ಮಂಗಳವಾರ, ಮೇ 17, 2022
27 °C
ಜಿಲ್ಲಾ ಆಸ್ಪತ್ರೆಗೆ ಕವಿತಾ ಎಸ್. ಮನ್ನಿಕೇರಿ ಭೇಟಿ * ವಾರ್ಡ್‍ಗಳ ಪರಿಶೀಲನೆ

ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ ತಾಯಿ, ಮಕ್ಕಳ ವಿಭಾಗ ಪರಿಶೀಲಿಸಿದ ಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಇಲ್ಲಿನ ಜಿಲ್ಲಾ ಆಸ್ಪತ್ರೆಗೆ ಗುರುವಾರ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ತಾಯಿ ಮತ್ತು ಮಕ್ಕಳ ವಿಭಾಗವನ್ನು ಪರಿಶೀಲನೆ ನಡೆಸಿದರು.

ಈ ವೇಳೆ ಅನೇಕ ತಾಯಂದಿರೊಂದಿಗೆ ಮಾತನಾಡಿದ ಅವರು, ಆಸ್ಪತ್ರೆಯ ಸೌಲಭ್ಯದ ಕುರಿತು ವಿಚಾರಿಸಿದರು. ರೋಗಿಗಳ ಅಹವಾಲು ಆಲಿಸಿದರು. ಐಸಿಯು ವಾರ್ಡ್‌ಗೂ ಭೇಟಿ ನೀಡಿ ಮಾಹಿತಿ ಪಡೆದರು.

‘ಆಸ್ಪತ್ರೆಗೆ ಬರುವ ರೋಗಿಗಳನ್ನು ಕುಟುಂಬದ ಸದಸ್ಯರಂತೆ ನೋಡಿಕೊಳ್ಳಬೇಕು. ಯಾವ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ’ ಎಂದು ವೈದ್ಯರು, ಶುಶ್ರೂಷಕರು ಹಾಗೂ ಸಿಬ್ಬಂದಿಗೆ ಸಲಹೆ ನೀಡಿದರು.

‘ಆಸ್ಪತ್ರೆಯ ಸಿಬ್ಬಂದಿ ಶಕ್ತಿಮೀರಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೋವಿಡ್ ಸಮಯದಲ್ಲೂ ಸಾಕಷ್ಟು ಶ್ರಮಿಸಿದ್ದಾರೆ. ಉತ್ತಮ ಸೇವೆಯನ್ನು ಪ್ರತಿಯೊಬ್ಬರೂ ಆಪೇಕ್ಷಿಸುವುದು ಸಹಜ. ಅದರಂತೆ ಕಾರ್ಯನಿರ್ವಹಿಸುತ್ತೀರಿ ಎಂಬ ವಿಶ್ವಾಸವಿದೆ. ಆ ನಿಟ್ಟಿನಲ್ಲೇ ಕೆಲಸ ಮಾಡಬೇಕು’ ಎಂದು ಸೂಚನೆ ನೀಡಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಿ.ಎಲ್. ಫಾಲಾಕ್ಷ, ‘ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು 800ರಿಂದ 900 ಹೆರಿಗೆ ಆಗುತ್ತವೆ. ಶೇ 60ರಷ್ಟು ಸಹಜ ಹೆರಿಗೆ, ಶೇ 40ರಷ್ಟು ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಸಾಂಸ್ಥಿಕ ಹೆರಿಗೆಯನ್ನು ಹೆಚ್ಚಿಸಲು ಜಿಲ್ಲೆಯಲ್ಲಿ 34 ಕಡೆ 24X7 ಹೆರಿಗೆ ಆಸ್ಪತ್ರೆಗಳಿವೆ. ಬಹುತೇಕ ಹೆರಿಗೆಗಳು ಆಸ್ಪತ್ರೆಯಲ್ಲೇ ಆಗುತ್ತವೆ. ಈ ಕುರಿತು ಸಾರ್ವಜನಿಕರಲ್ಲೂ ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸವರಾಜ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.