ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಡೆಂಗಿ, ಚಿಕೂನ್‌ ಗುನ್ಯಾ ಗಣನೀಯ ಏರಿಕೆ

ಎಂಟು ವರ್ಷಗಳಿಂದ ಚಿತ್ರದುರ್ಗ ಪ್ರಥಮ * ಸಾರ್ವಜನಿಕರು ಕೈಜೋಡಿಸಲು ಮನವಿ
Last Updated 22 ಡಿಸೆಂಬರ್ 2019, 19:31 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯಾದ್ಯಂತ ಡೆಂಗಿ ಹಾಗೂ ಚಿಕೂನ್‌ ಗುನ್ಯಾ ಪ್ರಕರಣಗಳು 2019ರಲ್ಲಿ ಊಹೆಗೂ ಮೀರಿ ಹೆಚ್ಚಳವಾಗಿದ್ದು, ಎಂಟು ವರ್ಷಗಳಿಂದ ಚಿತ್ರದುರ್ಗ ತಾಲ್ಲೂಕಿನಲ್ಲೇ ಈ ಎರಡೂ ರೋಗಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ.

ಚಿತ್ರದುರ್ಗ ನಗರ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಕರಣ ದಾಖಲಾಗುತ್ತಿರುವ ಕಾರಣ ಜಿಲ್ಲೆಯ ಉಳಿದೆಲ್ಲ ತಾಲ್ಲೂಕುಗಳಿಗಿಂತ ಇಲ್ಲಿ ರೋಗಿಗಳ ಸಂಖ್ಯೆ ಏರಿಕೆ ಆಗುತ್ತಿದೆ.

ಕೀಟಗಳಿಂದ ಹರಡುವಂತಹ ಸಾಂಕ್ರಾಮಿಕ ರೋಗಗಳು ಸಾಮಾನ್ಯವಾಗಿ ಜೂನ್‌, ಜುಲೈ ಅವಧಿಯ ಮುಂಗಾರು ಮಳೆ ಸಂದರ್ಭದಲ್ಲಿ ಹೆಚ್ಚು. ಆದರೆ, ಈ ಬಾರಿ ಜಿಲ್ಲೆಯಲ್ಲಿ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಹಿಂಗಾರು ಮಳೆ ಸುರಿದಿದ್ದರಿಂದಲೂ ವಿವಿಧೆಡೆ ನೀರು ಶೇಖರಣೆಯಾಗಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ.

2017ರಲ್ಲಿ ಇವೆರಡು ರೋಗಗಳ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಳವಾಗಿತ್ತು. ರೋಗ ಹರಡುವಿಕೆ ಹಾಗೂ ಅದರ ಲಕ್ಷಣಗಳ ಕುರಿತು ನಾಗರಿಕರಲ್ಲಿ ಅರಿವು ಮೂಡಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಂಡಗಳನ್ನು ರಚಿಸಿತ್ತು. ಅವುಗಳ ನಿಯಂತ್ರಣಕ್ಕೆ ಮುಂದಾದ ಹಾಗೂ ಮಳೆ ಕಡಿಮೆಯಾದ ಪರಿಣಾಮ 2018ರಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿತ್ತು. ಆ ವರ್ಷ ಬಹುತೇಕ ಪ್ರದೇಶಗಳಲ್ಲಿ ಭಿತ್ತಿಪತ್ರ ಹಂಚುವ ಮೂಲಕ ಜಾಗೃತಿ ಮೂಡಿಸಿದ್ದು, ಸಂಖ್ಯೆ ಇಳಿಕೆಗೆ ಕಾರಣವಾಯಿತು.

ರೋಗಗಳ ಕುರಿತು ನಾಗರಿಕರಲ್ಲಿ ಅರಿವು ಮೂಡಿಸಿ ಸಂಪೂರ್ಣ ನಿರ್ಮೂಲನೆಗಾಗಿ ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶುಕ್ರವಾರ ಆರೋಗ್ಯ ಇಲಾಖೆಯ ಕಿರಿಯ ಪುರುಷ ಮತ್ತು ಮಹಿಳಾ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು ಪ್ರತಿ ಬಡಾವಣೆಗಳಿಗೆ ಭೇಟಿ ನೀಡಿ ಲಾರ್ವ ಸರ್ವೆ ಕೂಡ ಮಾಡುತ್ತಲೇ ಇದ್ದಾರೆ. ಆದರೂ ಗ್ರಾಮೀಣ ಪ್ರದೇಶಗಳಿಗಿಂತಲೂ ನಗರ, ಪಟ್ಟಣ ಪ್ರದೇಶಗಳ ಅಲ್ಲಲ್ಲಿ ಈಗಲೂ ಕಂಡು ಬರುತ್ತಿದೆ.

ಪ್ರತಿ ತಂಡದಲ್ಲಿ ಇಬ್ಬರಂತೆ ಒಟ್ಟು 60 ತಂಡಗಳನ್ನು ರಚಿಸಲಾಗಿದ್ದು, ನಗರ ಹಾಗೂ ಪಟ್ಟಣ ವ್ಯಾಪ್ತಿಯ ಎಲ್ಲ ಬಡಾವಣೆಗಳಲ್ಲೂ ಸಂಚರಿಸಿ, ಅರಿವು ಮೂಡಿಸಲಾಗುತ್ತಿದೆ. ಲಾರ್ವ ಸಮೀಕ್ಷೆ ನಡೆಸಲಾಗುತ್ತಿದೆ. ಲಾರ್ವ ಕಂಡು ಬಂದಲ್ಲಿ ಗಪ್ಪಿ, ಗಾಂಬೋಸಿಯಾ ಮೀನುಗಳನ್ನು ಬಿಡಲಾಗುತ್ತಿದೆ. ಶಾಲಾ-ಕಾಲೇಜುಗಳು, ವಸತಿ ನಿಲಯಗಳು, ಕೈಗಾರಿಕಾ ಪ್ರದೇಶಗಳಲ್ಲಿ ಸಮೀಕ್ಷೆ ಕೈಗೊಳ್ಳಲು 15 ತಂಡ ರಚಿಸಲಾಗಿದೆ.

‘ನಿಂತ ನೀರು ಸೊಳ್ಳೆಗಳ ತವರು. ಸಾಂಕ್ರಾಮಿಕ ರೋಗ ಹರಡಲಿಕ್ಕೂ ಇದುಕಾರಣ ಆಗಿದ್ದು, ಅದನ್ನು ನಿಯಂತ್ರಿಸಿದ್ದಲ್ಲಿ ಮಾತ್ರ ಡೆಂಗಿ, ಚಿಕೂನ್‌ಗುನ್ಯಾ ತಡೆಗಟ್ಟಲು ಸಾಧ್ಯ’ ಎಂದು ‘ಪ್ರಜಾವಾಣಿ’ಗೆ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ರೇಣುಪ್ರಸಾದ್ ತಿಳಿಸಿದ್ದಾರೆ.

‘ಪ್ರಸಕ್ತ ವರ್ಷ ಜಿಲ್ಲೆಯ 3.93 ಲಕ್ಷ ಮನೆಗಳಿಗೆ ತಂಡ ಭೇಟಿ ನೀಡಿ ಅರಿವು ಮೂಡಿಸಿದೆ. ಉಳಿದ ಮನೆಗಳಿಗೂ ಅವರು ಭೇಟಿ ನೀಡಲಿದ್ದಾರೆ. ಯಾವ ಮನೆಯೂ ಇದರಿಂದ ಬಿಟ್ಟು ಹೋಗದಂತೆ ಎಚ್ಚರ ವಹಿಸಲಾಗಿದೆ. ಆದರೆ, ಇದರಲ್ಲಿ ನಾಗರಿಕರ ಪ್ರೋತ್ಸಾಹ ತುಂಬಾ ಅಗತ್ಯವಿದ್ದು, ಅವರು ಕೈಜೋಡಿಸಿದರೆ ಸೊಳ್ಳೆ ನಿರ್ಮೂಲನೆಗೆ ಸಹಕಾರಿಯಾಗಲಿದೆ’ ಎಂದು ಮನವಿ ಮಾಡಿದರು.

‘ಜ್ವರ, ಅಧಿಕ ತಲೆನೋವು, ಕೈಕಾಲು ನೋವು ಕಂಡು ಬಂದರೆ ನಿರ್ಲಕ್ಷ ಮಾಡದೇ ತಕ್ಷಣ ವೈದ್ಯರನ್ನು ಅಥವಾ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ’ ಎಂದು ಅವರು ತಿಳಿಸಿದ್ದಾರೆ.

ಅನುಸರಿಸಬೇಕಾದ ಕ್ರಮ
* ಶೇಖರಿಸಿಟ್ಟ ನೀರನ್ನು ಒಂದು ವಾರದ ನಂತರ ಉಪಯೋಗಿಸಬೇಡಿ.
* ತೊಟ್ಟಿಗಳನ್ನು ಆಗಿಂದಾಗ್ಗೆ ಸ್ವಚ್ಛಗೊಳಿಸಿ.
* ಸೊಳ್ಳೆ ಪರದೆಗಳನ್ನು ತಪ್ಪದೇ ಬಳಸಿ, ಮೈತುಂಬಾ ಬಟ್ಟೆ ಧರಿಸಿ.
* ಮನೆ ಮುಂಭಾಗದ ಚರಂಡಿ ಸ್ವಚ್ಛತೆಗೆ ಆದ್ಯತೆ ನೀಡಿ.
* ರಸ್ತೆಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ.
* ಟೈರ್, ಚಿಪ್ಪು, ಖಾಲಿ ಬಾಟಲಿಗಳಲ್ಲಿ ನೀರು ನಿಲ್ಲದಂತೆ ಎಚ್ಚರವಹಿಸಿ.

*
ಸೊಳ್ಳೆಗಳ ನಿಯಂತ್ರಣಕ್ಕಾಗಿ ಇಲಾಖೆ ಹಲವು ಕಾರ್ಯಕ್ರಮ ನಡೆಸುತ್ತ ಬಂದಿದೆ. ಸ್ವಚ್ಛತೆ ಕಾಪಾಡುವ ಒಂದು ಗ್ರಾಮ ಮತ್ತು ತಾಲ್ಲೂಕಿಗೆ ‘ಸ್ವಚ್ಛ ಗ್ರಾಮ’, ‘ಸ್ವಚ್ಛ ತಾಲ್ಲೂಕು’ ಬಿರುದು ನೀಡಲು ಚಿಂತಿಸಲಾಗಿದೆ.
- ಡಾ. ಫಾಲಾಕ್ಷ, ಜಿಲ್ಲಾ ಆರೋಗ್ಯಾಧಿಕಾರಿ

*
ಪ್ರಸಕ್ತ ವರ್ಷ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತೆ ಏರಿಕೆ ಕಂಡ ಹಿನ್ನೆಲೆಯಲ್ಲಿ ‘ನಾಗರಿಕರಿಗೊಂದು ಸವಾಲ್’ ಅಭಿಯಾನ ಈಗಾಗಲೇ ಆರಂಭವಾಗಿದೆ. 2020ರ ಜನವರಿ 31ರವರೆಗೂ ಜಿಲ್ಲೆಯಾದ್ಯಂತ ನಡೆಯಲಿದೆ.
- ಮಂಜುನಾಥ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT