ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಸಾಂಸ್ಕೃತಿಕ ವೈಭವ ಮೇಳೈಸಿದ ಕೋಲಾಟ

ಶರಣ ಸಂಸ್ಕೃತಿ ಉತ್ಸವದಲ್ಲಿ ರಾಜ್ಯಮಟ್ಟದ ಕೋಲಾಟ ಸ್ಪರ್ಧೆ l ಮಂತ್ರಮುಗ್ಧರಾದ ಪ್ರೇಕ್ಷಕರು
Last Updated 10 ಅಕ್ಟೋಬರ್ 2021, 6:12 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೈಗಳಲ್ಲಿ ಕೋಲು, ಕಾಲುಗಳಲ್ಲಿ ಗೆಜ್ಜೆ. ಏಕಕಾಲದಲ್ಲಿ ಸ್ವರಬದ್ಧ ಜನಪದ ಗೀತೆಗಳ ಗಾಯನ. ತಾಳಕ್ಕೆ ತಕ್ಕಂತೆ ಲಯಬದ್ಧ ಕುಣಿತ. ಗೆಜ್ಜೆಯ ಶಬ್ದದೊಂದಿಗೆ ಸಮ್ಮಿಲನಗೊಂಡ ಕೋಲಾಟವು ಸಾಂಸ್ಕೃತಿಕ ವೈಭವ ಮೇಳೈಸಿತು.

ಮುರುಘಾಮಠದ ಮುರುಗಿಯ ಶಾಂತವೀರಸ್ವಾಮಿ ವೇದಿಕೆಯಲ್ಲಿ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಶನಿವಾರ ನಡೆದ ರಾಜ್ಯ ಮಟ್ಟದ ಕೋಲಾಟ ಸ್ಪರ್ಧೆ ಜನಮನ ತಣಿಸಿತು.

ಕನ್ನಡ ನಾಡಿನ ಹಿರಿಮೆ–ಗರಿಮೆ ಹಾಗೂ ಸಂಸ್ಕೃತಿ ಮೇಳೈಸುವ, ಇಲ್ಲಿನ ದೈವ ಭಕ್ತಿ, ಧಾರ್ಮಿಕ ಪರಂಪರೆ, ಜನಪದ ಹಾಡುಗಳ ಜೊತೆ ಜೊತೆಯಲ್ಲಿಯೇ ಸಾಗಿತು. ರಾಜ್ಯದ ವಿವಿಧೆಡೆಯಿಂದ ಬಂದಿದ್ದ 17 ಕೋಲಾಟ ತಂಡಗಳ ಕಲಾವಿದರು ದೇಸಿ ಸೊಗಡನ್ನು ಪ್ರತಿಬಿಂಬಿಸಿ, ನೃತ್ಯದ ಮೂಲಕ ರಸಧಾರೆಯನ್ನೇ ಹರಿಸಿದರು. ಇಡೀ ಸಭಾಂಗಣದಲ್ಲಿ ನೆರೆದಿದ್ದ ಸಭಿಕರು ಎರಡ್ಮೂರು ಗಂಟೆ ಮಂತ್ರಮುಗ್ಧರಾದರು.

70ರ ಹಿರಿಯರಿಂದ, 20 ಹರೆಯದ ಯುವ ಸಮೂಹ, 10ರ ಕಿರಿಯರು ಸೇರಿ ಕೋಲಾಟ ಕಲಾವಿದರು ಶಕ್ತಿ ಮೀರಿ ಪ್ರದರ್ಶನ ನೀಡಿದರು. ಕನ್ನಡ ನಾಡು–ನುಡಿ, ನೆಲ–ಜಲಕ್ಕೆ ಸಂಬಂಧಿಸಿದ ಹಾಡುಗಳೊಂದಿಗೆ ಹೆಜ್ಜೆ ಹಾಕಿದರು. ಕೋಲಾಟದ ಮೂಲಕ ಕೋಟೆ­ನಗರಿಯ ಜನಪದ ಕಲೆಗಳ ಆಸಕ್ತ ಮನಸುಗಳಿಗೆ ಕನ್ನಡ ಸಾಹಿತ್ಯದ ಸಿರಿವಂತಿಕೆಯನ್ನು ಉಣಬಡಿಸಿದರು.

ಏಕಾಗ್ರತೆಯೊಂದಿಗೆ ಕೋಲಾಟ ಸ್ಪರ್ಧೆ ಆರಂಭವಾಯಿತು. ಹಾಡುತ್ತ, ಕಂಜರ ಬಾರಿಸುತ್ತ, ತಾಳಕ್ಕೆ ತಕ್ಕಂತೆ ಕಲಾವಿದರು ಲಯಬದ್ಧವಾಗಿ ಕುಣಿಯತೊಡಗಿದರು. ಜನಪದ ನೃತ್ಯ ಶೈಲಿಯಲ್ಲಿ ಕೋಲಾಟ ಪ್ರಸ್ತುತ ಪಡಿಸಿದಾಗ ನೆರೆದಿದ್ದವರು ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ, ಪ್ರೇಕ್ಷಕರ ಗ್ಯಾಲರಿಯಿಂದ ಕರತಾಡನ ವ್ಯಕ್ತವಾಯಿತು.

ಸಂದೀಪ ಮತ್ತು ತಂಡ ‘ಕುರಿ ಕಾಯೋ ಕುರುಬರ ಹುಡುಗ’, ‘ಮಾತನಾಡು ಅಣ್ಣಯ್ಯ ಮಾತನಾಡೋ’, ‘ತಂದನಾನೋ ತಾನೀ ತಂದನಾನೋ’ ಗೀತೆಗೆ ಹೆಜ್ಜೆ ಹಾಕಿದರು. ತುಮಕೂರು ಜಿಲ್ಲೆಯ ಭಗವತ ರಂಗಪ್ಪ ಮತ್ತು ತಂಡ ‘ಕೋಲು ಕೋಲಣ್ಣ ಕೋಲೆ’ ಗೀತೆಗೆ ನೃತ್ಯ ಪ್ರದರ್ಶಿಸಿದರು.

ಧಾರವಾಡ ಜ್ಯೋತಿ ಮತ್ತು ಕಲಾತಂಡ ‘ತಂದೆ ನೀನು, ತಾಯಿ ನೀನು, ನೀನಲ್ಲದೆ ಮತ್ಯಾರು ಇಲ್ಲವಯ್ಯ ಕೂಡಲ ಸಂಗಮದೇವ’, ‘ಹಾಲು ಮಾರಿ ಬರುತ್ತೇನೆ ಕೋಲು ಕೋಲೆ, ನಿನಗೆ ಕಡಗ ತರುತ್ತೇನೆ’ ಗೀತೆಗೆ ಕುಣಿದು ಸಂಭ್ರಮಿಸಿದರು. ಚಿಕ್ಕಮಗಳೂರಿನ ಸುಬ್ರಹ್ಮಣ್ಯ ಮತ್ತು ಸಂಗಡಿಗರು ‘ಮಾತಾಡ್‌ ಮಾತಾಡ್‌ ಮಲ್ಲಿಗೆ, ಸಂಪಿಗೆ ಸೇವಂತಿಗೆ’ ಹಾಡಿಗೆ ಹೆಜ್ಜೆ ಹಾಕಿದರು.

ಚಿತ್ರದುರ್ಗ ಗೋಸಯ್ಯ ಮತ್ತು ಸಂಗಡಿಗರು ‘ಶರಣೆನ್ನಿ ಅಣ್ಣಯ್ಯ ಶರಣೆನ್ನಿರೋ ಸ್ವಾಮಿ ಮುರುಘೇಶಗೆ ಶರಣೆನ್ನಿರೋ’, ಶಿವಮೊಗ್ಗ ವಸಂತಕುಮಾರ ಮತ್ತು ಸಂಗಡಿಗರು ‘ಸ್ವಾಗತವೇ, ಸ್ವಾಗತ ಬಂಧು–ಬಾಂಧವರೇ, ಶೀಲವಂತರೆ, ನಮ್ಮ ತಾಯಿ ಭಾರತ, ನಾವೆಲ್ಲರೂ ಅವಳ ಮುದ್ದು ಮಕ್ಕಳು’ ಗೀತೆಗೆ ಕೋಲಾಟ ಪ್ರದರ್ಶಿಸಿದರು.

ವಿಜಯನಗರದ ನೀಲಪ್ಪ ಮತ್ತು ಕಲಾತಂಡ ‘ಈ ಭೂಮಿ ಒಳಗೊಂದು ಸರ್ಪಣ್ಣ ಬಲು ದೊಡ್ಡವನು’, ‘ಕೋಲೆ ರನ್ನ ಕೋಲೆನ್ನಾ, ಕೋಲೆ ಮುದ್ದು ಕೋಲೆನ್ನಾ’, ‘ಹರನ ಕಂಡೆವೋ, ಶಿವನ ಪಾದ ಕಂಡೆವೋ, ಸ್ವಾಮಿಯ ಪಾದಕ್ಕೆ ಉಘೇ ಎಂದೆವೋ’ ಹಾಡುಗಳೊಂದಿಗೆ ಪ್ರೇಕ್ಷಕರನ್ನು ಸೆಳೆದರು.

ಹಾವೇರಿಯ ಕನಕ ಕೋಲಾಟ ತಂಡ ‘ಕನ್ನಡ ನಾಡು ಚೆಂದ, ಕನ್ನಡ ನುಡಿ ಚೆಂದ, ಕನ್ನಡ ಹಾಡು ಚೆಂದ’, ‘ಚಿತ್ರದುರ್ಗವ ನೋಡು, ಚಿನ್ನದ ಮಠವ ನೋಡು, ಭಕ್ತರ ಪೊರೆವ ಮುರುಘೇಶನ ನೋಡು’ ಗೀತೆಯೊಂದಿಗೆ ಹೆಜ್ಜೆ ಹಾಕಿದರು.

ಶಿವಮೂರ್ತಿ ಮುರುಘಾ ಶರಣರು, ಉತ್ಸವ ಸಮಿತಿ ಗೌರವಾಧ್ಯಕ್ಷ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್.ಹನುಮಂತಪ್ಪ, ಸಮಿತಿ ಕಾರ್ಯಾಧ್ಯಕ್ಷ ಕೆ.ಎಸ್. ನವೀನ್‌ ಇದ್ದರು. ಡಾ.ನಾಗರಾಜ್ ಗೊಟಗೋಡಿ, ಡಾ.ಮಂಜುನಾಥ್ ಪಟೇಲ್, ಪ್ರೊ.ಸುಧಾಕರ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.

ಧಾರವಾಡ ಪ್ರಥಮ, ವಿಜಯನಗರ ದ್ವಿತೀಯ, ದಾವಣಗೆರೆ ತೃತೀಯ

ಕೋಲಾಟದಲ್ಲಿ ಧಾರವಾಡದ ಜ್ಯೋತಿ ಮತ್ತು ತಂಡ ₹ 15 ಸಾವಿರ ನಗದು ಮತ್ತು ಪಾರಿತೋಷಕದೊಂದಿಗೆ ಪ್ರಥಮ ಸ್ಥಾನ ಮುಡಿಗೇರಿಸಿಕೊಂಡಿತು.

ವಿಜಯನಗರ ಜಿಲ್ಲೆಯ ಜನನಿ ಪುಷ್ಪಕಲಾ ಯುವಕರ ಸಂಘದ ಚಮನ್ ಸಾಬ್ ಮತ್ತು ಸಂಗಡಿಗರು ₹ 10 ಸಾವಿರ ನಗದು ಮತ್ತು ಪಾರಿತೋಷಕದೊಂದಿಗೆ ದ್ವಿತೀಯ, ದಾವಣಗೆರೆ ಜಿಲ್ಲೆಯ ಗೋಕುಲ ಯಾದವ ಯುವಕ ಸಂಘದ ಹೂವಣ್ಣ ಮತ್ತು ಸಂಗಡಿಗರು ₹ 5 ಸಾವಿರ ನಗದು ಮತ್ತು ಪಾರಿತೋಷಕದೊಂದಿಗೆ ತೃತೀಯ ಸ್ಥಾನ ಪಡೆದರು.

ಸ್ಪರ್ಧೆಯಲ್ಲಿದ್ದ ತಂಡಗಳು
ಶಿವಮೊಗ್ಗ ಜಿಲ್ಲೆಯ ಮರಿಯಮ್ಮ ಯುವತಿ ಮಂಡಳಿ, ಅಂಬೇಡ್ಕರ್ ಕಲಾಮೇಳ, ಚೌಡೇಶ್ವರಿ ಕೋಲಾಟ ಗೆಳೆಯರ ಬಳಗ, ಹಾವೇರಿ ಜಿಲ್ಲೆಯ ಶ್ರೀವಾರಿ ಮಹಿಳಾ ಕೋಲಾಟ ತಂಡ, ವಿಜಯನಗರ ಜಿಲ್ಲೆಯ ಸಪ್ತಸ್ವರ ಸಾಂಸ್ಕೃತಿಕ ಕಲಾತಂಡ, ಚಿಕ್ಕಮಗಳೂರು ಜಿಲ್ಲೆಯ ಭೀಮಜ್ಯೋತಿ ಕಲಾತಂಡ, ಚಿತ್ರದುರ್ಗ ಜಿಲ್ಲೆಯ ವಾಲ್ಮೀಕಿ ಕೋಲಾಟ ಸಂಘ, ವಾಲ್ಮೀಕಿ ಯುವ ಕೋಲಾಟ ಸಂಘ, ಎ.ವಿ. ಕೊಟ್ಟಿಗೆಯ ಗಂಗಾಧರ್ ತಂಡ ಸೇರಿ ಒಟ್ಟು 17 ತಂಡಗಳು ಭಾಗವಹಿಸಿದ್ದವು.

**
ವಿಶ್ವದಲ್ಲೇ ಭಾರತಕ್ಕೆ ಮನ್ನಣೆ ದೊರೆಯುತ್ತಿರುವುದು ಇಲ್ಲಿನ ಸಂಸ್ಕಾರ ಮತ್ತು ಸಂಸ್ಕೃತಿಯಿಂದ. ದೇಶವನ್ನು ಭವ್ಯ, ದಿವ್ಯ, ಪವಿತ್ರ ಎಂಬುದಾಗಿ ಕರೆಯಲಿಕ್ಕೆ ಇಂತಹ ಜನಪದ ಕಲೆಗಳು ಕಾರಣ.
-ಬಸವಪ್ರಸಾದ ಸ್ವಾಮೀಜಿ, ಇರಕಲ್

**
ಐತಿಹಾಸಿಕ ಚಿತ್ರದುರ್ಗ ಜಿಲ್ಲೆ ಸಂಸ್ಕೃತಿ, ಸಂಪ್ರದಾಯದ ನೆಲೆಯಾಗಿದೆ. ಇಲ್ಲಿನ ಮುರುಘಾಮಠ ಸಾಂಸ್ಕೃತಿಕ ಕಲೆಗಳನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುತ್ತಿದೆ.
-ಬಿ. ಧನಂಜಯ, ಜಿಲ್ಲಾ ವಾರ್ತಾಧಿಕಾರಿ

**
ಕೋಲಾಟ ಅತ್ಯಂತ ಪ್ರಾಚೀನ ಕಲೆ. ಸುತ್ತು/ದಾಟು, ತೂಗು, ಬಿಚ್ಚು, ಸಾಲು, ಜಡೆ ಹೀಗೆ ಪ್ರಮುಖವಾಗಿ ಐದು ಪ್ರಕಾರಗಳಿವೆ. ಕೋಲಾಟ ಪರಿಶ್ರಮದ ಕಲೆಯಾಗಿದ್ದು, ಸಂಸ್ಕೃತಿಯನ್ನು ಬಿಂಬಿಸುತ್ತದೆ.
-ಎ.ಎಂ. ಮರುಳಾರಾಧ್ಯ, ಶರಣಸೇನೆ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT