ಬುಧವಾರ, ಜನವರಿ 19, 2022
23 °C
ಕಳವಾದ ವಸ್ತುಗಳನ್ನು ನಾಗರಿಕರಿಗೆ ಹಿಂದಿರುಗಿಸಿದ ಪೊಲೀಸ್ ಇಲಾಖೆ

ಚಿತ್ರದುರ್ಗ: ವಾರಸುದಾರರ ಕೈಗೆ ₹ 2.12 ಕೋಟಿ ಮೌಲ್ಯದ ವಸ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಕಳವಾದ ವಸ್ತು ಪಡೆಯಲು ವಾರಸುದಾರರಲ್ಲಿ ಎಲ್ಲಿಲ್ಲದ ಉತ್ಸಾಹ. ವಸ್ತುಗಳು ಕೈಸೇರುವ ತವಕ ನೆರೆದಿದ್ದವರಲ್ಲಿ ಕಂಡುಬಂತು. ತಮ್ಮ ವಸ್ತುಗಳನ್ನು ಪಡೆಯುವಾಗ ಮಂದಹಾಸವನ್ನು ಹಲವರು ಬೀರಿದರು. ಪೊಲೀಸ್ ಇಲಾಖೆ ಅಧಿಕಾರಿಗಳ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಪೊಲೀಸ್ ಕವಾಯತು ಮೈದಾನ ದಲ್ಲಿ ಪೊಲೀಸ್ ಇಲಾಖೆ ಬುಧವಾರ ಹಮ್ಮಿಕೊಂಡಿದ್ದ, ಕಳ್ಳತನವಾದ ವಸ್ತುಗಳನ್ನು ವಾರಸುದಾರರಿಗೆ ಹಿಂದಿರುಗಿಸುವ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯವಿದು.

ಒಂದು ವರ್ಷದ ಅವಧಿಯಲ್ಲಿ ಅಂದರೆ 2020ರ ನವೆಂಬರ್ ತಿಂಗಳಿನಿಂದ 2021ರ ನವೆಂಬರ್ ತಿಂಗಳೊಳಗೆ ಕಳ್ಳತನವಾಗಿದ್ದ ಸುಮಾರು ₹ 2.12 ಕೋಟಿ ಮೌಲ್ಯದ ವಸ್ತುಗಳ ಪೈಕಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ 65 ಸ್ವತ್ತು ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ಅವೆಲ್ಲವನ್ನೂ ಬೇಧಿಸಿ, ನ್ಯಾಯಾಲಯದ ಅನುಮತಿ ಪಡೆದ ನಂತರ ಅರ್ಹರೆಲ್ಲರಿಗೂ ವಸ್ತುಗಳನ್ನು ಹಿಂತಿರುಗಿಸಲಾಯಿತು.

₹ 54.85 ಲಕ್ಷ ಮೌಲ್ಯದ ಬೆಳ್ಳಿ, ಬಂಗಾರ ಕಳವು ಸಂಬಂಧ 27 ಪ್ರಕರಣ, ₹ 1.39 ಕೋಟಿ ಮೌಲ್ಯದ ಅಡಿಕೆ–ಶ್ರೀಗಂಧ ಸೇರಿ ಇತರ 10 ಪ್ರಕರಣ, ₹ 3.81 ಲಕ್ಷ ನಗದು, ₹ 14.31 ಲಕ್ಷ ಮೌಲ್ಯದ 25 ದ್ವಿಚಕ್ರ ವಾಹನಗಳು ಹಾಗೂ ಒಂದು ಕಾರು ಕಳವಾಗಿತ್ತು. 22 ದ್ವಿಚಕ್ರ ವಾಹನ ಸೇರಿ ಉಳಿದ ಎಲ್ಲಾ ಪ್ರಕರಣ ಬೇಧಿಸಿ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಸಫಲರಾಗಿದ್ದಾರೆ. ಇದರಿಂದಾಗಿ ಕಳ್ಳತನವಾಗಿದ್ದ ವಸ್ತುಗಳು ಪುನಃ ವಾರಸುದಾರರ ಕೈಸೇರಿವೆ.

ಗಣನೀಯ ಸ್ಥಾನ ಲಭಿಸಲಿದೆ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ, ‘ವರ್ಷದ ಅವಧಿಯಲ್ಲಿ ಸುಮಾರು ₹ 3 ಕೋಟಿ ಮೌಲ್ಯದ ವಸ್ತುಗಳನ್ನು ಕಳ್ಳರ ಸಮೇತ ಪತ್ತೆ ಹಚ್ಚುವಲ್ಲಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ
ಶ್ರಮಕ್ಕೆ ಫಲ ಸಿಕ್ಕಿದೆ. ರಾಜ್ಯದಲ್ಲೇ ಚಿತ್ರದುರ್ಗ ಜಿಲ್ಲಾ ಪೊಲೀಸ್ ಇಲಾಖೆಗೆ ಗಣನೀಯ ಸ್ಥಾನ ಲಭಿಸಲಿದೆ’ ಎಂದು ಹೇಳಿದರು.

‘ಹಿರಿಯೂರು ಸರ್ಕಲ್‌ನ ವೃತ್ತ ನಿರೀಕ್ಷಕ ರಾಘವೇಂದ್ರ ನೇತೃತ್ವದ ತಂಡ ₹ 46 ಲಕ್ಷಕ್ಕೂ ಹೆಚ್ಚು ಮೊತ್ತ, ಚಿತ್ರದುರ್ಗ ಗ್ರಾಮಾಂತರ ಠಾಣೆಯ ಬಾಲಚಂದ್ರ ನಾಯಕ್ ನೇತೃತ್ವದ ತಂಡ ₹ 1 ಕೋಟಿಗೂ ಹೆಚ್ಚು ಮೊತ್ತ, ಹೊಸದುರ್ಗ ವೃತ್ತ ನಿರೀಕ್ಷಕ ಫೈಜುಲ್ಲಾ, ಹೊಳಲ್ಕೆರೆ ರವೀಶ್‌, ಚಿತ್ರದುರ್ಗ ನಗರ ವೃತ್ತ ನಿರೀಕ್ಷಕ ಸುರೇಶ್‌ ನೇತೃತ್ವದ ತಂಡ ಸೇರಿ ಎಲ್ಲಾ ಠಾಣೆಗಳಲ್ಲೂ ದಾಖಲಾಗಿದ್ದ ಪ್ರಕರಣಗಳ ಪೈಕಿ 65 ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದೆ’ ಎಂದು ತಿಳಿಸಿದರು.

ಪ್ರಮುಖ ಪ್ರಕರಣಗಳನ್ನು ಬೇಧಿಸಿರುವುದು ಪೊಲೀಸ್ ಇಲಾಖೆಯ ಕುರಿತು ಸಾರ್ವಜನಿಕರಲ್ಲಿ ವಿಶ್ವಾಸ ಹೆಚ್ಚಾಗುವಂತೆ ಮಾಡಿದೆ. ನೈಪುಣ್ಯತೆ ಬಳಸಿ ಅಧಿಕಾರಿಗಳು ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಕಳೆದ ವಸ್ತು ಸಿಗುವುದು ಕಷ್ಟ. ಮರೆತುಬಿಡು ಎಂಬುದಾಗಿ ಕುಟುಂಬದ ಸದಸ್ಯರು ಹೇಳಿದರು. ಆದರೆ, ಧೈರ್ಯ ಮಾಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ. ವಸ್ತು ಪುನಃ ಕೈಸೇರಿರುವುದು ತುಂಬಾ ಸಂತಸವನ್ನು ಉಂಟು ಮಾಡಿದೆ. ಪೊಲೀಸ್ ಇಲಾಖೆ ಕಾರ್ಯ ಮೆಚ್ಚುವಂತದ್ದು ಎಂದು ಇದೇ ವೇಳೆ ಮಹಿಳೆ ನಾಗರತ್ನ ಅನಿಸಿಕೆ ಹಂಚಿಕೊಂಡರು. ಹೀಗೆ ಅನೇಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಯಾವ್ಯಾವ ಠಾಣೆಯಲ್ಲಿ ಎಷ್ಟು ಪ್ರಕರಣ

ಶ್ರೀರಾಂಪುರ 9, ಚಿತ್ರದುರ್ಗ ನಗರ, ಚಿತ್ರದುರ್ಗ ಗ್ರಾಮಾಂತರ ತಲಾ 7, ಚಿತ್ರದುರ್ಗ ಕೋಟೆ ಠಾಣೆ, ಹಿರಿಯೂರು ಗ್ರಾಮಾಂತರ ತಲಾ 6, ಚಿತ್ರದುರ್ಗ ಬಡಾವಣೆ, ಹೊಳಲ್ಕೆರೆ, ಭರಮಸಾಗರ, ಹಿರಿಯೂರು ನಗರ, ಹೊಸದುರ್ಗ, ಚಳ್ಳಕೆರೆ ತಲಾ 4, ಐಮಂಗಲ 3, ಚಿಕ್ಕಜಾಜೂರು, ಪರಶುರಾಂಪುರ, ರಾಂಪುರದಲ್ಲಿ ತಲಾ ಒಂದು ಪ್ರಕರಣ ಸೇರಿ ಒಟ್ಟು 65 ಪ್ರಕರಣ ಬೇಧಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು