ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯಲು ಸೀಮೆ ಕಲ್ಲಂಗಡಿಗೆ ದೆಹಲಿಯಲ್ಲಿ ಬೇಡಿಕೆ

ಮಲ್ಚಿಂಗ್‌ ಪೇಪರ್‌ ಹೊದಿಕೆ ವಿಧಾನದಿಂದ ಅಧಿಕ ಇಳುವರಿ
Last Updated 11 ನವೆಂಬರ್ 2020, 6:10 IST
ಅಕ್ಷರ ಗಾತ್ರ

ಚಳ್ಳಕೆರೆ: ಮಲ್ಚಿಂಗ್ ಪೇಪರ್ ಹೊದಿಕೆ ವಿಧಾನದ ಮೂಲಕ ಬಯಲು ಸೀಮೆ ಪ್ರದೇಶದಲ್ಲಿ ಬೆಳೆಯುವ ಕಲ್ಲಂಗಡಿ ಹಣ್ಣಿಗೆದೆಹಲಿ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ.

ಗಾತ್ರ, ಬಣ್ಣ ಮತ್ತು ಗುಣಮಟ್ಟದ ಜತೆಗೆ ಉತ್ತಮ ರುಚಿ ನೀಡುವ ಕಾರಣ ಇಲ್ಲಿನ ಹಣ್ಣಿಗೆ ಹೊರರಾಜ್ಯಗಳಲ್ಲಿ
ಬೇಡಿಕೆ ಹೆಚ್ಚು. ಕಲ್ಲಂಗಡಿ ಸದ್ಯ ಹೊರರಾಜ್ಯಗಳಿಗೆ ಹೋಗುತ್ತಿದ್ದು, ರೈತರು ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದಾರೆ.

ಕೋವಿಡ್ ಸಂದರ್ಭದಲ್ಲಿ ಭಾರಿ ನಷ್ಟ ಅನುಭವಿಸಿದ್ದ ಕುಂಬಳ, ಕರಬೂಜ, ದಾಳಿಂಬೆ, ಮೋಸುಂಬಿ ಹಣ್ಣಿನ ಬೆಳೆಗಾರರು ಈ ಬಾರಿ ಕಿರಣ್ ತಳಿಯ ಕಲ್ಲಂಗಡಿಯನ್ನು ಬೆಳೆದಿದ್ದಾರೆ.ಕೊಳವೆಬಾವಿಯಲ್ಲಿ ಲಭ್ಯವಾದ ನೀರಿಗೆ ಡ್ರಿಪ್ ಅಳವಡಿಸಿಕೊಂಡು ಮಲ್ಚಿಂಗ್ ಪೇಪರ್ ಹೊದಿಕೆ ವಿಧಾನದ ಮೂಲಕ ಬೆಳೆದ ಕಿರಣ್ ತಳಿಯ ಕಲ್ಲಂಗಡಿ ಬೆಳೆ ಉತ್ತಮ ಇಳುವರಿ ಬಂದಿದೆ. ಒಂದು ಹಣ್ಣು 7ರಿಂದ 8 ಕೆ.ಜಿ. ತೂಕ ಬರುತ್ತದೆ.

ತಾಲ್ಲೂಕಿನ ಪುರ್ಲೆಹಳ್ಳಿ, ತಳುಕು, ಚನಗಾನಹಳ್ಳಿ, ಜಾಜೂರು, ಚನ್ನಮ್ಮನಾಗತಿಹಳ್ಳಿ, ಘಟಪರ್ತಿ, ವಲಸೆ, ಗೋಸಿಕೆರೆ, ಆಂಧ್ರ ಗಡಿ ಭಾಗದ ಕೆ.ಡಿ.ಕೋಟೆ, ಬೋಗನಹಳ್ಳಿ, ಬಸಾಪುರ, ತಿಪ್ಪಾರೆಡ್ಡಿಹಳ್ಳಿ ಮುಂತಾದ ಗ್ರಾಮ ಸೇರಿ ತಾಲ್ಲೂಕಿನಲ್ಲಿ ಒಟ್ಟು 400 ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆಯಲಾಗಿದೆ.

ಈಗಾಗಲೇ ಕೆಲ ಗ್ರಾಮಗಳಲ್ಲಿ ಒಂದೊಂದು ಬಾರಿ ಬೆಳೆ ಕಟಾವು ಮಾಡಿ ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಮೂಲಕ ಬೆಳೆಗಾರರು ಉತ್ತಮ ಆದಾಯ ಪಡೆದಿದ್ದಾರೆ.

‘5-6 ವರ್ಷಗಳಿಂದ ಮಲ್ಚಿಂಗ್ ಹೊದಿಕೆ ವಿಧಾನ ಬಳಕೆಯಿಂದ 3 ಎಕರೆಯಲ್ಲಿ ಕಲ್ಲಂಗಡಿ ಬೆಳೆ ಬೆಳೆಯುತ್ತಿದ್ದೇನೆ. ಈ ಬಾರಿ ಬೆಳೆದ ಕಲ್ಲಂಗಡಿ ಉತ್ತಮ ಇಳುವರಿ
ಬಂದಿದೆ. ಫಲ ನೀಡಲು ಪ್ರಾರಂಭವಾಗಿದೆ. ಇನ್ನು 20 ದಿನಗಳಲ್ಲಿ ಪ್ರತಿ ಹಣ್ಣು 7ರಿಂದ 8 ಕೆ.ಜಿ ತೂಕ ಬರುತ್ತದೆ. ಎಕರೆಗೆ 20 ಟನ್ ಹಣ್ಣು ಬರುತ್ತದೆ. ಮಾರುಕಟ್ಟೆಯಲ್ಲಿ

ಒಂದು ಕೆ.ಜಿ ಗೆ ₹ 12 ಸಿಕ್ಕರೂ ಈ ಬೆಳೆಯಿಂದ ₹ 10 ಲಕ್ಷ ಆದಾಯ ಪಡೆಯುವ ನಿರೀಕ್ಷೆ ಇದೆ’ ಎನ್ನುತ್ತಾರೆ ಬೆಳೆಗಾರ ಪುರ್ಲೆಹಳ್ಳಿ ಹೊನ್ನೇಶಪ್ಪ.

‘ಮಲ್ಚಿಂಗ್ ಪೇಪರ್ ಹೊದಿಕೆ, ಬೀಜ, ಗೊಬ್ಬರ, ಬೇಸಾಯ ಮತ್ತು ಕೂಲಿ ಸೇರಿ ಎಕರೆಗೆ ಕನಿಷ್ಠ ₹ 1.30 ಲಕ್ಷ ವೆಚ್ಚವಾಗುತ್ತದೆ. ಹಣ್ಣನ್ನು ಚಿತ್ರದುರ್ಗ ಮಾರುಕಟ್ಟೆಗೆ ಹಾಕುತ್ತೇವೆ. ಆಂಧ್ರದಿಂದ ಬಂದ ವರ್ತಕರು ಖರೀದಿ ಮಾಡಿದ ಹಣ್ಣನ್ನು ಹೊರ ರಾಜ್ಯಗಳಿಗೆ ಕಳುಹಿಸುತ್ತಾರೆ’ ಎಂದು ಅವರು ಹೇಳಿದರು.

‘ಮಲ್ಚಿಂಗ್ ಪೇಪರ್ ಅಳವಡಿಕೆ ಮಾಡಿಕೊಂಡು ಕಲ್ಲಂಗಡಿ ಬೆಳೆಯುವುದರಿಂದ ಗಾತ್ರ, ಉತ್ತಮ ಗುಣಮಟ್ಟದ ಹಣ್ಣು ದೊರೆಯುತ್ತವೆ. ಗುಣಮಟ್ಟದ ಹಣ್ಣಿಗೆ ಮಾರುಕಟ್ಟೆಯಲ್ಲಿ ಯಾವಾಗಲೂ ಬೇಡಿಕೆ ಇರುತ್ತದೆ’ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಡಾ.ವಿರೂಪಾಕ್ಷಪ್ಪ ಹೇಳಿದರು.

‘ಪ್ರತಿ ಹೆಕ್ಟೆರ್‌ಗೆ ₹ 16 ಸಾವಿರದಂತೆ ಇಲಾಖೆಯಿಂದ 15 ಹೆಕ್ಟೆರ್‌ಗೆ ₹ 2.50 ಲಕ್ಷ ಸಹಾಯ ಧನ ನೀಡಲಾಗಿದೆ. ಎಲ್ಲ ತರಕಾರಿ ಬೆಳೆಗೆ ಮಲ್ಚಿಂಗ್ ಪೇಪರ್ ವಿಧಾನ ಬಳಕೆ ಮಾಡಿದರೆ ಅನುಕೂಲ. ಮಲ್ಚಿಂಗ್ ವಿಧಾನದಿಂದ ನೀರಿನ ಮಿತ ಬಳಕೆಯ ಜತೆಗೆ ಕಳೆ ಮತ್ತು ಕೀಟಬಾಧೆ ನಿವಾರಣೆ ಸುಲಭವಾಗುತ್ತದೆ’ ಎಂದು ಮಾಹಿತಿ ನೀಡಿದರು.

***

ಬೇಸಿಗೆಗಿಂತ ಚಳಿಗಾಲದಲ್ಲೇ ಹಣ್ಣಿಗೆ ಜಾಸ್ತಿ ಬೇಡಿಕೆ. ಮಲ್ಚಿಂಗ್ ಹೊದಿಕೆ ವಿಧಾನ ಬಳಕೆಯಿಂದ ಉತ್ತಮ ಗುಣಮಟ್ಟದ ಹಣ್ಣು ಬರುವುದಲ್ಲದೆ ಇಳುವರಿಯೂ ಹೆಚ್ಚುತ್ತದೆ.

ಹೊನ್ನೇಶಪ್ಪ ಪುರ್ಲೆಹಳ್ಳಿ, ಬೆಳೆಗಾರ

***

ಈರುಳ್ಳಿಯನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ತರಕಾರಿ ಬೆಳೆಗಳಿಗೆ ಮಲ್ಚಿಂಗ್ ಪೇಪರ್ ವಿಧಾನ ಬಳಕೆ ಮಾಡಿದರೆ ರೈತರು ಉತ್ತಮ ಇಳುವರಿ ಪಡೆಯಬಹುದು.

ಡಾ.ವಿರೂಪಾಕ್ಷಪ್ಪ, ಹಿರಿಯ ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT