು ತಿಂಗಳಿಗೊಮ್ಮೆ ಕಾಲೇಜುಗಳಿಗೆ ಹೋಗಿ ಅಭಿಯಾನ ಮಾಡಬೇಕು. ಡ್ರಗ್ಸ್‌ ತೆಗೆದುಕೊಳ್ಳುವುದರಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು’ ಎಂದರು.

‘ಚಿತ್ರದುರ್ಗ ಜಿಲ್ಲೆ ಐಸಿಹಾಸಿಕವಾಗಿ ಪ್ರಸಿದ್ದಿ ಪಡೆದಿದೆ. ನಮ್ಮ ವ್ಯಾಪ್ತಿಯಲ್ಲಿ ಕೋಟೆನಾಡು ಸೇರಿರುವುದು ಹೆಮ್ಮೆಯ ವಿಷಯವಾಗಿದೆ. ಇಂತಹ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ನಮ್ಮ ಮೇಲಿದೆ. ಹಿಂದೆ ಇದ್ದ ಅಧಿಕಾರಿಗಳು ಇದನ್ನ ಸಮರ್ಥವಾಗಿ ನಿಭಾಹಿಸಿದ್ದಾರೆ. ಸರ್ಕಾರದ ಪ್ರಮುಖ ಉದ್ದೇಶ, ಜನಸ್ನೇಹಿ ವ್ಯವಸ್ಥೆ ಜಾರಿಗೊಳಿಸುವುದು ನಮ್ಮ ಆದ್ಯತೆಯಾಗಿದೆ’ ಎಂದರು.

‘ಹಿಂದಿನ ಅಧಿಕಾರಿಗಳು ಹಾಕಿಕೊಟ್ಟಿರುವ ಸೂಚನೆಯನ್ನು ಸಮರ್ಪಕವಾಗಿ ಜಾರಿಗೊಳಿಸಲಾಗುವುದು. ‘ಎಂದೆಂದಿಗೂ ನಾವು ನಿಮ್ಮೊಂದಿಗೆ’ ಎಂಬುದೇ ನಮ್ಮ ಘೋಷವಾಕ್ಯವಾಗಿದೆ. ಜನರ ಸಮಸ್ಯೆಗೆ ಸ್ಪಂದಿಸುವುದು ನಮ್ಮ ಆದ್ಯತೆಯಾಗಿದೆ. ಈ ಬಗ್ಗೆ ಚರ್ಚಿಸಲು ಅಧಿಕಾರಿಗಳ ಸಭೆ ಕರೆಯಲಾಗಿದೆ. ಸಭೆಯಲ್ಲಿ ಪೊಲೀಸ್‌ ಅಧಿಕಾರಿಗಳಿಗೆ, ಸಿಬ್ಬಂದಿಗೆ ಸೂಚನೆ ನೀಡಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
Comments0