ಶನಿವಾರ, 1 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ವರ್ಷಾರಂಭದಲ್ಲೇ ಮೂರಂಕಿ ತಲುಪಿದ ಡೆಂಗಿ!

Published 17 ಮೇ 2024, 7:08 IST
Last Updated 17 ಮೇ 2024, 7:08 IST
ಅಕ್ಷರ ಗಾತ್ರ

ಚಿತ್ರದುರ್ಗ: ವರ್ಷದ ಪ್ರಾರಂಭದಲ್ಲೇ ಜಿಲ್ಲೆಯಾದ್ಯಂತ ಡೆಂಗಿ ಪ್ರಕರಣಗಳು ಊಹೆಗೂ ಮೀರಿ ಹೆಚ್ಚಳವಾಗಿದ್ದು ಆತಂಕಕ್ಕೆ ಕಾರಣವಾಗಿದೆ. 2024ರ ಜನವರಿಯಿಂದ ಮೇ 16ರವರೆಗೆ ಬರೋಬ್ಬರಿ 200 ಜನ ಡೆಂಗಿಯಿಂದ ಬಳಲಿದ್ದಾರೆ.

ಚಿತ್ರದುರ್ಗ ತಾಲ್ಲೂಕಿನಲ್ಲೇ 133 ಜನರಲ್ಲಿ ಡೆಂಗಿ ಪತ್ತೆಯಾಗಿದೆ. ನಗರ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಕರಣ ದಾಖಲಾಗುತ್ತಿರುವ ಕಾರಣ ಜಿಲ್ಲೆಯ ಉಳಿದೆಲ್ಲಾ ತಾಲ್ಲೂಕುಗಳಿಗಿಂತ ಇಲ್ಲಿ ರೋಗಿಗಳ ಸಂಖ್ಯೆ ಏರಿಕೆ ಆಗುತ್ತಿದೆ. ಚಳ್ಳಕೆರೆ, ಹಿರಿಯೂರು, ಹೊಳಲ್ಕೆರೆ, ಹೊಸದುರ್ಗ ಹಾಗೂ ಮೊಳಕಾಲ್ಮುರು ಭಾಗದಲ್ಲಿ ತೀವ್ರತೆ ಕಡಿಮೆಯಿದೆ.

ಸ್ವಚ್ಛತೆಯ ನಿರ್ಲಕ್ಷ್ಯ ಹಾಗೂ ಬೇಸಿಗೆಯಲ್ಲಿ ನೀರಿನ ಅಭಾವದಿಂದ ಮನೆಗಳಲ್ಲಿ ಸಂಗ್ರಹಿಸಿಡಲಾದ ನೀರಿನ ಸಂಗ್ರಹಾಗಾರಗಳನ್ನು ಸ್ವಚ್ಛಗೊಳಿಸದೇ ಇರುವುದರಿಂದ ರೋಗ ಉಲ್ಬಣಿಸಿರುವುದು ಸ್ಪಷ್ಟವಾಗುತ್ತಿದೆ. ತಾಪಮಾನ ಏರಿಕೆಯಿಂದ ಹೈರಾಣದ ಜನರ ಮೇಲೆ ಡೆಂಗಿ ಕಾರ್ಮೋಡ ಆವರಿಸಿದೆ.

ಸಾಮಾನ್ಯವಾಗಿ ಡೆಂಗಿ ಮುಂಗಾರು ಸಂದರ್ಭದಲ್ಲಿ ಹೆಚ್ಚು. ಆದರೆ ಈ ಬಾರಿ ಸಕಾಲಕ್ಕೆ ಮಳೆ ಬಾರದಿದ್ದರೂ ರೋಗ ಹೆಚ್ಚಾಗಿದೆ. ತೊಟ್ಟಿ, ಬಿಂದಿಗೆಗಳಲ್ಲಿ ಹೆಚ್ಚು ದಿನ ನೀರಿನ ಸಂಗ್ರಹವೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ತೊಟ್ಟಿ ಬಿಂದಿಗೆಗಳ ಮುಚ್ಚಳ ಮುಚ್ಚದಿದ್ದಾಗ, ಡೆಂಗಿ ಹರಡುವ ಏಡಿಸ್‌ ಈಜಿಪ್ಟೈ ಸೊಳ್ಳೆ ಸಂತಾನೋತ್ಪತ್ತಿ ಮಾಡುತ್ತದೆ. ನೀರಿನ ಅಭಾವದಿಂದ ನೀರನ್ನು ತೆರವುಗೊಳಿಸದ್ದರಿಂದ ಸೊಳ್ಳೆಗಳ ಉತ್ಪತ್ತಿ ಆಗಿ ಸಮಸ್ಯೆ ಉಂಟಾಗಿದೆ ಎಂದು ಆರೋಗ್ಯ ಇಲಾಖೆ ವೈದ್ಯರು ಅಂದಾಜಿಸಿದ್ದಾರೆ.

ಈ ಬಾರಿ ಜಿಲ್ಲೆಯಲ್ಲಿ ಜನವರಿಯಿಂದ ಮೇ ವರೆಗೆ ಪ್ರಕರಣಗಳು ಮೂರಂಕಿ ದಾಖಲಿಸಿವೆ. ಮಳೆಗಾಲ ತೀವ್ರಗೊಂಡರೆ ಸಮಸ್ಯೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ.

ಜಿಲ್ಲೆಯಲ್ಲಿ ಈವರೆಗೆ 1,765 ಶಂಕಿತ ಪ್ರಕರಣಗಳನ್ನು ಗುರುತಿಸಲಾಗಿದೆ. ಅದರಲ್ಲಿ 1,417 ಜನರನ್ನು ಪರೀಕ್ಷೆಗೆ ಒಳಪಡಿಸಿದ್ದು, 200 ಪ್ರಕರಣ ಖಚಿತಗೊಂಡಿವೆ. ಜಿಲ್ಲಾ ಆಸ್ಪತ್ರೆ ಹಾಗೂ ತಾಲ್ಲೂಕು ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

ಪ್ರಕರಣ ಹೆಚ್ಚಾಗುತ್ತಿರುವುದನ್ನು ಗಮನಿಸಿದ ಆರೋಗ್ಯ ಇಲಾಖೆ ರೋಗ ಹರಡುವಿಕೆ ಹಾಗೂ ಅದರ ಲಕ್ಷಣಗಳ ಕುರಿತು ನಾಗರಿಕರಲ್ಲಿ ಅರಿವು ಮೂಡಿಸಲು ಮುಂದಾಗಿದೆ. ನಗರದ ಸ್ವಾಮಿ ವಿವೇಕಾನಂದ ನಗರ, ಜೋಗಿಮಟ್ಟಿ ರಸ್ತೆ, ಸ್ಟೇಡಿಯಂ ರಸ್ತೆ, ದರ್ಜಿ ಕಾಲೊನಿ, ಗೋಪಾಲಪುರ ರಸ್ತೆ, ಹಿಮ್ಮತನಗರ, ರಾಮ್‌ದಾಸ್‌ ಕಾಂಪೌಂಡ್‌, ನೆಹರೂ ನಗರ, ಬುರುಜನಹಟ್ಟಿ, ಕುಂಬಾರ ಬೀದಿ, ಕಾಮನಬಾವಿ ಸೇರಿದಂತೆ ಸೋಂಕು ಹೆಚ್ಚಳದ ಪ್ರದೇಶಗಳಿಗೆ ಹೆಚ್ಚಿನ ಗಮನಹರಿಸಿದೆ.

‘ಶೇಖರಿಸಿಟ್ಟ ನೀರನ್ನು ಒಂದು ವಾರದ ನಂತರ ಉಪಯೋಗಿಸಬಾರದು. ತೊಟ್ಟಿಗಳನ್ನು ಆಗಿಂದಾಗ್ಗೆ ಸ್ವಚ್ಛಗೊಳಿಸಿಕೊಳ್ಳಬೇಕು. ಸೊಳ್ಳೆ ಪರದೆಗಳನ್ನು ತಪ್ಪದೆ ಬಳಸಿ, ಮೈತುಂಬಾ ಬಟ್ಟೆ ಧರಿಸಬೇಕು. ಮನೆ ಸುತ್ತಮುತ್ತ  ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಜತೆಗೆ ಟೈರ್, ಚಿಪ್ಪು, ಖಾಲಿ ಬಾಟಲಿಗಳಲ್ಲಿ ನೀರು ನಿಲ್ಲದಂತೆ ಎಚ್ಚರವಹಿಸಬೇಕು’ ಎನ್ನುತ್ತಾರೆ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್‌.ಎಸ್‌.ಮಂಜುನಾಥ್‌.

ಸೋಂಕು ಹೊಂದಿದ ಏಡಿಸ್ ಈಜಿಪ್ಟೈ ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಡೆಂಗಿ ಹರಡುತ್ತದೆ. ಈ ಸೊಳ್ಳೆಗಳು ಸಾಮಾನ್ಯವಾಗಿ ಸ್ವಚ್ಚ ನೀರಿನಲ್ಲಿ ಸಂತಾನಾಭಿವೃದ್ಧಿ ಮಾಡುತ್ತವೆ ಹಾಗೂ ಹಗಲು ಹೊತ್ತಿನಲ್ಲಿ ಮನುಷ್ಯರನ್ನು ಕಚ್ಚುತ್ತವೆ. ನೀರಿನ ಶೇಖರಣೆಗಳಾದ ಸಿಮೆಂಟ್‌ ತೊಟ್ಟಿ, ಡ್ರಮ್ಮು, ಬ್ಯಾರೆಲ್‌, ಮಣ್ಣಿನ ಮಡಿಕೆ ಮುಂದಾದ ಕಡೆ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕಿದೆ.

ಇದ್ದಕ್ಕಿದ್ದಂತೆ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ಬಾಯಿ, ಮೂಗು ಮತ್ತು ಒಸಡುಗಳಿಂದ ರಕ್ತಸ್ರಾವ ಮತ್ತು ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತುಗಳು ಕಾಣಿಸಿಕೊಳ್ಳುವುದು ಡೆಂಗಿ ಲಕ್ಷಣಗಳಾಗಿವೆ. ಹೆಚ್ಚಿನ ತಾಪಮಾನ ಕೂಡ ಪ್ರಕರಣಗಳು ಹೆಚ್ಚಲು ಕಾರಣವಾಗಿದೆ ಎನ್ನುತ್ತಾರೆ ವೈದ್ಯರು.

ನೀರು ಸರಬರಾಜು ವ್ಯತ್ಯಯದ ಕಾರಣ ಮನೆಗಳಲ್ಲಿ ನೀರು ಸಂಗ್ರಹಿಸಿಟ್ಟುಕೊಳ್ಳುವುದು ಅನಿವಾರ್ಯವಾಗಿದೆ. ಹೀಗಾಗಿ ಈ ಬಾರಿ ಡೆಂಗಿ ಪ್ರಕರಣ ಅಧಿಕವಾಗಿದೆ. ಆದರೆ ಗಂಭೀರ ಪ್ರಕರಣಗಳು ಎಲ್ಲಿಯೂ ಕಂಡು ಬಂದಿಲ್ಲ. ಲಾರ್ವಾ ಸಮೀಕ್ಷೆ ಕೈಗೊಳ್ಳಲಾಗಿದೆ.
- ಡಾ.ಚಂದ್ರಶೇಖರ್‌ ಕಂಬಾಳಿಮಠ್‌ ಜಿಲ್ಲಾ ಸರ್ವೇಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT