ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಲಾಭಕ್ಕೆ ರಾಮನನ್ನು ಬಳಸಿಕೊಂಡ ಶಾಪ ಬಿಜೆಪಿಗೆ ತಟ್ಟಲಿದೆ: ಮಧು ಬಂಗಾರಪ್ಪ

Published 23 ಜನವರಿ 2024, 12:47 IST
Last Updated 23 ಜನವರಿ 2024, 12:47 IST
ಅಕ್ಷರ ಗಾತ್ರ

ಚಿತ್ರದುರ್ಗ: ಅಯೋಧ್ಯೆಯಲ್ಲಿ ಬಾಲರಾಮ ವಿಗ್ರಹ ಪ್ರಾಣ ಪ್ರತಿಷ್ಠಾಪನಾ ಸಮಾರಂಭವನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಂಡ ಬಿಜೆಪಿ, ಶ್ರೀರಾಮನನ್ನು ಬೀದಿಗೆ ತಂದು ನಿಲ್ಲಿಸಿದೆ. ರಾಮನ ಶಾಪ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ತಟ್ಟಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಕಿಡಿಕಾರಿದರು.

‘ರಾಮಮಂದಿರ ಕಾನೂನು ಬದ್ಧವಾಗಿ ನಿರ್ಮಾಣವಾಗಿದೆ. ಈ ವಿಚಾರದಲ್ಲಿ ಬಿಜೆಪಿ ನಡೆದುಕೊಳ್ಳುತ್ತಿರುವ ರೀತಿ ಹಾಸ್ಯಾಸ್ಪದವಾಗಿದೆ. ಶ್ರೀರಾಮ ನನ್ನ ಹೃದಯದಲ್ಲಿಯೂ ಇದ್ದಾನೆ. ಶ್ರೀರಾಮನ ಹೆಸರಿನಲ್ಲಿ ಬಿಜೆಪಿ ಕೀಳುಮಟ್ಟದ ರಾಜಕೀಯ ಮಾಡುತ್ತಿದೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ಬೇರೆ ಧರ್ಮವನ್ನು ಗೌರವಿಸುವ ವ್ಯಕ್ತಿ ನಿಜವಾದ ಹಿಂದೂ. ನಾನು ಹಿಂದೂ ಎಂದು ಬಹಿರಂಗವಾಗಿ ಹೇಳಿಕೊಳ್ಳುವ ಅಗತ್ಯವಿಲ್ಲ. ಧರ್ಮ ನನ್ನ ರಕ್ತ, ಮಾತಿನಲ್ಲಿದೆ. ದೇವರನ್ನು ಪಕ್ಷಕ್ಕೆ ಅಡ ಇಟ್ಟುಕೊಳ್ಳುವುದನ್ನು ಒಪ್ಪುವುದಿಲ್ಲ. ಅಂಬೇಡ್ಕರ್‌ ರಚಿಸಿದ ಸಂವಿಧಾನ ದೇಶದ ದೇವರು’ ಎಂದು ಹೇಳಿದರು.

‘ಕಿತಾಪತಿಯಲ್ಲಿ ಬಿಜೆಪಿ ಮುಂಚೂಣಿ’

ಬಿಜೆಪಿ ನಾಯಕರಿಗೆ ಒಳ್ಳೆಯತನ ಗೊತ್ತಿಲ್ಲ. ಕಿತಾಪತಿ ಮಾಡುವಲ್ಲಿ ಅವರು ಮೊದಲಿಗರು. ಕೇಂದ್ರದಲ್ಲಿ ಅಧಿಕಾರದಲ್ಲಿದ್ದು ಕೆಟ್ಟ ರೀತಿಯಲ್ಲಿ ವರ್ತಿಸುತ್ತಿರುವುದನ್ನು ಜನರು ಗಮನಿಸುತ್ತಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದರು.

‘ಭಾರತ್‌ ಜೋಡೊ ನ್ಯಾಯ ಯಾತ್ರೆ’ಗೆ ಅಡ್ಡಿಪಡಿಸುತ್ತಿರುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ‘ಅಸ್ಸಾಂನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಕಾನೂನು ದುರುಪಯೋಗ ಮಾಡಿಕೊಂಡು ಯಾತ್ರೆಗೆ ಅಡ್ಡಿಪಡಿಸುವ ಹುನ್ನಾರಗಳು ನಡೆಯುತ್ತಿವೆ. ರಾಹುಲ್‌ ಗಾಂಧಿ ಕುಟುಂಬದ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಸಹಿಸುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT