ಸೋಮವಾರ, ಮಾರ್ಚ್ 27, 2023
30 °C

ಭರಮಸಾಗರ: ಶಿವಧ್ವಜಾರೋಹಣದೊಂದಿಗೆ ತರಳಬಾಳು ಹುಣ್ಣಿಮೆಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭರಮಸಾಗರ: ಕೊಟ್ಟೂರಿನಲ್ಲಿ 9 ದಿನಗಳ ಕಾಲ ನಡೆಯುವ ‘ತರಳಬಾಳು ಹುಣ್ಣಿಮೆ ಮಹೋತ್ಸವ’ ಶನಿವಾರ ಸಿರಿಗೆರೆಯಿಂದ ಆರಂಭಗೊಂಡಿತು.

ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಬೆಳಿಗ್ಗೆ ಐಕ್ಯಮಂಟಪಕ್ಕೆ ತೆರಳಿ ಡಾ.ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಕತೃ ಗದ್ದುಗೆಗೆ ಹಾಗೂ ಗುರುಶಾಂತೇಶ್ವರ ಸ್ವಾಮೀಜಿ ಪ್ರತಿಮೆಗೆ ಪುಷ್ಪನಮನದ ಗೌರವ ಸಲ್ಲಿಸಿ, ಶಿವಧ್ವಜಾರೋಹಣ ನೆರವೇರಿಸಿ ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ಚಾಲನೆ ನೀಡಿದರು.

ಕಾಲೇಜು ವಿದ್ಯಾರ್ಥಿನಿಯರು ಕುಂಭಮೇಳ ಹೊತ್ತು ಶ್ರೀಗಳನ್ನು ಸ್ವಾಗತಿಸಿದರು. ಬೀದಿಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಗ್ರಾಮದ ಎಲ್ಲೆಡೆ ಹಬ್ಬದ ವಾತಾವರಣವಿತ್ತು. ಗ್ರಾಮಸ್ಥರು ಅಲಂಕೃತ ತೆರೆದ ವಾಹನದಲ್ಲಿ ಶ್ರೀಗಳನ್ನು ಮೆರವಣಿಗೆ ಮೂಲಕ ಗ್ರಾಮದ ಹೊರಭಾಗದವರೆಗೆ ಕರೆದುಕೊಂಡು ಹೋಗಿ ಭಕ್ತಿ ಸಮರ್ಪಿಸಿ ಬೀಳ್ಕೊಟ್ಟರು. ಬಳಿಕ ಸ್ವಾಮೀಜಿ ಕಾರಿನಲ್ಲಿ ಕೊಟ್ಟೂರಿಗೆ ಪ್ರಯಾಣ ಆರಂಭಿಸಿದರು.  

ಶಾಸಕರಾದ ಎಂ. ಚಂದ್ರಪ್ಪ, ತಿಪ್ಪಾರೆಡ್ಡಿ, ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಸಚಿವ ಎಸ್.ಕೆ. ಬಸವರಾಜನ್, ಹೊನ್ನಾಳಿಯ ಮಾಜಿ ಶಾಸಕ ಡಿ.ಜಿ. ಶಾಂತನಗೌಡ, ಹರೀಶ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ತರಳಬಾಳು ಸಂಸ್ಥೆ ಪ್ರಧಾನ ಕಾರ್ಯದರ್ಶಿ ಎಸ್.ಬಿ. ರಂಗನಾಥ್, ಆಡಳಿತಾಧಿಕಾರಿ
ಎಚ್.ವಿ. ವಾಮದೇವಪ್ಪ, ಕಾರ್ಯದರ್ಶಿಗಳಾದ ಜಿ.ಆರ್. ಓಂಕಾರಪ್ಪ, ಜಿ. ನಿಜಲಿಂಗಪ್ಪ, ಸಾದುಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ, ದಾವಣಗೆರೆ ಶಿವಸೈನ್ಯದ ಶಶಿಕುಮಾರ್ ಇದ್ದರು.

ಬೃಹತ್ ಬೈಕ್ ರ‍್ಯಾಲಿ:

ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರನ್ನು ಸಿರಿಗೆರೆಯಿಂದ ಕೊಟ್ಟೂರಿಗೆ ಕರೆದೊಯ್ಯಲು ದಾವಣಗೆರೆಯ ಶಿವಸೈನ್ಯ, ಹರಪನಹಳ್ಳಿ, ಕೊಟ್ಟೂರು, ಭರಮಸಾಗರ, ಸಿರಿಗೆರೆ ಸೇರಿ ವಿವಿಧ ಜಿಲ್ಲೆಗಳಲ್ಲಿನ ಮಠದ ಭಕ್ತರು ಬೃಹತ್ ಬೈಕ್ ರ‍್ಯಾಲಿ ಆಯೋಜಿಸಿದ್ದರು. ಸಾವಿರಾರು ಭಕ್ತರು ಬೈಕ್, ಕಾರು ವಿವಿಧ ವಾಹನಗಳಲ್ಲಿ ಆಗಮಿಸಿ ಶಿವಧ್ವಜ ಹಿಡಿದು ಧಾರ್ಮಿಕ ಘೋಷಣೆ ಕೂಗುತ್ತಾ ರ‍್ಯಾಲಿಯಲ್ಲಿ ಪಾಲ್ಗೊಂಡರು.

ಭಕ್ತರೊಂದಿಗೆ ಪಯಣ ಆರಂಭಿಸಿದ ಶ್ರೀಗಳು ಗೌರಮ್ಮಹಳ್ಳಿ, ಕಲ್ಕುಂಟೆ, ವಿಜಾಪುರ, ಲಕ್ಷ್ಮಿಸಾಗರ, ಬೀರಾವರ ಕ್ರಾಸ್, ಸಿದ್ದವ್ವನದುರ್ಗ, ಮುದ್ದಾಪುರ, ಯಳಗೋಡು, ಹುಲ್ಲೆಹಾಳ್, ಬಸ್ತಿಹಳ್ಳಿ, ಬಿದರಿಕೆರೆ, ರಸ್ತೆಮಾಕುಂಟೆ, ಬಿಸ್ತುವಳ್ಳಿ ಗ್ರಾಮಗಳ ಮಾರ್ಗದ ಮೂಲಕ ಸಾಗಿ ಮಧ್ಯಾಹ್ನ ಜಗಳೂರು ತಲುಪಿದರು.

ಜಗಳೂರಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ರ‍್ಯಾಲಿಯಲ್ಲಿ ಪಾಲ್ಗೊಂಡ ಕಾರಣ ಶ್ರೀಗಳು ಪ್ರಯಾಣಿಸುತ್ತಿದ್ದ ಕಾರಿನ ಮುಂಭಾಗದಲ್ಲಿ ಸುಮಾರು 3 ಕಿ.ಮೀ ದೂರದವರೆಗೆ ಭಕ್ತರ ವಾಹನಗಳ ಸಾಲು ಕಂಡುಬಂದಿತು. ಕೊಟ್ಟೂರಿನಲ್ಲಿ ತರಳಬಾಳು ಹುಣ್ಣಿಮೆ ಮಂಟಪದ ಮುಂಭಾಗ ಉಜ್ಜಿನಿ ವೃತ್ತ ಜೋಳದ ಕೂಡ್ಲಿಗೆ ರಸ್ತೆ ಬಳಿ ಶ್ರೀಗಳ ಬಿಡಾರದ ವ್ಯವಸ್ಥೆ ಮಾಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು