ಶುಕ್ರವಾರ, ಸೆಪ್ಟೆಂಬರ್ 30, 2022
25 °C
ಜಿಲ್ಲಾ ಕೇಂದ್ರದಲ್ಲಿ ರಸ್ತೆಯಲ್ಲೇ ಜನರ ಓಡಾಟ – ಇದ್ದೂ ಇಲ್ಲವಾದ ಫುಟ್‌ಪಾತ್‌ಗಳು

ಚಿತ್ರದುರ್ಗ: ಪಾದಚಾರಿ ಮಾರ್ಗ ಹುಡುಕಿಕೊಡಿ!

ಕೆ.ಪಿ. ಓಂಕಾರಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಜಿಲ್ಲಾ ಕೇಂದ್ರವಾದ ಚಿತ್ರದುರ್ಗದ ಪ್ರಮುಖ ರಸ್ತೆಗಳಲ್ಲಿ ನೆಮ್ಮದಿಯಿಂದ ಹೆಜ್ಜೆ ಹಾಕುತ್ತಾ ಸಾಗೋಣ ಎಂದರೆ ಪಾದಚಾರಿ ಮಾರ್ಗ (ಫುಟ್‌ಪಾತ್‌)ಗಳೇ ಇಲ್ಲ. ರಸ್ತೆ ಅಭಿವೃದ್ಧಿಯ ಭರಾಟೆಯಲ್ಲಿ ಅವು ಕಾಣೆಯಾಗಿವೆ.

ರಸ್ತೆ ವಿಸ್ತರಣೆ ನೆಪದಲ್ಲಿ ನಗರದಲ್ಲಿ ಮೂರು ವರ್ಷಗಳಿಂದ ಅಭಿವೃದ್ಧಿ ಕಾರ್ಯಗಳು ಸಾಗುತ್ತಿವೆ. ಆದರೆ, ಎಲ್ಲಾ ಇದ್ದರೂ ಯಾವುದೂ ಪ್ರಯೋಜನಕ್ಕೆ ಬಾರದಂತಾಗಿವೆ. ಫುಟ್‌ಪಾತ್‌ಗಳು ಅಸ್ತಿತ್ವ ಕಳೆದುಕೊಂಡಿವೆ. ಇದರಿಂದ ಜನರು ಜೀವ ಭಯದಲ್ಲಿ ರಸ್ತೆಯಲ್ಲಿ ಸಾಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಚಿಕ್ಕ ಒತ್ತುವರಿ ತೆರವುಗೊಳಿಸಿ ಸಿ.ಸಿ ರಸ್ತೆ ಕಾಮಗಾರಿ ನಡೆಸಲಾಗುತ್ತಿದೆ. ಚಳ್ಳಕೆರೆ ಟೋಲ್‌ಗೇಟ್‌ನಿಂದ ಪ್ರವಾಸಿ ಮಂದಿರದವರೆಗಿನ ರಸ್ತೆಯ ಎರಡೂ ಬದಿಯಲ್ಲಿ ಪಾದಚಾರಿ ಮಾರ್ಗವಿದ್ದರೂ ಗೂಡಂಗಡಿಗಳು ತಲೆ ಎತ್ತಿರುವುದರಿಂದ ಪ್ರಯೋಜನಕ್ಕೆ ಬಾರದಂತಾಗಿದೆ.

ಬಹುತೇಕರು ಮುಖ್ಯ ರಸ್ತೆಯಲ್ಲೇ ನಡೆದು ಸಾಗುತ್ತಾರೆ. ಹೊಸ ರಸ್ತೆಯಲ್ಲಿ ವೇಗವಾಗಿ ಸಾಗುವ ವಾಹನಗಳು ಪಾದಚಾರಿಗಳಿಗೆ ಡಿಕ್ಕಿ ಹೊಡೆಯುವುದು ಮಾಮೂಲಿ ಎಂಬಂತಾಗಿದೆ. ಪಾದಚಾರಿಗಳು ಸಾಗಲು ನಗರದ ಯಾವ ರಸ್ತೆಯಲ್ಲಿಯೂ ಸರಿಯಾದ ಸ್ಥಳಾವಕಾಶವಿಲ್ಲ.

ಜನದಟ್ಟಣೆ ಹೆಚ್ಚಾಗಿರುವ ಬಿ.ಡಿ. ರಸ್ತೆ, ಆರ್‌ಟಿಒ ಕಚೇರಿಯಿಂದ ಜಿಲ್ಲಾ ಆಸ್ಪತ್ರೆವರೆಗಿನ ತುರುವನೂರು ರಸ್ತೆ, ಜೆಸಿಆರ್‌ ಮುಖ್ಯರಸ್ತೆ‌, ಗಾಂಧಿ ವೃತ್ತದಿಂದ ಕನಕ ವೃತ್ತದವರೆಗಿನ ಯಾವ ಭಾಗದಲ್ಲಿಯೂ ಪಾದಚಾರಿ ಮಾರ್ಗಗಳೇ ಇಲ್ಲ. ಕೆಲವು ಕಡೆ ಇರುವ ಫುಟ್‌ಪಾತ್‌ನಲ್ಲಿ ನಾಲ್ಕು ಹೆಜ್ಜೆ,  ರಸ್ತೆಯಲ್ಲಿ ಎಂಟು ಹೆಜ್ಜೆ ಹಾಕುತ್ತಾ ಪಾದಚಾರಿಗಳು ಸಾಗುವುದು ಅನಿವಾರ್ಯವಾಗಿದೆ. ರಸ್ತೆಗಳ ಎರಡೂ ಬದಿಯಲ್ಲಿರುವ ವಾಣಿಜ್ಯ ಮಳಿಗೆಗಳು ಫುಟ್‌ಪಾತ್‌ ನುಂಗಿ ಹಾಕಿರುವುದು ಸಮಸ್ಯೆಗೆ ಮೂಲ ಕಾರಣವಾಗಿದೆ.

ಆರ್‌ಟಿಒ ಕಚೇರಿಯಿಂದ ಜಿಲ್ಲಾ ಆಸ್ಪತ್ರೆವರೆಗಿನ ತುರುವನೂರು ರಸ್ತೆ ವಿಸ್ತರಣೆಯಾಗಿ ಎರಡೂ ಬದಿಯಲ್ಲಿ ಪಾದಚಾರಿ ಮಾರ್ಗಕ್ಕೆ ಜಾಗವಿದೆ. ಈ ಜಾಗವನ್ನು ಕೆಲವು ಷೋ ರೂಮ್‌ಗಳು ಒತ್ತುವರಿ ಮಾಡಿಕೊಂಡಿವೆ. ಆಟೊ, ಬೈಕ್‌ಗಳು ಸಹ ಇದೇ ಸ್ಥಳದಲ್ಲಿ ನಿಲುಗಡೆಯಾಗುತ್ತವೆ.

ಮುಖ್ಯ ರಸ್ತೆಗಳದ್ದು ಒಂದು ಕಥೆಯಾದರೆ, ನಗರದ ಹೃದಯ ಭಾಗದಲ್ಲಿನ ಸಮಸ್ಯೆ ಇನ್ನಷ್ಟು ತೀವ್ರವಾಗಿದೆ. ಲಕ್ಷ್ಮಿ ಬಜಾರ್‌, ವಾಸವಿ ಮಹಲ್‌, ಆನೆಬಾಗಿಲು, ಮೇದೆಹಳ್ಳಿ, ಎಸ್‌ಬಿಎಂ ವೃತ್ತ, ಧರ್ಮಶಾಲಾ ರಸ್ತೆ, ಪ್ರಸನ್ನ ಚಿತ್ರಮಂದಿರ, ಸಂತೆ ಮಾರುಕಟ್ಟೆಯ ಆಸುಪಾಸಿನ ಹಲವು ರಸ್ತೆಯಲ್ಲಿರುವ ವಾಣಿಜ್ಯ ಮಳಿಗೆಗಳೇ ಫುಟ್‌ಪಾತ್‌ ನುಂಗಿಹಾಕಿವೆ. ಗ್ರಾಹಕರನ್ನು ಸೆಳೆಯಲು ಅಂಗಡಿಯ ಎದುರು ವಸ್ತುಗಳನ್ನು ಪ್ರದರ್ಶಿಸಲಾಗುತ್ತದೆ. ಇವು ಪಾದಚಾರಿ ಮಾರ್ಗವನ್ನು ಸಂಪೂರ್ಣ ಆಕ್ರಮಿಸಿಕೊಂಡಿವೆ.

ರಂಗಯ್ಯನ ಬಾಗಿಲಿನಿಂದ ಜಿಲ್ಲಾ ಆಸ್ಪತ್ರೆ ಮುಂಭಾಗದ ರಸ್ತೆಯನ್ನು ಫುಟ್‌ಪಾತ್‌ ಇಲ್ಲದಂತೆ ವಿಸ್ತರಿಸಲಾಗಿದೆ. ಇದರಿಂದ ಜಿಲ್ಲಾ ಆಸ್ಪತ್ರೆಯ ಮುಂಭಾಗದಲ್ಲಿ ಎಳನೀರು, ಫಾಸ್ಟ್‌ಫುಡ್‌ ಅಂಗಡಿಗಳು ರಸ್ತೆಯ ಎರಡೂ ಬದಿಯಲ್ಲಿ ತಲೆ ಎತ್ತಿವೆ. ಈ ರಸ್ತೆಯಲ್ಲಿ ನಡೆದು ಹೋಗುವವರಿಗೆ ವಾಹನಗಳು ಡಿಕ್ಕಿ ಹೊಡೆದ ಉದಾಹರಣೆಗಳೂ ಸಾಕಷ್ಟಿವೆ.

ಮೂರು ವರ್ಷಗಳ ಹಿಂದೆ ಪಾದಚಾರಿ ಮಾರ್ಗದಲ್ಲಿನ ಅಂಗಡಿಗಳನ್ನು ನಗರಸಭೆ ಆಡಳಿತ ಹಾಗೂ ಪೊಲೀಸ್‌ ಇಲಾಖೆಯಿಂದ ಜಂಟಿ ಕಾರ್ಯಾಚರಣೆ ನಡೆಸಿ ಸಂಪೂರ್ಣವಾಗಿ ತೆರವುಗೊಳಿಸಲಾಗಿತ್ತು. ಅಲ್ಲದೆ, ಗೂಡಂಗಡಿ, ತರಕಾರಿ ವ್ಯಾಪಾರಸ್ಥರು, ಫಾಸ್ಟ್‌ಫುಡ್‌ ಸೇರಿ ನೆಲೆ ಕಳೆದುಕೊಂಡ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತ ರೂಪುರೇಷ ಸಿದ್ಧಪಡಿಸಿತ್ತು. ಆದರೆ, ಇದು ನನೆಗುದಿಗೆ ಬಿದ್ದಿತು.

ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆಯೇ ರಾಜಕಾರಣಿಗಳ ಪ್ರಭಾವದಿಂದ ಮೊದಲಿದ್ದ ಸ್ಥಳದಲ್ಲೇ ಮತ್ತೆ ಅಂಗಡಿಗಳು ಬಂದಿವೆ. ‘ಮಗುವನ್ನು ಚಿವುಟಿ, ತೊಟ್ಟಿಲು ತೂಗುವ ಕೆಲಸ’ದ ಮಾದರಿಯನ್ನು ಎಲ್ಲ ಹಂತದ ಜನಪ್ರತಿನಿಧಿಗಳು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವುದರಿಂದ ಸಮಸ್ಯೆ ಅನುಭವಿಸುವಂತಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಯೋಜನೆಯಲ್ಲೇ ದೋಷ
ನಗರ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿ ಯೋಜನೆಯಲ್ಲಿಯೇ ದೋಷ ಇರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಚಳ್ಳಕೆರೆ ಟೋಲ್‌ಗೇಟ್‌ನಿಂದ ಪ್ರವಾಸಿ ಮಂದಿರದವರೆಗೂ ಮಾತ್ರ ಕಾಣುವ ಪಾದಚಾರಿ ಮಾರ್ಗ ಉಳಿದೆಡೆ ಹುಡುಕುವಂತಾಗಿದೆ. ರಸ್ತೆ ಅಭಿವೃದ್ಧಿಗೆ ತೋರುತ್ತಿರುವ ಕಾಳಜಿಯನ್ನು ಪಾದಚಾರಿ ಮಾರ್ಗಕ್ಕೆ ತೋರುತ್ತಿಲ್ಲ.

ನಗರಸಭೆ ಇದ್ದರೂ ಇಲ್ಲ ಪಾದಚಾರಿ ಮಾರ್ಗ
-ಸುವರ್ಣಾ ಬಸವರಾಜ್‌
ಹಿರಿಯೂರು:
ಪುರಸಭೆಯಿಂದ ನಗರಸಭೆಯಾಗಿ ಬಡ್ತಿ ಹೊಂದಿ ಆರೇಳು ವರ್ಷಗಳು ಕಳೆದರೂ ಇಲ್ಲಿನ ನಾಗರಿಕರಿಗೆ ಪಾದಚಾರಿ ಮಾರ್ಗದ ಭಾಗ್ಯ ಇಲ್ಲ.

ಪ್ರವಾಸಿ ಮಂದಿರ ವೃತ್ತದಿಂದ ಮಹಾತ್ಮಗಾಂಧಿ ವೃತ್ತದವರೆಗೆ ಅಂದಾಜು ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಅಧಿಕೃತ ಪಾದಚಾರಿ ಮಾರ್ಗವೇ ಇಲ್ಲ. ಗಾಂಧಿ ವೃತ್ತದಿಂದ ರಂಜಿತ್ ಹೋಟೆಲ್ ವೃತ್ತದವರೆಗೆ ಪಾದಚಾರಿ ಮಾರ್ಗ ಇದ್ದರೂ, ವರ್ತಕರು ಸಾಮಗ್ರಿಗಳನ್ನು ಇಡಲು ಬಳಕೆಯಾಗುತ್ತಿದೆ.

‘ಅಂಗಡಿ ಸಾಮಾನು–ಸರಂಜಾಮುಗಳನ್ನು ಪಾದಚಾರಿ ಮಾರ್ಗದ ಮೇಲೆ ಇಡದಂತೆ ಕ್ರಮ ಕೈಗೊಳ್ಳಿ’ ಎಂದು ಹಲವು ಸಂಘಟನೆಗಳು ನಗರಸಭೆಗೆ, ನಗರ ಪೊಲೀಸ್ ಠಾಣೆಗೆ, ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಗ್ರಾಹಕರು ವಾಹನಗಳನ್ನು ಅಂಗಡಿ ಎದುರಿನ ರಸ್ತೆಯಲ್ಲಿ ಒಂದು ಸಾಲಿನಲ್ಲಿ ನಿಲ್ಲಿಸುವಷ್ಟು ಮಾತ್ರ ಸ್ಥಳಾವಕಾಶವಿದೆ. ವಾಹನ ಸವಾರರು ಎಲ್ಲೆಂದರಲ್ಲಿ ವಾಹನ ನಿಲ್ಲಿಸಿದಾಗ ಎರಡು ದೊಡ್ಡ ವಾಹನಗಳು ಒಮ್ಮೆಗೇ ಸಂಚರಿಸಲಾಗದೆ ಸಂಚಾರ ಅಸ್ತವ್ಯಸ್ತವಾಗುವುದು ಸಾಮಾನ್ಯ ಸಂಗತಿಯಾಗಿದೆ.

ಗಾಂಧಿ ವೃತ್ತದಿಂದ ನಂಜಯ್ಯನ ಕೊಟ್ಟಿಗೆವರೆಗಿನ ಮೈಸೂರು ರಸ್ತೆಯಲ್ಲಿಯೂ ಪಾದಚಾರಿ ರಸ್ತೆಯಿಲ್ಲ. ವಿಶೇಷವಾಗಿ ಕಿತ್ತೂರು ಚನ್ನಮ್ಮ ವೃತ್ತದವರೆಗೆ ನಿಲುಗಡೆ ಮಾಡಿರುವ ವಾಹನಗಳನ್ನು ತೂರಿಕೊಂಡು ಪಾದಚಾರಿಗಳು ನಡೆದಾಡಬೇಕಿದೆ. ಗಾಂಧಿವೃತ್ತದಿಂದ ವೇದಾವತಿ ಸೇತುವೆವರೆಗೆ ಪಾದಚಾರಿ ಮಾರ್ಗ ಇಲ್ಲದ ಕಾರಣ ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳು, ವೃದ್ಧರು ವಾಹನಗಳ ದಟ್ಟಣೆ ನಡುವೆಯೇ ಜೀವ ಕೈಯಲ್ಲಿ ಹಿಡಿದು ರಸ್ತೆ ಮೇಲೇ ಸಂಚರಿಸಬೇಕಾದ ಪರಿಸ್ಥಿತಿ ಇದೆ.

‘ನಗರಸಭೆ ಮತ್ತು ನಗರ ಪೊಲೀಸ್ ಠಾಣೆಯವರು ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಿ ಪಾದಚಾರಿ ಮಾರ್ಗದ ಮೇಲೆ ವರ್ತಕರು ಸಾಮಗ್ರಿ ಇಡುವುದನ್ನು ತಪ್ಪಿಸಬೇಕು’ ಎಂದು ವಂದೇಮಾತರಂ ಜಾಗೃತಿ ವೇದಿಕೆ ಅಧ್ಯಕ್ಷ ಎಂ.ಎಲ್. ಗಿರಿಧರ್ ಆಗ್ರಹಿಸಿದ್ದಾರೆ.

‘ಪ್ರಧಾನ ರಸ್ತೆಯಲ್ಲಿ ದ್ವಿಚಕ್ರ ವಾಹನ ಅಥವಾ ಕಾರುಗಳನ್ನು ವಾರದ ಯಾವ ದಿನಗಳಲ್ಲಿ ಎಲ್ಲಿ ನಿಲುಗಡೆ ಮಾಡಬೇಕು ಎಂದು ಫಲಕ ಅಳವಡಿಸಬೇಕು. ತಪ್ಪಿದವರಿಗೆ ದಂಡ ವಿಧಿಸಬೇಕು’ ಎಂದು ಸಾರ್ವಜನಿಕ ಆಸ್ಪತ್ರೆ ಸಮಿತಿ ಸದಸ್ಯ ಜಿ. ದಾದಾಪೀರ್ ಒತ್ತಾಯಿಸಿದ್ದಾರೆ.

‘ಪ್ರವಾಸಿ ಮಂದಿರ ವೃತ್ತದಿಂದ ಗಾಂಧಿ ವೃತ್ತದವರೆಗೆ, ಗಾಂಧಿ ವೃತ್ತದಿಂದ ವಾಣಿ ವಿಲಾಸ ಬಲನಾಲೆಯವರೆಗೆ ತುರ್ತಾಗಿ ರಸ್ತೆ ವಿಸ್ತರಿಸಿ, ಪಾದಚಾರಿ ಮಾರ್ಗ ನಿರ್ಮಿಸಬೇಕು. ಆಗ ಮಾತ್ರ ಸಮಸ್ಯೆಗೆ ಪರಿಹಾರ ಸಿಗಲಿದೆ’ ಎನ್ನುತ್ತಾರೆ ಸ್ಥಳೀಯರಾದ ಸರ್ವಮಂಗಳಾ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.