ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರಪೂರ ನೀರಿದ್ದರೂ ಕುಡಿಯಲು ಬರ

ಹಿರಿಯೂರು: ಕೆರೆಕಟ್ಟೆಗಳು, ಕೊಳವೆ ಬಾವಿಗಳಲ್ಲಿ ಕುಡಿಯಲು ಯೋಗ್ಯವಲ್ಲದ ನೀರು
Last Updated 8 ಮೇ 2022, 2:45 IST
ಅಕ್ಷರ ಗಾತ್ರ

ಹಿರಿಯೂರು: ತಾಲ್ಲೂಕಿನಲ್ಲಿ 2019 ರಿಂದ ಕೆರೆ ಕಟ್ಟೆಗಳಲ್ಲಿ, ಚೆಕ್ ಡ್ಯಾಂಗಳಲ್ಲಿ, ಗೋಕಟ್ಟೆಗಳಲ್ಲಿ, ಕೊಳವೆ ಬಾವಿಗಳಲ್ಲಿ ಭರಪೂರ ನೀರು ಇದ್ದರೂ ವಿಶೇಷವಾಗಿ ಗ್ರಾಮೀಣ ಭಾಗದ ಜನರು ಶುದ್ಧ ಕುಡಿಯುವ ನೀರಿಗೆ ಪರದಾಡುವುದು ತಪ್ಪಿಲ್ಲ.

ಶುದ್ಧ ಕುಡಿಯುವ ನೀರಿನ ಘಟಕಗಳ ಅಸಮರ್ಪಕ ನಿರ್ವಹಣೆ: ತಾಲ್ಲೂಕಿನಲ್ಲಿ ಶುದ್ಧ ಕುಡಿಯುವ ನೀರಿನ ಅಭಾವಕ್ಕೆ ಆರ್‌ಒ ಘಟಕಗಳ ಅಸಮರ್ಪಕ ನಿರ್ವಹಣೆ ಪ್ರಮುಖ ಕಾರಣ.

ಯಲ್ಲದಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆ ಕೆಂಚಯ್ಯನಹಟ್ಟಿಯಲ್ಲಿ ಮೂರು ವರ್ಷಗಳ ಹಿಂದೆ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿದ್ದು, ಗ್ರಾಮಸ್ಥರಿಗೆ ಇನ್ನೂ ಶುದ್ಧ ನೀರು ಕುಡಿಯುವ ಭಾಗ್ಯ ಲಭಿಸಿಲ್ಲ. ಒಂದು ವರ್ಷದ ಹಿಂದೆ ಗ್ರಾಮ ಪಂಚಾಯಿತಿ ಸದಸ್ಯರ ಒತ್ತಡಕ್ಕೆ ಮಣಿದು ಗ್ರಾಮಕ್ಕೆ ಬಂದಿದ್ದ ಗುತ್ತಿಗೆದಾರ ನಾಣ್ಯ ಪೆಟ್ಟಿಗೆ (ಕಾಯಿನ್ ಬಾಕ್ಸ್) ಅಳವಡಿಸಿ, ಹಣ ಹಾಕಿ ನೀರು ಬಳಸುವ ವ್ಯವಸ್ಥೆ ಮಾಡುತ್ತೇನೆ ಎಂದು ಹೋದವರು ಮರಳಿ ಬಂದೇ ಇಲ್ಲ. ದುಷ್ಕರ್ಮಿಗಳ ವಕ್ರನೋಟಕ್ಕೆ ಸಿಲುಕಿ ಆರ್‌ಒ ಘಟಕದ ಗಾಜುಗಳೆಲ್ಲ ಪುಡಿಪುಡಿಯಾಗಿವೆ. ಘಟಕವನ್ನು ಪುಂಡಪೋಕರಿಗಳು ತಮ್ಮ ಅನೈತಿಕ ಚಟುವಟಿಕೆಗಳ ತಾಣವಾಗಿಸಿಕೊಂಡಿದ್ದಾರೆ. ಊರಿನ ಜನ ಫ್ಲೋರೈಡ್ ಇದ್ದರೂ ಬೋರ್‌ವೆಲ್ ನೀರನ್ನೇ ಕುಡಿಯಬೇಕಾಗಿದೆ’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ಭೋಜಕುಮಾರ್.

ಉಪ್ಪುನೀರು:

‘ಇದ್ದಲನಾಗೇನಹಳ್ಳಿಗೆ ಉಡುವಳ್ಳಿ ಕೆರೆಯಲ್ಲಿ ಕೊರೆಸಿದ್ದ ಕೊಳವೆ ಬಾವಿಯಿಂದ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿತ್ತು. ಹಿಂದಿನ ವರ್ಷ ಉತ್ತಮ ಮಳೆಯಾಗಿ ಕೆರೆ ತುಂಬಿದ್ದರಿಂದ ಕೊಳವೆ ಬಾವಿ ಕೆರೆಯ ನೀರಿನಲ್ಲಿ ಮುಳುಗಿ ಹೋಗಿತ್ತು. ಗ್ರಾಮದಲ್ಲಿನ ಆರ್‌ಒ ಘಟಕ ಒಂದು ದಿನ ಸರಿ ಇದ್ದರೆ ಮತ್ತೊಂದು ದಿನ ಇರುವುದಿಲ್ಲ. ಒಂದೂವರೆ ತಿಂಗಳ ಹಿಂದೆ ಗ್ರಾಮದಲ್ಲಿ ಕೊರೆಸಿರುವ ಬೋರ್‌ವೆಲ್‌ನಲ್ಲಿ ಉಪ್ಪು ನೀರು ಬರುತ್ತಿದ್ದು, ಅನಿವಾರ್ಯವಾಗಿ ಅದೇ ನೀರನ್ನು ಬಳಸುತ್ತಿದ್ದೇವೆ’ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

‘ಉಡುವಳ್ಳಿ ಕೆರೆಯಲ್ಲಿ ನೀರು ಕಡಿಮೆಯಾಗಿದ್ದು ಕೊಳವೆ ಬಾವಿ ನೀರಿಂದ ಹೊರಗೆ ಕಾಣುತ್ತಿದೆ. ಒಂದೆರಡು ದಿನದಲ್ಲಿ ಅದೇ ಕೊಳವೆ ಬಾವಿಯಿಂದ ನೀರು ಪೂರೈಕೆ ಮಾಡುತ್ತೇವೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಪೂಜಣ್ಣ ಸ್ಪಷ್ಟ ಪಡಿಸಿದ್ದಾರೆ.

ಆರೇಳು ಕಿ.ಮೀ. ಹೋಗಬೇಕು:

ಜವನಗೊಂಡನಹಳ್ಳಿ ಹೋಬಳಿಯ ಸೂರಪ್ಪನಹಟ್ಟಿ, ಕೊಟ್ಟಿಗೇರಹಟ್ಟಿ, ಬೋವಿ ಕಾಲೊನಿ, ಲಂಬಾಣಿತಾಂಡಾ, ದೇವರಾಯನಹಟ್ಟಿ, ಸರಸ್ವತಿ ಹಟ್ಟಿ, ಪಿಲ್ಲಾಲಿ ಗ್ರಾಮಗಳ ಜನ ಇಂದಿಗೂ ಕೊಳವೆ ಬಾವಿ ನೀರನ್ನೇ ಕುಡಿಯುತ್ತಿದ್ದಾರೆ. ಶುದ್ಧ ನೀರು ಬೇಕೆಂದರೆ 6 ಕಿ.ಮೀ. ದೂರವಿರುವ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ದಸೂಡಿ ಗ್ರಾಮಕ್ಕೆ, ಇಲ್ಲವೇ 5 ಕಿ.ಮೀ. ದೂರದ ಲಕ್ಕೇನಹಳ್ಳಿಗೆ ಹೋಗಬೇಕು. ಸೂರಪ್ಪನಹಟ್ಟಿಗೆ ಆರ್‌ಒ ಘಟಕ ಮಂಜೂರಾಗಿದೆ ಎಂಬ ಮಾತು ವರ್ಷದಿಂದ ಕೇಳಿ ಬರುತ್ತಿದೆ. ಘಟಕ ಮಾತ್ರ ನಿರ್ಮಾಣಗೊಂಡಿಲ್ಲ’ ಎಂದು ಚಿತ್ತಯ್ಯ ಆರೋಪಿಸುತ್ತಾರೆ.

ಬುನಾದಿ ನಂತರ ಕಣ್ಮರೆ:

‘ತಾಲ್ಲೂಕಿನ ಹಾಲುಮಾದೇನಹಳ್ಳಿಯಲ್ಲಿ ಆರ್‌ಒ ಘಟಕಕ್ಕೆ ಬುನಾದಿ ಹಾಕಿ ವರ್ಷ ಕಳೆದಿದೆ. ಬುನಾದಿ ಹಾಕಿದವರು ಎಲ್ಲಿ ಕಣ್ಮರೆಯಾದರೂ ಎಂಬುದು ತಿಳಿಯುತ್ತಿಲ್ಲ. ಪ್ರಸ್ತುತ ಬಳಸುತ್ತಿರುವ ಕೊಳವೆ ಬಾವಿ ನೀರಿನಲ್ಲಿ ಬೆಳ್ಳನೆಯ ನೊರೆ ಬರುತ್ತದೆ. ಇನ್ನೊಂದು ಕೊಳವೆ ಬಾವಿ ಕೊರೆಸಿ ಎರಡು ವರ್ಷವಾಗಿದ್ದರೂ ಬಳಕೆ ಮಾಡುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆ ಹೇಳತೀರದು’ ಎಂದು ಗ್ರಾಮದ ಮುಖಂಡ ಲಕ್ಷ್ಮಣ್ ಆರೋಪಿಸಿದರೆ, ‘ಮಾರಪ್ಪನಹಟ್ಟಿಯಲ್ಲಿ ಆರ್‌ಒ ಘಟಕದ ಪೆಟ್ಟಿಗೆ ಕೂರಿಸಿ ಒಂದು ತಿಂಗಳಾಗಿದೆ. ಟ್ಯಾಂಕ್, ಮೋಟಾರ್ ಬರಲು ಎಷ್ಟು ದಿನ ಕಾಯಬೇಕೊ ಗೊತ್ತಿಲ್ಲ’ ಎನ್ನುತ್ತಾರೆ ಗ್ರಾಮದ ಮೂಡಲಗಿರಿಯಪ್ಪ.

ತಾಲ್ಲೂಕು ಕಚೇರಿ ಆವರಣದಲ್ಲಿನ ಘಟಕ ನಿರ್ಮಿಸಿ ಮೂರು ವರ್ಷ: ‘ನಿತ್ಯ ಸಾವಿರಾರು ಜನ ಬಂದು ಹೋಗುವ ಹಿರಿಯೂರಿನ ತಾಲ್ಲೂಕು ಕಚೇರಿ ಆವರಣದಲ್ಲಿ ಆರ್‌ಒ ಘಟಕ ನಿರ್ಮಿಸಿ ಮೂರು ವರ್ಷ ಕಳೆದಿದ್ದರೂ ಜನರಿಗೆ ಶುದ್ಧ ಕುಡಿಯುವ ನೀರು ಕುಡಿಯುವ ಭಾಗ್ಯ ಬಂದಿಲ್ಲ. ನಗರಸಭೆಗೆ ಹಸ್ತಾಂತರಿಸಿ ವರ್ಷವಾಗಿದೆ. ಆಡಳಿತ ವ್ಯವಸ್ಥೆ ಜಡ್ಡುಗಟ್ಟಿದೆ ಎಂಬುದಕ್ಕೆ ಇದಕ್ಕಿಂತ ನಿದರ್ಶನ ಬೇಕೆ? ಎಂದು ವಾಲ್ಮೀಕಿ ಸಮುದಾಯದ ಮುಖಂಡ ಬಸವರಾಜನಾಯಕ್ ಪ್ರಶ್ನಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT