ಶನಿವಾರ, ಮಾರ್ಚ್ 25, 2023
30 °C
ಇಂದಿರಾಗಾಂಧಿ ವಸತಿ ಶಾಲೆ, ರಾಮಗಿರಿ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನಾ ಸಮಾರಂಭ

ಕಾಂಗ್ರೆಸ್‌ ಮಾತನ್ನು ನಂಬದಿರಿ: ಶ್ರೀರಾಮುಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಳಲ್ಕೆರೆ: ‘ಕಾಂಗ್ರೆಸ್ ನಾಯಕರು ರಾತ್ರೋರಾತ್ರಿ ಕೋವಿಡ್ ಲಸಿಕೆ ಪಡೆದುಕೊಳ್ಳುತ್ತಾರೆ. ಆದರೆ, ಲಸಿಕೆ ಹಾಕಿಸಿಕೊಂಡರೆ ಸಾಯುತ್ತಾರೆ, ನಪುಂಸಕರಾಗುತ್ತಾರೆ ಎಂದು ಅಪಪ್ರಚಾರ ಮಾಡುತ್ತಾರೆ. ಜನರನ್ನು ದಿಕ್ಕು ತಪ್ಪಿಸುವ ಇವರ ಮಾತನ್ನು ಯಾರೂ ನಂಬಬಾರದು’ ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಭರವಸೆ ನೀಡಿದರು.

ತಾಲ್ಲೂಕಿನ ಬಸಾಪುರ ಗೇಟ್‌ನಲ್ಲಿ ನಿರ್ಮಿಸಿರುವ ಇಂದಿರಾ ಗಾಂಧಿ ವಸತಿಶಾಲೆಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕೋವಿಡ್ 3ನೇ ಅಲೆ ಬರುವ ಸಂಭವ ಇದ್ದು, ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು’ ಎಂದರು.

ಶಾಸಕ ಎಂ. ಚಂದ್ರಪ್ಪ ಮಾತನಾಡಿ, ‘ರಾಮಗಿರಿ ಮುಖ್ಯವೃತ್ತವನ್ನು ₹ 3 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿ, ವಾಲ್ಮೀಕಿ ವೃತ್ತ ಎಂದು ನಾಮಕರಣ ಮಾಡಲಾಗುವುದು. ಅಮೃತ್ ಮಹಲ್ ಕಾವಲ್‌ನಲ್ಲಿ ₹ 1.5 ಕೋಟಿ ವೆಚ್ಚದಲ್ಲಿ ಕೆರೆ ನಿರ್ಮಿಸಲಾಗುವುದು. ₹ 1 ಕೋಟಿ ವೆಚ್ಚದಲ್ಲಿ ಕೆಂಚನಕಟ್ಟೆ ಕೆರೆ ನಿರ್ಮಿಸಲಾಗುವುದು. ಆಸ್ಪತ್ರೆ ಮುಂಭಾಗ ₹ 50 ಲಕ್ಷ ವೆಚ್ಚದಲ್ಲಿ ಕಾಂಪೌಂಡ್ ನಿರ್ಮಿಸಲಾಗುವುದು. ಮಲ್ಲಾಡಿಹಳ್ಳಿ ಗ್ರಾಮದ ಪಕ್ಕದಲ್ಲೇ ಹರಿಯುವ ಹಳ್ಳಕ್ಕೆ ನಿರ್ಮಿಸಿರುವ ಸೇತುವೆ ಕಿರಿದಾಗಿದ್ದು, ಶಿಥಿಲಗೊಂಡಿದೆ. ಹೆಚ್ಚು ಮಳೆ ಬಂದರೆ ಸೇತುವೆ ಮೇಲೆ ನೀರು ಹರಿಯುತ್ತದೆ. ಇಲ್ಲಿ ₹ 6 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಸೇತುವೆ ನಿರ್ಮಿಸಲಾಗುವುದು’ ಎಂದು ಹೇಳಿದರು.

ಶ್ರೀರಾಮುಲು ರಾಮಗಿರಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟಿಸಿದರು. ರಾಮಗಿರಿ ರಾಮಣ್ಣ, ಎಲ್.ಬಿ. ರಾಜಶೇಖರ್, ಪುರಸಭೆ ಸದಸ್ಯ ಅಶೋಕ್, ಉಪಾಧ್ಯಕ್ಷ ಕೆ.ಸಿ. ರಮೇಶ್, ಸದಸ್ಯ ಮುರುಗೇಶ್, ತಹಶೀಲ್ದಾರ್ ರಮೇಶಾಚಾರಿ, ತಾಲ್ಲೂಕು ಪಂಚಾಯಿತಿ ಇಒ ಗಂಗಣ್ಣ, ಕುಮಾರ್, ರಾಮಗಿರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತಮ್ಮ, ಉಪಾಧ್ಯಕ್ಷ ಲೋಕೇಶ್, ಆರ್. ನುಲೇನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಂಗಮ್ಮ, ಉಪಾಧ್ಯಕ್ಷೆ ಮೀನಾಕ್ಷಮ್ಮ, ಜಯಪಾಲಯ್ಯ, ಜಗದೀಶ್, ದಗ್ಗೆ ಶಿವಪ್ರಕಾಶ್
ಇದ್ದರು.

ಗಂಗಾಕಲ್ಯಾಣ: ಏಜೆನ್ಸಿ ರದ್ದು

‘ಇದುವರೆಗೆ ಗಂಗಾ ಕಲ್ಯಾಣ ಯೋಜನೆಯ ಕೊಳವೆ ಬಾವಿಗಳನ್ನು ಕೊರೆಯಲು ಖಾಸಗಿ ಏಜೆನ್ಸಿಗಳಿಗೆ ವಹಿಸಲಾಗುತ್ತಿತ್ತು. ಇದರಿಂದ ರೈತರಿಗೆ ಅನನುಕೂಲ ಆಗಿರುವುದರಿಂದ ಇನ್ನು ಮುಂದೆ ಏಜೆನ್ಸಿಗಳಿಗೆ ಕೊಡದೇ, ಫಲಾನುಭವಿ ರೈತರ ಖಾತೆಗೆ ಹಣ ಜಮಾ ಮಾಡಲಾಗುವುದು. ಈ ಹಣದಿಂದ ರೈತರು ತಾವೇ ಕೊಳವೆ ಬಾವಿ ಕೊರೆಸಿಕೊಳ್ಳಬಹುದು’ ಎಂದು ಶ್ರೀರಾಮುಲು ತಿಳಿಸಿದರು.

ರಾಮಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆಪ್ತ ಸಹಾಯಕ ರಾಜಣ್ಣ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಸತ್ಯಕ್ಕೆ ಯಾವತ್ತೂ ಜಯವಿದೆ. ಯಾರೂ ಧರ್ಮ ಬಿಟ್ಟು ಹೋಗಬಾರದು. ಧರ್ಮ ಬಿಟ್ಟರೆ ಗಂಡಾಂತರ ಕಾದಿರುತ್ತದೆ. ನಾನು ಧರ್ಮ ಬಿಟ್ಟು ಹೋಗುವುದಿಲ್ಲ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.