ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭರಮಸಾಗರ: ದಂಡಿನದುರ್ಗಿ ಜಾತ್ರೆ ಆರಂಭ

ವಿ.ಎ. ಶಿವಪ್ರಸಾದ್
Published 30 ಏಪ್ರಿಲ್ 2024, 6:08 IST
Last Updated 30 ಏಪ್ರಿಲ್ 2024, 6:08 IST
ಅಕ್ಷರ ಗಾತ್ರ

ಭರಮಸಾಗರ: ಗ್ರಾಮದಲ್ಲಿ ಏ. 30ರಿಂದ ನಗರದೇವತೆ ದುರ್ಗಾಂಬಿಕಾದೇವಿ ಜಾತ್ರೆ ಆರಂಭಗೊಳ್ಳಲಿದೆ.

ಗ್ರಾಮದ ಜನರ ನಂಬಿಕೆ ವಿಶ್ವಾಸಗಳಿಗೆ ಪಾತ್ರವಾಗಿರುವ ಗ್ರಾಮದೇವತೆ ದುರ್ಗಾಂಬಿಕಾ ದೇವಿ ದೇವಸ್ಥಾನ ವಿಶಿಷ್ಟ ಐತಿಹ್ಯ ಹಿನ್ನೆಲೆ ಹೊಂದಿದೆ. ವರ್ಷದಲ್ಲಿ ಎರಡು ಬಾರಿ ಕೆಂಡೋತ್ಸವ ನಡೆಯುವುದು ಇಲ್ಲಿನ ವೈಶಿಷ್ಟ.

ಹಿನ್ನೆಲೆ: ‘ಹಿಂದೆ ಇಲ್ಲಿಗೆ ಆಗಾಗ್ಗೆ ಬರುತ್ತಿದ್ದ ಬ್ರಿಟಿಷ್ ಮತ್ತು ಇತರೆ ರಾಜರ ಸೈನಿಕರು ಈ ದೇವಸ್ಥಾನದ ಆವರಣದಲ್ಲಿ ಬೀಡು ಬಿಡುತ್ತಿದ್ದರು. ಒಮ್ಮೆ ಈ ರೀತಿ ಬೀಡುಬಿಟ್ಟ ಸೈನಿಕರು ದುಂಡನೆ ಆಕಾರದಲ್ಲಿದ್ದ ದೇವರುಗಳ ವಿಗ್ರಹವನ್ನು ಕಲ್ಲೆಂದು ಭಾವಿಸಿ ಅಡುಗೆ ಮಾಡಲು ಬಳಸಿದ ಕಾರಣ ದೇವಿಯ ಆಕ್ರೋಶಕ್ಕೆ ತುತ್ತಾಗಿ ಅನಾರೋಗ್ಯಕ್ಕೆ ಈಡಾಗುತ್ತಾರೆ. ಯಾವ ವೈದ್ಯೋಪಚಾರಗಳಿಂದಲೂ ಕಾಯಿಲೆ ನಿಯಂತ್ರಣಕ್ಕೆ ಬಾರದಿದ್ದಾಗ ಗ್ರಾಮಸ್ಥರಿಂದ ವಿಷಯ ತಿಳಿದು ತಪ್ಪೊಪ್ಪಿಕೊಂಡು ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಹರಕೆ ತೀರಿಸಿದರು. ನಂತರ ಸೈನಿಕರು ಗುಣಮುಖರಾದರಂತೆ. ದೇವರ ಮಹಿಮೆಗೆ ಮಾರುಹೋಗಿ ಗುಡಿಯಲ್ಲಿದ್ದ ಮರಿಯಮ್ಮ, ಕರಿಯಮ್ಮ, ದುರ್ಗಮ್ಮ ದೇವಿಯರಿಗೆ ಮುಖಪದ್ಮ, ಕತ್ತಿ, ಡಾಬು ಮುಂತಾದ ಬೆಳ್ಳಿಯ ಆಭರಣಗಳನ್ನು ಕಾಣಿಕೆ ನೀಡಿದರು’ ಎಂದು ಗ್ರಾಮದ ಹಿರಿಯರು ಹೇಳುತ್ತಾರೆ.

ಬ್ರಿಟಿಷರು ಮತ್ತು ಬೇರೆ ರಾಜರು ಈ ಭಾಗದಲ್ಲಿ ಹಾದುಹೋಗುವಾಗ ಇಲ್ಲಿ ಉಳಿದು ವಿಶೇಷ ಪೂಜೆ ಸಲ್ಲಿಸುತ್ತಿದ್ದರು. ಹಾಗಾಗಿ ಇದಕ್ಕೆ ದಂಡಿನ ದುರ್ಗಿ ಎಂದು ಸಹ ಹೆಸರಿದೆ.

ಏ. 30 ಮಂಗಳವಾರ ದೇವಿ ಮದಲಿಂಗಿತ್ತಿ ಶಾಸ್ತ್ರ ನಡೆಯಲಿದೆ. ಬುಧವಾರ ಬಿಡುವ, ಗುರುವಾರ ಬೇವುಬೇಟೆ ನಡೆಯಲಿದೆ. ಶುಕ್ರವಾರ ಮಧ್ಯಾಹ್ನ ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯ ಮತ್ತು ಜಾನಪದ ಕಲಾತಂಡಗಳೊಂದಿಗೆ ದೇವಿ ಮೆರವಣಿಗೆ ನಡೆಯಲಿದೆ. ರಾತ್ರಿ 7ಕ್ಕೆ ಸಿಡಿ ಉತ್ಸವ ನಡೆಯಲಿದೆ.

ಜಾತ್ರೆಗೆ ಸಜ್ಜುಗೊಳ್ಳುತ್ತಿರುವ ದುರ್ಗಾಂಬಿಕಾದೇವಿ ದೇವಸ್ಥಾನ
ಜಾತ್ರೆಗೆ ಸಜ್ಜುಗೊಳ್ಳುತ್ತಿರುವ ದುರ್ಗಾಂಬಿಕಾದೇವಿ ದೇವಸ್ಥಾನ

‘ಶನಿವಾರ ಬೆಳಿಗ್ಗೆ ದೇವಿಯ ಕೆಂಡೋತ್ಸವ ನಡೆಯಲಿದೆ. ಚುನಾವಣೆ ಹಿನ್ನೆಲೆ ಮತ್ತು ಬರದ ಕಾರಣ ಈ ಬಾರಿ ಸರಳ ರೀತಿಯಲ್ಲಿ ಜಾತ್ರೆ ನಡೆಯಲಿದೆ. ಜಾತ್ರೆಯಲ್ಲಿ ಪ್ರತಿ ವರ್ಷ ನಡೆಯುತ್ತಿದ್ದ ಕುಸ್ತಿ ಪಂದ್ಯಗಳನ್ನು, ಮನೋರಂಜನೆ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ’ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಎಚ್.ಎನ್.ತಿಪ್ಪೇಸ್ವಾಮಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT